

ವಾಷಿಂಗ್ಟನ್: ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವ ವೇಳೆ ಬರುವ ಭಾರಿ ಶಬ್ದಕ್ಕೆ ನಿಲ್ದಾಣಗಳ ಸುತ್ತಲಿನ ನಿವಾಸಿಗಳು ತತ್ತರಿಸುವುದುಂಟು. ಆದರೆ ಅಮೆರಿಕಾದಲ್ಲಿ ವಿಮಾನ ಹಾರಾಟದ ವೇಳೆ ವಿಚಿತ್ರ ವಸ್ತುವೊಂದು ಬಿದ್ದು ಶೆಡ್ನಲ್ಲಿ ಕಟ್ಟಿಹಾಕಿದ್ದ ಆಡೊಂದರ ಜೀವ ಬಲಿತೆಗೆದುಕೊಂಡಿದೆ.
ಅಮೆರಿಕದ ಉತಾಹ್ನ ವಿಮಾನ ನಿಲ್ದಾಣದ ಬಳಿ ವಾಸಿಸುತ್ತಿದ್ದ ಕ್ಯಾಸಿಡಿ ಲೂಯಿಸ್ ಎಂಬ ಮಹಿಳೆ ತನ್ನ ಮನೆಯ ಮೇಲೆ ವಿಮಾನ ಹಾದುಹೋದಾಗ ಬಂದ ಭಾರಿ ಶಬ್ದದಿಂದ ಭಯಭೀತಳಾದಳು. ಅಡುಗೆ ಮನೆಯಲ್ಲಿದ್ದ ಆಕೆ ಕೂಡಲೇ ಹೊರಬಂದು ಶೆಡ್ನಲ್ಲಿ ನೋಡಿದಾಗ ಛಾವಣಿಯಲ್ಲಿ ದೊಡ್ಡ ರಂಧ್ರ ಬಿದ್ದಿರುವುದನ್ನು ಕಂಡುಕೊಂಡಳು.
ಕ್ಯಾಸಿಡಿ ಪ್ರಕಾರ, ನೆಲದ ಮೇಲೆ ಚದುರಿದ ಮಂಜುಗಡ್ಡೆಯ ತುಣುಕುಗಳು ಬಿದ್ದಿದ್ದವು. ಅಲ್ಲೇ ಒಂದು ಆಡು ತೀವ್ರ ರಕ್ತಸ್ರಾವವಾಗಿ ಸತ್ತುಬಿದ್ದಿತ್ತು. ಉಳಿದವು ಗಾಯಗೊಂಡಿದ್ದವು. ಮೇಕೆಗೆ ತೀವ್ರ ರಕ್ತಸ್ರಾವವಾಗಿತ್ತು. ಮಂಜುಗಡ್ಡೆ ತುಣುಕುಗಳು ಕನಿಷ್ಠ ಬ್ಯಾಸ್ಕೆಟ್‌ಬಾಲ್ ಗಾತ್ರದವಾಗಿದ್ದವು.
ಇದಕ್ಕೂ ಮೊದಲು ನಾನು ಭಾರಿ ಶಬ್ದ ಕೇಳಿ ನಮ್ಮ ಮನೆ ಮೇಲೆ ಬಾಂಬ್ ದಾಳಿ ಮಾಡಲಾಗಿದೆ ಎಂದುಕೊಂಡಿದ್ದೆ ಎಂದಳು ಲೆವಿಸ್. ಘಟನೆ ಬಳಿಕ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ತನಿಖೆಗೆ ಬಂದ ನಂತರ ವಿಮಾನ ಹಾರಾಟದಿಂದ ಐಸ್ ಬಿದ್ದಿರುವುದು ದೃಢಪಟ್ಟಿದೆ. ತನಿಖೆಯನ್ನು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ಗೆ ಹಸ್ತಾಂತರಿಸಲಾಗಿದೆ. ತನಿಖೆ ಭರದಿಂದ ಸಾಗುತ್ತಿದೆ.
ಘಟನೆಯಿಂದಾಗಿ ಲೆವಿಸ್ ಆಘಾತಕ್ಕೆ ಒಳಗಾಗಿದ್ದಾಳೆ. ಪ್ರತಿ ಬಾರಿ ವಿಮಾನವು ತನ್ನ ಮನೆಯ ಮೇಲೆ ಹಾದುಹೋದಾಗ ಶಬ್ದದಿಂದ ಭಯವಾಗುತ್ತದೆ ಎಂದು ಲೆವಿಸ್ ಪ್ರತಿಕ್ರಿಯಿಸಿದ್ದಾಳೆ.