

ಮೊಸರು ಎಂಬುದು ಅದ್ಭುತ ಆಹಾರೋತ್ಪನ್ನ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ವಾತ, ಪಿತ್ತ ಹಾಗೂ ಕಫ ಇವು ಸಮತೋಲನದಲ್ಲಿರುತ್ತವೆ. ಬಹುತೇಕರಿಗೆ ಮೊಸರಿಲ್ಲದ ಊಟ ಊಟವೆಂದೇ ಎನಿಸುವುದಿಲ್ಲ. ಮೊಸರಿನೊಂದಿಗೆ ಊಟ ಮುಗಿಸುವುದು ನೂರಾರು ವರ್ಷಗಳಿಂದ ನಡೆದುಬಂದ ಪದ್ಧತಿ. ಮೊಸರನ್ನು ಬಳಸುವುದು ಅರೋಗ್ಯಕ್ಕೆ ಬಹಳ ಪ್ರಯೋಜನಕಾರಿ.
ದಿನಕ್ಕೆ 250 ಮಿ.ಲೀ. ಮೊಸರು ತಿಂದರೆ ಮನುಷ್ಯ ಆರೋಗ್ಯವಂತನಾಗಿರಬಹುದು. ಇದು ರಕ್ತದ ಕೊಲೆಸ್ಟರಾಲ್ ತಗ್ಗಿಸಿ, ಹೃದಯ ಮತ್ತು ರಕ್ತನಾಳ ವ್ಯವಸ್ಥೆಯನ್ನು ದೃಢವಾಗಿಸಬಲ್ಲದು ಎಂದು ಅನೇಕ ಅಧ್ಯಯನಗಳು ಹೇಳಿವೆ. ಆಫ್ರಿಕದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ರಕ್ತಧಮನಿಗೆ ಸಂಬಂಧಿಸಿದ ರೋಗ ಹಾಗೂ ರಕ್ತದಲ್ಲಿ ಕೊಲೆಸ್ಟರಾಲ್ ಕಡಿಮೆ ಎಂದು ಸಂಶೋಧಕರ ತಂಡವೊಂದು ಪತ್ತೆ ಮಾಡಿತ್ತು. ಇವರು ಆಹಾರದಲ್ಲಿ ಮೊಸರನ್ನು ತಪ್ಪದೆ ಸೇವಿಸುತ್ತಾರೆ. ಹಾಗಾಗಿ ಇವರ ದೀರ್ಘಾಯುಷಿಗಳು ಎಂಬುದನ್ನು ತಂಡ ಕಂಡುಕೊಂಡಿತು.
ಮೊಸರಿನಲ್ಲಿ ಕ್ಯಾಲ್ಸಿಯಂ, ವಿವಿಟಮಿನ್ ಡಿ, ಪ್ರೊಟೀನ್, ಗಟ್ ಬ್ಯಾಕ್ಟೀರಿಯಾ ಮುಂತಾದ ಹಲವಾರು ಪೋಷಕಾಂಶಗಳು, ಔಷಧೀಯ ಗುಣಗಳು ಸಮೃದ್ಧವಾಗಿವೆ. ಇವು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತವೆ. ಅಲ್ಲದೆ ಬೇರೆ ಆಹಾರಗಳಿಂದ ವಿಟಮಿನ್ಸ್ ಮತ್ತು ಮಿನರಲ್ಸ್ ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತವೆ.
ಚಯಾಪಚಯ ಕ್ರಿಯೆಗಳಿಗೆ ಉತ್ತೇಜನ ನೀಡುವ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳು ಮೊಸರಿನಲ್ಲಿ ಸಮೃದ್ಧವಾಗಿವೆ. ಜಾನುವಾರುಗಳ ಹಾಲಿನಿಂದ ತಯಾರಿಸಲಾದ ಮೊಸರನ್ನು ಸೇವಿಸಿದರೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸುಲಭವಾಗಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಮೊಸರನ್ನು ಮಜ್ಜಿಗೆ ಅಥವಾ ಲಸ್ಸಿ ಮಾಡಿ ಕುಡಿಯುವುದರಿಂದ ಹೊಟ್ಟೆಯಲ್ಲಿನ ಶಾಖ ಕಡಿಮೆಯಾಗುತ್ತದೆ. ಹೊಟ್ಟೆ ನೋಯುತ್ತಿದ್ದು, ಅನೇಕ ಬಾರಿ ಶೌಚಗೃಹಕ್ಕೆ ಹೋಗಬೇಕೆನಿಸಿದರೆ ಮೊಸರಿಗೆ ಇಸಬ್ಗೋಲ್ ಹಾಕಿ ಕುಡಿಯುವುದು ಉತ್ತಮ.