

ಹಿಮಾಲಯ ಪ್ರದೇಶದಲ್ಲಿ ಪ್ರಯೋಗದಲ್ಲಿರುವ ಐದು ಪುರಾತನ ಯೌಗಿಕ ವ್ಯಾಯಾಮಗಳನ್ನು ಈ ಅಂಕಣದಲ್ಲಿ ತಿಳಿಸಲಾಗುತ್ತದೆ. ಅವುಗಳನ್ನು ಕ್ರಮಬದ್ಧವಾಗಿ ಅನುಸರಿಸಿದರೆ ಶಾಶ್ವತ ಆರೋಗ್ಯದ ಜೊತೆಗೆ ಉಕ್ಕುವ ಯೌವನವೂ, ಚೈತನ್ಯವೂ ಲಭಿಸುತ್ತದೆ. ಹಿಮಾಲಯ ಪ್ರದೇಶಗಳಲ್ಲಿ ‘ಕ್ರಿಯೆ’ಗಳೆಂದು ಕರೆಯಲಾಗುವ
ಈ ಯೌಗಿಕ ವ್ಯಾಯಾಮಗಳನ್ನು ಕ್ರಮಬದ್ಧವಾಗಿ ಮಾಡಿದರೆ ಮೂವತ್ತೇ ದಿನಗಳ ಕಡಿಮೆ ಅವಧಿಯಲ್ಲಿ ನಿಮ್ಮ ವ್ಯಕ್ತಿಗತ ಜೀವನದಲ್ಲಿ ಉತ್ತಮ ಬೆಳವಣಿಗೆ ಆಗುತ್ತಿರುವುದನ್ನು ಕಾಣಬಹುದಾಗಿದೆ.
ಈ ವ್ಯಾಯಾಮವನ್ನು ಇಪ್ಪತ್ತೊಂದು ಬಾರಿ ಮಾಡಬೇಕು. ಪ್ರತಿ ಬಾರಿ ಎಣಿಕೆ ಮಾಡುವ ಮುನ್ನ ‘ಓಂ ಗಂ ಗಣಪತಯೇ ನಮಃ’ ಎಂದು ಮನದಲ್ಲೇ ಅಥವಾ ಗಟ್ಟಿಯಾಗಿ ಹೇಳಿ ಕ್ರಿಯೆಯನ್ನು ಪೂರ್ಣಗೊಳಿಸುವಾಗ ಒಂದು-ಎರಡು-ಮೂರು ಎಂದು ಕ್ರಮಶಃ ಸಂಖ್ಯೆ ಎಣಿಸುತ್ತ ಹೋಗಬೇಕು. ಗಣಪತಿಗೆ ಬಹುಪ್ರಿಯವಾದ ಅಂಕಿ ಇಪ್ಪತ್ತೊಂದು. ಹಾಗಾಗಿ ಈ ಕ್ರಿಯೆಯನ್ನು ‘ಶ್ರೀ ಗಣಪತಿ ವ್ಯಾಯಾಮ’ ಎಂದೇ ಕರೆಯಲಾಗಿದೆ. ಈ ವ್ಯಾಯಾಮಗಳೆಲ್ಲ ತುಂಬ ಸರಳವಾಗಿವೆ. ಅಲ್ಪಾವಧಿಯಲ್ಲಿ ಮಾಡಬಹುದು. ಎಲ್ಲಿ ಬೇಕಾದರೂ ಮಾಡಬಹುದು. ತನಗೆ ಉತ್ತಮ ಆರೋಗ್ಯ ಬೇಕು, ತನ್ನ ವ್ಯಕ್ತಿತ್ವವು ಸದಾ ಆಕರ್ಷಕವಾಗಿಯೇ ಉಳಿದಿರಬೇಕೆಂದು ಬಯಸುವ ಯಾರೇ ಆದರೂ ಈ ಯೌಗಿಕ ವ್ಯಾಯಾಮಗಳಿಂದ ಲಾಭ ಗಳಿಸಬಹುದು.
ಶ್ರೀ ಗಣಪತಿ ನಮನ ನಡಿಗೆ: ಇದು ಹಿಮಾಲಯ ಪ್ರದೇಶದ ಪುರಾತನ ಯೌಗಿಕ ಕ್ರಿಯೆಗಳ ಪೂರ್ವಸಿದ್ಧತಾ ವ್ಯಾಯಾಮವಾಗಿದೆ. ಸಮಸ್ಥಿತಿಯಲ್ಲಿ ನಿಲ್ಲಿ, ಉಸಿರನ್ನು ಒಳಗೆಳೆದುಕೊಳ್ಳುತ್ತ ಹಿಮ್ಮಡಿ ಎತ್ತಿ ಕಾಲಿನ ತುದಿಬೆರಳು(ಅಂಗುಷ್ಠ)ಗಳ ಮೇಲೆ ನಿಲ್ಲುತ್ತ ಕೈಗಳೆರಡನ್ನು ಮೇಲ್ಮುಖವಾಗಿ ತೆಗೆದುಕೊಂಡು ಹೋಗಬೇಕು. ದೇಹವನ್ನು ಸಂಪೂರ್ಣ ಮೇಲ್ಮಟ್ಟಕ್ಕೆ ಸೆಳೆಯುತ್ತ ತುದಿಬೆರಳುಗಳಲ್ಲೇ ಮುಂದೆ 21 ಹೆಜ್ಜೆಗಳನ್ನು ಹಾಕುತ್ತ ಸಾಗಬೇಕು. ನಿಧಾನವಾಗಿ ಸಮತೋಲನ ಕಾಯ್ದು ನಡೆಯುವಾಗ ಪ್ರತಿ ಹೆಜ್ಜೆಗೂ ‘ಓಂ ಗಂ ಗಣಪತಯೇ ನಮಃ’ ಎಂಬ ಮಂತ್ರವನ್ನು ಮನದಲ್ಲಿ ಅಥವಾ ಜೋರಾಗಿ 21 ಬಾರಿ ಉಚ್ಚರಿಸಬೇಕು. ಅಭ್ಯಾಸದ ಸ್ಥಳದಲ್ಲೇ ಸ್ವಲ್ಪ ದೂರದೊಳಗೆ ಪ್ರದಕ್ಷಿಣೆ ಹಾಕಬಹುದು. ನಂತರ ಕೈಗಳೆರಡನ್ನೂ ನಿಧಾನವಾಗಿ ಕೆಳಗೆ ತರಬೇಕು. ಮೇಲೆತ್ತಿದ ಹಿಮ್ಮಡಿಗಳನ್ನು ಆರಾಮವಾಗಿ ಭೂಮಿ ಸ್ಪರ್ಶ ಮಾಡಲು ಕೆಳಗಿಳಿಸಬೇಕು. ಕೈಗಳಲ್ಲಿ ರಕ್ತಪ್ರವಾಹದ ಹಾಗೂ ಪ್ರಾಣಸಂಚಾರದ ಅನುಭವವನ್ನು ಪಡೆಯಬಹುದು.
ಈ ಕ್ರಿಯೆಯು ಇಡೀ ದೇಹಕ್ಕೆ ಹಿತವಾದ ಸೆಳೆತ ಹಾಗೂ ವಿಶ್ರಾಂತಿಯನ್ನು ನೀಡುತ್ತದೆ. ಕಾಲಿನ ಅಂಗುಷ್ಠದ ತುದಿಯಲ್ಲಿರುವ ಪ್ರತಿಕ್ರಿಯಾತ್ಮಕ ಬಿಂದುಗಳಿಗೆ ಒತ್ತಡ ಪ್ರಾಪ್ತವಾಗುತ್ತದೆ. ಮಿದುಳು ಚುರುಕಾಗಲು, ದೇಹದ ಜಡತ್ವವನ್ನು ನಿವಾರಿಸಲು, ಶರೀರದ ಮೇಲೆ ಹಿಡಿತವನ್ನು ಸಾಧಿಸಲು, ಏಕಾಗ್ರತೆ, ಆತ್ಮವಿಶ್ವಾಸ, ನಿರ್ಧಾರದ ಸಾಮರ್ಥ್ಯ ವರ್ಧಿಸಲು ಸಹಾಯಕವಾಗಿದೆ.
ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ.