ಚಳಿಗಾಲದಲ್ಲಿ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು! ಇಲ್ಲಿದೆ 5 ಸರಳ ಟಿಪ್ಸ್​:

winter weight loss
Published on

ಬೆಂಗಳೂರು: ತೂಕ ಇಳಿಸಿಕೊಳ್ಳಲು ಚಳಿಗಾಲ ಅತ್ಯುತ್ತಮ ಸಮಯ! ಆದರೆ ಅನೇಕರಿಗೆ ಚಳಿಗಾಲ ತೂಕ ಇಳಿಸಲು ಯಾವುದೇ ಪ್ರೇರಣೆ ನೀಡುವುದಿಲ್ಲ. ಈ ಋತುವಿನಲ್ಲಿ ನಿಮ್ಮ ದೇಹದಲ್ಲಿ ಏನೇನಾಗುತ್ತದೆ? ಚಳಿಗಾಲದಲ್ಲಿ ತೂಕ ನಷ್ಟ ಮಾಡಿಕೊಳ್ಳುವುದು ಹೇಗೆ? ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ:

ಯಾಕೆ ತೂಕ ಇಳಿಸಿಕೊಳ್ಳಲು ಚಳಿಗಾಲ ಉತ್ತಮ ಸಮಯ?
ಹೋಮಿಯೋಸ್ಟಾಸಿಸ್ ಎಂಬ ಪ್ರಕ್ರಿಯೆ ಮೂಲಕ ದೇಹ ನೈಸರ್ಗಿಕವಾಗಿ ಚಳಿಗಾಲದಲ್ಲಿ ತೂಕ ನಷ್ಟ ಮಾಡಲು ಸಹಾಯ ಮಾಡುತ್ತದೆ. ಸ್ಥಿರವಾದ ಆಂತರಿಕ ತಾಪಮಾನವನ್ನು ಕಾಪಾಡಿಕೊಳ್ಳಲು ದೇಹ ತನ್ನಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಹೀಗಾಗಿ ಶರೀರ ಅನೇಕ ಕ್ಯಾಲೊರಿಗಳನ್ನು ಸುಡುತ್ತದೆ.

ಹಾಗಾದರೆ ತೂಕ ಕಳೆದುಕೊಳ್ಳೋದು ಹೇಗೆ?

1. ಒಳ್ಳೆಯ ನಿದ್ದೆ
ಚಳಿಗಾಲದಲ್ಲಿ ಹಗಲಿನ ಅವಧಿ ಕಡಿಮೆಯಾದ ಕಾರಣ ನಮ್ಮಲ್ಲಿ ಅನೇಕರು ಹೆಚ್ಚು ನಿದ್ದೆ ಮಾಡುತ್ತಾರೆ. ಇತರ ಋತುಗಳಲ್ಲಿ 8 ಗಂಟೆಗಳ ಕಾಲ ನಿದ್ದೆ ಮಾಡುತ್ತೀರಿ ಎಂದಾದರೆ ಇದು ಒಳ್ಳೆ ಸುದ್ದಿ. ನಿದ್ದೆ ಕಮ್ಮಿ ಆದರೆ ಮೆಟಬಾಲಿಸಂ ಅಥವಾ ಚಯಾಪಚಯ ನಿಧಾನ ಆಗುತ್ತದೆ. ಜೊತೆಗೆ ಶರೀರದಲ್ಲಿ ಕಾರ್ಟಿಸೋಲ್ ಎನ್ನುವ ಅಂಶವನ್ನು ಹೆಚ್ಚಿಸುತ್ತದೆ. ಇದು ತೂಕ ಹೆಚ್ಚಾಗಲು ದೊಡ್ಡ ಕಾರಣವಾಗುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ಒಳ್ಳೆ ನಿದ್ದೆ ಕಡೆಗೆ ಗಮನ ಕೊಡಿ. ಆದರೆ ಹೆಚ್ಚು ನಿದ್ದೆ ಮಾಡಬೇಡಿ. ಅದು ಕೂಡ ತೂಕ ಹೆಚ್ಚಗುವಂತೆ ಮಾಡಬಹುದು.

2. ಇನ್ನೊಂದು ಪ್ಯಾಕೆಟ್​ ಚಿಪ್ಸ್​ ತಿನ್ನಬೇಕು ಅನಿಸುತ್ತಾ?
ಚಳಿಗಾಲದಲ್ಲಿ ಮೆಟಬಾಲಿಸಂ ಅಥವಅ ಚಯಾಪಚಯ ವೇಗ ಪಡೆಯುವುದರಿಂದ ಎಲ್ಲಾ ಸಮಯದಲ್ಲಿ ನಾವು ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತೇವೆ. ಇದು ಹಸಿವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಲಘು ಆಹಾರ ಅಥವಾ ಸ್ನ್ಯಾಕ್ಸ್​ ಕಡೆಗೆ ವಾಲುತ್ತೇವೆ. ಇದನ್ನು ತಡೆಯಲೇ ಬೇಕು. ಬದಲಾಗಿ, ಕರಿದ ತಿಂಡಿಗಳನ್ನು ತಿನ್ನುವುದನ್ನು ಬಿಟ್ಟು, ಮನೆಯಲ್ಲೇ ತಯಾರಿಸಿದ ಆರೋಗ್ಯಕರ ತಿಂಡಿ ಸೇವಿಸಿ.

3. ನೀರು
ಹೊರಗಡೆ ಚಲಿ ಇದ್ದಾಗ ಬಾಯಾರಿಕೆ ಕಡಿಮೆಯಾಗುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆದರೂ ಬಾಯಾರಿದ ಅನುಭವ ಉಂಟಾಗುವುದಿಲ್ಲ. ಇದರಿಂದ ದೇಹದ ಜೀವಕಣಗಳು ಒಣಗಲು ಪ್ರಾರಂಭಿಸುತ್ತವೆ. ಇದರ ಸಂದೇಶವನ್ನು ಮೆದುಳು ಹಸಿವು ಎಂದು ತಪ್ಪಾಗಿ ಗ್ರಹಿಸುತ್ತೆ. ಹೀಗಾಗಿ ಇನ್ನಷ್ಟು ತಿನ್ನಬೇಕು ಎಂದು ಅನಿಸಲು ಶುರುವಾಗುತ್ತದೆ. ಈ ಅಭ್ಯಾಸವನ್ನು ಬಿಟ್ಟು ನಿಯಮಿತವಾಗಿ ನೀರು ಕುಡಿಯುತ್ತಲೇ ಇರಬೇಕು. ಇದು ಕ್ಯಾಲೊರಿಗಳನ್ನು ಕರಗಿಸಲೂ ಸಹಾಯ ಮಾಡುತ್ತದೆ. ಆದಷ್ಟು ಬಿಸಿ ನೀರನ್ನು ಕುಡಿಯುವುದು ಒಳ್ಳೆಯದು.

4. ಸೂರ್ಯನ ಬೆಳಕು
ಆಫೀಸಿನಲ್ಲಿ ಸ್ವಲ್ಪ ಸಮಯ ಬಿಡುವು ಸಿಕ್ಕ ಕೂಡಲೇ ಮೊಬೈಲ್​ ನೋಡುತ್ತಾ ಯಾರೆಲ್ಲಾ ನಿಮಗೆ ಮೆಸೇಜ್​ ಮಾಡಿದ್ದಾರೆ ಎಂದು ಚೆಕ್​ ಮಾಡುತ್ತೀರಾ? ಹಾಗಾದರೆ ಆ ಅಭ್ಯಾಸವನ್ನು ಬಿಟ್ಟು ಸ್ವಲ್ಪ ಸೂರ್ಯನ ಬಿಸಿಲಿನಲ್ಲಿ ಓಡಾಡಿ. ವಾಕಿಂಗ್​ ಮಾಡಿದ ಹಾಗೆಯೂ ಆಗುತ್ತೆ. ಜೊತೆಗೆ ಶರೀರದಲ್ಲಿ ವಿಟಮಿನ್​ ಡಿ ಕೂಡ ಉತ್ಪತ್ತಿ ಆಗುತ್ತದೆ. ಶರೀರದಲ್ಲಿ ವಿಟಮಿನ್​ ಡಿ ಕೊರತೆ ಉಂಟಾದಾಗಲೂ ತೂಕ ಹೆಚ್ಚಾಗುತ್ತದೆ.

5. ವ್ಯಾಯಾಮ
ಆಹಾರದಲ್ಲಿ ಎಷ್ಟೇ ನಿಯಂತ್ರಣ ತಂದರೂ ಶರೀರಕ್ಕೆ ಬೇಕದ ಚಟುವಟಿಕೆ ನೀಡದೇ ಹೋದರೆ ಅದು ಜಡವಾಗಿಯೇ ಉಳಿಯುತ್ತದೆ. ಹೀಗಾಗಿ ವ್ಯಾಯಾಮ, ಯೋಗ, ಪ್ರಾಣಾಯಾಮದಲ್ಲಿ ತೊಡಗಿಸಿಕೊಂಡರೆ ಒಳ್ಳೆಯದು. ಚಳಿಗಾಲದಲ್ಲಿ ಬೆವರು ಹರಿಸುತ್ತಿದ್ದೀರಿ ಎಂದರೆ ಮಾಮೂಲಿ ದಿನಗಳಿಗಿಂತ ಹೆಚ್ಚು ಕ್ಯಾಲೊರಿಗಳನ್ನು ಬರ್ನ್​ ಮಾಡುತ್ತಿದ್ದೀರಿ ಎಂದರ್ಥ. ವ್ಯಾಯಾಮ ಯಾವ ಋತುವಿನಲ್ಲೂ ನಿಲ್ಲಿಸಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net