

ತೂಕ ಕಡಿಮೆ ಮಾಡುವಿಕೆ (ವೇಟ್ ಲಾಸ್ ಪ್ರೋಗ್ರಾಮ್: ದೈಹಿಕ ವ್ಯಾಯಾಮ ಅಲ್ಲದೆ, ಆಹಾರಪದ್ಧತಿಯಲ್ಲಿ ಕೊಬ್ಬು ಹೆಚ್ಚದಂತೆ ಗಣನೀಯ ಪ್ರಮಾಣದಲ್ಲಿ ಪಥ್ಯವನ್ನು ಪಾಲಿಸಬೇಕು. ಆಹಾರ ಪಥ್ಯಕ್ಕೆ ನುರಿತ ಆಹಾರತಜ್ಞರಿಂದ ಬೆಳಗಿನ ಉಪಹಾರದಿಂದ ರಾತ್ರಿ ಊಟದವರೆಗೂ ತಿನ್ನಬೇಕಾದ ಪದಾರ್ಥಗಳ ಯಾದಿ ತಯಾರಿಸಿ ಇಟ್ಟುಕೊಳ್ಳುವುದು ಉತ್ತಮ. ಶೇ. 10ರಷ್ಟು ತೂಕ ಕಡಿಮೆ ಮಾಡಿಕೊಳ್ಳುವುದರಿಂದ ದೇಹಕ್ಕೆ ಆಗುವ ಲಾಭಗಳು ಅಪಾರ. ಇದರಿಂದ ಮಧುಮೇಹ, ಹೃದಯಾಘಾತಗಳನ್ನು ಸಾಕಷ್ಟು ಮುಂದೂಡಬಹುದು. ಒಟ್ಟಿನಲ್ಲಿ ಈ ಕೆಳಗಿನ ಅಂಶಗಳನ್ನು ನೆನಪಿಟ್ಟು ಪಾಲಿಸಿ.
1) ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ‘3’ ತಿಂಗಳು, ‘6’ ತಿಂಗಳು, ಒಂದು ವರ್ಷ ಹೀಗೆ ಸಮಯದ ಲಿಮಿಟ್ ಹಾಕಿಕೊಳ್ಳಿ.
2) ತಿನ್ನುವ ಪ್ರತಿಯೊಂದು ಪದಾರ್ಥವನ್ನೂ ವಿಚಾರಿಸಿ ತಿನ್ನಿ.
3) ಸಮತೋಲ ಆಹಾರದಲ್ಲಿ ಕೊಬ್ಬು, ಪಿಷ್ಟ ಮತ್ತು ಪ್ರೋಟೀನ್ ಅಂಶಗಳು ನಿರ್ದಿಷ್ಟ ಪ್ರಮಾಣದಲ್ಲಿರಬೇಕು.
4) ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಪಿಷ್ಟವು ಆಹಾರ ಪಥ್ಯಗಳ ಯಾದಿಯಲ್ಲಿ ಅಗ್ರ ಸ್ಥಾನದಲ್ಲಿರಬೇಕು.
5) ಹೆಚ್ಚು ಕೆಂಪುಮಾಂಸ ಸೇವನೆಯಿಂದ ಹೃದಯಾಘಾತ ಮತ್ತು ದೊಡ್ಡ ಕರುಳಿನ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತದೆ. ಬಾದಾಮಿ, ಆಕ್ರೋಟ ಮುಂತಾದ ನಟ್ಸ್, ತರಕಾರಿ, ಮೀನು ಸೇವನೆ ಉತ್ತಮ.
ರಿಫೈನಡ್ ಗ್ರೇನ್ (Refined grain), ಪಾಲಿಶ್ ಮಾಡಿದ ಧಾನ್ಯಗಳು, ಬಿಳಿ ಅಕ್ಕಿ, ಬಿಳಿಯ ಬ್ರೆಡ್, ಬಿಳಿಯ ಪಾಸ್ತಾ ಇವು ಶೀಘ್ರ ಪಚನಕ್ರಿಯೆಯಲ್ಲಿ ಬಳಸುವ ಪಿಷ್ಟಗಳು. ಇದರಿಂದಾಗಿ ಬೊಜ್ಜು ಹೆಚ್ಚಾಗುತ್ತದೆ. ಸಕ್ಕರೆಯುಕ್ತ ಪಾನೀಯಗಳು, ಕರಿದ ಬಟಾಟೆ ತುಂಡುಗಳು (ಚಿಪ್ಸ್) ಇವುಗಳಿಂದ ಕ್ರಮೇಣವಾಗಿ ಕಾಲಾಂತರದಲ್ಲಿ ತೂಕ ಹೆಚ್ಚುತ್ತದೆ.
ಇತ್ತೀಚೆಗೆ ಜಗತ್ತಿನಾದ್ಯಂತ ಅತಿ ಕಡಿಮೆ ಪಿಷ್ಟ ಆಹಾರ (Very low carbohydrate diet) ಹೆಚ್ಚು ಮಾನ್ಯತೆ ಪಡೆಯುತ್ತಿದೆ. ಅನ್ನ ಮುಂತಾದ ಪಿಷ್ಟ ಪದಾರ್ಥಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿ ಹಣ್ಣು, ವಿವಿಧ ಕಾಯಿಪಲ್ಲೆಗಳು, ಬೇಳೆಕಾಳು, ಮೀನುಗಳನ್ನು ಹೆಚ್ಚಾಗಿ ಸೇವಿಸಬೇಕು. ಫ್ರೂಟ್ ಜ್ಯೂಸ್ಗಿಂತ ಹಣ್ಣುಗಳನ್ನೇ ತಿಂದಲ್ಲಿ ದೇಹಕ್ಕೆ ನಾರು (fibre) ಕೂಡ ಸಿಗುತ್ತದೆ. ದಿನಾಲು ಉಪಹಾರದೊಂದಿಗೆ 10ರಿಂದ 15 ಬಾದಾಮಿಗಳನ್ನು ಸೇವಿಸಬೇಕು. ವಾರಕ್ಕೆ ಮೂರರಿಂದ ನಾಲ್ಕು ಮೊಟ್ಟೆ ಸೇವಿಸಬೇಕು. ಹೆಚ್ಚು ತೂಕಕ್ಕೆ ಕೆನೆಯುಕ್ತ ಹಾಲು, ಬೆಣ್ಣೆ ಕಾರಣ.
ಇತ್ತೀಚೆಗೆ ಶಾಲೆ, ಕಾಲೇಜುಗಳಲ್ಲಿ ಕೋಲಾ, ಫಾಂಟಾ ಮತ್ತು ಇನ್ನಿತರ ಸಿಹಿಪಾನೀಯ ಸೇವನೆ ಗಣನೀಯವಾಗಿ ಹೆಚ್ಚಾಗಿರುವುದು ಮತ್ತು ಇದರಿಂದಾಗಿ ಹದಿಹರೆಯದ ಮಕ್ಕಳಲ್ಲಿ ಮತ್ತು ಕಾಲೇಜು ಯುವಕರಲ್ಲಿ ಬೊಜ್ಜು ಹೆಚ್ಚಾಗಿ ಕಾಣುತ್ತಿರುವುದು ಆತಂಕಕಾರಿ ವಿಷಯ. ದಿನದ ಊಟವನ್ನು ಉಪಹಾರ, ಮಧ್ಯಾಹ್ನದ ಊಟ, ಸಾಯಂಕಾಲ ಲಘು ಉಪಹಾರ (ಸ್ನ್ಯಾಕ್ಸ್) ಮತ್ತು ರಾತ್ರಿ ಊಟ ಎಂದು ವಿಂಗಡಿಸಬೇಕು. ಉಪಹಾರವನ್ನು ಬಿಡುವುದರಿಂದ ತೂಕ ಹೆಚ್ಚಾಗುತ್ತದೆ.