

ಎಂತಹ ವಿಪರ್ಯಾಸ ನೋಡಿ! ಚಂದ್ರಲೋಕಕ್ಕೆ ಪಯಣ ಬೆಳೆಸುವ ಮಟ್ಟಕ್ಕೆ ವೈಜ್ಞಾನಿಕವಾಗಿ ಪ್ರಗತಿ ಸಾಧಿಸಿರುವ ನಮ್ಮ ದೇಶದಲ್ಲಿ ಇಂದಿಗೂ ದೆವ್ವ-ಭೂತ, ಬಿಡಿಸುವುದು, ಗಾಳಿ ಶಖಾ ಎಂಬ ಹೆಸರಿನಲ್ಲಿ ನಡೆಯುವ ಮೌಢ್ಯಗಳ ಆಚರಣೆ. ಇದರ ಜತೆಗೆ ಸಾಮಾಜಿಕ ಅನಿಷ್ಟ ಪದ್ಧತಿಗಳಲ್ಲಿ ಮೂಢನಂಬಿಕೆಯೂ ಒಂದು. ಶ್ರದ್ಧೆ ಬೇರೆ, ಅಂಧ ಶ್ರದ್ಧೆ ಬೇರೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಶ್ರದ್ಧೆಯನ್ನು ಇಡುವುದು ಅಪಾಯಕಾರಿಯಲ್ಲ. ಆದರೆ ಅಂಧಶ್ರದ್ಧೆ ಇದೆಯಲ್ಲ, ಅದು ಬಲು ಅಪಾಯಕಾರಿ. ಎಷ್ಟರ ಮಟ್ಟಿಗೆ ಎಂದರೆ ಜೀವ ಕಳೆದುಕೊಳ್ಳುವ ಮಟ್ಟಿಗೆ ಅದು ಭಯಾನಕ. ಅಜ್ಜಿಕ್ಯಾತನಹಳ್ಳಿ ಗ್ರಾಮದ ಬಾಲಕಿ ವಿಚಾರದಲ್ಲಿ ನಡೆದದ್ದೂ ಇದೇ ಅಂಧಶ್ರದ್ಧೆ ಮತ್ತು ಮೂಢನಂಬಿಕೆಯ ಅವಾಂತರ.
2016ರಲ್ಲಿ ಗುಜರಾತ್ನಲ್ಲೂ ಇದೇ ರೀತಿಯ ಪ್ರಕರಣ ನಡೆದಿತ್ತು. 50 ವರ್ಷದ ಮಹಿಳೆಯ ಮೈಯಲ್ಲಿ ದೆವ್ವ ಹೊಕ್ಕಿದೆ. ಅದನ್ನು ಬಿಡಿಸಲು ಮಂತ್ರವಾದಿಯ ಮಾತು ಕೇಳಿದ ಮನೆಮಂದಿಯೆಲ್ಲ ಸೇರಿ ಆಕೆಯ ಎದೆಯ ಮೇಲೆ ಹಾರಿ ಜೀವ ತೆಗೆದಿದ್ದರು. ಹೀಗೆ ಅವಘಡಗಳ ಸರಮಾಲೆಯೇ ನಮ್ಮ ಮಧ್ಯೆ ಅನೇಕ ಇವೆ. ಇಂದು ಸಮಾಜದಲ್ಲಿ ಅನೇಕರು - ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ - ಜನರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ದೇವರ ಹೆಸರಿನಲ್ಲಿ ಸಾಧನೆ, ಸಿದ್ಧಿ ಎಂಬ ಮುಖವಾಡ ಹೊತ್ತು ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡುತ್ತಾರೆ. ದೆವ್ವ, ಮಾಟ-ಮಂತ್ರ ಎಂದು ಇನ್ನಿಲ್ಲದ ಕ್ರೌರ್ಯಭರಿತ ಮತ್ತು ಹಿಂಸಾತ್ಮಕ ಕ್ರಮಗಳ ಮೂಲಕ ಅಮಾಯಕ ಜೀವಿಗಳ ಬಲಿ ಪಡೆಯುತ್ತಿದ್ದಾರೆ. ಈ ಹಿಂದೆಯೂ ಈ ತರಹದ ಪ್ರಕರಣಗಳು ಬಹಳಷ್ಟು ನಡೆದಿವೆ. ಈಗಲೂ ನಡೆಯುತ್ತಿವೆ. ಹೈದರಾಬಾದ್ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಹೆಚ್ಚು ಪ್ರಚಲಿತವಾಗಿದ್ದ ಈ ಮಾಟ, ಮಂತ್ರ, ಬಾನಾಮತಿ, ದೆವ್ವ ಬಿಡಿಸುವ ಅಮಾನವೀಯ ಮತ್ತು ವಾಸ್ತವಕ್ಕೆ ದೂರವಾದ ಆಚರಣೆಗಳು ನಿಜಕ್ಕೂ ಸಮಾಜಕ್ಕೆ ಮಾರಕ. ಇದು ನಾಡಿನ ಪ್ರಗತಿಗೆ ದೊಡ್ಡ ಕಂಟಕ. ನಾಗರಿಕ ಜಗತ್ತು ಅಭಿವೃದ್ಧಿಯತ್ತ ಸಾಗಲು ಇಂತಹ ಮೌಢ್ಯಗಳ ಆಚರಣೆಗಳು ಅಡ್ಡಿಯಾಗುತ್ತವೆ. ಇಂತಹ ಆಚರಣೆಗಳ ತಡೆಗೆಂದೇ ರಾಜ್ಯ ಸರ್ಕಾರ ಮೂಢನಂಬಿಕೆ (ಮೌಢ್ಯಗಳ) ಪ್ರತಿಬಂಧಿತ ಕಾಯ್ದೆ ಜಾರಿ ತಂದಿದೆ. ತಡವಾಗಿಯಾದರೂ ಜಾರಿಯಾದದ್ದು ಒಳ್ಳೆಯದೇ. ಆದರೆ ಪ್ರಜೆಗಳು ಕೂಡ ಈ ಆಚರಣೆಗಳ ಅಪಾಯವನ್ನು ಅರಿಯಬೇಕು. ಇಂತಹ ಜೀವವಿರೋಧಿ ನಡೆಗಳನ್ನು ವಿರೋಧಿಸಬೇಕು. ಸಮಸ್ಯೆಗೆ ಮನೋವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಲು ಮುಂದಾಗಬೇಕು. ಮಂತ್ರ-ತಂತ್ರ ಎಂದು ಮುಗ್ಧ ಜನರನ್ನು ಮರುಳು ಮಾಡಿ ವಂಚಿಸಿ ಶೋಷಣೆ ಮಾಡುತ್ತಿರುವವರ ದೊಡ್ಡ ಪಡೆಯ ಎದುರು ಸಿಡಿದೇಳಬೇಕು.
ಈ ಮನಸ್ಸು ಬಹಳ ಸೂಕ್ಷ್ಮ ಹಾಗೂ ಸಂವೇದನಾಶೀಲ ಎನ್ನುವುದು ಸರ್ವವಿದಿತ ಸಂಗತಿ. ಇಂತಹ ಮನಸ್ಸನ್ನು ಕಲಕುವ ಹಿಂಸಾತ್ಮಕ ಮತ್ತು ಅಸಹ್ಯಕರ ಆಚರಣೆಗಳು ನಿಷೇಧವಾಗಬೇಕು. ಎಲ್ಲೂ ನಡೆಯದಂತೆ ನೋಡಿಕೊಳ್ಳಬೇಕಾದುದು ಪ್ರಜ್ಞಾವಂತರ ಸಾಮಾಜಿಕ ಜವಾಬ್ದಾರಿಯೂ ಹೌದು. ಈ ರೀತಿಯ ಮೌಢ್ಯಾಚರಣೆಗಳಿಗೆ ಇತಿಶ್ರೀ ಹಾಡಲು ಶಿಕ್ಷಣವೇ ಮದ್ದು. ಅನಕ್ಷರತೆಯಿಂದ ವೈದ್ಯಕೀಯ ಮತ್ತು ವೈಜ್ಞಾನಿಕ ಚಿಕಿತ್ಸಾಕ್ರಮಗಳ ಅರಿವಿಲ್ಲದೆ ಗ್ರಾಮೀಣ ಪ್ರದೇಶದ ಜನ ಇಂತಹ ಅಮಾನವೀಯ ಅವಘಡಗಳಿಗೆ ತುತ್ತಾಗುತ್ತಿರುವುದು ಸ್ಪಷ್ಟ. ಇದು ಕೊನೆಗೊಂಡಾಗ ಸ್ವಸ್ಥ ಸಮಾಜದ ಆಶಯ ಈಡೇರುವುದು ಆ ಸೂರ್ಯ ಚಂದಿರರಷ್ಟೇ ಸತ್ಯ.