ನೆನಪಾಗ್ತಾ ಇಲ್ಲ, ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?!

memori mar 20
Published on

‘ಸಾರ್, ತುಂಬಾ ಸಲ ಪಾಠಗಳನ್ನು ಓದಿದ್ದೇನೆ, ಆದರೆ ಹಾಳಾದ್ದು, ಎಕ್ಸಾಂ ಹಾಲಿನಲ್ಲಿ ಬರಿಯೋಕೆ ಕೂತಾಗ ಒಂದೂ ಜ್ಞಾಪಕಕ್ಕೆ ಬರೋದಿಲ್ಲ. ಏನು ಮಾಡ್ಲಿ ಸಾರ್’ ಇದು ಅನೇಕ ವಿದ್ಯಾರ್ಥಿಗಳ ಸಮಸ್ಯೆ. ‘ಎಂಥ ಕೆಲಸ ಆಗಿ ಹೋಯ್ತು ಕಣೇ. ಬೆಂಡೇಕಾಯಿ ತಗೊಂಡು ಬನ್ನೀಂತ ನೀನ್ ಹೇಳಿದ್ದು ಜ್ಞಾಪಕಕ್ಕೆ ಬರಲಿಲ್ಲ ನೋಡು. ತೊಂಡೆಕಾಯಿ ತಂದು ಬಿಟ್ಟಿದ್ದೀನಿ’ ಎನ್ನುತ್ತಾ ತನ್ನ ಮರೆವನ್ನು ತಾನೇ ಶಪಿಸಿಕೊಳ್ಳುವ ಗಂಡ, ಕಣ್ಣಿಗೆ ಕನ್ನಡಕ ಹಾಕಿಕೊಂಡಿದ್ದರೂ ಎಲ್ಲಿದೆ ನನ್ನ ಕನ್ನಡಕ? ಎಂದು ಮನೆಯಲ್ಲಾ ಹುಡುಕುವ ಅಜ್ಜ. ದಿನನಿತ್ಯ ಬಳಸುವ ವಸ್ತುಗಳನ್ನು ಒಂದೆಡೆ ಇಟ್ಟು, ಇನ್ನೆಲ್ಲೋ ಹುಡುಕಲು ಸಮಯ ವ್ಯರ್ಥ ಮಾಡುವವರು ಎಲ್ಲರೂ ಜ್ಞಾಪಕಶಕ್ತಿ ಇಲ್ಲದವರ ಗುಂಪಿಗೆ ಸೇರಿದವರು.

ಮನೆಯಿಂದ ಬಹಳ ದೂರ ಹೊರಬಂದ ಮೇಲೆ ‘ರೀ ಗ್ಯಾಸ್ ಸ್ಟವ್ ಆಫ್ ಮಾಡಲು ಮರೆತೇ ಬಿಟ್ಟೆ’ ಎಂದು ಹೇಳಿದ ಹೆಂಡತಿಗೆ ‘ಪರವಾಗಿಲ್ಲ ಬಿಡು, ನಾನೂ ನೀರಿನ ನಲ್ಲಿಯನ್ನು ಆಫ್ ಮಾಡಲು ಮರೆತೆ’ ಎಂದು ಗಂಡ ಹೇಳಿದರೆ, ಸಮಸ್ಯೆ ಪರಿಹಾರವಾಯಿತೇ?

ಕ್ರಿಯಾತ್ಮಕ ದೃಷ್ಟಿಯಿಂದ ಮಿದುಳಿನ ಕಾರ್ಯವಿಧಾನವನ್ನು ಗಮನಿಸಿದರೆ, ಇದು ಜಗತ್ತಿನ ಎಲ್ಲಾ ಅತ್ಯಾಧುನಿಕ ಗಣಕಯಂತ್ರಗಳನ್ನು ಮೀರಿಸಬಲ್ಲ ಒಂದು ಅತ್ಯದ್ಭುತ ಮೆಗಾ ಕಂಪ್ಯೂಟರ್. ಮಿದುಳು ತನ್ನ ಕಾರ್ಯಕಲಾಪಗಳನ್ನು 3 ವ್ಯವಸ್ಥೆ ಮಾಡಿ ನಿರ್ವಹಿಸಿರುತ್ತದೆ.

1. ಶಿಸ್ತುಬದ್ಧವಾದ ಸಂವೇದನಾ ವ್ಯವಸ್ಥೆಯ ಮೂಲಕ, ದೇಹದೊಳಗಿನ ಮತ್ತು ಹೊರಗಿನ ಪರಿಸರದಿಂದ ಸತತವಾಗಿ ಪ್ರಾಪ್ತವಾಗುವ ಮಾಹಿತಿಗಳ ಸ್ವೀಕೃತಿ ಮತ್ತು ಅವುಗಳ ನೋಂದಣಿ

2. ನೋಂದಣಿಗೊಂಡ ಮಾಹಿತಿಗಳ ವಿಂಗಡಣೆ ಹಾಗೂ ವಿಶ್ಲೇಷಣೆ ಕ್ಷಣಕ್ಷಣಕ್ಕೂ ನೋಂದಣಿಗೊಳ್ಳುತ್ತಿರುವ ಮಾಹಿತಿಗಳು 3 ಅಂತ್ಯಗಳನ್ನು ಕಾಣಬಹುದು:-

ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಕ್ರಿಯಿಸಲು ಯೋಗ್ಯವಲ್ಲದ, ಸೂಕ್ತವಲ್ಲದ, ಅವಶ್ಯಕವಲ್ಲದ ಮಾಹಿತಿಗಳೆಂದು ನಿರ್ಧರಿಸಿ ಮಿದುಳು ಅವುಗಳನ್ನು ನಿರ್ಲಕ್ಷಿಸಬಹುದು.

ಇವು ಭವಿಷ್ಯದಲ್ಲಿ ತನಗೆ ನೆರವಾಗಬಲ್ಲ ಪ್ರಮುಖ ಮಾಹಿತಿಗಳೆಂದು ತಿಳಿದು ಅವನ್ನು ನೆನಪುಗಳನ್ನಾಗಿ ತನ್ನೊಳಗೆ ಶೇಖರಿಸಿಟ್ಟುಕೊಳ್ಳಬಹುದು.

ಕ್ಷಣ ಪ್ರತಿಕ್ರಿಯಿಸಲು ಅವಶ್ಯವಾದುದೆಂದು ತಿಳಿದು, ಸಂಬಂಧಪಟ್ಟ ಅಂಗಾಗಳಿಗೆ ಸೂಕ್ತ ಆದೇಶಗಳನ್ನು ಕಳುಹಿಸಿ, ಕಾರ್ಯೋನ್ಮುಖವಾಗಬಹುದು.

3. ಕೊನೆಯದು ಚಾಲನೆ ಮತ್ತು ಪ್ರತಿಕ್ರಿಯೆ ಇವೆಲ್ಲದರ ಕಾರ್ಯಕ್ಷಮತೆಯಿಂದಲೇ ವ್ಯಕ್ತಿಯ ಜ್ಞಾಪಕಶಕ್ತಿ , ಬುದ್ಧಿಮಟ್ಟ, ಕಾರ್ಯವೈಖರಿ, ನೈಪುಣ್ಯತೆ, ವ್ಯಕ್ತಿತ್ವ ಎಲ್ಲವೂ ನಿರ್ಧಾರಗೊಳುತ್ತೆ.

ನೆನಪುಗಳು: ನೋಂದಣಿಗೊಂಡ ಮಾಹಿತಿಗಳ ಪೈಕಿ ಅತ್ಯಂತ ಅವಶ್ಯಕ, ಅಪರೂಪದ ಉಪಯುಕ್ತ ರೋಚಕ ಮಾಹಿತಿಗಳನ್ನು ಮಿದುಳು ನೆನಪುಗಳನ್ನಾಗಿ ಶೇಖರಿಸಿಟ್ಟುಕೊಂಡು, ಭವಿಷ್ಯದಲ್ಲಿ ಬೇಕೆಂದಾಗ ಮುಂದಿನ ನಿರ್ಧಾರಗಳಿಗೆ, ಕಾರ್ಯಾಚರಣೆಗೆ ಬಳಸಿಕೊಳ್ಳುತ್ತದೆ. ನೆನಪುಗಳಲ್ಲಿ ಮೂರು ವಿಧ- ಕೆಲವೇ ನಿಮಿಷಗಳವರೆಗೆ ಇರುವ ಅತ್ಯಲ್ಪಕಾಲದ ನೆನಪುಗಳು, ಕೆಲವೇ ತಾಸುಗಳವರೆಗೆ ಇರುವ ಅಲ್ಪಕಾಲೀನ ನೆನಪು ಮತ್ತು ದೀರ್ಘ ಕಾಲದವರೆಗೆ ಉಳಿಯುವ ನೆನಪುಗಳು.

ಮರೆವು: ಸಾಮಾನ್ಯವಾಗಿ ತೀರಾ ವೈಯಕ್ತಿಕವಾದ, ಭಾವನಾತ್ಮಕವಾದ, ವಿಶೇಷವಾದ, ಅಪರೂಪವಾದ, ಅತ್ಯಾವಶ್ಯಕವಾದ ಇಲ್ಲವೇ ಅಪಾಯಕಾರಿಯಾಗಬಲ್ಲ ಮಾಹಿತಿಗಳನ್ನು ಹೊರತುಪಡಿಸಿ, ನೋಂದಣಿಗೊಂಡ ಬಹುಪಾಲು ಮಾಹಿತಿಗಳಿಗೆ ಮಿದುಳು ಪ್ರತಿಕ್ರಿಯಿಸೋದಿಲ್ಲ, ಪ್ರತಿಕ್ರಿಯಿಸಲೂ ಬಾರದು. ಹಾಗೇನಾದರೂ, ನೋಂದಣಿಯಾದ ಎಲ್ಲಾ ಸಂವೇದನೆ, ಮಾಹಿತಿಗಳನ್ನು ನೆನಪಿನಲ್ಲಿಟ್ಟುಕೊಂಡು, ಪ್ರತಿಕ್ರಿಯಿಸುತ್ತಾ ಹೋದರೆ, ಮಿದುಳು ತನ್ನ ಕಾರ್ಯದಕ್ಷತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಬಹುದು, ಮಾತ್ರವೇ ಅಲ್ಲ ಅನಾರೋಗ್ಯದತ್ತ ಸಾಗಿ ಹುಚ್ಚರಂತಾಗಿಡಬಹುದು. ಈ ದೃಷ್ಟಿಯಲ್ಲಿ ಮಾನಸಿಕ ಸಂತುಲತೆಯನ್ನು ಹೋಗದನ್ನು ಕಾಪಾಡಲು, ಮರೆಯೋದು ಕೂಡ ನೆನಪಿನಷ್ಟೇ ಮುಖ್ಯವಾದುದು. ಆದರೆ ಸಮಸ್ಯೆ ಎಲ್ಲಿ ಉದ್ಭವವಾಗುತ್ತದೆ ಎಂದರೆ ಮರೆಯಲೇಬೇಕಾದುದನ್ನು ಮರೆಯದೇ ಮರೆಯಬಾರದನ್ನು ಮರೆತಾಗ! ಇದಕ್ಕೆ ಜ್ಞಾಪಕಶಕ್ತಿಯ ಕೊರತೆ ಎನ್ನುತ್ತೇವೆ.

ಜ್ಞಾಪಕಶಕ್ತಿ: ಇದು ಮಿದುಳಿನ ಅತ್ಯದ್ಭುತ ಸಾಮರ್ಥ್ಯಗಳಲ್ಲಿ ಒಂದು, ಜ್ಞಾಪಕಶಕ್ತಿಯ ಬಲದಿಂದ ಅದೆಷ್ಟೇ ಮಾಹಿತಿ ಕಾರ್ಯಗಳನ್ನು ಸಾಧಿಸಬಹುದು. ಅಂತೆಯೇ ಇದರ ಕೊರತೆಯಿಂದ ಅನೇಕ ಸಂಕಷ್ಟಗಳಿಗೂ, ಮುಜುಗರಗಳಿಗೂ ಒಳಗಾಗಬಹುದು. ಶಾಲಾ ಕಾಲೇಜುಗಳಲ್ಲಿ ನಡೆಸಲಾಗುವ ಪರೀಕ್ಷೆಗಳು, ಮುಖ್ಯವಾಗಿ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿಯನ್ನು ಮಾತ್ರ ಅಳೆಯು ಮೌಲ್ಯಮಾಪನಗಳು. ಜ್ಞಾಪಕಶಕ್ತಿಯು ಕೆಲವರಲ್ಲಿ ಅಧಿಕವಾಗಿದ್ದರೆ, ಇನ್ನು ಕೆಲವರಲ್ಲಿ ತೀರಾ ಕಡಿಮೆ. ಹೀಗಾಗಲು, ಅನುವಂಶಿಕತೆ, ಅಪೌಷ್ಟಿಕತೆ, ಮಾನಸಿಕ ನ್ಯೂನತೆ, ಪರಿಶ್ರಮದ ಕೊರತೆಗಳು ಕಾರಣವಾಗಬಹುದು. ಏನಿದ್ದರೂ, ಯಾವುದೇ ಔಷಧಿ, ಟಾನಿಕ್​ಗಳಿಂದ ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳಲಾಗದು.

ಜ್ಞಾಪಕದಲ್ಲಿಟ್ಟುಕೊಳ್ಳಲು ಅಡ್ಡಿಯಾಗುವ ಮೂಲ ಕಾರಣವೆಂದರೆ ಏಕಾಗ್ರತೆಯ ಮತ್ತು ತತ್ಪರತೆಯ ಕೊರತೆ. ನಮ್ಮದು ಚಂಚಲ ಮನಸ್ಸು, ಚಂಚಲ ಮನಸ್ಸನ್ನು ಕೇಂದ್ರೀಕರಿಸದಿದ್ದರೆ, ಏನನ್ನೂ ಕಲಿಯಲಾಗದು. ಕ್ಲಾಸುಗಳಲ್ಲಿ ಮಾನಸಿಕ ಹಾಜರಾತಿ, ಶಾರೀರಿಕ ಹಾಜರಾತಿಗಿಂತ ಮುಖ್ಯ. ಆದರೆ ಇದನ್ನು ಅಳೆಯುವ ವಿಧಾನವಿಲ್ಲ. ಎಷ್ಟೇ ವಿದ್ಯಾರ್ಥಿಗಳು ದೈಹಿಕವಾಗಿ ತರಗತಿಯಲ್ಲಿ ಕೂತಿದ್ದರೂ, ಮಾನಸಿಕವಾಗಿ ಇನ್ಯಾವುದೋ ಯೋಚನೆಗಳಲ್ಲಿ ಲೋಕಗಳಲ್ಲಿ ವಿಹರಿಸುತ್ತಿರುತ್ತಾರೆ. ಇಂತಹವರು ಏನನ್ನು ತಾನೇ ಕಲಿತುಕೊಂಡಾರು? ಬರೇ ಕೇಳಿಸಿಕೊಳ್ಳೋದಕ್ಕೂ ಆಸಕ್ತಿಯಿಂದ ಆಲಿಸೋದಕ್ಕೂ, ಬರೇ ಓದೋದಕ್ಕೂ ಗಮನವಿಟ್ಟು ಓದೋದಕ್ಕೂ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನರಿತವರೇ ಹೆಚ್ಚಿನ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗಂತೂ, ಬ್ರಹ್ಮಚರ್ಯವು ಏಕಾಗ್ರತೆಯನ್ನು ಗಳಿಸಿಕೊಳ್ಳುವಲ್ಲಿ ನೆರವಾಗುತ್ತದೆ. ಏಕಾಗ್ರತೆ ಇದ್ದಲ್ಲಿ, ನಮ್ಮ ಮಿದುಳು ಕೂಡ ತನಗೆ ಬೇಕಾದ ವಿಷಯಕ್ಕೆ ಮಾತ್ರ ಕೇಂದ್ರೀಕೃತಗೊಳ್ಳಬಲ್ಲುದು. ಆದುದರಿಂದಲೇ ಏಕಾಗ್ರತೆ ಉಳ್ಳವನು ಸಂತೆಯಲ್ಲೂ ಓದಬಲ್ಲ. ಓದಿ ಜ್ಞಾಪಕದಲ್ಲಿಟ್ಟುಕೊಳ್ಳಬಲ್ಲ.

ಗದ್ದಲ, ಗಲಾಟೆಗಳಿಲ್ಲದ ಶಾಂತ ಪರಿಸರ ಶಾಂತಚಿತ್ತ, ಸೂಕ್ತ ಸಮಯ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ, ಆಶಾವಾದ, ಸಕಾರಾತ್ಮಕ ಚಿಂತನೆ ಕೂಡ ಕಲಿಯುವಿಕೆಗೆ ಹಾಗೂ ಜ್ಞಾಪಕದಲ್ಲಿಟ್ಟುಕೊಳ್ಳಲು ಪೂರಕವಾಗುತ್ತದೆ.

ಭವಿಷ್ಯದ ಬಗ್ಗೆ ಭಯ, ಬಡತನ, ಸೂಕ್ತ ಮಾರ್ಗದರ್ಶನಗಳು ಕೂಡ ಕಲಿಯಲೇ ಬೇಕಾದ, ಆದುದರಿಂದ ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಅನಿವಾರ್ಯತೆಗಳನ್ನು ಹುಟ್ಟುಹಾಕಿ, ಜ್ಞಾಪಕ ಶಕ್ತಿಗೆ ನೆರವಾಗುತ್ತವೆ.

ಅಧ್ಯಯನಕ್ಕೆ ಬೇಕಾದ ಪಠಣ, ಶ್ರವಣ, ಕರಣ, ಮನನ, ಚಿಂತನ, ಮಂಥನ, ಸಂವಾದ ಮತ್ತು ಸ್ವಯಂ ಮೌಲ್ಯಮಾಪನಗಳನ್ನು ಅಳವಡಿಸಿಕೊಂಡರಂತೂ ಕಲಿತದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಬರೇ ಬಾಯಿ ಪಾಠ ಮಾಡಿ ಕಲಿತ ವಿಷಯ ದೀರ್ಘಕಾಲದವರೆಗೆ ಉಳಿಯದು.

ಮಲಗುವ ಮುನ್ನ ಮತ್ತು ಏಳುವ ಮುನ್ನ ಓದಿದ್ದನ್ನು ಒಮ್ಮೆ ಮೆಲುಕು ಹಾಕಿಕೊಂಡರೆ ಓದಿದ ವಿಷಯ ಮರೆಯದು.

ಒಂದೇ ವಿಷಯವನ್ನು ಬಾರಿ ಬಾರಿ ನೆನಪಿಸಿಕೊಳ್ಳೋದರಿಂದಲೂ, ಅದನ್ನು ಶಾಶ್ವತವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಬಹುದು.

ಕ್ಲಿಷ್ಟಕರವಾದ ಕಷ್ಟದ ವಿಷಯಗಳನ್ನು ಭಾಗಭಾಗಗಳಾಗಿ ವಿಂಗಡಿಸಿ ಹಂತಹಂತವಾಗಿ ಓದಿ ಗಟ್ಟಿಮಾಡಿಕೊಳ್ಳುವ ಹಾಗೂ ಯಾವುದೇ ಒಂದು ಪ್ರಿಯವಾದ ವಿಷಯ ಇಲ್ಲವೇ ಜತೆ ಜೋಡಿಸಿಕೊಳ್ಳೋದರಿಂದ, ಕಲಿಕೆ ಸುಲಭ ಸಾಧ್ಯವಾಗುತ್ತದೆ.

ಧ್ಯಾನ, ಮೌನ, ಯೋಗ, ಜಪ ತಪಗಳು ಮನದೊಳಗಿನ ಆತಂಕ-ದುಗುಡಗಳನ್ನು ಕಡಿಮೆ ಮಾಡಿ ಏಕಾಗ್ರತಾ ಸಾಮರ್ಥ್ಯವನ್ನು ಹೆಚ್ಚಿಸಿ, ಜ್ಞಾಪಕ ಶಕ್ತಿಯನ್ನು ವೃದ್ಧಿಸಬಹುದು.

ವಯಸ್ಸಾದಂತೆ, ಜ್ಞಾಪಕ ಶಕ್ತಿಯು ಕುಂಠಿತಗೊಳ್ಳೋದು ಸಹಜ ಸ್ವಾಭಾವಿಕ, ಇದನ್ನೇ ಅರಳು ಮರುಳು ಅಂತಾರೆ. ಆದರೆ ಇದನ್ನು ಮರಳಿ ಅರಳು ಎಂಬುದಾಗಿ ಪರಿವರ್ತಿಸಿಕೊಳ್ಳಬೇಕು.

ಆಶ್ಚರ್ಯದ ಸಂಗತಿ ಎಂದರೆ ದಿನನಿತ್ಯದ ಜೀವನದಲ್ಲಿ ನಾವು ನಮ್ಮ ಮಿದುಳಿನ ಶೇ.10 ರಷ್ಟು ನರಕೋಶಗಳನ್ನು ಮಾತ್ರ ಬಳಸಿಕೊಳ್ಳುತ್ತೇವೆಯಂತೆ. ಸುಪ್ತಾವಸ್ತೆಯಲ್ಲಿರುವ ಉಳಿದವುಗಳನ್ನು ಬಳಸಿಕೊಂಡರೆ, ಜ್ಞಾಪಕಶಕ್ತಿಯೂ ಸೇರಿದಂತೆ ಮಾನವನ ಮಿದುಳಿನ ಸಾಮರ್ಥ್ಯಕ್ಕೆ ಎಣೆಯುಂಟೆ?.

ಅನುಸರಿಸಬೇಕಾದ ವಿಧಾನಗಳು

ಯಾವುದೇ ಒಂದು ವಿಷಯವನ್ನು ತಿಳಿದುಕೊಳ್ಳಲೇ ಬೇಕೆನ್ನುವ ಆಸಕ್ತಿ, ಹಂಬಲ, ಕುತೂಹಲವಿದ್ದಾಗ ಮಾತ್ರ ಅಭಿರುಚಿಯು ಉತ್ಪನ್ನವಾಗಿ ನೆನಪಿಟ್ಟುಕೊಳ್ಳಲೇಬೇಕಾದ ಬದ್ಧತೆಯು ಹುಟ್ಟಿಕೊಳ್ಳುತ್ತದೆ. ನಮಗೆ ವಿಷಯದ ಮೇಲೆ ಪ್ರೀತಿ ಇದ್ದರೆ, ಕಲಿಯುವುದು ಬಹಳ ಸುಲಭ ಹಾಗೂ ಕಲಿತಿದ್ದು ಬೇಗ ಮರೆಯದು, ಒಲ್ಲದ ಮನಸ್ಸಿಗೆ ಕಲಿಯುವುದು ಕಷ್ಟ. ಕಲಿತದ್ದನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಸಾಧ್ಯವಾಗದು. ಮಿದುಳಿನ ಒಂದು ದೌರ್ಬಲ್ಯವೆಂದರೆ, ಅದು ಯಾರದೋ ಒತ್ತಾಯಕ್ಕೆ, ಒತ್ತಡಕ್ಕೆ ಮಣಿದು, ಮನಸಿಲ್ಲದ ಮನಸ್ಸಿನಿಂದ ಹೇರಿದ ವಿಷಯವನ್ನು ಒಪ್ಪಿಕೊಳ್ಳದೆ ಬೇಗನೆ ಮರೆತು ಬಿಡುತ್ತದೆ. ಆದರೆ ತನಗೆ ಇಷ್ಟವಾದ ಪ್ರಿಯವಾದ ವಿಷಯವನ್ನು ಮರೆಯೋದೆ ಇಲ್ಲ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕಷ್ಟಪಟ್ಟು ಓದಬಾರದು, ಇಷ್ಟಪಟ್ಟು ಓದಬೇಕು. ಆಗ ಓದಿದ್ದೆಲ್ಲಾ ಜ್ಞಾಪಕದಲ್ಲಿರುತ್ತದೆ ಎಂಬುದು ಕಿವಿಮಾತು. ತಿಳಿದುಕೊಳ್ಳಬೇಕೆನ್ನುವ ಉತ್ಕಟವಾದ ಜ್ಞಾನ ತೃಪ್ತಿಯೂ ಜ್ಞಾಪಕಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ನೆರವಾಗುತ್ತದೆ. ಜ್ಞಾನ ತೃಪ್ತಿಯು ಜೀವನದಲ್ಲಿ ನಿರ್ದಿಷ್ಟವಾದ ಗುರಿ, ಗುರಿಯನ್ನು ತಲುಪಬೇಕಾದ ಛಲವಿದ್ದಾಗ ಮಾತ್ರ ಹುಟ್ಟಿಕೊಳ್ಳುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net