

* ನಾನು ಕ್ರೀಡಾಪಟುವಾಗಿದ್ದು, ಯೋಗವು ನನ್ನ ಸಾಧನೆಗೆ ಸಹಕಾರಿಯೇ ಎಂದು ತಿಳಿಸಿ.
| ನಿತೀಶ್ 26 ವರ್ಷ, ಚಿಕ್ಕಬಳ್ಳಾಪುರ
ಮನಸ್ಸಿನ ನಿಯಂತ್ರಣ ಮತ್ತು ಏಕಾಗ್ರತೆಯನ್ನು ಬೆಳೆಸುವ ಯೋಗವು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕ್ರೀಡಾಪಟುವಿಗೆ ಗರಿಷ್ಠ ಮಟ್ಟದಲ್ಲಿ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ. ಯೋಗವು ಬೆನ್ನುಮೂಳೆಗಳಿಗೆ ಮತ್ತು ಕೀಲುಗಳಿಗೆ ನಮ್ಯತೆಯನ್ನು ತರಲು ದೇಹದ ಸ್ನಾಯುಗಳನ್ನು ಸುಲಭವಾಗಿ ಮತ್ತು ತಾರುಣ್ಯದಿಂದ ಇರಿಸಲು, ಅಪಧಮನಿಗಳಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಲು ಮತ್ತು ಆಂತರಿಕ ಅಂಗಗಳನ್ನು ಬಲಪಡಿಸಲು ಪ್ರಾಚೀನ ಕಾಲದಿಂದಲೂ ಒಂದು ಶಿಸ್ತುಬದ್ಧ ಕ್ರಮದಿಂದ ಅಭ್ಯಾಸ ಮಾಡುತ್ತಿದ್ದಾರೆ. ಯೋಗ ಇದಕ್ಕಿಂತ ಹೆಚ್ಚು ಏಕಾಗ್ರತೆಯ ಶಕ್ತಿಯನ್ನು ಬಲಪಡಿಸಲು, ಮಲಬದ್ಧತೆಯನ್ನು ತೊಡೆದುಹಾಕಲು, ಹೊಟ್ಟೆಯ ಕಾಯಿಲೆಗಳನ್ನು ನಿವಾರಿಸಲು, ಸ್ನಾಯುಗಳ ಸಮನ್ವಯವನ್ನು ಸುಧಾರಿಸಲು ಮತ್ತು ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಯೋಗ ಸಹಾಯ ಮಾಡುತ್ತದೆ.
* ಆತಂಕ ನಿವಾರಣೆಗೆ ಯೋಗ ಸಹಕಾರಿಯೇ ಎಂದು ತಿಳಿಸಿ.
| ನಿಶ್ಚಿತ್ 20 ವರ್ಷ, ದಾವಣಗೆರೆ
ಆತಂಕವು ಸಾಮಾನ್ಯ ಭಾವನೆ. ಇತ್ತೀಚಿನ ವರ್ಷಗಳಲ್ಲಿ ಆತಂಕದ ಕಾಯಿಲೆಗಳನ್ನು ಅನುಭವಿಸುವ ಜನರಿಗೆ ಯೋಗವು ಪರಿಣಾಮಕಾರಿ ಸಹಾಯಕ ಚಿಕಿತ್ಸೆಯಾಗಿದೆ ಎಂದು ಅಧ್ಯಯನಗಳು ತಿಳಿಸುತ್ತದೆ. ಆತಂಕ ನಿವಾರಣೆಗೆ ಬೆಕ್ಕು ಭಂಗಿ, ಹಸು ಭಂಗಿ, ಒಂಟೆ ಭಂಗಿ, ಬಿಲ್ಲು ಭಂಗಿ, ಮೊಲ ಭಂಗಿ, ಮೊಸಳೆ ಭಂಗಿ ಹಾಗೂ ಶವದ ಭಂಗಿ ಸಹಕಾರಿಯಾಗುತ್ತದೆ. ದಿನಕ್ಕೆ ಎರಡು ಬಾರಿ ಧ್ಯಾನ ಮತ್ತು ಮುಂಜಾನೆಯ ಹದಿನೈದು ನಿಮಿಷದ ಪ್ರಾಣಾಯಾಮವು ದೇಹ ಮತ್ತು ಮನಸ್ಸು ಶಾಂತ ಮತ್ತು ನಿರಾಳತೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಧ್ಯಾನದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳವಾದ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗಿ, ನಿರ್ಮಲಗೊಂಡು ಪ್ರಸನ್ನತೆಯಿಂದ ಅರಳುತ್ತದೆ. ಮನಸ್ಸಿನ ನಿರ್ಮಲತೆಗೆ, ಏಕಾಗ್ರತೆಗೆ, ಆಳ ವಿಶ್ರಾಂತಿಗೆ ಮತ್ತು ಶಾಂತ ಸ್ಥಿತಿಗಾಗಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಧ್ಯಾನ ಎಲ್ಲ ಸಮಸ್ಯೆಗಳ ನಿವಾರಣೆಗೆ ಬಹಳಷ್ಟು ಸಹಕಾರಿ. ನಾವು ದೇಹದ ಆರೋಗ್ಯಕ್ಕೆ ಒತ್ತು ಕೊಡುವಂತೆ ಮನಸ್ಸಿನ ಆರೋಗ್ಯಕ್ಕೂ ಒತ್ತುಕೊಡಬೇಕು. ಆತಂಕ ನಿವಾರಣೆಗೆ ಕನಿಷ್ಠ ಮೂರು ತಿಂಗಳು ಸಮರ್ಥರಾದ ಗುರುಗಳ ಮಾರ್ಗದರ್ಶನದಲ್ಲಿ ಯೋಗಭಂಗಿಗಳ ಅಭ್ಯಾಸ ಮಾಡಿ.