

Balcony Garden: ನಗರಗಳಲ್ಲಿ ಜಾಗದ ಕೊರತೆಯಿಂದ ದೊಡ್ಡ ತೋಟ ಮಾಡಿಕೊಳ್ಳುವುದು ಕಷ್ಟವಾದರೂ, ಹಸಿರಿನ ಮೇಲಿನ ಆಸಕ್ತಿ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಮನೆಯ ಬಾಲ್ಕನಿ, ಕಿಟಕಿ ಪಕ್ಕ ಅಥವಾ ಚಿಕ್ಕ ಟೆರೇಸ್‌ನಲ್ಲೇ ಸಣ್ಣ ಗಾರ್ಡನ್ ರೂಪಿಸುವ ಟ್ರೆಂಡ್ ಇದೀಗ ಜನಪ್ರಿಯವಾಗುತ್ತಿದೆ. ಬಣ್ಣಬಣ್ಣದ ಹೂವುಗಳು, ಹಸಿರು ಗಿಡಗಳು, ತುಳಸಿ, ಪುದೀನಾ, ಕೊತ್ತಂಬರಿ, ಮೆಣಸಿನಕಾಯಿ ಸೇರಿದಂತೆ ಹಲವು ಸಸ್ಯಗಳನ್ನು ಕಡಿಮೆ ಜಾಗದಲ್ಲೇ ಬೆಳೆಸಬಹುದು. ಬೆಳಗ್ಗೆ ಎದ್ದಾಗ ಹಸಿರನ್ನು ನೋಡುವ ಅನುಭವ ಮನಸ್ಸಿಗೆ ಖುಷಿ ನೀಡುವುದರ ಜೊತೆಗೆ, ಮನೆಯ ಬಾಲ್ಕನಿಗೂ ಸುಂದರವಾದ ಲುಕ್ ನೀಡುತ್ತದೆ. ಹಾಗಾದರೆ ಕಡಿಮೆ ಜಾಗದಲ್ಲಿ ಬಾಲ್ಕನಿ ಗಾರ್ಡನ್ ಮಾಡುವಾಗ ಯಾವ ಸಸಿಗಳನ್ನು ಆಯ್ಕೆ ಮಾಡಬೇಕು? ಅವುಗಳನ್ನು ಹೇಗೆ ಜೋಡಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಬಾಲ್ಕನಿಯಲ್ಲಿ ಗಾರ್ಡನ್ ಮಾಡುವ ಮೊದಲು ಅಲ್ಲಿ ದಿನಕ್ಕೆ ಎಷ್ಟು ಸಮಯ ಸೂರ್ಯನ ಬೆಳಕು ಬೀಳುತ್ತದೆ ಎಂಬುದನ್ನು ಚೆಕ್ ಮಾಡಿ. ಯಾರು ಹಾನಿ ಮಾಡದಂತೆ ಮತ್ತು ಸೂರ್ಯನ ಬೆಳಕು ಬರುವ ಜಾಗದಲ್ಲಿ ಸಸಿಗಳನ್ನು ಇಡಲು ಸ್ಥಳವನ್ನು ಆಯ್ಕೆ ಮಾಡುವುದು ಒಳ್ಳೆಯದು. ಸಸಿಗಳ ಬೆಳವಣಿಗೆಗೆ ಅಗತ್ಯವಿರುವ ಬೆಳಕು ಸಿಗುವಂತೆ ಕುಂಡಗಳನ್ನು ಜೋಡಿಸುವುದು ಉತ್ತಮ.
ಕೆಲವೊಂದು ಸಸಿಗಳು ದೊಡ್ಡ ಗಿಡಗಳಾಗಿ ಬೆಳೆಯುತ್ತವೆ. ಆ ಕಾರಣಕ್ಕಾಗಿಯೇ ಸಸಿಗಳನ್ನು ದೊಡ್ಡ ಗಿಡಗಳ ಬದಲು ಸಣ್ಣ ಕುಂಡಗಳಲ್ಲಿ ಬೆಳೆಯುವ ಸಸಿಗಳನ್ನು ಆಯ್ಕೆ ಮಾಡಬೇಕು. ತುಳಸಿ, ಪುದೀನಾ, ಕೊತ್ತಂಬರಿ, ಕರಿಬೇವು, ಮೆಣಸಿನಕಾಯಿ ಮುಂತಾದ ಸೊಪ್ಪು ಮತ್ತು ಗಿಡಮೂಲಿಕೆಗಳನ್ನು ಬೆಳೆಸಬಹುದು. ಹೂವಿನ ಗಿಡಗಳಲ್ಲಿ ಮಲ್ಲಿಗೆ, ಗುಲಾಬಿ, ದಾಸವಾಳ, ಪೆಟುನಿಯಾ ಮುಂತಾದವುಗಳನ್ನು ಸ್ಥಳ ಮತ್ತು ಬೆಳಕಿಗೆ ಅನುಗುಣವಾಗಿ ಆಯ್ಕೆ ಮಾಡುವುದು ಒಳ್ಳೆದು.
ನೆಲದ ಜಾಗ ಕಡಿಮೆಯಿದ್ದರೆ ವರ್ಟಿಕಲ್ ಗಾರ್ಡನಿಂಗ್ ಉತ್ತಮ ಆಯ್ಕೆಯಾಗಬಹುದು. ಗೋಡೆಗೆ ಅಳವಡಿಸುವ ಪ್ಲಾಂಟರ್‌ಗಳು, ನೇತಾಡುವ ಕುಂಡಗಳು ಅಥವಾ ಸ್ಟ್ಯಾಂಡ್‌ಗಳನ್ನು ಬಳಸುವ ಮೂಲಕ ಒಂದೇ ಜಾಗದಲ್ಲಿ ಹಲವು ಸಸಿಗಳನ್ನು ಜೋಡಿಸಬಹುದು. ಇದರಿಂದ ಬಾಲ್ಕನಿ ತುಂಬಾ ಕಿರಿದಾಗದೆಯೇ ಹೆಚ್ಚು ಸಸಿಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಇದರಿಂದ ಬಾಲ್ಕನಿ ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ.
ಪ್ರತಿಯೊಂದು ಸಸಿಗೂ ಒಂದೇ ಪ್ರಮಾಣದ ಸೂರ್ಯನ ಬೆಳಕು ಬೇಕಾಗುವುದಿಲ್ಲ. ಆದ್ದರಿಂದ ಕುಂಡಗಳನ್ನು ಮನಬಂದಂತೆ ಇಡುವ ಬದಲು ಸಸಿಯ ಅಗತ್ಯಕ್ಕೆ ತಕ್ಕಂತೆ ಜೋಡಿಸಬೇಕು. ಕೆಲವೊಂದು ಸಸಿಗಳಿಗೆ ಹೆಚ್ಚು ಬಿಸಿಲು ಬೇಕಾಗುತ್ತದೆ. ಇನ್ನು ಕೇಲವು ಸಸಿಗಳಿಗೆ ಬಿಸಿಲಿನ ಅಗತ್ಯ ಜಾಸ್ತಿ ಇರುವುದಿಲ್ಲ. ಇದನ್ನು ಗಮನಿಸಿ ಕುಂಡಗಳನ್ನು ಅನುಕ್ರಮವಾಗಿ ಜೋಡಿಸುವುದು ಸಸಿಗಳ ಬೆಳವಣಿಗೆಗೆ ಸಹಕರಿಸುತ್ತದೆ.
ಪ್ರತಿದಿನ ಎಲ್ಲ ಸಸಿಗಳಿಗೂ ಒಂದೇ ಪ್ರಮಾಣದಲ್ಲಿ ನೀರು ಹಾಕುವುದು ಸರಿಯಾದ ವಿಧಾನವಲ್ಲ. ಮಣ್ಣಿನ ತೇವಾಂಶವನ್ನು ಮೊದಲು ಪರಿಶೀಲಿಸಿ ನಂತರ ನೀರು ಹಾಕುವುದು ಉತ್ತಮ. ಕುಂಡದ ಕೆಳಭಾಗದಲ್ಲಿ ನೀರು ಹೊರಹೋಗಲು ಡ್ರೈನೇಜ್ ರಂಧ್ರ ಇರಬೇಕು. ನೀರು ನಿಂತುಕೊಂಡರೆ ಬೇರುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
ಬಾಲ್ಕನಿ ಗಾರ್ಡನ್‌ಗೆ ಹಣ ಕೊಟ್ಟು ಕಾಂಪೋಸ್ಟ್ ಖರೀದಿ ಮಾಡುವ ಅಗತ್ಯವಿಲ್ಲ. ಮನೆಯಲ್ಲೇ ಅಡುಗೆ ತಾಜ್ಯ, ತರಕಾರಿ ಮತ್ತು ಹಣ್ಣಿನ ಕೆಲವು ಸಾವಯವ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ಕಾಂಪೋಸ್ಟ್ ಮಾಡಿ ಸಸಿಗಳಿಗೆ ಬಳಸಬಹುದು. ಇದರಿಂದ ಮನೆಯ ಸಾವಯವ ತ್ಯಾಜ್ಯವನ್ನು ಕಡಿಮೆ ಮಾಡುವುದಕ್ಕೂ ಸಹಾಯವಾಗಬಹುದು.
ಸಸಿಗಳನ್ನು ನೆಟ್ಟು ಬಿಟ್ಟರೆ ಕೆಲಸ ಮುಗಿಯುವುದಿಲ್ಲ. ಒಣಗಿದ ಎಲೆಗಳನ್ನು ತೆಗೆದುಹಾಕುವುದು, ಮಣ್ಣಿನ ತೇವಾಂಶ ಪರಿಶೀಲಿಸುವುದು, ಅಗತ್ಯವಿದ್ದಾಗ ಗೊಬ್ಬರ ಹಾಕುವುದು ಮತ್ತು ಕೀಟಗಳಿವೆಯೇ ಎಂದು ಗಮನಿಸಿ ಅದಕ್ಕೆ ಕೀಟ ನಾಶಕ ಸಿಂಪಡಿಸುವುದು ಮುಖ್ಯ. ನಿಯಮಿತವಾಗಿ ಸ್ವಲ್ಪ ಸಮಯ ನೀಡಿದರೆ ಚಿಕ್ಕ ಬಾಲ್ಕನಿ ಗಾರ್ಡನ್ ಅನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು, (ಏಜೆನ್ಸೀಸ್).