

ಹಿಂದಿನ ಅಂಕಣದಲ್ಲಿ ಹೃದಯಾಘಾತ ನಿಯಂತ್ರಿಸಬಲ್ಲ ಕಾರಣಗಳನ್ನು ನೋಡಿದೆವು. ಉಳಿದ ಕಾರಣಗಳನ್ನು ತಿಳಿಯೋಣ. ಭಾಗ-2;
6) ಕೊಬ್ಬು (Lipids)
ಕೊಬ್ಬು ದೇಹಕ್ಕೆ ಅವಶ್ಯವಾಗಿ ಬೇಕಾದ ವಸ್ತು. ಜೀವಕೋಶದ ಹೊರ ಆವರಣದ ಬೆಳವಣಿಗೆ, ಹಾಮೋನ್ ತಯಾರಿಕೆಗೆ (cell wall, sex hormones) ಕೊಲೆಸ್ಟರಾಲ್ ಅವಶ್ಯ. ಕೊಲೆಸ್ಟರಾಲ್ ಸಮೂಹಕ್ಕೆ ಲಿಪಿಡ್ ಎಂಬ ಹೆಸರಿದ್ದು, ಅವುಗಳಲ್ಲಿ ಮುಖ್ಯವಾಗಿ ನಾಲ್ಕು ಪ್ರಕಾರಗಳಿವೆ. 1) ಕೊಲೆಸ್ಟರಾಲ್ (cholesterol), 2) ಟ್ರೈಗ್ಲಿಸೆರಾಯ್್ಡ (Triglyceride), 3) ಎಲ್.ಡಿ.ಎಲ್. ಕೊಲೆಸ್ಟರಾಲ್ (LDL cholesterol), 4) ಎಚ್.ಡಿ.ಎಲ್. ಕೊಲೆಸ್ಟರಾಲ್ (HDL cholesterol).
ಇವುಗಳ ಪೈಕಿ ಎಚ್.ಡಿ.ಎಲ್. ಎಂಬ ಕೊಲೆಸ್ಟರಾಲ್ ಮಾತ್ರ ಹೃದಯಕ್ಕೆ ಮಿತ್ರ (heart friendly)ಇದು ಉತ್ತಮ ಕೊಲೆಸ್ಟರಾಲ್ ಎಂದು ಕರೆಯಲ್ಪಡುತ್ತದೆ. ಇನ್ನುಳಿದವುಗಳಲ್ಲಿ ಎಲ್.ಡಿ.ಎಲ್. ಕೊಲೆಸ್ಟರಾಲ್ ಹೃದಯಕ್ಕೆ ಮಾರಿ. ಇದನ್ನು ಕೆಟ್ಟ ಕೊಲೆಸ್ಟರಾಲ್ ಎಂದು ಕರೆಯುವರು. ಟ್ರೈಗ್ಲಿಸೆರಾಯ್್ಡ ಎಂಬ ವಿಶೇಷ ತರಹದ ಕೊಬ್ಬು ಕೂಡ ಹಾನಿಕಾರಕವೇ ಆಗಿದೆ. ಭಾರತೀಯರಲ್ಲಿ ಇನ್ನೊಂದು ವಿಶೇಷ ಕೊಬ್ಬು ಹೆಚ್ಚಿನ ಹೃದಯಾಘಾತಗಳಿಗೆ ಕಾರಣವಾಗಿದ್ದು ಇದನ್ನು ಎಲ್.ಪಿ.ಎ. (Lp(a)) ಎಂದು ಕರೆಯುವರು. ಕೊಬ್ಬು ರಕ್ತ ಪರೀಕ್ಷೆಗೆ ಒಳಪಟ್ಟಾಗ ಈ ಎಲ್ಲ ಕೊಲೆಸ್ಟರಾಲ್ ಅಂಶಗಳನ್ನೂ (lipid profile) ಪರೀಕ್ಷಿಸಲಾಗುತ್ತದೆ.
ಎಚ್.ಡಿ.ಎಲ್. ಕೊಲೆಸ್ಟರಾಲ್ ಹೆಚ್ಚು ಪ್ರಮಾಣದಲ್ಲಿದ್ದಷ್ಟೂ ಉತ್ತಮ. ಇದನ್ನು ಹೆಚ್ಚಿಸಲು ಇದುವರೆಗೆ ಯಾವ ನಿರ್ದಿಷ್ಟ ಔಷಧವೂ (specific drug) ಇಲ್ಲ. ದೈಹಿಕ ಶ್ರಮ, ವ್ಯಾಯಾಮ (physical activity exercise) ಮಾತ್ರದಿಂದ ಇದನ್ನು ರಕ್ತದಲ್ಲಿ ಹೆಚ್ಚಿಸಬಹುದು. ಆದರೆ ವ್ಯಾಯಾಮವು ನಿಯಮಿತವಾಗಿದ್ದು, ಹೃದಯದ ಸಾಮರ್ಥ್ಯವನ್ನು ಹೆಚ್ಚಿಸುವಂಥದ್ದಿದ್ದರೆ ಮಾತ್ರ ಹೃದಯಾಘಾತ ಸಂಭವವನ್ನು ಕಡಿಮೆ ಮಾಡುತ್ತದೆ. ಅದಕ್ಕೆಂದೇ ದೈಹಿಕ ಶ್ರಮದಾಯಕ ಆಟಗಳು, ತೀವ್ರ ನಡಿಗೆಗಳು (brisk walk) ಹೃದಯಬಡಿತ ಹೆಚ್ಚಿಸಿ, ಹೃದಯದ ಮಾಂಸಖಂಡವನ್ನು ದೃಢಗೊಳಿಸುತ್ತವೆ. ಆರಾಮದಾಯಕ ನಡಿಗೆ, ಚಪ್ಪಲಿ ಧರಿಸಿ ಮಾಡುವ ಸಾಮೂಹಿಕ ನಡಿಗೆಗಳಿಂದ (slow walking with chappals, group walking) ಹೃದಯಕ್ಕೆ ಎಳ್ಳಷ್ಟೂ ಲಾಭವಿಲ್ಲ!
ಎಲ್.ಡಿ.ಎಲ್. ಕೊಲೆಸ್ಟರಾಲ್ ಹಾನಿಕಾರಕವಾಗಿದ್ದು, ರಕ್ತನಾಳದ ಒಳಮೈಯಲ್ಲಿ ಶೇಖರಣೆಗೊಂಡು ರಕ್ತನಾಳಗಳನ್ನು ಕಿರಿದಾಗಿಯೂ ಮತ್ತು ಕಠಿಣವಾಗಿಯೂ (hard and narrow) ಮಾಡುತ್ತವೆ. ಈ ಪ್ರಕ್ರಿಯೆಗೆ ‘ಅಥಿರೊಸ್ಲಿರೊಸಿಸ್’ (atherosclerosis) ಎಂದು ಹೆಸರು. ಎಲ್.ಡಿ.ಎಲ್. ಕೊಲೆಸ್ಟರಾಲ್ ಯಕೃತ್ತಿನಲ್ಲಿ (Liver) ಉತ್ಪತ್ತಿಯಾಗುತ್ತದೆ. ಉತ್ಪನ್ನದ ಪ್ರಮಾಣ ಮತ್ತು ಅದರ ಹೆಚ್ಚುವಿಕೆಯು ಆನುವಂಶಿಕವಾಗಿರುತ್ತದೆ (hereditary). ಕೊಬ್ಬುಯುಕ್ತವಾದ ಆಹಾರ, ಹೆಚ್ಚು ಮಾಂಸ ಸೇವನೆ, ಬೇಕರಿಯಲ್ಲಿಯ ಆಹಾರಪದಾರ್ಥಗಳಿಂದ ರಕ್ತನಾಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಟ್ಟ ಕೊಲೆಸ್ಟರಾಲ್ ಶೇಖರಣೆಯಾಗುತ್ತದೆ.
ದೈಹಿಕ ವ್ಯಾಯಾಮದಿಂದ ಎಲ್.ಡಿ.ಎಲ್. ಕೊಬ್ಬು ಕಡಿಮೆಯಾಗುತ್ತದೆ. ಸುದೈವದಿಂದ, ಈ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸ್ಟ್ಯಾಟಿನ್ (statin) ಎಂಬ ಔಷಧಗಳು ಲಭ್ಯವಿರುತ್ತವೆ. ಸ್ಟ್ಯಾಟಿನ್ ಔಷಧಿಯ ಪ್ರಮಾಣವನ್ನು ಮೇಲಿಂದ ಮೇಲೆ ರಕ್ತದಲ್ಲಿಯ ಲಿಪಿಡ್ ಪರೀಕ್ಷೆಯಿಂದ ಹೆಚ್ಚು-ಕಡಿಮೆ ಮಾಡಿಸಿಕೊಳ್ಳಬೇಕು. ಇದಕ್ಕೆ ತಜ್ಞವೈದ್ಯರ ಸಲಹೆ ಅವಶ್ಯ. ಒಮ್ಮೆ ಪ್ರಾರಂಭಿಸಿದ ಕೊಬ್ಬು ನಿಯಂತ್ರಣದ ಔಷಧವನ್ನು ತಜ್ಞವೈದ್ಯರ ಸಲಹೆ ಇಲ್ಲದೆ ನಿಲ್ಲಿಸಕೂಡದು. ಹೃದಯಾಘಾತದ ನಂತರ ಸ್ಟ್ಯಾಟಿನ್ ಔಷಧವು ಅತೀ ಅವಶ್ಯವಾಗಿದ್ದು, ಮುಂಬರುವ ಹೃದಯಾಘಾತಗಳನ್ನು (secondary prevention) ಕಡಿಮೆ ಮಾಡುತ್ತದೆ.