ಸಣ್ಣ ರಂಧ್ರದೊಳಗೆ ಇಡೀ ದೇಹವನ್ನೇ ತೂರಿಸಿಕೊಳ್ಳುವ ಆಕ್ಟೋಪಸ್! ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದ ಈ ಸಮುದ್ರ ಜೀವಿಯ ತಂತ್ರವೇನು?Octopus

ಸಮುದ್ರದ ಆಳದಲ್ಲಿ ವಾಸಿಸುವ ಆಕ್ಟೋಪಸ್‌ಗಳು ಎಷ್ಟು ಬುದ್ಧಿವಂತ ಜೀವಿಗಳು ಎಂಬುದು ಆಗಾಗ್ಗೆ ಸಾಬೀತಾಗುತ್ತಲೇ ಇದೆ. ಇವುಗಳ ದೇಹದ ಆಕಾರ, ಚಲನವಲನ ಮತ್ತು ಬೇಟೆಯಾಡುವ ತಂತ್ರಗಳು ವಿಜ್ಞಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ. ಅದರಲ್ಲೂ ತನ್ನ ದೇಹಕ್ಕಿಂತಲೂ ಕಿರಿದಾದ ರಂಧ್ರದೊಳಗೆ ಇಡೀ ದೇಹವನ್ನೇ ತೂರಿಸಿಕೊಂಡು ಹೊರಬರುವ ಆಕ್ಟೋಪಸ್‌ನ ಸಾಮರ್ಥ್ಯ ಇದೀಗ ಸಂಶೋಧಕರ ಗಮನ ಸೆಳೆದಿದೆ. ಅಚ್ಚರಿಯ ಸಂಗತಿಯೆಂದರೆ, ಈ ಪ್ರಕ್ರಿಯೆಗೆ ಆಕ್ಟೋಪಸ್ ಒಂದೇ ರೀತಿಯ ತಂತ್ರವನ್ನು ಬಳಸುವುದಿಲ್ಲವಂತೆ!Octopus
ಸಣ್ಣ ರಂಧ್ರದೊಳಗೆ ಇಡೀ ದೇಹವನ್ನೇ ತೂರಿಸಿಕೊಳ್ಳುವ ಆಕ್ಟೋಪಸ್
ಸಣ್ಣ ರಂಧ್ರದೊಳಗೆ ಇಡೀ ದೇಹವನ್ನೇ ತೂರಿಸಿಕೊಳ್ಳುವ ಆಕ್ಟೋಪಸ್WEB
Published on: 

Octopus: ಸಮುದ್ರದ ಆಳದಲ್ಲಿ ವಾಸಿಸುವ ಆಕ್ಟೋಪಸ್‌ಗಳು ಎಷ್ಟು ಬುದ್ಧಿವಂತ ಜೀವಿಗಳು ಎಂಬುದು ಆಗಾಗ್ಗೆ ಸಾಬೀತಾಗುತ್ತಲೇ ಇದೆ. ಇವುಗಳ ದೇಹದ ಆಕಾರ, ಚಲನವಲನ ಮತ್ತು ಬೇಟೆಯಾಡುವ ತಂತ್ರಗಳು ವಿಜ್ಞಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ. ಅದರಲ್ಲೂ ತನ್ನ ದೇಹಕ್ಕಿಂತಲೂ ಕಿರಿದಾದ ರಂಧ್ರದೊಳಗೆ ಇಡೀ ದೇಹವನ್ನೇ ತೂರಿಸಿಕೊಂಡು ಹೊರಬರುವ ಆಕ್ಟೋಪಸ್‌ನ ಸಾಮರ್ಥ್ಯ ಇದೀಗ ಸಂಶೋಧಕರ ಗಮನ ಸೆಳೆದಿದೆ. ಅಚ್ಚರಿಯ ಸಂಗತಿಯೆಂದರೆ, ಈ ಪ್ರಕ್ರಿಯೆಗೆ ಆಕ್ಟೋಪಸ್ ಒಂದೇ ರೀತಿಯ ತಂತ್ರವನ್ನು ಬಳಸುವುದಿಲ್ಲವಂತೆ!

ದೇಹದಲ್ಲಿ ಮೂಳೆಗಳೇ ಇಲ್ಲ

ಸಾಮಾನ್ಯವಾಗಿ ಮನುಷ್ಯರು ಅಥವಾ ಇತರ ಪ್ರಾಣಿಗಳು ಕಿರಿದಾದ ಜಾಗದಲ್ಲಿ ಹಾದುಹೋಗಲು ಸಾಧ್ಯವಾಗದಿರುವುದಕ್ಕೆ ದೇಹದಲ್ಲಿರುವ ಗಟ್ಟಿಯಾದ ಮೂಳೆಗಳೇ ಪ್ರಮುಖ ಕಾರಣ. ಆದರೆ ಆಕ್ಟೋಪಸ್‌ನ ದೇಹದ ರಚನೆಯೇ ವಿಭಿನ್ನವಾಗಿದೆ. ಇದಕ್ಕೆ ಮನುಷ್ಯರಂತೆ ಗಟ್ಟಿಯಾದ ಮೂಳೆಗಳಿರುವ ಅಸ್ಥಿಪಂಜರವಿಲ್ಲ. ಇದರ ದೇಹ ಬಹುತೇಕ ಸ್ನಾಯುಗಳಿಂದ ಕೂಡಿದ್ದು, ಅಗತ್ಯಕ್ಕೆ ತಕ್ಕಂತೆ ಆಕಾರವನ್ನು ಬದಲಾಯಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಇದರ ಎಂಟು ತೋಳುಗಳು ಅತ್ಯಂತ ಮೃದುವಾಗಿದ್ದು, ಉದ್ದವಾಗಿ ಚಾಚಿಕೊಳ್ಳುವುದರ ಜೊತೆಗೆ ವಿವಿಧ ದಿಕ್ಕುಗಳಿಗೆ ಬಾಗಬಲ್ಲವು. ದೇಹದ ಮಧ್ಯಭಾಗದಲ್ಲಿರುವ ಮ್ಯಾಂಟಲ್‌ ಕೂಡ ತನ್ನ ಆಕಾರವನ್ನು ಬದಲಾಯಿಸಿಕೊಳ್ಳಬಲ್ಲದು. ಹೀಗಾಗಿ ಸಾಮಾನ್ಯವಾಗಿ ದೊಡ್ಡದಾಗಿ ಕಾಣಿಸುವ ಆಕ್ಟೋಪಸ್ ಕೂಡ ಅತ್ಯಂತ ಕಿರಿದಾದ ಜಾಗದ ಮೂಲಕ ಹಾದುಹೋಗಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : ಚಿಪ್ಸ್, ಬಿಸ್ಕೆಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್:  ಸಂಸ್ಕರಿಸಿದ ಆಹಾರ ಬದಲಿಸುತ್ತಿದೆ ಮಕ್ಕಳ ಮೆದುಳಿನ ಆಲೋಚನಾ ಶೈಲಿ! packet food

ರಂಧ್ರದ ಗಾತ್ರಕ್ಕೆ ತಕ್ಕಂತೆ ದೇಹ ಬದಲಿಸುತ್ತಾ ?

ಆಕ್ಟೋಪಸ್‌ಗಳು ಸಣ್ಣ ರಂಧ್ರದೊಳಗೆ ಹೇಗೆ ಪ್ರವೇಶಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಸಂಶೋಧಕರು ವಿಶೇಷ ಪ್ರಯೋಗ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಸಾಮಾನ್ಯ ಆಕ್ಟೋಪಸ್‌ಗಳು ಮತ್ತು ಮಾಯನ್ ಆಕ್ಟೋಪಸ್‌ಗಳನ್ನು ವಿಭಿನ್ನ ಗಾತ್ರದ ರಂಧ್ರಗಳಿರುವ ಪಾರದರ್ಶಕ ಪೆಟ್ಟಿಗೆಗಳಲ್ಲಿ ಗಮನಿಸಲಾಯಿತು.ಸಂಶೋಧಕರು ಗಮನಿಸಿದಂತೆ, ಸಾಮಾನ್ಯ ಆಕ್ಟೋಪಸ್‌ಗಳು ರಂಧ್ರದ ಗಾತ್ರಕ್ಕೆ ಅನುಗುಣವಾಗಿ ಎರಡು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತವೆ.

ರಂಧ್ರ ಸ್ವಲ್ಪ ದೊಡ್ಡದಾಗಿದ್ದರೆ ಮೊದಲು ತನ್ನ ಒಂದು ತೋಳನ್ನು ಒಳಗೆ ತೂರಿಸಿ ದಾರಿಯನ್ನು ಪರೀಕ್ಷಿಸುತ್ತದೆ. ನಂತರ ಉಳಿದ ಕೆಲವು ತೋಳುಗಳನ್ನು ಒಂದೊಂದಾಗಿ ಒಳಗೆ ಸಾಗಿಸುತ್ತದೆ. ಬಳಿಕ ಈಗಾಗಲೇ ಒಳಗೆ ಹೋದ ತೋಳುಗಳನ್ನು ಬಳಸಿಕೊಂಡು ಪೆಟ್ಟಿಗೆಯ ಗೋಡೆಯನ್ನು ಹಿಡಿದುಕೊಂಡು, ಉಳಿದ ತೋಳುಗಳು ಹಾಗೂ ದೇಹವನ್ನು ಎಳೆದುಕೊಂಡು ಹೊರಬರುತ್ತದೆ.

ಆದರೆ ರಂಧ್ರ ಇನ್ನೂ ಚಿಕ್ಕದಾಗಿದ್ದರೆ ಇದರ ತಂತ್ರ ಬದಲಾಗುತ್ತದೆ. ಮೊದಲು ಎಲ್ಲ ಎಂಟು ತೋಳುಗಳನ್ನೂ ರಂಧ್ರದ ಮೂಲಕ ಒಳಗೆ ಸಾಗಿಸುತ್ತದೆ. ನಂತರ ತಲೆಯ ಭಾಗ ಮತ್ತು ಮ್ಯಾಂಟಲ್‌ ಅನ್ನು ಪ್ರತ್ಯೇಕವಾಗಿ ಕಿರಿದಾದ ಜಾಗದ ಮೂಲಕ ತೂರಿಸಿಕೊಂಡು ಹೊರಬರುತ್ತದೆ. ಅಂದರೆ ದೊಡ್ಡ ರಂಧ್ರಕ್ಕೆ ಮೂರು ಹಂತಗಳ ತಂತ್ರ ಬಳಸಿದರೆ, ಸಣ್ಣ ರಂಧ್ರಕ್ಕೆ ನಾಲ್ಕು ಹಂತಗಳ ಪ್ರಕ್ರಿಯೆಯನ್ನು ಅನುಸರಿಸುತ್ತದೆ.

ಇದನ್ನೂ ಓದಿ : ರಾತ್ರಿ ಲೇಟಾಗಿ ಊಟ ಮಾಡೋ ಮುನ್ನ ಎಚ್ಚರ, ಸದ್ದಿಲ್ಲದೇ ನಿಮ್ಮ ಆರೋಗ್ಯವನ್ನು ಕಾಡುವ ಕಾಯಿಲೆಗಳಿವು! Late Night Dinner

ರೋಬೋಟ್‌ಗಳ ತಯಾರಿಕೆಗೂ ಸ್ಫೂರ್ತಿ!

ಈ ಸಂಶೋಧನೆಯ ವಿಶೇಷತೆಯೆಂದರೆ, ಆಕ್ಟೋಪಸ್‌ಗಳ ಈ ಚಲನವಲನ ಕೇವಲ ಅವುಗಳ ಬದುಕುಳಿಯುವ ಕೌಶಲಕ್ಕೆ ಸೀಮಿತವಾಗಿಲ್ಲ. ಭವಿಷ್ಯದಲ್ಲಿ ಅತ್ಯಾಧುನಿಕ ರೋಬೋಟ್‌ಗಳ ತಯಾರಿಕೆಗೂ ಇದು ನೆರವಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಭೂಕಂಪ, ಕಟ್ಟಡ ಕುಸಿತ ಅಥವಾ ಇತರ ವಿಪತ್ತುಗಳ ಸಂದರ್ಭದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಲು ಕಿರಿದಾದ ಜಾಗಗಳೊಳಗೆ ನುಸುಳಬಲ್ಲ ರೋಬೋಟ್‌ಗಳು ಅಗತ್ಯವಾಗುತ್ತವೆ. ಆಕ್ಟೋಪಸ್‌ನಂತೆ ದೇಹದ ಆಕಾರ ಬದಲಾಯಿಸಿಕೊಳ್ಳುವ ಮೃದು ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಿದರೆ ಇಂತಹ ರಕ್ಷಣಾ ಕಾರ್ಯಾಚರಣೆಗಳಿಗೆ ನೆರವಾಗಬಹುದು.

ಇಂಡಿಯನ್ ಜರ್ನಲ್ ಆಫ್ ಎಕ್ಸ್‌ಪೆರಿಮೆಂಟಲ್ ಬಯಾಲಜಿ ನಿಯತಕಾಲಿಕದಲ್ಲಿ ಪ್ರಕಟವಾದ ಈ ಅಧ್ಯಯನವು ಆಕ್ಟೋಪಸ್‌ಗಳ ದೇಹದ ಹೊಂದಾಣಿಕೆ ಮತ್ತು ಚಲನೆಯ ಹಿಂದಿರುವ ಸೂಕ್ಷ್ಮ ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಹೊಸ ದಾರಿ ತೆರೆದಿದೆ. ನೋಡಲು ಸಾಮಾನ್ಯ ಸಮುದ್ರ ಜೀವಿಯಂತೆ ಕಂಡರೂ, ಆಕ್ಟೋಪಸ್‌ನ ದೇಹದಲ್ಲಿರುವ ಇಂತಹ ಅದ್ಭುತ ಸಾಮರ್ಥ್ಯಗಳು ವಿಜ್ಞಾನ ಲೋಕಕ್ಕೆ ಇನ್ನೂ ಹಲವು ಹೊಸ ಸಾಧ್ಯತೆಗಳನ್ನು ಪರಿಚಯಿಸುತ್ತಿವೆ, ( ಏಜೆನ್ಸಿಸ್​).