

ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ದೈನಂದಿನ ಆಹಾರದ ಜೊತೆಗೆ ಅನೇಕ ರೀತಿಯ ಪೋಷಕಾಂಶಗಳ ಅಗತ್ಯವಿರುತ್ತದೆ. ಹಣ್ಣುಗಳು ಮತ್ತು ತರಕಾರಿಗಳ ಸೇವನೆಯು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಒದಗಿಸುತ್ತದೆ. ಕಿವಿಯು ಅಂತಹ ರುಚಿಕರವಾದ ಹಣ್ಣುಗಳಲ್ಲಿ ಒಂದಾಗಿದೆ.
ಕಿವಿ ಹಣ್ಣು ಆ್ಯಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ, ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಫೈಬರ್, ಕಾರ್ಬೋಹೈಡ್ರೇಟ್, ರಂಜಕ, ತಾಮ್ರ, ಸತು, ನಿಯಾಸಿನ್, ಪೊಟ್ಯಾಸಿಯಮ್, ರೈಬೋಫ್ಲಾವಿನ್, ಬೀಟಾ ಕ್ಯಾರೋಟಿನ್ ಇತ್ಯಾದಿ ಪೋಷಕಾಂಶಗಳನ್ನು ಒಳಗೊಂಡಿದೆ.
ಬಿಳಿ ಭಾಗ ಚಪ್ಪೆಯಾಗಿದ್ದರೂ ಹಸಿರು ಭಾಗ ಚಿಕ್ಕ ಬೀಜಗಳನ್ನು ಹೊಂದಿದ್ದು ಕೊಂಚ ಆಮ್ಲೀಯ ಹುಳಿಮಿಶ್ರಿತ ಸಿಹಿ ರುಚಿಯನ್ನು ಹೊಂದಿರುತ್ತದೆ. ಈ ರುಚಿಗೆ ಇದರಲ್ಲಿರುವ ಆಗಾಧ ಪ್ರಮಾಣದ ವಿಟಮಿನ್ ಸಿ ಕಾರಣ. ಉಳಿದಂತೆ ಈ ಹಣ್ಣಿನಲ್ಲಿ ವಿಟಮಿನ್ ಕೆ, ಫೋಲೇಟ್, ಪೊಟ್ಯಾಶಿಯಂ ಅಂಶಗಳೂ ಸಮೃದ್ಧವಾಗಿವೆ. ಅಲ್ಲದೇ ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ಕರಗುವ ಹಾಗೂ ಕರಗದ ನಾರಿನಂಶವೂ ಸಮೃದ್ಧವಾಗಿದೆ.
ಕಿವಿಹಣ್ಣಿನ ಸೇವನೆಯಿಂದ ಕೊಬ್ಬಿನ ಉತ್ಪಾದನೆ ತಗ್ಗುವ ಮೂಲಕ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಕಡಿಮೆಯಾಗುವುದನ್ನು ಹಾಗೂ ರಕ್ತದ ಒತ್ತಡವನ್ನು ನಿಯಂತ್ರಿಸಲೂ ಸಾಧ್ಯವಾಗುವುದನ್ನು ಸಂಶೋಧನೆಗಳು ದೃಢಪಡಿಸಿವೆ. ಈ ಕ್ರಿಯೆಯಲ್ಲಿ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟದ ಮೇಲೆ ಯಾವುದೇ ಪರಿಣಾಮ ಉಂಟಾಗದೇ ಇರುವುದನ್ನು ಸಹಾ ಗಮನಿಸಲಾಗಿದೆ.
ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದು ರಕ್ತದ ಒತ್ತಡ ಕಡಿಮೆಯಾಗಿಸುವ ಗುಣವನ್ನು ಆಸ್ಪಿರಿನ್ ಎಂಬ ಔಷಧಿಯೂ ಹೊಂದಿದೆ, ಆದರೆ, ಆಸ್ಪಿರಿನ್ ಜಠರ ಹಾಗೂ ಕರುಳುಗಳಲ್ಲಿ ಉರಿಯೂತ ಉಂಟು ಮಾಡುವ ಹಾಗೂ ತನ್ಮೂಲಕ ಒಳಪದರಗಳಲ್ಲಿ ಹುಣ್ಣು (ಅಲ್ಸರ್) ಉಂಟು ಮಾಡುವ ಗುಣವನ್ನೂ ಹೊಂದಿದೆ. ಸಂಧೋಶನೆಯ ಪ್ರಕಾರ, ನಿತ್ಯವೂ ಎರಡರಿಂದ ಮೂರು ಕಿವಿ ಹಣ್ಣುಗಳನ್ನು ಸೇವಿಸುತ್ತಾ ಬಂದರೆ ರಕ್ತವನ್ನು ತಿಳಿಗೊಳಿಸಲು ಹಾಗೂ ಕ್ರಮೇಣ ಹೃದಯದ ಮೇಲಿನ ಹೊರೆಯನ್ನು ತಗ್ಗಿಸಲು ಸಾಧ್ಯವಾಗುತ್ತದೆ.
ನಮ್ಮ ದೇಹದ ಪ್ರತಿ ಜೀವಕೋಶದ ಡಿ ಎನ್ ಎ ರಚನೆ ವಿಶಿಷ್ಟವಾಗಿದ್ದು ನಮ್ಮ ಎಲ್ಲಾ ಗುಣಗಳು ಹಾಗೂ ಲಕ್ಷಣಗಳಿಗೆ ಕಾರಣವಾಗಿವೆ. ಇವು ಸತತ ಸೆಳೆತಕ್ಕೆ ಒಳಪಡುತ್ತಾ ಇರುತ್ತವೆ. ಈ ರಚನೆ ಬದಲಾದಾಗ, ಇದು ಕಡಿಮೆ ಪ್ರಾಬಲ್ಯದ್ದೇ ಆಗಿದ್ದರೂ ಹೆಚ್ಚಿನ ಪ್ರಾಬಲ್ಯದ್ದೇ ಆಗಿದ್ದರೂ ಸರಿ, ಅನಾರೋಗ್ಯ ಕಾಡುತ್ತದೆ.
ಈ ಬದಲಾವಣೆಗಳನ್ನು ಸರಿಪಡಿಸಿ ಡಿ ಎನ್ ಎ ರಚನೆಯನ್ನು ಮೂಲ ಸ್ವರೂಪಕ್ಕೆ ಹಿಂದಿರುಗಿಸುವಲ್ಲಿ ಕಿವಿ ಹಣ್ಣು ಬೇರಾವ ಆಹಾರದಲ್ಲಿಯೂ ಇರದ ಗುಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ತಜ್ಞರ ಪ್ರಕಾರ, ನಿತ್ಯವೂ ಕಿವಿ ಹಣ್ಣುಗಳನ್ನು ತಿನ್ನುತ್ತಾ ಬಂದರೆ ಕರುಳಿನ ಕ್ಯಾನ್ಸರ್ ಎದುರಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ತನ್ಮೂಲಕ ಕ್ಯಾನ್ಸರ್ ನಿರೋಧಕ ಅಹಾರವಾಗಿ ಕಿವಿ ಹಣ್ಣು ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ.