

ಸಮಸ್ಯೆಯಿಲ್ಲದೇ ಮನುಜನಿಲ್ಲ. ಸಾವಿಲ್ಲದ ಮನೆ ಹೇಗಿಲ್ಲವೋ ಅದೇ ರೀತಿ ಸಮಸ್ಯೆಯಿಲ್ಲದ ಕುಟುಂಬವಿಲ್ಲ. ಮನುಷ್ಯ ಈಸಬೇಕು, ಇದ್ದು ಜಯಿಸಬೇಕು. ಭೂಮಿಯ ಮೇಲೆ ಮನುಷ್ಯಜನ್ಮ ಅಂತ ಬಂದಮೇಲೆ ಸಂತೋಷದ ಕ್ಷಣಗಳು ಎಷ್ಟು ಎದುರಾಗುತ್ತವೆಯೋ ಅದೇ ರೀತಿ ಕಷ್ಟಕಾರ್ಪಣ್ಯಗಳು ಕೂಡ ಅಷ್ಟೇ ಎದುರಾಗುತ್ತವೆ. ಜೀವನ ಒಂದು ಸುಂದರವಾದ ಹೂದೋಟ, ಹೂವಿನ ಜೊತೆ ಮುಳ್ಳನ್ನು ಸ್ವೀಕರಿಸಬೇಕಾಗುತ್ತದೆ. ಬೆಣ್ಣೆಯಲ್ಲಿ ಬಿದ್ದ ಕೂದಲೆಳೆ ತೆಗೆದಂತೆ ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಹರಿಸಿಕೊಳ್ಳುವುದು ಉತ್ತಮವಾದದ್ದು. ಆತ್ಮಹತ್ಯೆಗೆ ಕಾರಣಗಳೇನು? ಆತ್ಮಹತ್ಯೆಯ ಲಕ್ಷಣಗಳೇನು? ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಹೇಗೆ ತಡೆಯುವುದು? ಹೀಗೆ ಗಮನಿಸುತ್ತಿದ್ದಾಗ ಕಂಡುಬಂದಿದ್ದು ಏನೆಂದರೆ - ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ಉಂಟಾದ ಮನಸ್ತಾಪಗಳಿಂದ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ.
ಸುಸಂಸ್ಕೃತ ಮನೆತನದಿಂದ ಬಂದ ರಾಜೇಶ ಎಂಬ ವಿದ್ಯಾರ್ಥಿ, ಅವನ ವಯಸ್ಸಿಗೆ ಸ್ವಾಭಾವಿಕವಾಗಿ ಆಕರ್ಷಣೆಗೊಳಗಾಗಿ ವಾಣಿ ಎಂಬ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಾನೆ. ಆದರೆ ವಾಣಿಯು ಆತನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಅವನು ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಅದನ್ನು ತನ್ನ ಸಹಮಿತ್ರರೊಂದಿಗೆ ಸಮಾಲೋಚಿಸಿದಾಗ ಆಪ್ತ ಸಲಹೆಯೊಂದಿಗೆ ಮನೋವೈದ್ಯರನ್ನು ಸಂರ್ಪಸಿದಾಗ ಖಿನ್ನತೆಯಿಂದ ಹೊರಬಂದು ಮುಂದೆ ಅವನು ಇಂಜಿನಿಯರಿಂಗ್ ಪದವೀಧರನಾಗಿದ್ದಾನೆ ಹಾಗೂ ಒಳ್ಳೆಯ ಉದ್ಯೋಗದಲ್ಲಿದ್ದಾನೆ. ಇದಕ್ಕೆ ಕಾರಣ ಸರಿಯಾದ ವ್ಯಕ್ತಿಯಿಂದ ಸರಿಯಾದ ವೇಳೆಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದ್ದು. ಅದಕ್ಕೆ ಈ ರೀತಿಯಾಗಿ ಮಾನಸಿಕ ಖಿನ್ನತೆಗೆ ಒಳಗಾದಾಗ ಸೂಕ್ತ ಮನೋವೈದ್ಯರನ್ನು ಸಂರ್ಪಸುವುದು ಹಾಗೂ ವೈಜ್ಞಾನಿಕ ದೃಷ್ಟಿಕೋನವು ಅತ್ಯವಶ್ಯವಾಗಿದೆ.
ವಿಶ್ವದಾದ್ಯಂತ ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಗೆ ಬಲಿಯಾಗುತ್ತಾನೆ. ಶ್ರೀಮಂತ ರಾಷ್ಟ್ರಗಳಲ್ಲಿ ಇದು ಅಧಿಕವಾಗಿ ಕಂಡುಬರುತ್ತದೆ. ಪ್ರತೀ ವರ್ಷ ವಿಶ್ವದಲ್ಲಿ ಎಂಟು ಮಿಲಿಯನ್ ಜನ ಆತ್ಮಹತ್ಯೆಗೆ ಶರಣಾಗುತ್ತಾರೆ. ಅದರಲ್ಲಿ 15ರಿಂದ 30 ವರ್ಷ ವಯಸ್ಸಿನವರ ಸಾವಿಗೆ ಆತ್ಮಹತ್ಯೆಯು ಎರಡನೇ ಅತೀ ದೊಡ್ಡ ಕಾರಣವಾಗಿದೆ. ರಾಷ್ಟ್ರದಲ್ಲಿಯೇ ಹಲವು ಪ್ರಥಮಗಳಿಗೆ ಹೆಸರು ಮಾಡಿದ ಕರ್ನಾಟಕವು ಇಂದು ಮಾನಸಿಕ ಸಮಸ್ಯೆಗಳಿಗೂ ಕಡಿಮೆ ಏನಿಲ್ಲ ಎಂಬಂತಾಗಿದೆ. ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಕೇರಳದ ನಂತರ ಕರ್ನಾಟಕವು ದ್ವಿತೀಯ ಸ್ಥಾನದಲ್ಲಿದೆ. ಯುವಕರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಒಟ್ಟಾರೆ ದೇಶದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲವಾದವರ ಸಂಖ್ಯೆಯು ಆತ್ಮಹತ್ಯೆ ಮಾಡಿಕೊಂಡ ಒಂದಿಷ್ಟು ಜನರಿಗಿಂತ ಸುಮಾರು 3/4 ಪಟ್ಟು ಹೆಚ್ಚಾಗಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮನಃಸ್ಥಿತಿಯಿಂದ ವ್ಯಕ್ತಿಯನ್ನು ಹೊರತರುವುದು ಮುಖ್ಯ. ಸರಿಯಾದ ಕ್ಷಣದಲ್ಲಿ ಆತನಿಗೆ ಆತ್ಮಸ್ಥೆ ೖರ್ಯ ನೀಡಿದರೆ ಆತ್ಮಹತ್ಯೆಗೆ ಪ್ರಚೋದಿಸುವ ತೀವ್ರತೆ ಕಡಿಮೆಯಾಗುತ್ತದೆ. ಭಾರತದಲ್ಲಿ ಆತ್ಮಹತ್ಯೆಯ ಪ್ರಕರಣಗಳಿಗಿಂತ ಪ್ರಯತ್ನಪಟ್ಟು ವಿಫಲವಾದ ಸಂಖ್ಯೆಯೇ ಅಧಿಕ. ಇಂತಹ ಮನೋಭಾವನೆಯ ಕಾರಣ ತಿಳಿದು ಸರಿಯಾದ ಮಾರ್ಗದರ್ಶನ ಮಾಡುವುದು ಅಗತ್ಯವಾಗುತ್ತದೆ. ಆತ್ಮಹತ್ಯೆ ಎಂಬ ವಿಚಾರವು ಕ್ಷಣಿಕದ್ದಾಗಿರುತ್ತದೆ, ಆ ಸಮಯದಲ್ಲಿ ಅಂದರೆ ಅಂತಹ ಸನ್ನಿವೇಶಗಳಲ್ಲಿ ಅವರಿಗೆ ಸಹಾಯಹಸ್ತ ಬೇಕಾಗುತ್ತದೆ. ಯಾರಾದರೂ ನಿಮ್ಮ ಮುಂದೆ ಖಿನ್ನತೆಗೆ ಸಂಬಂಧಪಟ್ಟಂತಹ ವಿಚಾರಗಳನ್ನು ಮುಂದಿಟ್ಟಾಗ ಅದನ್ನು ಅಪಹಾಸ್ಯ ಮಾಡದೆ ವೈಜ್ಞಾನಿಕ ದೃಷ್ಟಿಯಿಂದ ನೋಡಿ ಸರಿಯಾದ ಸಮಯಕ್ಕೆ ಮನೋವೈದ್ಯಕೀಯ ಸಲಹೆ ಸೂಚನೆಗಳನ್ನು ನೀಡಿದರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದು. ಇತ್ತೀಚೆಗೆ ಮನೋವೈದ್ಯಕೀಯ ವೃತ್ತಿಯು ಅತ್ಯಂತ ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡುತ್ತಿದ್ದು ಅದರ ಸದುಪಯೋಗವನ್ನು ನಾವು ತೆಗೆದುಕೊಂಡರೆ ಆತ್ಮಹತ್ಯೆಗೆ ಕೊನೆ ಹಾಡಬಹುದು.