

ನಿತ್ಯವೂ ಯೋಗಾಸನ ಅಥವಾ ಬೆನ್ನನ್ನು ಸುಸ್ಥಿತಿಯಲ್ಲಿಡುವ ವ್ಯಾಯಾಮಗಳನ್ನು ಮಾಡುವುದರಿಂದ ಸೊಂಟನೋವು ಅಥವಾ ಡಿಸ್ಕ್ ಸಮಸ್ಯೆಯನ್ನು ತಡೆಯಬಹುದು. ಆದರೆ ಸೊಂಟನೋವು ಪ್ರಾರಂಭವಾದ ನಂತರ ಅಥವಾ ಡಿಸ್ಕ್ಗೆ ಸಂಬಂಧಿಸಿದ ಸಮಸ್ಯೆಯಿದೆ ಎಂಬುದು ಗೊತ್ತಾದ ನಂತರ ವೈದ್ಯರು, ಯೋಗಗುರುಗಳು ಅಥವಾ ಫಿಸಿಯೋಥೆರಪಿಸ್ಟ್ ಸಲಹೆ ಪಡೆದೇ ವ್ಯಾಯಾಮ ಮಾಡಬೇಕು. ಹೀಗೆ ಮಾಡಿದರೆ ಪ್ರಾರಂಭಿಕ ಹಂತದಲ್ಲಿರುವ ಸೊಂಟನೋವು ಸಮಸ್ಯೆಯನ್ನು ಕೇವಲ ವ್ಯಾಯಾಮದ ಮೂಲಕವೇ ಬಗೆಹರಿಸಿಕೊಳ್ಳಬಹುದು.
ಕುಳಿತುಕೊಂಡೇ ಕೆಲಸ ಮಾಡುವವರು ಬೆನ್ನನ್ನು ನೇರವಾಗಿಟ್ಟು ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕೆಲಸದ ಮಧ್ಯದಲ್ಲಿ ಆಗಾಗ ನಿಂತು ಹಿಂದೆ ಬಗ್ಗುವ ವ್ಯಾಯಾಮ ಮಾಡಬೇಕು. ಭಾರ ಎತ್ತುವಾಗ ಮುಂದೆ ಬಗ್ಗಿ ಭಾರ ಎತ್ತಬಾರದು. ತುದಿಗಾಲಲ್ಲಿ ಕುಳಿತು ವಸ್ತುವನ್ನು ದೇಹದ ಸಮೀಪಕ್ಕೆ ಇಟ್ಟುಕೊಂಡು ನಿಧಾನವಾಗಿ ಮೇಲೇಳಬೇಕು. ಏಳುವಾಗ ದೇಹವನ್ನು ನೇರವಾಗಿಟ್ಟುಕೊಳ್ಳಬೇಕು.
ಆಯುರ್ವೆದದ ಪ್ರಕಾರ ನಿತ್ಯವೂ ಎಣ್ಣೆ ಹಚ್ಚಿಕೊಳ್ಳುವುದರಿಂದ ವಾತರೋಗಗಳನ್ನು ತಡೆಯಬಹುದು. ಸೊಂಟನೋವು ಕೂಡ ಒಂದು ರೀತಿಯಲ್ಲಿ ವಾತರೋಗವೇ ಆಗಿದೆ. ಹಾಗಾಗಿ ಪ್ರತಿನಿತ್ಯ ಎಣ್ಣೆ ಹಚ್ಚಿಕೊಂಡು ನಂತರ ಸ್ನಾನ ಮಾಡುವುದರಿಂದ ಸಣ್ಣ ಪ್ರಮಾಣದ ಸೊಂಟನೋವು ಗುಣವಾಗುತ್ತದೆ. ಆಯುರ್ವೆದ ಔಷಧ ಅಂಗಡಿಗಳಲ್ಲಿ ಸಿಗುವ ಮಹಾನಾರಾಯಣ ತೈಲ ಅಥವಾ ಸಹಚರಾದಿ ತೈಲಗಳನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಹಾಕಿ ಕುದಿಯುತ್ತಿರುವ ನೀರಿನ ಮೇಲೆ ಇಟ್ಟು ಬಿಸಿ ಮಾಡಿಕೊಳ್ಳಬೇಕು. ಹೀಗೆ ಬಿಸಿಯಾದ ಎಣ್ಣೆಯನ್ನು ಸೊಂಟಕ್ಕೆ ಹಚ್ಚಿಕೊಳ್ಳಬೇಕು. ನೋವು ಹೆಚ್ಚಿನ ಪ್ರಮಾಣದಲ್ಲಿದ್ದರೆ ಎಣ್ಣೆ ಹಚ್ಚಿಕೊಂಡ ನಂತರ ಮನೆಯಲ್ಲಿಯೇ ಔಷಧಯುಕ್ತ ಶಾಖ ತೆಗೆದುಕೊಳ್ಳಬಹುದು. ಆಯುರ್ವೆದದಲ್ಲಿ ಹಲವು ರೀತಿಯ ಶಾಖಗಳ ಬಗ್ಗೆ ಹೇಳಿದ್ದಾರೆ. ಅವುಗಳಲ್ಲಿ ‘ಪತ್ರ ಪಿಂಡ ಸ್ವೇದ’ ಎಂಬ ರೀತಿಯ ಶಾಖವನ್ನು ಮನೆಯಲ್ಲಿಯೇ ಸುಲಭವಾಗಿ ತೆಗೆದುಕೊಳ್ಳಬಹುದು.
ತಲಾ ಒಂದು ಹಿಡಿಯಷ್ಟು ಲಕ್ಕಿಸೊಪ್ಪು, ಔಡಲಗಿಡದ ಸೊಪ್ಪು, ನುಗ್ಗೆಸೊಪ್ಪು ಮತ್ತು ಅರ್ಧ ಹಿಡಿಯಷ್ಟು ಎಕ್ಕೆ ಸೊಪ್ಪುಗಳನ್ನು ತಂದು ಹೆಚ್ಚಿಕೊಂಡು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು. ಹುರಿಯುವಾಗ ಸ್ವಲ್ಪ ಕೊಬ್ಬರಿ, ಅರ್ಧ ನಿಂಬೆಹಣ್ಣಿನ ಹೋಳುಗಳು ಮತ್ತು ಉಪ್ಪನ್ನು ಹಾಕಿಕೊಳ್ಳಬೇಕು. ಮೆತ್ತಗಾಗಿ ರಸ ಬಿಡುವಂತೆ ಹುರಿದ ನಂತರ ಅದನ್ನು ದಪ್ಪನೆಯ ಹತ್ತಿ ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿಕೊಳ್ಳಬೇಕು. ಈ ಗಂಟನ್ನು ಬಾಣಲೆಯ ಮೇಲಿಟ್ಟು ಬಿಸಿ ಮಾಡುತ್ತ ಎಣ್ಣೆ ಹಚ್ಚಿದ ಜಾಗಕ್ಕೆ ಇಟ್ಟುಕೊಳ್ಳಬೇಕು. ಹಾಗೆ ಮಾಡುವಾಗ ಸುಡದಂತೆ ಜಾಗ್ರತೆ ವಹಿಸಬೇಕು. ಈ ಸೊಪ್ಪುಗಳ ಸಾರವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಇದನ್ನು ಹತ್ತರಿಂದ ಹದಿನೈದು ದಿನಗಳ ಕಾಲ ನಿರಂತರವಾಗಿ ಮಾಡಬಹುದು. ಆದರೆ ತುಂಬ ದಿನಗಳ ಕಾಲ ನೋವಿದ್ದಾಗ, ನೋವು ತೀವ್ರವಾಗಿದ್ದಾಗ, ನೋವು ಕಾಲಿಗೆ ಹರಡುತ್ತಿದ್ದರೆ, ಕಾಲು ಮರಗಟ್ಟುತ್ತಿದ್ದರೆ, ಕುಳಿತುಕೊಳ್ಳುವುದು, ನಿಲ್ಲುವುದು, ನಡೆಯುವುದು ತುಂಬ ಕಷ್ಟವಾಗುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಪ್ರಕೃತಿ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆಗಳು, ಆಕ್ಯುಪ್ರೆಶರ್-ಆಕ್ಯುಪಂಕ್ಚರ್ ನಂತಹ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇಂತಹ ಚಿಕಿತ್ಸೆಗಳನ್ನು ಸರಿಯಾಗಿ ಪಡೆದುಕೊಂಡರೆ, ಸೊಂಟನೋವಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಿದರೆ ಬಹುತೇಕ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಬಹುದು. ಹೀಗೆ ಸೊಂಟನೋವು, ಅದಕ್ಕಿರುವ ಕಾರಣ, ಡಿಸ್ಕ್ ತೊಂದರೆಯ ತೀವ್ರತೆ ಇವೆಲ್ಲಗಳ ಆಧಾರದಲ್ಲಿ ಸಂದರ್ಭಕ್ಕೆ ತಕ್ಕಂತೆ ಚಿಕಿತ್ಸೆ ಮತ್ತು ವ್ಯಾಯಾಮಗಳನ್ನು ಪಾಲಿಸಿದರೆ ಸೊಂಟನೋವು ಅಂದುಕೊಂಡಷ್ಟು ದೊಡ್ಡ ಸಮಸ್ಯೆಯಾಗಿರುವುದಿಲ್ಲ.