

| ಪದ್ಮಲತಾ ಮೋಹನ್
ಒಂದು ದಿನ ಬುದ್ಧ ಎಂದಿನಂತೆ ತನ್ನ ಅನುಯಾಯಿಗಳ ಜೊತೆ ಭಿಕ್ಷೆಗೆಂದು ಹೊರಟ. ಹಾಗೆ ಸಂಚರಿಸುತ್ತ ಒಂದು ಗ್ರಾಮವನ್ನು ಪ್ರವೇಶಿಸಿದ. ಅಲ್ಲಿ ಒಂದು ಮನೆಯ ಪಕ್ಕ ಇಬ್ಬರು ಮಕ್ಕಳು ಮಣ್ಣಿನಲ್ಲಿ ಆಟವಾಡುತ್ತಿದ್ದರು. ಆಟದಲ್ಲಿ ತಲ್ಲೀನರಾಗಿದ್ದ ಆ ಮಕ್ಕಳನ್ನು ಗಮನಿಸಿ ನಸುನಕ್ಕು ಮುಂದೆ ನಡೆದು ಹೋದ ಬುದ್ಧ ಅಲ್ಲಿದ್ದ ಮನೆಯ ಬಾಗಿಲನ್ನು ತಟ್ಟಿ ಭಿಕ್ಷೆಯನ್ನು ಯಾಚಿಸಿದ. ಆ ಮನೆಯೊಡತಿ ಬಾಗಿಲು ತೆರೆದು ಅವನ ತಟ್ಟೆಗೆ ಅನ್ನವನ್ನು ಹಾಕಿದಳು. ಅದನ್ನು ಸ್ವೀಕರಿಸುತ್ತಿದ್ದ ಬುದ್ಧನನ್ನು ಆಟವಾಡುತ್ತಿದ್ದ ಮಕ್ಕಳು ಗಮನಿಸಿದರು. ಭವ್ಯ ವ್ಯಕ್ತಿತ್ವದ ಅವನ ಕಣ್ಣುಗಳು ಪ್ರೀತಿ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಿದ್ದವು. ಆತನ ದೇಹವಿಡೀ ಬಂಗಾರದ ಪ್ರಭೆಯನ್ನು ಹೊರಸೂಸುತ್ತಿದ್ದು ಮಕ್ಕಳಿಗೆ ಅವನಿಂದ ಕಣ್ಣು ಕೀಳುವುದು ಕಷ್ಟವೆನಿಸಿತು.
ಆ ಕ್ಷಣದಲ್ಲಿ ಮಕ್ಕಳಲ್ಲಿ ದೊಡ್ಡವನು ‘ನಾವೂ ಏನಾದರು ಕೊಡೋಣ’ ಅಂದ. ಆಗ ಸಣ್ಣವನು ‘ನಮ್ಮಲ್ಲಿ ಕೊಡುವುದಕ್ಕೆ ಏನಿದೆ?’ ಎಂದು ಬೇಜಾರಿನಿಂದ ನುಡಿದ. ದೊಡ್ಡವನು ಕೂಡಲೇ ಆಟವಾಡುತ್ತಿದ್ದ ಮಣ್ಣನ್ನು ನಯವಾಗಿ ನಾದಿ ಅದರಲ್ಲಿ ಒಂದು ಮಣ್ಣಿನ ಮುದ್ದೆಯನ್ನು ಮಾಡಿ ಅದನ್ನು ತೆಗೆದುಕೊಂಡು ಹೋಗಿ ಬುದ್ಧನ ಭಿಕ್ಷಾಪಾತ್ರೆಗೆ ಹಾಕಿದ. ಬುದ್ಧನು ಹುಡುಗರು ಹಾಕಿದ ಮಣ್ಣಿನ ಮುದ್ದೆಯನ್ನು ಆ ಮನೆಯವರು ಕೊಟ್ಟ ಆಹಾರದಷ್ಟೇ ಸಂತೋಷವಾಗಿ ಸ್ವೀಕರಿಸಿದ. ಇದನ್ನು ಕಂಡು ಅವನ ಅನುಯಾಯಿಗೆ ಆಶ್ಚರ್ಯ. ಅವನು ಬುದ್ಧನಲ್ಲಿ- ‘ಈ ನಿಷ್ಪ್ರಯೋಜಕ ಮಣ್ಣಿನ ಮುದ್ದೆಯನ್ನು ಆಹಾರದಷ್ಟೇ ಸಂತೋಷದಿಂದ ಸ್ವೀಕರಿಸಿದಿರಲ್ಲ, ಕಾರಣವೇನು?’ ಎಂದು ಪ್ರಶ್ನಿಸಿದ. ಆಗ ಬುದ್ಧ ನಗುತ್ತ- ‘ಯಾವಾಗಲೂ ದಾನ ಮಾಡುವವರ ಪ್ರಾಮಾಣಿಕ ಪ್ರಯತ್ನ ಮತ್ತು ದಾನ ಮಾಡಬೇಕು ಎಂದುಕೊಂಡ ಪವಿತ್ರ ಮನಸ್ಸು ದಾನ ಮಾಡಿದ ವಸ್ತುವಿಗಿಂತಲೂ ದೊಡ್ಡದಾಗಿ ಇರುತ್ತದೆ. ನಾನು ಆ ಬಾಲಕರಲ್ಲಿ ಅದನ್ನು ಕಂಡೆ’ ಎಂದು ವಿವರಿಸಿದ. ಈ ಮಾತಿನಲ್ಲಿ ಅಡಗಿರುವ ಸತ್ಯವನ್ನು ನಾವೂ ನಮ್ಮ ಪ್ರಸಕ್ತ ಜೀವನದಲ್ಲಿ ಅಳವಡಿಸಿಕೊಳ್ಳಬಹುದು.
ಎಷ್ಟೋ ಜನರಿಗೆ ಪರರಿಗೆ ಸಹಾಯ ಮಾಡಬೇಕು ಎಂಬ ಮನಸ್ಸಿದ್ದರೂ ‘ನಾನು ಶ್ರೀಮಂತನಲ್ಲ, ಅನುಕೂಲಸ್ಥನಲ್ಲ’ ಅಂದು ಬೇಸರಿಸಿಕೊಳ್ಳುತ್ತಿರುತ್ತಾರೆ. ‘ನಾನು ಹಣವಂತನಾಗಿದ್ದರೆ ಸಹಾಯ ಮಾಡಬಹುದಿತ್ತು’ ಎಂದುಕೊಳ್ಳುತ್ತ ಕೊರಗುತ್ತಿರುತ್ತಾರೆ. ಆದರೆ ದಾನ ಮಾಡಲು ಅಥವಾ ಬೇರೆಯವರಿಗೆ ಸಹಾಯ ಮಾಡಲು ನಾವು ಶ್ರೀಮಂತರೇ ಆಗಬೇಕು ಎಂದೇನಿಲ್ಲ. ಮನಃಪೂರ್ವಕವಾಗಿ ಕೊಡುವ ಒಂದು ರೂಪಾಯಿಯೂ ಒಂದು ಕೋಟಿಗೆ ಸಮ. ಮುಖ್ಯವಾಗಿ, ನಮಗೆ ಸಹಾಯ ಮಾಡುವ ಒಳ್ಳೆಯ ಮನಸ್ಸಿರಬೇಕು.
(ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)