

ಪ್ರತಿದಿನದ ಅಡುಗೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮೆಂತ್ಯಕಾಳನ್ನು ಬಳಸಲಾಗುತ್ತದೆ. ಇದು ಮೆಂತ್ಯಕಾಳು, ಮೆಂತ್ಯ ಸೊಪ್ಪು ಎರಡೂ ಜಗತ್ತಿನಾದ್ಯಂತ ಬಳಕೆಯಲ್ಲಿವೆ.
ಭಾರತವೂ ಸೇರಿದಂತೆ ಫ್ರಾನ್ಸ್, ಸ್ಪೇನ್, ಮೊರೊಕ್ಕೊ, ಅರ್ಜೆಂಟೀನ ದೇಶಗಳಲ್ಲಿ ಅದನ್ನು ಬೆಳೆಯುತ್ತಾರೆ. ಆದರೆ ಭಾರತದಲ್ಲಿ ಬೆಳೆಯುವಷ್ಟು ಮೆಂತ್ಯವನ್ನು ಎಲ್ಲೂ ಬೆಳೆಯಲಾರರು. ರಾಜಸ್ಥಾನ, ಗುಜರಾತ್, ಉತ್ತರಾಂಚಲ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್ರಾಜ್ಯಗಳಲ್ಲಿ ಮೆಂತ್ಯಕಾಳನ್ನು ಹೆಚ್ಚು ಬೆಳೆಯುತ್ತಾರೆ, ಹಾಗೆಯೇ ಬಳಸುತ್ತಾರೆ. ದೇಶದ ಒಟ್ಟು ಮೆಂತ್ಯ ಉತ್ಪಾದನೆಯಲ್ಲಿ ಶೇ. 80ರಷ್ಟು ರಾಜಸ್ಥಾನದಿಂದಲೇ ಬರುತ್ತದೆ. ಮೆಂತ್ಯಕಾಳು, ಮೆಂತ್ಯ ಸೊಪ್ಪು ಆಹಾರಕ್ಕೆ ಎಷ್ಟು ಬಳಕೆಯಾಗುತ್ತದೆಯೋ ಔಷಧಿಯಾಗಿಯೂ ಅಷ್ಟೇ ಉಪಯೋಗವಾಗುತ್ತದೆ. ಮೆಂತ್ಯಸೊಪ್ಪಿನಲ್ಲಿ ವಿಟಮಿನ್ ಎ, ಬಿ, ಖನಿಜಾಂಶ, ಕಬ್ಬಿಣದ ಅಂಶ ಹೇರಳವಾಗಿವೆ.
ನಾಲ್ಕು ಮೆಂತ್ಯಕಾಳುಗಳನ್ನು ಮೊಸರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹದ ಅತಿ ಉಷ್ಣತೆ, ಸುಸ್ತು ಮುಂತಾದ ಸಮಸ್ಯೆಗಳು ದೂರಾಗುತ್ತವೆ. ಇದು ನಮ್ಮ ದೇಹಕ್ಕೆ ತಂಪು ಕೊಡುತ್ತದೆ. ಮೆಂತ್ಯಕಾಳು ನೆನೆಸಿದ ನೀರಿನ ನಿಯಮಿತ ಸೇವನೆಯಿಂದ ಕೆಲವೇ ದಿನಗಳಲ್ಲಿ ಆರ್ಥರೈಟಿಸ್, ಕೀಲುಗಳ ನೋವು ಇತ್ಯಾದಿ ಮೂಳೆ ಸಮಸ್ಯೆಗಳು ಕಡಿಮೆಯಾಗುತ್ತವೆ.
ಮೆಂತ್ಯ ನೆನೆಸಿದ ನೀರನ್ನು ಕುಡಿಯುವುದರಿಂದ ಮತ್ತು ನೆನಸಿದ ಮೆಂತ್ಯವನ್ನು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ. ತೂಕ ಕಳೆದುಕೊಳ್ಳಲು ಇದು ಸಹಕಾರಿ. ಮೆಂತ್ಯ ನೀರಿನಲ್ಲಿರುವ ಉರಿಯೂತ ಶಮನಕಾರಿ ಗುಣವು ಜೀರ್ಣಕ್ರಿಯೆಗೆ ನೆರವಾಗಿ ಹೊಟ್ಟೆ ಉರಿಯನ್ನು ಶಮನಗೊಳಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಿ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸುವ ಅಂಶಗಳು ಮೆಂತ್ಯದಲ್ಲಿವೆ. ಇದರಲ್ಲಿರುವ ನಾರಿನಂಶವು ದೇಹದಲ್ಲಿನ ಸಕ್ಕರೆ ಅಂಶವನ್ನು ಹೀರಿಕೊಳ್ಳುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.
ಗಟ್ಟಿ ಮೊಸರಿಗೆ ಒಂದು ಟೀ ಚಮಚ ಮೆಂತ್ಯವನ್ನು ಬೆರೆಸಿ ಬಾಯಿಗೆ ಹಾಕಿಕೊಂಡು ನುಂಗುವುದರಿಂದ ಆಮಶಂಕೆ ಮತ್ತು ರಕ್ತಭೇದಿ ಕಡಿಮೆಯಾಗುತ್ತದೆ.