ಸೊಳ್ಳೆಗಳು ಎಷ್ಟು ಎತ್ತರಕ್ಕೆ ಹಾರಬಲ್ಲವು? ಯಾವ ಮಹಡಿಯಲ್ಲಿದ್ರೆ ಅವುಗಳಿಂದ ತಪ್ಪಿಸಿಕೊಳ್ಳಬಹುದು? ಇಲ್ಲಿದೆ ಉತ್ತರ... Mosquitoes

Mosquitoes
Published on

Mosquitoes : ಮನೆ ಎಷ್ಟೇ ಅಚ್ಚುಕಟ್ಟಾಗಿದ್ದರೂ ಸೊಳ್ಳೆಗಳ ಕಾಟ ಮಾತ್ರ ತಪ್ಪುವುದಿಲ್ಲ. ಈ ಸೊಳ್ಳೆಗಳು ಎಲ್ಲರ ಮನೆಯಲ್ಲೂ ಇರುತ್ತವೆ ಮತ್ತು ನಾನಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಮಲಗಿರುವಾಗಲಂತೂ ಅವುಗಳ ಕಿರಿಕಿರಿ ನರಕದಷ್ಟೇ ಸಮಾನ. ಹೀಗಾಗಿ ಸೊಳ್ಳೆಗಳಿಂದ ಮುಕ್ತವಾಗಿರಲು ನಾವೆಲ್ಲ ನಾನಾ ಪ್ರಯತ್ನಗಳನ್ನು ಮಾಡುತ್ತೇವೆ.

ಆದರೆ, ಸೊಳ್ಳೆಗಳ ಬಗ್ಗೆ ಕೆಲವು ವಿಚಾರಗಳ ಬಗ್ಗೆ ನೀವು ಎಂದಾದರೂ ಯೋಚನೆ ಮಾಡಿದ್ದೀರಾ? ಸೊಳ್ಳೆಗಳು ಎಷ್ಟು ಎತ್ತರಕ್ಕೆ ಹಾರಬಲ್ಲವು? ಯಾವ ಮಹಡಿಯಲ್ಲಿದ್ದರೆ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಬಹುದು? ಎಂಬ ಪ್ರಶ್ನೆಗಳು ನಿಮ್ಮ ತಲೆಗೆ ಬಂದಿವೆಯೇ? ನೀರಿನ ಕಾಲುವೆಗಳು ಮತ್ತು ಒಳಚರಂಡಿ ವ್ಯವಸ್ಥೆಗಳ ಬಳಿ ವಾಸಿಸುವ ಜನರು ಸೊಳ್ಳೆಗಳಿಗೆ ತುಂಬಾ ಗುರಿಯಾಗುತ್ತಾರೆ. ಸಂಜೆಯಾದರೆ ಸಾಕು ಸೊಳ್ಳೆಗಳು ಗುಂಪು ಗುಂಪಾಗಿ ಬಂದು ದಾಳಿ ಮಾಡುತ್ತವೆ. ಆದಾಗ್ಯೂ, ಕೆಲವು ಪ್ರದೇಶದಲ್ಲಿ ವಾಸಿಸುವ ಜನರಿಗೆ ಸೊಳ್ಳೆಗಳ ಸಮಸ್ಯೆಯೇ ಇರುವುದಿಲ್ಲ. ಏಕೆಂದರೆ, ಅವರು ತುಂಬಾ ಎತ್ತರದ ಸ್ಥಳದಲ್ಲಿ ವಾಸಿಸುತ್ತಾರೆ.

ಅಂದಹಾಗೆ, ಸೊಳ್ಳೆಗಳು ತುಂಬಾ ಎತ್ತರಕ್ಕೆ ಹಾರುವುದಿಲ್ಲ. ಸೊಳ್ಳೆಗಳು ನೀರಿನ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಆ ಜಾಗವನ್ನೇ ತಮ್ಮ ವಸಾಹತು ಎಂದು ಪರಿಗಣಿಸುತ್ತವೆ. ತಮ್ಮ ಜಾಗದಿಂದ ಕೆಲವು ನೂರು ಗಜಗಳಷ್ಟು ದೂರ ಮಾತ್ರ ಸೊಳ್ಳೆಗಳು ಹೋಗುತ್ತವೆ. ಸೊಳ್ಳೆಗಳು ಅವು ಮೊಟ್ಟೆಗಳನ್ನಿಟ್ಟ ವಸಾಹತುವಿನಿಂದ ದೂರದಲ್ಲಿರುವ ಮನೆಗಳಿಗೆ ಹೋಗುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಆ ಮನೆಗಳಲ್ಲಿ ನೀರಿನ ಸಂಗ್ರಹವೇನಾದರೂ ಇದ್ದರೆ, ಸೊಳ್ಳೆಗಳು ಅಲ್ಲಿ ಮೊಟ್ಟೆಗಳನ್ನು ಇಟ್ಟು ಅಲ್ಲಿಯೂ ಹರಡುತ್ತವೆ.

ಸೊಳ್ಳೆಗಳು ಮೇಲಕ್ಕೆ ಮತ್ತು ಕೆಳಕ್ಕೆ ಹಾರಬಲ್ಲವು. ಆದರೆ, ಅವುಗಳಿಗೆ ಹೆಚ್ಚು ಮೇಲಕ್ಕೆ ಹಾರಲು ಇಷ್ಟವಿಲ್ಲ. ಹೀಗಾಗಿ ಅವು ನೆಲಕ್ಕೆ ಸಾಧ್ಯವಾದಷ್ಟು ಹತ್ತಿರ ಹಾರುತ್ತವೆ. ಅದಕ್ಕಾಗಿಯೇ ಅಪಾರ್ಟ್‌ಮೆಂಟ್‌ಗಳಲ್ಲಿ ನೆಲ ಮಹಡಿ, ಮೊದಲ ಮತ್ತು ಎರಡನೇ ಮಹಡಿಗಳು ಸೊಳ್ಳೆಗಳ ಕಾಟಕ್ಕೆ ಹೆಚ್ಚು ಒಳಗಾಗುತ್ತವೆ. ಆದರೆ, ಮೂರನೇ ಮತ್ತು ನಾಲ್ಕನೇ ಮಹಡಿಗಳಿಗೆ ಸೊಳ್ಳೆ ಕಾಟ ತೀರಾ ಕಡಿಮೆ. ಅದರ ಮೇಲೆ ವಾಸಿಸುವವರಿಗೆ ಬಹುತೇಕ ಸೊಳ್ಳೆಗಳ ಸಮಸ್ಯೆಯೇ ಇರುವುದಿಲ್ಲ.

ಸೊಳ್ಳೆಗಳ ಸಮಸ್ಯೆಗೆ ಮುಂಜಾಗ್ರತ ಕ್ರಮವೇನು?

ಸೊಳ್ಳೆಗಳು ನಿಮ್ಮ ಹತ್ತಿರ ಬರಬಾರದು ಅಂದರೆ, ನಿಮ್ಮ ಮನೆಯ ಸುತ್ತ ಎಲ್ಲಿಯೂ ನೀರು ಸಂಗ್ರಹವಾಗಬಾರದು. ಅಂದರೆ, ಕಾಲುವೆಗಳು, ನೀರಿನ ಹೊಂಡಗಳು ಇರಬಾರದು. ಇದಿಷ್ಟೇ ಅಲ್ಲದೆ, ತೆರೆದ ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹವಾಗಬಾರದು. ಮನೆಗಳಲ್ಲಿಯೂ ಸಹ ನೀರನ್ನು ಬಕೆಟ್‌ಗಳಲ್ಲಿ ದಿನಗಳವರೆಗೆ ಸಂಗ್ರಹಿಸಬಾರದು.

ಇನ್ನು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ರೀಫಿಲ್‌ಗಳು, ಸೊಳ್ಳೆ ಬತ್ತಿಗಳು ಸೇರಿದಂತೆ ಅನೇಕ ವಸ್ತುಗಳಿವೆ. ಇವೆಲ್ಲವೂ ನಮಗೂ ಹಾಗೂ ಸೊಳ್ಳೆಗಳಿಗೂ ಅನಾರೋಗ್ಯಕರ. ಇವುಗಳನ್ನು ಬಳಸುವ ಬದಲು, ಸೊಳ್ಳೆಗಳಿಂದ ದೂರವಿರುವ ಸ್ಥಳಗಳಲ್ಲಿ ವಾಸಿಸಲು ಪ್ರಯತ್ನಿಸಿ. ನೀವು ಮನೆಯ ಸುತ್ತಲೂ ಜಾಲರಿಯನ್ನು ಅಳವಡಿಸಬಹುದು ಅಥವಾ ಐದನೇ ಮಹಡಿಯ ಮೇಲೆ ವಾಸಿಸುವುದು ಉತ್ತಮ. ಇಂತಹ ಮಹಡಿಗಳು ಉತ್ತಮ ಗಾಳಿಯನ್ನು ಸಹ ಪಡೆಯುತ್ತವೆ. ಆದ್ದರಿಂದ, ಸೊಳ್ಳೆಗಳಿಂದ ಯಾವುದೇ ಸಮಸ್ಯೆ ಇಲ್ಲ. ಆದಾಗ್ಯೂ, ಅಷ್ಟು ಎತ್ತರದ ಮಹಡಿಯಲ್ಲಿ ಇರುವುದು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. ಅದು ನಿಮ್ಮ ಆಯ್ಕೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net