ಸೋಮವಾರದಂದೇ ಹೃದಯಾಘಾತಗಳು ಹೆಚ್ಚೆಂದ ಹೊಸ ಸಂಶೋಧನೆ! ತಜ್ಞರು ಕೊಟ್ಟ ಕಾರಣ ಹೀಗಿದೆ….

Blue Monday (1)
Published on

ನವದೆಹಲಿ: ಬ್ರಿಟಿಷ್​ ಹಾರ್ಟ್​ ಫೌಂಡೇಶನ್ ಸಂಸ್ಥೆ ಬಿಡುಗಡೆ ಮಾಡಿರುವ ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ ಹೆಚ್ಚಿನ ಹೃದಯಾಘಾತಗಳು ಇತರೆ ದಿನಗಳಿಗಿಂತ ಸೋಮವಾರವೇ ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಹೀಗಾಗಿ ಸೋಮವಾರವನ್ನು "ಬ್ಲೂ ಮಂಡೇ" ಅಥವಾ ನೀಲಿ ಸೋಮವಾರ ವಿದ್ಯಾಮಾನ ಎಂದು ಕರೆಯಲಾಗುತ್ತದೆ.

ಸಂಶೋಧನೆಯ ಪ್ರಕಾರ ಸೋಮವಾರ ಹೃದಯಾಘಾತವಾಗುವ ಸಂಭವ ಶೇ. 13ರಷ್ಟು ಹೆಚ್ಚಿದೆ. ಅದರಲ್ಲೂ ಮುಂಜಾನೆ 6 ರಿಂದ 10 ಗಂಟೆಯ ಸಮಯದಲ್ಲಿ ಹೃದಯಾಘಾತದ ಸಂಭವ ಹೆಚ್ಚು. ಏಕೆಂದರೆ, ಬೆಳಗ್ಗೆ ಎಚ್ಚರಗೊಳ್ಳುತ್ತಿದ್ದಂತೆ ಈ ಸಮಯದಲ್ಲಿ ಕಾರ್ಟಿಸೋಲ್ ಮತ್ತು ಇತರ ಹಾರ್ಮೋನ್‌ಗಳು ರಕ್ತದಲ್ಲಿ ದಿಢೀರ್​ ಏರಿಕೆಯಾಗುವ ಕಾರಣ ಹೃದಯಾಘಾತಗಳು ಸಂಭವಿಸುತ್ತಿವೆ ಎಂದು ವರದಿ ಹೇಳಿದೆ.

ಆರೋಗ್ಯ ತಜ್ಞರ ಪ್ರಕಾರ ವ್ಯಕ್ತಿಯೊಬ್ಬ ಯಾವಾಗ ಒತ್ತಡದಲ್ಲಿ ಸಿಲುಕುತ್ತಾನೆ ಆಗ ಹಾರ್ಮೋನ್​ಗಳ ಮಟ್ಟವು ಹೆಚ್ಚಾಗಿ ಸರ್ಕಾಡಿಯನ್ ರಿದಮ್ ಮೇಲೆ ಪ್ರಭಾವ ಬೀರುತ್ತದೆ. ಇವೆಲ್ಲವೂ ಹೃದಯಾಘಾತ ಅಥವಾ ಹೃದಯರಕ್ತನಾಳದ ಸಮಸ್ಯೆಗಳನ್ನು ಉಂಟುಮಾಡಬಹುದು. ಪ್ರಸ್ತುತ ದಿನಗಳಲ್ಲಿ ಹೃದಯಾಘಾತವು ಗಂಭೀರ ಆರೋಗ್ಯ ಕಾಳಜಿಯಾಗಿದ್ದು, ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ ಯುವ ಜನಾಂಗವೂ ಕೂಡ ಇತ್ತೀಚಿಗೆ ಹೃದಯದ ಕಾಯಿಲೆಗಳಿಂದ ಬಳಲುತ್ತಿದೆ.

ಇನ್ನು ಹೃದಯಾಘಾತ ಹೆಚ್ಚಾಗುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ಆದರೆ, ಇತ್ತೀಚಿನ ಸಂಶೋಧನೆಯ ಪ್ರಕಾರ ಮಾರಣಾಂತಿಕ ಹೃದಯಾಘಾತಗಳು ಸೋಮವಾರದಂದೇ ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ಹೇಳಿದೆ. ಇದಕ್ಕೆ ಮೂಲ ಕಾರಣವೇ ಒತ್ತಡ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವೀಕೆಂಡ್​ ಮುಗಿಸಿ ಮತ್ತೆ ಕೆಲಸಕ್ಕೆ ಅಣಿಯಾಗುವ ಸಮಯವಾದ್ದರಿಂದ ಹೆಚ್ಚಿನ ಒತ್ತಡ ಮತ್ತು ಆತಂಕಕ್ಕೆ ಒಳಗಾಗಿ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ. ಅದರಲ್ಲಿ ಅತಿ ಹೆಚ್ಚಿನ ಜವಬ್ದಾರಿಯನ್ನು ಹೊಂದಿರುವ ಉದ್ಯೋಗಿಗಳು ಇದಕ್ಕೆ ಬಲಿಪಶುಗಳಾಗುತ್ತಿದ್ದಾರೆ ಎಂದು ಸಂಶೋಧನೆ ಹೇಳಿದೆ. ಹೆಚ್ಚಿದ ಒತ್ತಡದ ಮಟ್ಟವು ಹೃದ್ರೋಗದ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.

ಕಾರಣಗಳು ಏನೇನು?

ದಿನಚರಿಗೆ ಅಡಚಣೆ: ವೀಕೆಂಡ್ ರಜೆಯು ಜನರ ದಿನಚರಿಯನ್ನು ಬದಲಾಯಿಸುತ್ತದೆ. ಅದರಲ್ಲಿ ಆಹಾರ ಅಭ್ಯಾಸವಾಗಿರಬಹುದು ಅಥವಾ ನಿದ್ರೆಯ ಮಾದರಿಯಾಗಿಬಹುದು ಮತ್ತು ವ್ಯಾಯಾಮದ ಕಟ್ಟುಪಾಡುಗಳೆಲ್ಲವನ್ನು ವೀಕೆಂಡ್ ಕದಡುತ್ತದೆ. ಇಂತಹ ಬದಲಾವಣೆ​ಗಳು ವಿಶೇಷವಾಗಿ ಅತಿಯಾದ ಆಲ್ಕೋಹಾಲ್ ಸೇವಿಸುವವರ ಅಥವಾ ವ್ಯಾಯಾಮಗಳನ್ನು ನಿರ್ಲಕ್ಷಿಸುವವರಲ್ಲಿ ಹೃದಯರಕ್ತನಾಳದ ಆರೋಗ್ಯವನ್ನು ಹಾನಿಗೊಳಿಸಬಹುದು. ಯಾವುದೇ ವ್ಯಕ್ತಿ ಸೋಮವಾರದಂದು ತಮ್ಮ ದಿನಚರಿಗಳನ್ನು ಪುನರಾಂಭಿಸಿದಾಗ, ಆಹಾರ ಪದ್ಧತಿ ಅಥವಾ ದೈಹಿಕ ಚಟುವಟಿಕೆಯಲ್ಲಿನ ಹಠಾತ್ ಬದಲಾವಣೆಗಳು ಹೃದಯವನ್ನು ಆಯಾಸಗೊಳಿಸಬಹುದು ಮತ್ತು ವ್ಯಕ್ತಿಗಳಲ್ಲಿ ಹೃದಯಾಘಾತವನ್ನು ಪ್ರಚೋದಿಸಬಹುದು ಎಂದು ಸಂಶೋಧನೆ ಹೇಳಿದೆ.

ಚಿಕಿತ್ಸೆ ಪಡೆಯಲು ವಿಳಂಬ ಧೋರಣೆ: ಸೋಮವಾರ ಮಾರಣಾಂತಿಕ ಹೃದಯಾಘಾತದ ಹೆಚ್ಚಳಕ್ಕೆ ಕಾರಣವಾಗುವ ಇನ್ನೊಂದು ಅಂಶವೆಂದರೆ ವೈದ್ಯಕೀಯ ಗಮನವನ್ನು ಬೇರೆಡೆಗೆ ತಿರುಗಿಸುವುದು. ಅಂದರೆ, ವ್ಯಕ್ತಿಗಳು ವಾರಾಂತ್ಯದ ಸಮಯದಲ್ಲಿ ಅನುಭವಿಸಿದ ರೋಗಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸಿ, ವೈದ್ಯರನ್ನು ಸಂಪರ್ಕಿಸಿದೇ ನಿರ್ಲಕ್ಷಿಸುವುದು. ಈ ನಿರ್ಲಕ್ಷ್ಯ ಆಯಾಸ ಅಥವಾ ಒತ್ತಡಕ್ಕೆ ಕಾರಣವಾಗಿ, ಇದರ ಪರಿಣಾಮ ಸೋಮವಾರ ಮತ್ತೆ ಕೆಲಸಕ್ಕೆ ಬಂದಾಗ ಈ ರೋಗಲಕ್ಷಣಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಹೆಚ್ಚು ತೀವ್ರವಾದ ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ವಾರಾಂತ್ಯದಲ್ಲಿ ಆರೋಗ್ಯ ಅಥವಾ ವೈದ್ಯಕೀಯ ಸೌಲಭ್ಯಗಳ ಕಡಿಮೆ ಲಭ್ಯತೆಯಿಂದಲೂ ಕೆಲವರು ವೈದ್ಯರನ್ನು ಭೇಟಿಯಾಗಲು ವಿಳಂಬ ನೀತಿ ಅನುಸರಿಸುತ್ತಾರೆ. ಈ ನಿಲುವು ಅಪಾಯವನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.

ಸಾಮಾಜಿಕ ಮತ್ತು ವರ್ತನೆಯ ಅಂಶಗಳು: ಸೋಶಿಯಲ್​ ಜೆಟ್​ ಲ್ಯಾಗ್ ಎಂಬ ಕಲ್ಪನೆ ಇತ್ತೀಚೆಗೆ ಹೆಚ್ಚು ಗಮನ ಸೆಳೆದಿದೆ. ಅಂದರೆ, ವಾರಾಂತ್ಯದಲ್ಲಿ ಶನಿವಾರ ರಾತ್ರಿ ತಡವಾಗಿ ಮಲಗಿ ಭಾನುವಾರ ಬೆಳಗ್ಗೆ ತಡವಾಗಿ ಹೇಳುತ್ತಾರೆ ಮತ್ತು ಭಾನುವಾರ ಇಡೀ ದಿನ ಹೆಚ್ಚು ಚಟುವಟಿಕೆಯಲ್ಲಿ ತೊಡಗಿ ಮಲಗುವಷ್ಟರಲ್ಲಿ ತುಂಬಾ ಸುಸ್ತಾಗಿರುತ್ತಾರೆ. ಆದರೆ, ಮರುದಿನ ಬೆಳಗ್ಗೆ ಅಂದರೆ ಸೋಮವಾರ ಕೆಲಸಕ್ಕೆ ತೆರಳಲು ದಿಢೀರ ಎಚ್ಚರಗೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಇದು ವ್ಯಕ್ತಿಯ ಜೈವಿಕ ಗಡಿಯಾರ ಮತ್ತು ಸಾಮಾಜಿಕ ವೇಳಾಪಟ್ಟಿಯ ನಡುವಿನ ತಪ್ಪು ಜೋಡಣೆಯನ್ನು ಸೂಚಿಸುತ್ತದೆ. ವಾರದ ದಿನಗಳಿಗೆ ಹೋಲಿಸಿದರೆ ಜನರು ವಾರಾಂತ್ಯದಲ್ಲಿ ತಮ್ಮ ನಿದ್ರೆಯ ಮಾದರಿಯನ್ನು ಬದಲಾಯಿಸುತ್ತಾರೆ. ಈ ನಿದ್ರೆ ಮತ್ತು ಎಚ್ಚರದ ಸೈಕಲ್​ನಲ್ಲಿನ ಅಡ್ಡಿಯು ಹೃದಯರಕ್ತನಾಳದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ವಾರಾಂತ್ಯದಲ್ಲಿ ಮದ್ಯ ಸೇವನೆ ಅಥವಾ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳ ಜೊತೆಗೆ ಅನಿಯಮಿತ ನಿದ್ರೆಯ ಮಾದರಿಗಳಿಂದಾಗಿ ಸೋಮವಾರದಂದು ಹೃದಯಾಘಾತದ ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು ಎಂದು ಸಂಶೋಧನೆ ಹೇಳಿದೆ.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ದಾರುಣ ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಲಿದೆ ಸಾವಿನ ರಹಸ್ಯ..!ಸೋಮವಾರ ಬೆಳಗಿನ ರಶ್ ಹವರ್ ನ ಪರಿಣಾಮ: ಅನೇಕ ವ್ಯಕ್ತಿಗಳಿಗೆ ಸೋಮವಾರದ ಮುಂಜಾನೆಯು ರಶ್ ಹವರ್ ಕೂಡ ತುಂಬಾ ಪರಿಣಾಮ ಬೀರುತ್ತದೆ. ಹೆಚ್ಚಿನ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯದಿಂದ ಹೃದಯರಕ್ತನಾಳದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ. ಟ್ರಾಫಿಕ್-ಪ್ರೇರಿತ ಒತ್ತಡ, ವಾಯು ಮಾಲಿನ್ಯ ಮತ್ತು ದೀರ್ಘ ಪ್ರಯಾಣದ ಸಮಯದಲ್ಲಿ ದೈಹಿಕ ನಿಷ್ಕ್ರಿಯತೆಯು ಸೋಮವಾರದಂದು ಮಾರಣಾಂತಿಕ ಹೃದಯಾಘಾತಗಳ ಹೆಚ್ಚಿನ ಸಂಭವಕ್ಕೆ ಕಾರಣವಾಗಬಹುದು.

ಇನ್ನು ಆರೋಗ್ಯ ತಜ್ಞರ ತೀರ್ಮಾನದ ಪ್ರಕಾರ ಸೋಮವಾರದಂದು ಮಾರಣಾಂತಿಕ ಹೃದಯಾಘಾತಗಳು ಹೆಚ್ಚಾಗುವುದರ ಹಿಂದಿರುವ ನಿಖರವಾದ ಕಾರಣಗಳು ಇನ್ನೂ ಸಂಶೋಧನೆಯ ಹಂತದಲ್ಲಿವೆ. ಆದಾಗ್ಯೂ ಈ ಸಂಭಾವ್ಯ ಅಪಾಯಕಾರಿ ಅಂಶಗಳನ್ನು ಗುರುತಿಸುವುದರಿಂದ ವ್ಯಕ್ತಿಗಳು ತಮ್ಮ ಹೃದಯರಕ್ತನಾಳದ ಆರೋಗ್ಯಕ್ಕೆ ಆದ್ಯತೆ ನೀಡಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಬಹುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net