ಮನೋಲ್ಲಾಸ: ಯುದ್ಧದಿಂದ ಧರ್ಮರಕ್ಷಣೆ ಹೇಗೆ?

edit 3
Published on

| ಸುಮುಖ ಹೆಬ್ಬಾರ್

ಯುದ್ಧದಲ್ಲಿ ಇನ್ನೇನು ಶತ್ರುಸಂಹಾರ ಮಾಡಿಬಿಡುವ ಹಂತ. ವೀರಯೋಧನು ‘ಇದೋ ನೋಡು! ನಾನು ಹೂಡಿರುವ ಬಾಣ ನಿನ್ನನ್ನು ಕೊಲ್ಲುತ್ತದೆ. ನಿನ್ನ ಇಷ್ಟದೇವತೆಯನ್ನು ಪ್ರಾರ್ಥಿಸಿಕೋ’ ಎಂಬುದಾಗಿ ನುಡಿಯುತ್ತಾನೆ. ಆಡಿದ ಮಾತಿನಂತೆಯೇ ಬಿಟ್ಟ ಬಾಣವು, ಶತ್ರುವನ್ನು ಮೃತ್ಯುಕೂಪಕ್ಕೆ ತಳ್ಳುತ್ತದೆ. ವೀರನು ಹೇಳುವ ಈ ಮಾತುಗಳು, ತನ್ನ ಸಾಮರ್ಥ್ಯದ ಮೇಲಿನ ಅಪಾರ ನಂಬಿಕೆಯೋ ಅಥವಾ ಅಹಂಕಾರದ ಮಾತುಗಳೋ ಎನಿಸುವಂತಿರುತ್ತದೆ. ಮಹಾಭಾರತ ಮುಂತಾದ ಮಹಾಕಾವ್ಯಗಳಲ್ಲಿ ಇಂತಹ ಮಾತುಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಕಾಲಿಗೆ ಒಂದು ಮುಳ್ಳು ಚುಚ್ಚಿದರೆ, ಮುಳ್ಳನ್ನು ತೆಗೆಯುತ್ತೇವೆ. ಗ್ಯಾಂಗ್ರೀನ್​ನಂಥ ರೋಗ ಕಾಲಿನ ಬೆರಳಿಗೆ ಬಂದರೆ, ಬೆರಳು ತೆಗೆಯುವುದು ಸೂಕ್ತ. ಅದೇ ಇಡೀ ಪಾದ ಮತ್ತು ಪೂರ್ತಿ ಕಾಲಿಗೆ ಹರಡಿದರೆ, ಇಡೀ ದೇಹಕ್ಕೆ ಹರಡದಂತೆ ನಿಯಂತ್ರಿಸಲು ಕಾಲನ್ನು ಕತ್ತರಿಸುವುದು ಜಾಣತನವೆನಿಸಿಕೊಳ್ಳುತ್ತದೆ. ಹಾಗೆಯೇ ಅಧರ್ಮದ ನಡೆ ಚಿಕ್ಕದಾಗಿದ್ದಾಗ ತುಳಿಯದಿದ್ದರೆ, ಅದು ಬೆಳೆದು ಮಾನವನ ತ್ರಿಕರಣಗಳನ್ನೂ ವ್ಯಾಪಿಸಿ ಅಧರ್ವಿುಯನನ್ನಾಗಿ ಮಾಡಿಬಿಡುತ್ತದೆ. ಅಂತಹ ಅಧರ್ವಿುಯು ರಾಜನಾದರೆ ಪ್ರಜೆಗಳ ಗತಿಯೇನು? ಧರ್ಮಕ್ಕೆ ಆ ರಾಜ್ಯದಲ್ಲಿ ಜಾಗವೆಲ್ಲಿ?

ಹಿಂದಿನ ಕಾಲದಲ್ಲಿ ಯುದ್ಧವು ಸಾಮ್ರಾಜ್ಯವಿಸ್ತಾರಕ್ಕಷ್ಟೆ ಅಲ್ಲದೆ, ಪ್ರಮುಖವಾಗಿ ಧರ್ಮಸಂಸ್ಥಾಪನೆಗಾಗಿ ನಡೆಯುತ್ತಿತ್ತು. ಧರ್ಮಹೀನನ ಅಥವಾ ಅಧರ್ವಿು ರಾಜನ ಮೇಲೆ ಧರ್ವಿುಷ್ಠನಾದ ರಾಜ, ಯುದ್ಧ ಸಾರುತ್ತಿದ್ದ. ಇಡೀ ದೇಹದಲ್ಲಿ ಅಧರ್ಮವನ್ನೇ ತುಂಬಿಕೊಂಡು, ಲೋಕಕಂಟಕನಾಗಿರುವ ವ್ಯಕ್ತಿಯ ಪ್ರವೃತ್ತಿಯನ್ನು ತಿದ್ದುವುದು ಬಹಳ ಕಷ್ಟದ ಕೆಲಸ. ತ್ರಿಕರಣಪೂರ್ವಕವಾಗಿ ಕೆಟ್ಟದ್ದನ್ನೇ ಮಾಡುವ ಆಶಯವಿದ್ದರೆ, ಅಂತಹ ಕೆಲಸಗಳಿಂದ ಈ ಜನ್ಮದಲ್ಲಿ, ವಿಷಮವಾದ ಪಾಪಗಳನ್ನು ಕಟ್ಟಿಕೊಳ್ಳುವ ಬದಲು, ಮುಂದಿನ ಜನ್ಮದಲ್ಲಾದರೂ ಉತ್ಕೃಷ್ಟ ಸಂಸ್ಕಾರ ಸಿಕ್ಕಿ, ಉದ್ಧಾರವಾಗಲಿ ಎಂಬುದು ಜ್ಞಾನಿಗಳ ಆಶಯ. ಮುಳ್ಳುಗಳು, ‘ಶರಣಾಗತರಾಗಿದ್ದೇವೆ. ಪಾದಸೇವೆ ಮಾಡುತ್ತೇವೆ’ ಎಂದರೆ, ‘ಇರಲಿ’ ಎಂದು ಬಿಡುವುದು ಕಾಲಿಗೆ ಅಪಾಯ. ಆದ್ದರಿಂದ ‘ಧರ್ಮ ಉಳಿಸಲು ಧರ್ಮಕಂಟಕರನ್ನು ಅಳಿಸಲೇಬೇಕು’ ಎಂಬುದಾಗಿ ಶ್ರೀರಂಗ ಮಹಾಗುರುಗಳು ಎಚ್ಚರಿಸುತ್ತಿದ್ದರು. ಹಾಗಾಗಿ ಸಂಹಾರ ಅನಿವಾರ್ಯ. ಪ್ರಾಣ ಹೋಗುವ ಮುನ್ನ ಜೀವ ಏನು ಬಯಸುತ್ತದೋ, ಅದು ಜೀವಿಯ ಮುಂದಿನ ಜನ್ಮದ ಯೋನಿಗೆ ದಾರಿಯಾಗುತ್ತದೆ. ಹಾಗಾಗಿ ಕೊಲ್ಲುವ ಮುನ್ನ, ಶತ್ರುವಿಗೆ ‘ಈ ಬಾಣದಿಂದ ಹತನಾಗುವೆ’ ಎಂಬ ಎಚ್ಚರಿಕೆ ನೀಡಿ, ಇಷ್ಟದೇವರ ಪ್ರಾರ್ಥನೆಗೆ ಅವಕಾಶ ನೀಡುವುದು ವೀರರ ಲಕ್ಷಣ. ಯುದ್ಧದ ನಿಯಮಗಳಲ್ಲೊಂದು. ಹಾಗೆಯೇ ಭಯದಿಂದಿರುವ, ನಿಶ್ಶಸ್ತ್ರನಾದ ಮತ್ತು ಶರಣಾಗತನಾದ ಶತ್ರುವನ್ನು ಕೊಲ್ಲುವ ಹಾಗಿಲ್ಲ ಎಂಬ ನಿಯಮವೂ, ಇದೇ ಆಶಯದಿಂದ ಕೂಡಿದೆ. ಬಿಲ್ವಿದ್ಯಾ ಪಾರಂಗತರಿಗೆ, ಯಾವ ಮರ್ಮಸ್ಥಾನಕ್ಕೆ ಹೊಡೆದರೆ, ಜೀವವು ಅನಾಯಾಸವಾಗಿ ಮತ್ತು ಉದ್ಧಾರವಾಗುವಂತೆ ಪ್ರಾಣ ತ್ಯಜಿಸುತ್ತದೆ ಎಂಬ ಅರಿವಿರುತ್ತಿತ್ತು. ಆದ್ದರಿಂದಲೇ ಭೀಷ್ಮಾರ್ಜುನರ ಬಾಣದಿಂದ ಹತರಾಗಬೇಕು, ಎಂಬ ಆಶಯದಿಂದ ಇದ್ದವರನ್ನು ಮಹಾಭಾರತದಲ್ಲಿ ಕಾಣುತ್ತೇವೆ. ಇದು ಭಾರತೀಯ ವಿದ್ಯೆಗಳಲ್ಲೊಂದಾದ ಬಿಲ್ವಿದ್ಯೆಯ ವೈಶಿಷ್ಟ್ಯವೂ ಹೌದು. ಹೀಗಾಗಿ ಹಿಂಸೆಯೇ ಪ್ರಧಾನ ಎಂಬುದಾಗಿ ಮೇಲ್ನೋಟಕ್ಕೆ ಕಂಡರೂ, ಧರ್ಮದ ರಕ್ಷಣೆ ಮತ್ತು ಜೀವಿಯ ಮೇಲಿನ ಕರುಣೆ, ಯುದ್ಧದ ಭಾಗವಾಗಿದೆ ಎಂದು ತಿಳಿದಾಗ ಮಹರ್ಷಿಗಳು ಕೊಟ್ಟ ಯುದ್ಧನಿಯಮಗಳು ಮತ್ತು ಧರ್ಮರಕ್ಷಣೆಯ ಚಿಂತನೆ ಎಷ್ಟು ಸೊಗಸಾಗಿದೆ ಎನಿಸುತ್ತದಲ್ಲವೇ?

(ಲೇಖಕರು ಸಂಸ್ಕೃತಿ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net