

ಶರೀರದಲ್ಲಿ ರೋಗನಿರೋಧಕಶಕ್ತಿ ಇಲ್ಲದ್ದರಿಂದ ಬರುವ ರೋಗ ಕರೊನಾ (ಕೋವಿಡ್-19). ಈ ರೋಗದ ವೈರಾಣು ಶ್ವಾಸಕೋಶದ ಮೇಲೆ ರೋಗವುಂಟುಮಾಡುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಆಯುರ್ವೆದದ ಸಲಹೆ ಸೂಚನೆಗಳನ್ನು ಕೊಡಲಾಗಿದೆ. ಆಯುರ್ವೆದದಲ್ಲಿ ಜ್ವರದಿಂದ ಹಿಡಿದು ಅರ್ಬುದ ರೋಗದವರೆಗೆ ಚಿಕಿತ್ಸೆಗಳನ್ನು ಹೇಳಲಾಗಿದೆ. ಈಗ ಕರೊನಾ ಎಂಬ ಘೊರ ರೋಗವನ್ನು ಆಯುರ್ವೆದ ರೀತಿಯಲ್ಲಿ ಹೇಗೆ ನಿಯಂತ್ರಿಸಬೇಕು, ಅದು ಬಾರದಂತೆ ಯಾವ ಕ್ರಮ ಜರುಗಿಸಬೇಕೆಂದು ತಿಳಿಯೋಣ.
ಮನುಷ್ಯ ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಮಲ-ಮೂತ್ರ ವಿಸರ್ಜಿಸಿ, ಯೋಗ-ಪ್ರಾಣಾಯಾಮ ಮಾಡಿ ತದನಂತರ ಅಭ್ಯಂಜನ ಸ್ನಾನ ಮಾಡಬೇಕು. ನಂತರ ಬೆಳಗಿನ ಉಪಾಹಾರ ಸೇವಿಸಬೇಕು. ಬಿಸಿ ಊಟ ಸೇವಿಸಬೇಕು ಹಾಗೂ ಬಿಸಿ ನೀರು ಕುಡಿಯಬೇಕು.
ವಯಸ್ಸಾದವರು ಶಕ್ತಿವೃದ್ಧಿಗಾಗಿ ರಸಾಯನ ಔಷಧಗಳನ್ನು (Geriatric) ಮತ್ತು ವಾಜೀಕರಣ ಔಷಧಿಗಳನ್ನು (Aphrodisiac) ಸೇವಿಸಬೇಕು. ಆಗ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಅಶ್ವಗಂಧ ಚೂರ್ಣ, ಲೇಹ್ಯ, ಘೃತ ಮತ್ತು ತೈಲಗಳನ್ನು ಬಳಸುವುದರಿಂದ ಶರೀರದ ಮಾಂಸ, ನರಗಳಿಗೆ ಶಕ್ತಿ ಬರುತ್ತದೆ.
ರೋಗನಿರೋಧಕ ಸಾಮರ್ಥ್ಯಕ್ಕಾಗಿ ಚ್ಯವನಪ್ರಾಶ (ಸಕ್ಕರೆ ಕಾಯಿಲೆ ಇರುವವರು ಸಕ್ಕರೆರಹಿತವಾದ), ವಾಸವ ಲೇಹ್ಯ, ಅಮೃತಪ್ರಾಶ ಲೇಹ್ಯ, ಅಶ್ವಗಂಧ ಲೇಹ್ಯಗಳನ್ನು ಉಪಯೋಗಿಸಬೇಕು. ಅಗಸ್ತ್ಯ ಹರೀತಕಿ ಲೇಹ್ಯ ಮತ್ತು ಹರೀತಕಿ ಲೇಹ್ಯಗಳನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು. ಚ್ಯವನಪ್ರಾಶದಲ್ಲಿ ವಿಟಮಿನ್-ಸಿ, ಆಂಟಿ ಆಕ್ಸಿಡೆಂಟ್ ಇರುತ್ತದೆ. ಇದರಿಂದ ರೋಗನಿರೋಧಕಶಕ್ತಿ ವೃದ್ಧಿಯಾಗುತ್ತದೆ.
ಕಫದ ಸ್ಥಾನವಾದ ಶ್ವಾಸಕೋಶ, ಗಂಟಲುಗಳಿಗೆ ಕರೊನಾ ಸೋಂಕು ಹಾನಿಯನ್ನುಂಟುಮಾಡುತ್ತದೆ. ಈ ರೋಗಕ್ಕೆ ಆಯುರ್ವೆದದಲ್ಲಿ ಕಫ ನಿವಾರಕ ಔಷಧಗಳನ್ನು ಹೇಳಿದ್ದಾರೆ. ಅಮೃತಬಳ್ಳಿ, ಆಡುಸೋಗೆ ಸೊಪ್ಪು, ತುಳಸಿ ಎಲೆಗಳ ರಸವನ್ನು ಪ್ರಮಾಣ 25 ಮಿ.ಲೀ.ನಂತೆ ಬೆಳಗ್ಗೆ ಹಾಗೂ ಸಾಯಂಕಾಲ ಬಿಸಿನೀರಿನೊಡನೆ ಸೇವಿಸಬೇಕು. ಕಫಹರಗಳಾದ ಸುದರ್ಶನ ಕಷಾಯ, ಅಮೃತಾದಿ ಕಷಾಯ, ದಶಮೂಲ ಕಷಾಯ ಇವುಗಳಲ್ಲೊಂದಕ್ಕೆ ತಕ್ಕಷ್ಟು ನೀರನ್ನು ಸೇರಿಸಿ, ಬೆಳಗ್ಗೆ ಮತ್ತು ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ 25 ಮಿ.ಲೀ.ನಷ್ಟು ಕುಡಿಯಬೇಕು. ಶುಂಠಿ, ಹಿಪ್ಪಲಿ ಮತ್ತು ಮೆಣಸುಗಳನ್ನು ಪುಡಿ ಮಾಡಿ 1-2 ಗ್ರಾಂ. ಪ್ರಮಾಣದಲ್ಲಿ ಜೇನಿನೊಡನೆ ಸೇವಿಸಬೇಕು.
ಮನುಷ್ಯನ ಶರೀರಕ್ಕೆ ಕ್ರಿಮಿಕೀಟಗಳು ಮತ್ತು ವೈರಸ್ ಬಾರದಂತೆ ದಶಾಂಗ ಲೇಪದಿಂದ ಹಾಗೂ ಈ ಕೆಳಕಂಡ ಔಷಧಿಗಳನ್ನು ಪುಡಿಮಾಡಿ ಧೂಪ ಹಾಕಬೇಕು. ಬಜೆ, ಹಿಂಗು, ವಾಯುವಿಡಂಗ, ಸೈಂಧವಲವಣ, ಗಜಪಿಪ್ಪಲಿ, ಅಗಳ ಶುಂಠಿ, ಅತಿಬಜೆ, ತ್ರಿಕಟುಗಳನ್ನು ಸೂಕ್ತ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಈ ಪುಡಿಯಿಂದ ಧೂಪ ಹಾಕಬೇಕು. ಇದರಿಂದ ಕ್ರಿಮಿಕೀಟ ಮತ್ತು ವೈರಾಣುಗಳು ನಾಶವಾಗುತ್ತವೆ.
ಕೆಲವು ಮನೆಮದ್ದುಗಳು: ಪ್ರತಿದಿನ 1-5 ತುಳಸಿ ಹನಿಗಳನ್ನು ನೀರಿನಲ್ಲಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಎರಡು ಬಾರಿ ಸೇವಿಸಬೇಕು. ರೋಗನಿರೋಧಕ ಸಾಮರ್ಥ್ಯಕ್ಕಾಗಿ ಅಶ್ವಗಂಧ, ಆಮಲಕಿ, ಅಮೃತಬಳ್ಳಿ ಇವುಗಳಿಂದ ತಯಾರಾದ ಚೂರ್ಣ, ಲೇಹ್ಯ, ಅರಿಷ್ಟಗಳನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಬೇಕು. ಈ ಔಷಧಗಳು ಗಿಡಮೂಲಿಕೆಗಳಿಂದ ತಯಾರಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ಬಡ ಜನರಿಗೆ ಆಯುರ್ವೆದ ಔಷಧಗಳನ್ನು ಹಂಚಿದರೆ ಒಳ್ಳೆಯದು.
15 ದಿನಗಳ ಕಾಲ ಒಂದು ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಹಾಲಿಗೆ ಸೇರಿಸಿ ಸೇವಿಸಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈಗಾಗಲೇ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಮನುಷ್ಯನು ಆರೋಗ್ಯವಾಗಿರಲು ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯಗಳನ್ನು ಆಯುರ್ವೆದದಲ್ಲಿ ಹೇಳಿದಂತೆ ಪಾಲಿಸಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ ರೋಗಗಳು ಬರುವುದಿಲ್ಲ. ಸರ್ಕಾರದ ಆದೇಶದಂತೆ ವೈಯಕ್ತಿಕ ಶುಚಿತ್ವ, ವೈಯಕ್ತಿಕ ಪ್ರತ್ಯೇಕತೆ ಮತ್ತು ಆರೋಗ್ಯಕರ ಅಂತರಗಳನ್ನು ಜನಸಾಮಾನ್ಯರು ಪಾಲಿಸಬೇಕು.