ಈ ಸಣ್ಣ ಎಚ್ಚರಿಕೆ ಕಡೆಗಣಿಸಿದ್ರೆ ಲಿವರ್ ಕ್ಯಾನ್ಸರ್ ಗ್ಯಾರಂಟಿ! ಯಾವ ವಯಸ್ಸಿನವರಿಗೂ ತಪ್ಪಿದ್ದಲ್ಲ | Hepatitis
ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
500ಕ್ಕೂ ಹೆಚ್ಚು ಕೆಲಸ ಮಾಡುವ ಅಂಗಕ್ಕೆ ಹೊಡೆತ ನೀಡುವ ನಿಶ್ಶಬ್ದ ವೈರಸ್
ಹೆಪಟೈಟಿಸ್‌ನ ಈ ಅಪಾಯಕಾರಿ ಲಕ್ಷಣಗಳನ್ನು ಎಂದೂ ಕಡೆಗಣಿಸಬೇಡಿ
ಮದ್ಯಪಾನ, ಫ್ಯಾಟಿ ಲಿವರ್ ಸೇರಿ ಅಪಾಯ ಹೆಚ್ಚಿಸುವ ಅಂಶಗಳಿವು
ಲಸಿಕೆ, ಸರಳ ಜೀವನಶೈಲಿಯಿಂದ ತಡೆಯಿರಿ ಲಿವರ್ ಕ್ಯಾನ್ಸರ್
Hepatitis: ಲಿವರ್/ಯಕೃತ್ತು ಮಾನವ ದೇಹದ ಅತ್ಯಂತ ದೊಡ್ಡ ಒಳಗಿನ ಅಂಗ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಸೇರಿದಂತೆ ಬರೋಬ್ಬರಿ 500ಕ್ಕೂ ಹೆಚ್ಚು ಪ್ರಮುಖ ಕೆಲಸಗಳನ್ನು ಸರಾಗವಾಗಿ ನಿರ್ವಹಿಸುವ ಈ ಅಂಗವನ್ನು ನೀವು ಚೆನ್ನಾಗಿ ನೋಡಿಕೊಳ್ಳದೆ ಹೋದರೆ, ಮುಂದೊಂದು ದಿನ ಅದೇ ನಿಮ್ಮನ್ನು ಸಾವಿನ ದವಡೆಗೆ ತಳ್ಳಿದರೂ ಆಶ್ಚರ್ಯಬೇಡ.
ಲಿವರ್ನಲ್ಲಿ ಕಾಣಿಸಿಕೊಳ್ಳುವ 'ಹೆಪಟೈಟಿಸ್' (ಯಕೃತ್ತಿನ ಉರಿಯೂತ) ಎಂಬ ವೈರಲ್ ಸೋಂಕನ್ನು ಆರಂಭದಲ್ಲೇ ನೀವು ನಿರ್ಲಕ್ಷಿಸಿದರೆ, ಅದು ಹಂತ ಹಂತವಾಗಿ ಬೆಳೆದು ಮಾರಕ ಲಿವರ್ ಕ್ಯಾನ್ಸರ್‌ಗೆ ತಿರುಗುವ ಅಪಾಯ ಹೆಚ್ಚು. ಇತ್ತೀಚಿನ ವೈದ್ಯಕೀಯ ವರದಿಗಳ ಪ್ರಕಾರ, ಹೆಚ್ಚಿನ ಜನರಲ್ಲಿ ಈ ಕಾಯಿಲೆ ಯಾವುದೇ ಪ್ರಮುಖ ರೋಗಲಕ್ಷಣಗಳನ್ನು ತೋರಿಸದೆ ವರ್ಷಗಟ್ಟಲೆ ದೇಹದಲ್ಲಿ ಕಳ್ಳನಂತೆ ಅಡಗಿರುತ್ತದೆ ಎಂದು ಹೇಳಲಾಗಿದೆ.
ಹೆಪಟೈಟಿಸ್‌ನಿಂದ ಕ್ಯಾನ್ಸರ್ ಹೇಗೆ?
ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಸೇರಿದಂತೆ ಹಲವು ರೀತಿಯ ವೈರಸ್‌ಗಳಿದ್ದರೂ, ಹೆಪಟೈಟಿಸ್ ಬಿ ಮತ್ತು ಸಿ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಇವು ದೇಹವನ್ನು ಪ್ರವೇಶಿಸಿ ದೀರ್ಘಕಾಲದವರೆಗೆ ಉರಿಯೂತವನ್ನು ಉಂಟುಮಾಡುತ್ತವೆ. ಇದನ್ನು ಕ್ರಾನಿಕ್ ಹೆಪಟೈಟಿಸ್ ಎಂದು ಕರೆಯಲಾಗಿದೆ.
ಫೈಬ್ರೋಸಿಸ್: ಸತತ ವೈರಸ್ ದಾಳಿಯಿಂದ ಯಕೃತ್ತಿನ ಜೀವಕೋಶಗಳು ನಾಶವಾಗಿ, ಆ ಜಾಗದಲ್ಲಿ 'ಸ್ಕಾರ್ ಟಿಶ್ಯೂ' ರೂಪುಗೊಳ್ಳುತ್ತದೆ.
ಸಿರೋಸಿಸ್: ಈ ಸ್ಥಿತಿ ಹಲವು ವರ್ಷಗಳ ಕಾಲ ಮುಂದುವರಿದಾಗ ಲಿವರ್ ಸಂಪೂರ್ಣವಾಗಿ ಬಾಡಿಕೊಂಡು ತನ್ನ ಕಾರ್ಯಾಚರಣೆಯನ್ನು ಶೇ.90ರಷ್ಟು ಸ್ಥಗಿತಗೊಳಿಸಿರುತ್ತದೆ.
ಲಿವರ್ ಕ್ಯಾನ್ಸರ್ (Hepatocellular Carcinoma): ಸಿರೋಸಿಸ್‌ಗೆ ಒಳಗಾದ ಜೀವಕೋಶಗಳಲ್ಲಿ ಡಿಎನ್‌ಎ ವ್ಯತ್ಯಾಸಗೊಂಡು ಕಾಲಕ್ರಮೇಣ ಅವು ಕ್ಯಾನ್ಸರ್ ಜೀವಕೋಶಗಳಾಗಿ ಬದಲಾಗುತ್ತವೆ ಎಂದು ವಿವರಿಸಲಾಗಿದೆ.
ಶೇ.70ರಷ್ಟು ಹಾನಿಗೊಂಡ ಮೇಲಷ್ಟೇ ಲಕ್ಷಣಗಳು!
ಲಿವರ್ ಶೇ.70ರಷ್ಟು ಡ್ಯಾಮೇಜ್ ಆದರೆ ಮಾತ್ರ ಗಂಭೀರ ರೋಗಲಕ್ಷಣಗಳು ಹೊರಗೆ ಕಾಣಿಸಲು ಆರಂಭಿಸುತ್ತೆ. ಇಲ್ಲಿ ಏನಾದರೂ ನಿರ್ಲಕ್ಷಿಸಿದರೆ, ಜೀವ ಉಳಿಸಿಕೊಳ್ಳುವುದು ಬಹುತೇಕ ಕಷ್ಟ. ಕೆಳಗೆ ಹೇಳಿರುವ ರೋಗಲಕ್ಷಣಗಳು ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ.
ಕಾಮಾಲೆ (Jaundice): ರಕ್ತದಲ್ಲಿ ಬಿಲಿರುಬಿನ್ ಮಟ್ಟ ಹೆಚ್ಚಾಗಿ ಕಣ್ಣಿನ ಬಿಳಿ ಭಾಗ ಹಾಗೂ ಚರ್ಮ ಹಳದಿ ಬಣ್ಣಕ್ಕೆ ತಿರುಗುವ ಲಕ್ಷಣವನ್ನು ಜಾಂಡೀಸ್ ಎಂದು ಕರೆಯಲಾಗಿದೆ. ಇದು ಕಾಣಿಸಿಕೊಂಡ್ರೆ ಎಚ್ಚರವಿರಲಿ
ಹಸಿವಿನ ಅಭಾವ/ ತೂಕ ನಷ್ಟ: ಊಟ ಮಾಡಲು ಮನಸ್ಸಾಗದಿರುವುದು ಮತ್ತು ಯಾವುದೇ ವ್ಯಾಯಾಮ ಮಾಡದಿದ್ದರೂ ದಿಢೀರ್ ತೂಕ ಇಳಿಕೆಯಾಗುವುದು
ವಿಪರೀತ ಆಯಾಸ: ವಿಶ್ರಾಂತಿ ತೆಗೆದುಕೊಂಡರೂ ಪದೇ ಪದೇ ದೇಹ ದಣಿದಿದೆ ಎನ್ನುವಂತೆ ಸುಸ್ತು ಕಾಡುವುದು
ಹೊಟ್ಟೆ ನೋವು/ ಊತ: ಹೊಟ್ಟೆಯ ಮೇಲ್ಭಾಗದ ಬಲಗಡೆ ನೋವು ಹಾಗೂ ನೀರು ತುಂಬಿಕೊಳ್ಳುವುದರಿಂದ ಹೊಟ್ಟೆ ಊದಿಕೊಳ್ಳುವುದು
ಚರ್ಮದ ಬದಲಾವಣೆ: ತ್ವಚೆಯಲ್ಲಿ ಅತಿಯಾದ ತುರಿಕೆ ಹಾಗೂ ಜೇಡರ ಬಲೆಯಂತೆ ರಕ್ತನಾಳಗಳು ಗೋಚರಿಸುವುದು
ಮೂತ್ರ/ಮಲ: ಬಣ್ಣದ ವ್ಯತ್ಯಾಸ ಕಂಡುಬರುವುದು
ಈ ಅಪಾಯ ಹೆಚ್ಚಿಸುವ ಪ್ರಮುಖ ಅಂಶಗಳು
ಸೋಂಕು ಮತ್ತು ಮದ್ಯಪಾನ: ಚಿಕಿತ್ಸೆ ಪಡೆಯದ ಹೆಪಟೈಟಿಸ್ ಬಿ ಮತ್ತು ಸಿ ಸೋಂಕು ಕ್ಯಾನ್ಸರ್ ಅಪಾಯವನ್ನು 20ರಿಂದ 30 ಪಟ್ಟು ಹೆಚ್ಚಿಸುತ್ತದೆ. ಸೋಂಕಿನ ಜೊತೆಗೆ ಮದ್ಯಪಾನ ಮಾಡುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ.
ಫ್ಯಾಟಿ ಲಿವರ್/ ಬೊಜ್ಜು: ನಾನ್ ಅಲ್ಕೋಹಾಲಿಕ್ ಫ್ಯಾಟಿ ಲಿವರ್ (NAFLD), ಬೊಜ್ಜು ಮತ್ತು ಮಧುಮೇಹ ಲಿವರ್ ಆರೋಗ್ಯವನ್ನು ಡ್ಯಾಮೇಜ್ ಮಾಡುತ್ತವೆ.
ಸೆಲ್ಫ್ ಮೆಡಿಕೇಷನ್: ವೈದ್ಯರ ಸಲಹೆಯಿಲ್ಲದೆ ನೋವು ನಿವಾರಕಗಳು ಹಾಗೂ ಅವೈಜ್ಞಾನಿಕ ಔಷಧಿಗಳನ್ನು ಪದೇ ಪದೇ ಸೇವಿಸುವುದು ಲಿವರ್ಗೆ ಹೊಡೆತ ಎಂಬುದು ಗೊತ್ತಿರಲಿ.
ವಂಶಪಾರಂಪರ್ಯ: ಕುಟುಂಬದಲ್ಲಿ ಯಾರಿಗಾದರೂ ಲಿವರ್ ಕ್ಯಾನ್ಸರ್ ಅಥವಾ ಹೆಪಟೈಟಿಸ್ ಇತಿಹಾಸವಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು.
ಪರಿಹಾರ, ಕಂಟ್ರೋಲ್ ಹೇಗೆ?
ರೋಗಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಕಾಯದೆ ಆಗಾಗ್ಗೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಮೊದಲ ಹಂತದ ಮದ್ದು.
ನಿಯಮಿತ ತಪಾಸಣೆ: ರಕ್ತ ಪರೀಕ್ಷೆಗಳು (LFT & Alpha-fetoprotein), ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಫೈಬ್ರೋಸ್ಕಾನ್ ಅಥವಾ ಸಿಟಿ/ಎಂಆರ್ಐ ಸ್ಕ್ಯಾನ್ ಮೂಲಕ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬಹುದು. ಪ್ರತಿ 6 ತಿಂಗಳಿಗೊಮ್ಮೆ ಈ ತಪಾಸಣೆ ಮಾಡಿಸಿಕೊಂಡರೆ, ಅದರಲ್ಲಿ ಶೇ.70ರಷ್ಟು ಡ್ಯಾಮೇಜ್ ಆಗಿರುವುದು ಗೊತ್ತಾದರೆ, ಶಸ್ತ್ರಚಿಕಿತ್ಸೆ ಅಥವಾ ಲಿವರ್ ಟ್ರಾನ್ಸ್‌ಪ್ಲಾಂಟ್ ಮೂಲಕ ಸಂಪೂರ್ಣವಾಗಿ ಗುಣಮುಖರಾಗಬಹುದು.
ಲಸಿಕೆ ಮತ್ತು ಔಷಧಿ: ಹೆಪಟೈಟಿಸ್ 'ಬಿ'ಗೆ ಪರಿಣಾಮಕಾರಿ ಲಸಿಕೆ ಲಭ್ಯವಿದೆ. ಹೆಪಟೈಟಿಸ್ 'ಸಿ' ಗೆ ಲಸಿಕೆ ಇಲ್ಲ. ಆದರೂ ಅದನ್ನು ಸಂಪೂರ್ಣವಾಗಿ ಗುಣಪಡಿಸುವ ಆಂಟಿ ವೈರಲ್ ಔಷಧಗಳಿವೆ.
ಜೀವನಶೈಲಿ ಬದಲಾವಣೆ: ಧೂಮಪಾನ, ಮದ್ಯಪಾನ ಸಂಪೂರ್ಣ ತ್ಯಜಿಸಬೇಕು. ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಅತಿಯಾದ ಸಿಹಿಯನ್ನು ಕಡಿತಗೊಳಿಸಿ. ನಾರಿನಂಶವಿರುವ ತರಕಾರಿ, ಹಣ್ಣು ಹಾಗೂ ಒಮೆಗಾ-3 ಸಮೃದ್ಧವಾಗಿರುವ ಮೀನು/ಬೀಜಗಳು ಸೇವಿಸಿ.
ವ್ಯಾಯಾಮ: ದಿನಕ್ಕೆ 30ರಿಂದ 40 ನಿಮಿಷಗಳ ವ್ಯಾಯಾಮ ಫ್ಯಾಟಿ ಲಿವರ್ ಅಪಾಯವನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತದೆ.
ನಿಮ್ಮ ಗಮನಕ್ಕೆ: ಮೇಲ್ಕಂಡ ವಿಷಯ ನಿಮಗೆ ಮಾಹಿತಿ ನೀಡುವ ಸಲುವಾಗಿ ಹಂಚಿಕೊಂಡಿರುವುದಷ್ಟೇ. ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದೇ ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಡಲು ದೊಡ್ಡ ಅಸ್ತ್ರ. ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಸಲಹೆ,(ಏಜೆನ್ಸೀಸ್).