

ಬದಲಾದ ಸನ್ನಿವೇಶದಲ್ಲಿ ಮೊಬೈಲ್ ಎಂಬ ಮಾಯಾಂಗನೆಯ ಪ್ರಭಾವ ಎಲ್ಲೆ ಮೀರಿದೆ. ಕ್ಷಣಾರ್ಧದಲ್ಲಿ ಬೆರಳುತುದಿಯಲ್ಲಿ ಇಡೀ ಜಗತ್ತಿನ ಆಗುಹೋಗುಗಳನ್ನು ಅರಿಯುವ ಸೌಲಭ್ಯ ನಮ್ಮದಾಗಿದೆ. ಇದರ ಫಲಾನುಭವಿಗಳು ದೊಡ್ಡವರಷ್ಟೇ ಅಲ್ಲ ಮಕ್ಕಳೂ ಇದ್ದಾರೆ. ಇದರ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿರುವುದು ಕಳವಳಕಾರಿ ಸಂಗತಿ. ದಿನದಿಂದ ದಿನಕ್ಕೆ ಮೊಬೈಲ್ ಗೀಳು ಮಿತಿಮೀರಿ ಸಂಬಂಧಗಳು ಕಳಚುತ್ತಿವೆ.
ಕಳೆದ ವಾರವಷ್ಟೇ ಮಹಿಳೆಯೊಬ್ಬರು ಮಗನ ಸಮೇತ ನನ್ನ ಬಳಿ ಬಂದಿದ್ದರು. ಮೊಬೈಲ್ ಗೀಳಿಗೆ ಒಳಗಾದ ಅವರ ಮಗ ಚಟುವಟಿಕೆಯಿಂದಿರಲಿಲ್ಲ. ಮನೆಯಲ್ಲಿ ಯಾರೊಡನೆಯೂ ಬೆರೆಯುತ್ತಿರಲಿಲ್ಲ. ಯಾರೇ ಬಂದರೂ ಅವರೊಡನೆ ಮಾತಾಡುತ್ತಿರಲಿಲ್ಲ. ಇದು ಸಹಜವಾಗಿಯೇ ಪಾಲಕರ ಆತಂಕಕ್ಕೆ ಕಾರಣವಾಗಿದೆ. ‘ಡಾಕ್ಟರೇ, ಆತನಿಗೆ ಓದಲು ಬರೆಯಲು ಆಸಕ್ತಿ ಇಲ್ಲ. ದಿನವಿಡೀ ಬರೀ ಮೊಬೈಲ್ ಹಿಡಿದಿರುತ್ತಾನೆ. ಒಂಟಿತನ ಬಯಸುತ್ತಾನೆ. ರೂಂ ಬಾಗಿಲು ಹಾಕಿಕೊಂಡು ಒಬ್ಬನೇ ಗೇಮ್ ಆಡುತ್ತಾನೆ. ಊಟಕ್ಕೆ ಕರೆದರೂ ಒಂದು ಕೈಯಲ್ಲಿ ಮೊಬೈಲ್ ಇನ್ನೊಂದು ಕೈಯಲ್ಲಿ ಊಟ. ಏನು ಬೇಕು, ಬೇಡ ಏನೂ ಹೇಳುವುದಿಲ್ಲ’ ಎಂದು ತಮ್ಮ ಅಳಲು ತೋಡಿಕೊಂಡರು. ಇದು ಒಬ್ಬ ಗೃಹಿಣಿಯ ವ್ಯಥೆಯಲ್ಲ. ಇಂತಹ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಸಾಕಷ್ಟಿದೆ. ಗೇಮ್ ಆಡಲು ಮೊಬೈಲ್ ಬಳಸಬೇಡ ಎಂದರೆ ನೀವು ಅವರ ಪಾಲಿಗೆ ವಿಲನ್ ಆಗುತ್ತೀರಿ. ಇದಕ್ಕೆ ನಿದರ್ಶನ ಎಂದರೆ ಉತ್ತರ ಪ್ರದೇಶದ ಲಖನೌನಲ್ಲಿ ಪಬ್‌ಜಿ ಆಡದಂತೆ ತಡೆದಿದ್ದಕ್ಕೆ ರೊಚ್ಚಿಗೆದ್ದ ಮಗ ತಾಯಿಯನ್ನೇ ಗುಂಡಿಕ್ಕಿ ಕೊಂದಿದ್ದಾನೆ. ಕೊಲೆ ಪ್ರಕರಣ ಬಹಿರಂಗವಾಗದಿರಲಿ ಎಂದು ಆಕೆಯ ದೇಹವನ್ನು ಕೋಣೆಯಲ್ಲಿ ಬಚ್ಚಿಟ್ಟಿದ್ದಲ್ಲದೇ ಸಹೋದರರಿಗೂ ಜೀವ ಬೆದರಿಕೆ ಹಾಕಿದ್ದಾನೆ. ಅಂದರೆ ಗೇಮ್ ಆಡುವುದನ್ನು ತಡೆಗಟ್ಟುವ ವ್ಯಕ್ತಿ ಯಾರೇ ಆಗಲಿ ಆತನಿಗೆ ಅದು ಬೇಕಿಲ್ಲ. ಗೇಮ್ ನಿರಾತಂಕವಾಗಿ ಆಡುವುದೊಂದೇ ಆತನ ಗುರಿ. ಹಸಿವು, ನೀರಡಿಕೆ, ಓದು ಯಾವುದರ ಅರಿವು ಆತನಿಗಿಲ್ಲ.
ಈ ತರಹದ ಪ್ರಕರಣಗಳು ಮುಂದೊಂದು ದಿನ ನಮ್ಮ ಮನೆಯಲ್ಲೂ ಎದುರಾಗಬಹುದು ಎಂಬ ಜಾಗೃತಿ ಜತೆ ಕಾಳಜಿ ಇದ್ದರೆ ಸೂಕ್ತ. ಬದಲಾದ ಕಾಲಘಟ್ಟದಲ್ಲಿ ಇಂದು ಪತಿ ಪತ್ನಿ ಇಬ್ಬರೂ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿದೆ. ಚಿಕ್ಕ ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ಮನೆಗೆಲಸದವಳ ಮೇಲೆ ಬಿಟ್ಟು ಹೋಗುತ್ತಾರೆ. ಆಗ ಆ ಕೆಲಸದವರು ತಮ್ಮನ್ನು ಕಾಡುವುದು ಬಿಟ್ಟರೆ ಸಾಕು ಎಂದು ಮಕ್ಕಳಿಗೆ ಮೊಬೈಲ್ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ದಿನದಿಂದ ದಿನಕ್ಕೆ ಈ ಮೊಬೈಲ್ ಮಕ್ಕಳನ್ನು ಆಕ್ರಮಿಸಿಕೊಳ್ಳುತ್ತದೆ. ಹೀಗೆ ಮೊಬೈಲ್ ಗೀಳು ಎಲ್ಲರಿಗೂ ಗೋಳು ತಂದಿಡುತ್ತಿರುವುದಂತೂ ಸುಳ್ಳಲ್ಲ.
ಏನು ಪರಿಹಾರ?:
ಮೊಬೈಲ್ ಗೀಳಿನಿಂದ ಹೊರಬರಲು ಅಥವಾ ಬೇರೆಯವರನ್ನು ಅದರಿಂದ ಹೊರತರಲು ಮಾಡಬೇಕಾದ ಕೆಲವು ಉಪಾಯಗಳು ಇಲ್ಲಿವೆ.