

ಮಧುಮೇಹ ಎನ್ನುವುದು ಸೈಲೆಂಟ್ ಕಿಲ್ಲರ್ ಇದ್ದಂತೆ. ಸದ್ದೇ ಮಾಡದಂತೆ ದೇಹದೊಳಗಿನ ವ್ಯವಸ್ಥೆಯನ್ನು ಹಾಳು ಮಾಡುವ ನಿಶ್ಯಬ್ದ ಹಂತಕ. ಮೇಲ್ನೋಟಕ್ಕೆ ಮಧುಮೇಹ ಎಂಬುದು ಸಾಮಾನ್ಯ ಕಾಯಿಲೆಯಂತೆ ಕಂಡುಬಂದರೂ, ದೀರ್ಘಕಾಲದವರೆಗೆ ಕಾಡುವ ಗಂಭೀರಸ್ವರೂಪದ ಕಾಯಿಲೆಯಾಗಿದೆ. ಅಧಿಕ ಮಧುಮೇಹವು ದೇಹದ ಎಲ್ಲ ಭಾಗಗಳ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಕಾಲುಗಳು ಮತ್ತು ಪಾದಗಳ ಮೇಲೆ ಡಯಾಬಿಟೀಸ್‌ನಿಂದಾಗುವ ತೊಂದರೆಗಳ ಬಗ್ಗೆ ತಿಳಿದುಕೊಳ್ಳೋಣ.
ನಾವು ಸೇವಿಸುವ ಆಹಾರದಿಂದ ದೇಹವು ಗ್ಲುಕೋಸ್ ಅಂಶವನ್ನು ಹೇಗೆ ಸಂಸ್ಕರಿಸುತ್ತದೆ ಮತ್ತು ಬಳಸುತ್ತದೆ ಎಂಬುದು ಮಧುಮೇಹ ನಿಯಂತ್ರಣವನ್ನು ಅವಲಂಬಿಸಿರುತ್ತದೆ. ಮೇದೊಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದಿದ್ದಾಗ ಅಥವಾ ದೇಹವು ಉತ್ಪಾದಿಸುವ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದಿದ್ದಾಗ ಸಕ್ಕರೆರೋಗ ಅಥವಾ ಮಧುಮೇಹ ಉಂಟಾಗುತ್ತದೆ.
ಟೈಪ್ 1, ಟೈಪ್ 2 ಡಯಾಬಿಟಿಸ್, ಪ್ರಿಡಯಾಬಿಟಿಸ್ ಮತ್ತು ಗರ್ಭಾವಸ್ಥೆಯ ಮಧುಮೇಹ ಸೇರಿದಂತೆ ವಿವಿಧ ರೀತಿಯ ಮಧುಮೇಹ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ರಕ್ತದಲ್ಲಿನ ಅನಿಯಂತ್ರಿತ ಸಕ್ಕರೆ ಪ್ರಮಾಣವು ಕಾಲುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅವುಗಳನ್ನು ಡಯಾಬಿಟಿಕ್ ನರರೋಗ ಮತ್ತು ಬಾಹ್ಯನಾಳೀಯ ಕಾಯಿಲೆ ಎಂದು ಹೆಸರಿಸಬಹುದು.
ಡಯಾಬಿಟಿಕ್ ನರರೋಗಕ್ಕೆ ಕಾರಣವೇನು:
ಅನಿಯಂತ್ರಿತ ಮಧುಮೇಹವು ನರಗಳ ಮೇಲೆ ಪರಿಣಾಮ ಬೀರಿ ನರಗಳನ್ನು ಹಾನಿಗೊಳಿಸುವ ಸಾಧ್ಯತೆ ಹೆಚ್ಚು. ಇದರಿಂದಾಗಿ ನರಗಳು ಸಂಕೇತ ಕಳುಹಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವು ರಕ್ತನಾಳಗಳನ್ನು ಹಾನಿಗೊಳಿಸುವುದರಿಂದ ಆಮ್ಲಜನಕ ಮತ್ತು ಪೋಷಕಾಂಶಗಳು ಹಾದುಹೋಗಲು ಕಷ್ಟವಾಗುತ್ತದೆ. ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಇಂತಹ ವ್ಯಕ್ತಿಯು ಧೂಮಪಾನ ಮಾಡುತ್ತಿದ್ದರಂತೂ ನರಗಳು ಗಂಭೀರ ಸ್ವರೂಪದಲ್ಲಿ ಹಾನಿಗೊಳಗಾಗುತ್ತವೆ.
ಕಾಲುಗಳು ಮತ್ತು ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವುದು, ಜುಮ್ ಎನ್ನುವುದು ಮತ್ತು ಮರಗಟ್ಟುವುದು ಕಾಲುಗಳಿಗೆ ಸಂಬಂಧಿಸಿದಂತೆ ಮಧುಮೇಹದ ಪ್ರಮುಖ ಲಕ್ಷಣಗಳು. ಮಧುಮೇಹ ಹೆಚ್ಚಾಗಿ ಕಾಲುಗಳು ಮತ್ತು ಪಾದಗಳಲ್ಲಿನ ನರಗಳನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ ಕಾಲುಗಳು, ಪಾದಗಳು ಮತ್ತು ಕೈಗಳಲ್ಲಿ ನೋವು ಉಂಟಾಗುವುದು, ಮರಗಟ್ಟುವುದು, ಕೂತಾಗ, ನಿಂತಾಗ ಕಾಲುಗಳು ಮರಗಟ್ಟಿದಂತಾಗಿ ಜುಮ್ ಎನ್ನುವುದು… ಇಂಥದೆಲ್ಲ ಅನುಭವಗಳಾಗುತ್ತವೆ. ಇದಲ್ಲದೆ ಇದು ಜೀರ್ಣಾಂಗ ವ್ಯವಸ್ಥೆ, ಮೂತ್ರನಾಳ, ರಕ್ತನಾಳಗಳು ಮತ್ತು ಹೃದಯದ ಸಮಸ್ಯೆಗಳನ್ನು ಕೂಡ ಉಂಟುಮಾಡಬಹುದು.
ಪಾದದ ಹುಣ್ಣುಗಳು:
ಇದು ಮಧುಮೇಹ ಹೊಂದಿರುವ ಸುಮಾರು ಶೇಕಡಾ 15ರಷ್ಟು ರೋಗಿಗಳಲ್ಲಿ ಕಂಡುಬರುತ್ತದೆ. ಪಾದಗಳ ಅಡಿಯಲ್ಲಿ ಕಾಣಿಸುವ ಈ ಹುಣ್ಣುಗಳಲ್ಲಿ ಕೆಲವೊಮ್ಮೆ ಅಷ್ಟು ನೋವು ಉಂಟಾಗದಿದ್ದರೂ, ನಂತರದ ದಿನಗಳಲ್ಲಿ ನೋವು ಹೆಚ್ಚಾಗಿ ಆ ಜಾಗವನ್ನು ಕತ್ತರಿಸಬೇಕಾಗಬಹುದು ಎಚ್ಚರವಿರಲಿ. ಸಾಮಾನ್ಯವಾಗಿ ಪಾದದ ಹುಣ್ಣುಗಳು ಚರ್ಮದ ಆಳದಲ್ಲಿ ಅಥವಾ ಚರ್ಮದ ಸೀಳುವಿಕೆಯಿಂದಾಗಿ ಉಂಟಾಗುತ್ತವೆ.
ಒಂದು ವೇಳೆ ನೀವು ಈಗಾಗಲೇ ಪಾದದ ಹುಣ್ಣು ಹೊಂದಿದ್ದರೆ ಅದರ ಸೋಂಕನ್ನು ತಡೆಗಟ್ಟುವುದು ಪ್ರಾಥಮಿಕ ಅಂಶವಾಗಿರಬೇಕು. ಆ ಜಾಗದ ಮೇಲೆ ಹೆಚ್ಚು ಒತ್ತಡ ಹಾಕದೆ, ಸತ್ತ ಚರ್ಮ ಮತ್ತು ಅಂಗಾಂಶವನ್ನು ತೆಗೆದುಹಾಕಬೇಕು. ಸೂಕ್ತವಾದ ಔಷಧಗಳನ್ನು ಹಚ್ಚಿ, ಅಗತ್ಯ ಬಿದ್ದರೆ ಆಗಾಗ ಡ್ರೆಸ್ಸಿಂಗ್ ಮಾಡಿಸುತ್ತಿರಬೇಕು. ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವತ್ತ ಗಮನ ಹರಿಸಬೇಕು. ಇನ್ನೊಂದು ಮುಖ್ಯ ಅಂಶವೆಂದರೆ ಪಾದದ ಹುಣ್ಣಾಗಿರುವಾಗ ಬರಿಗಾಲಿನಲ್ಲಿ ನಡೆಯುವುದನ್ನು ತಪ್ಪಿಸಿ ಪ್ರತಿದಿನ ಸ್ವಚ್ಛಗೊಳಿಸುತ್ತಿರಬೇಕು.
ಪಾದದ ಹುಳುಕಡ್ಡಿ ಅಥವಾ ಶಿಲೀಂಧ್ರ ಸೋಂಕು
ಮಧುಮೇಹದಿಂದ ನರಗಳ ತೀವ್ರ ಹಾನಿಯುಂಟಾದರೆ ಪಾದಗಳಲ್ಲಿ ಶಿಲೀಂಧ್ರ ಸೋಂಕು ಮತ್ತು ಹುಳುಗಳಂಥ ತೊಡಕುಗಳನ್ನು ಹೆಚ್ಚಿಸುತ್ತದೆ. ಇದು ಪಾದಗಳಲ್ಲಿ ತುರಿಕೆ, ಕೆಂಪು ಮತ್ತು ಬಿರುಕುಗಳು ಉಂಟಾಗುವಂತೆ ಮಾಡುತ್ತದೆ. ಈ ಸೋಂಕು ಒಂದು ಅಥವಾ ಎರಡೂ ಪಾದಗಳಲ್ಲೂ ಕಾಣಿಸಿಕೊಳ್ಳಬಹುದು. ಈ ಸೋಂಕು ಉಂಟುಮಾಡುವ ಶಿಲೀಂಧ್ರವನ್ನು ತೆಗೆದುಹಾಕುವ ಔಷಧಗಳನ್ನು ಬಳಸಬೇಕು. ಈ ಶಿಲೀಂಧ್ರ ಸಾಂಕ್ರಾಮಿಕವಾಗಿದ್ದು, ಟವಲ್‌ಗಳು ಮತ್ತು ಬಟ್ಟೆಗಳ ಮೂಲಕ ಹರಡಬಹುದು. ಈ ಸೋಂಕಿಗೆ ಆ್ಯಂಟಿಫಂಗಲ್ ಚಿಕಿತ್ಸೆ ನೀಡಬೇಕು.
ಚರ್ಮ ಜಡ್ಡುಗಟ್ಟುವುದು ಅಥವಾ ಗಂಟಿಕ್ಕುವುದು
ಕಾಲ್ಬೆರಳು ಮೇಲೆ ಅಥವಾ ಕಾಲ್ಬೆರಳುಗಳ ನಡುವಿನ ಮೂಳೆಯ ಜಾಗದಲ್ಲಿ ಚರ್ಮ ಗಟ್ಟಿಯಾಗುತ್ತದೆ. ಪಾದದ ಕೆಳಭಾಗದಲ್ಲಿನ ಗಟ್ಟಿಯಾದ ಚರ್ಮವನ್ನು ಕ್ಯಾಲಸ್ ಎನ್ನಲಾಗುತ್ತದೆ. ಈ ಕ್ಯಾಲಸ್‌ಗಳು ಸರಿಯಾಗಿ ಹೊಂದಿಕೊಳ್ಳದ ಬೂಟುಗಳಿಂದ ಅಥವಾ ಚರ್ಮದ ಸಮಸ್ಯೆಯಿಂದಾಗಿ ಜಡ್ಡುಗಟ್ಟುತ್ತವೆ. ಆದರೆ ಮಧುಮೇಹವು ನಿಯಂತ್ರಣದಲ್ಲಿರದಿದ್ದಾಗ ಕೆಲವೊಮ್ಮೆ ಪಾದಗಳ ಬೆರಳುಗಳ ನಡುವಿನ ಗಟ್ಟಿಯಾದ ಚರ್ಮವು ಜಡ್ಡುಗಟ್ಟಿದಂತಾಗಿ ನೋವುಂಟುಮಾಡುತ್ತದೆ.
ಉಗುರುಗಳ ಫಂಗಲ್ ಸೋಂಕು
ಅಧಿಕ ಮಧುಮೇಹ ಹೊಂದಿರುವ ಜನರು ಒನಿಕೊಮೈಕೋಸಿಸ್ ಎಂಬ ಶಿಲೀಂಧ್ರ ಸೋಂಕಿನ ಅಪಾಯ ಎದುರಿಸುವ ಸಂಭವ ಹೆಚ್ಚು. ಇದು ಸಾಮಾನ್ಯವಾಗಿ ಕಾಲ್ಬೆರಳ ಉಗುರುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಉಗುರುಗಳು ಹಳದಿ-ಕಂದು ಬಣ್ಣಗಳಿಗೆ ತಿರುಗಿ, ದಪ್ಪದಾಗಿ ಬೆಳೆಯುತ್ತವೆ. ಇವು ಇತರ ಉಗುರುಗಳಿಗಿಂತ ಪ್ರತ್ಯೇಕವಾಗಿ ಕಾಣಿಸುವುದಲ್ಲದೆ ಇದ್ದಕ್ಕಿದ್ದಂತೆ ಉದುರಿ ಬೀಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಗಾಯದಿಂದಲೂ ಈ ಫಂಗಲ್ ಸೋಂಕು ಉಂಟಾಗಬಹುದು.
ಗ್ಯಾಂಗ್ರಿನ್:
ಬೆರಳುಗಳು ಮತ್ತು ಕಾಲುಗಳಿಗೆ, ರಕ್ತ ಮತ್ತು ಆಮ್ಲಜನಕ ಪೂರೈಸುವ ನಾಳಗಳ ಮೇಲೆ ಮಧುಮೇಹವು ಪರಿಣಾಮ ಬೀರುವುದರಿಂದ ಇದು, ಗ್ಯಾಂಗ್ರಿನ್‌ಗೆ ಕಾರಣವಾಗುತ್ತದೆ. ಕಾಲು ಹಾಗೂ ಬೆರಳುಗಳಿಗೆ ರಕ್ತದ ಹರಿವು ಸ್ಥಗಿತಗೊಂಡಾಗ ಮತ್ತು ಚರ್ಮದ ಸುತ್ತಲಿನ ಜೀವಕೋಶವು ಸತ್ತಾಗ ಗ್ಯಾಂಗ್ರಿನ್ ಸಂಭವಿಸುತ್ತದೆ. ಇದರಿಂದಾಗಿ ಸೋಂಕು ದೇಹದ ಇತರ ಭಾಗಗಳಿಗೆ ಹರಡದಂತೆ ತಡೆಯಲು ಅಂಗವನ್ನು ಕತ್ತರಿಸಬೇಕಾಗಬಹುದು.
ಪಾದ ವಿರೂಪಗೊಳ್ಳುವುದು
ಅಧಿಕ ಮಧುಮೇಹವು ನರಗಳಿಗೆ ಹಾನಿ ಉಂಟು ಮಾಡುವುದಲ್ಲದೆ, ಪಾದಗಳಲ್ಲಿನ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ಪಾದಗಳ ಆಕಾರ ವಿರೂಪಗೊಂಡು ಮತ್ತೆ ಸರಿಪಡಿಸಲಾಗದ ರೀತಿಯಲ್ಲಿ ದುಷ್ಪರಿಣಾಮ ಉಂಟಾಗಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ
ನೀವು ಮಧುಮೇಹಿಗಳಾಗಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸುವ ಗ್ಲೂಕೊಮೀಟರ್ ಸಾಧನವನ್ನು ಇಟ್ಟುಕೊಂಡಿರಬೇಕು. ಇದರಿಂದ ಆಗಾಗ ರಕ್ತವನ್ನು ಪರೀಕ್ಷಿಸುವ ಮೂಲಕ ಡಯಾಬಿಟಿಸ್ ಪ್ರಮಾಣವನ್ನು ಅರಿತು ಅದಕ್ಕೆ ಸೂಕ್ತ ಆಹಾರಕ್ರಮವನ್ನು ಅಳವಡಿಸಿಕೊಳ್ಳಬೇಕು. ದೈಹಿಕವಾಗಿಯೂ ಸಕ್ರಿಯರಾಗಿರಬೇಕು. ಜತೆಗೆ ವೈದ್ಯರ ನಿರ್ದೇಶನದಂತೆ ಸಮಯಕ್ಕೆ ಸರಿಯಾಗಿ ಔಷಧಗಳನ್ನು ತೆಗೆದುಕೊಳ್ಳುವುದು ಅತಿ ಅವಶ್ಯ.