ಸ್ತನ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡಿದ ನಂತರ, ಸಂಪೂರ್ಣ ಸ್ತನವನ್ನು ತೆಗೆದುಹಾಕಬೇಕೇ?

ಆಧುನಿಕ ಶಸ್ತ್ರಚಿಕಿತ್ಸಾ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವುದರ ಬಗ್ಗೆಅಪೊಲೊ ಪ್ರೋಟಾನ್ ಕ್ಯಾನ್ಸರ್ ಸೆಂಟರ್​ನ ಡಾ. ಮಂಜುಳಾ ರಾವ್ ವಿವರಣೆ
cancer
ಸಾಂದರ್ಭಿಕ ಚಿತ್ರ
Published on: 

ಬೆಂಗಳೂರು: ಸ್ತನ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡಿದ ನಂತರ, ಸಂಪೂರ್ಣ ಸ್ತನವನ್ನು ತೆಗೆದುಹಾಕಬೇಕೇ ಎಂಬುದು ಹೆಚ್ಚಾಗಿ ಕೇಳಲಾಗುವ ಪ್ರಶ್ನೆ. ಅಪೊಲೊ ಪ್ರೋಟಾನ್ ಕ್ಯಾನ್ಸರ್ ಸೆಂಟರ್​ನ ಸ್ತನ ಆಂಕೊಪ್ಲಾಸ್ಟಿಕ್ ಸರ್ಜನ್ ಹಾಗೂ ಹಿರಿಯ ಸಲಹೆಗಾರರಾದ ಡಾ. ಮಂಜುಳಾ ರಾವ್ ಇದಕ್ಕೆ ಸೂಕ್ತ ಉತ್ತರವನ್ನು ನೀಡಿದ್ದಾರೆ.

'ನನ್ನ ಕ್ಲಿನಿಕ್‌ನಲ್ಲಿ, ತಕ್ಷಣ ಅಥವಾ ನಂತರದ ಸಮಯದಲ್ಲಿ, ತನಗೆ ಸ್ತನ ಕ್ಯಾನ್ಸರ್ ಇದೆ ಎಂದು ಹೇಳಲಾದ ಪ್ರತಿಯೊಬ್ಬ ಮಹಿಳೆಯಿಂದ ನಾನು ಹೆಚ್ಚಾಗಿ ಎದುರಿಸುವ ಪ್ರಶ್ನೆ ಇದಾಗಿದೆ. ಈ ಪ್ರಶ್ನೆಯನ್ನು ಸಾಮಾನ್ಯವಾಗಿ ಮೃದುವಾಗಿ, ಕೆಲವೊಮ್ಮೆ ಕಣ್ಣೀರಿನ ಮೂಲಕ, ಕೆಲವೊಮ್ಮೆ ಆಕೆಯ ಪರವಾಗಿ ಗಂಡ ಅಥವಾ ಮಗಳು ಕೇಳುತ್ತಾರೆ: "ಡಾಕ್ಟರ್, ನೀವು ಸಂಪೂರ್ಣ ಸ್ತನವನ್ನು ತೆಗೆದುಹಾಕಬೇಕೆ?" ಇದಕ್ಕೆ ಇಂದಿನ ಅನೇಕ ಮಹಿಳೆಯರಿಗೆ ನೀಡಬೇಕಾದ ಪ್ರಾಮಾಣಿಕ ಉತ್ತರವೆಂದರೆ "ಬೇಕಾಗಿಲ್ಲ". ಅನೇಕ ದಶಕಗಳವರೆಗೆ, ಸ್ತನ ಕ್ಯಾನ್ಸರ್​​ಗೆ ಪ್ರಮಾಣಿತ ಪ್ರತಿಕ್ರಿಯೆಯು ಸಂಪೂರ್ಣ ಸ್ತನವನ್ನು ತೆಗೆದುಹಾಕುವುದು ಆಗಿತ್ತು. ವಿಜ್ಞಾನವು ಮುಂದುವರೆದ ನಂತರವೂ ಕೂಡ ಆ ನಂಬಿಕೆ ನಮ್ಮಲ್ಲಿ ಇನ್ನೂ ಉಳಿದಿದೆ. ಅನೇಕ ಮಹಿಳೆಯರು ಈಗಲೂ ಕೂಡ ವೈದ್ಯರನ್ನು ಭೇಟಿ ಮಾಡಲು ವಿಳಂಬ ಮಾಡುತ್ತಾರೆ ಏಕೆಂದರೆ ಅವರು ರೋಗದ ಭಯಕ್ಕಿಂತ ಹೆಚ್ಚಾಗಿ ಸ್ತನವನ್ನು ಕಳೆದುಕೊಳ್ಳುತ್ತೇವೆ ಎನ್ನುವ ಭಯದಿಂದಾಗಿ. ಈ ಭಯದಿಂದಾಗಿ ಒಳಗೆ ಇರುವ ಗೆಡ್ಡೆಯನ್ನು ಗಮನಿಸಿದ ನಂತರ ತಿಂಗಳುಗಳು, ಕೆಲವೊಮ್ಮೆ ವರ್ಷಗಳು ಕಾಯುವ ಮಹಿಳೆಯರನ್ನು ನಾನು ಭೇಟಿ ಮಾಡಿದ್ದೇನೆ. ಆ ವಿಳಂಬವು ಯಾವುದೇ ಶಸ್ತ್ರಚಿಕಿತ್ಸೆಗಿಂತ ಹೆಚ್ಚು ಪರಿಣಾಮವನ್ನು ಬೀರುತ್ತದೆ' ಎಂದು ಡಾ. ಮಂಜುಳಾ ರಾವ್ ತಿಳಿಸಿದ್ದಾರೆ.

docter
ಡಾ. ಮಂಜುಳಾ ರಾವ್​

ಏನು ಬದಲಾವಣೆ ಆಗಿದೆ ಎನ್ನುವುದರ ಬಗ್ಗೆ ನಾನು ವಿವರಿಸುತ್ತೇನೆ

'ಅನೇಕ ವರ್ಷಗಳಿಂದ ಕೈಗೊಂಡಿರುವ ದೊಡ್ಡ ಅಧ್ಯಯನಗಳು, ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ಗೆ, ಆರೋಗ್ಯಕರ ಅಂಗಾಂಶದ ಅಂಚುಗಳೂ ಸೇರಿದಂತೆ ಗೆಡ್ಡೆಯನ್ನು ಮಾತ್ರವೇ ತೆಗೆದುಹಾಕುವುದು ಮತ್ತು ನಂತರ ಉಳಿದ ಸ್ತನಕ್ಕೆ ವಿಕಿರಣವನ್ನು ನೀಡುವುದಾಗಿದ್ದು, ಇಡೀ ಸ್ತನವನ್ನು ತೆಗೆದುಹಾಕಿ ಬದುಕುಳಿಯುವ ರೀತಿಯ ಅವಕಾಶವನ್ನೇ ಅದು ನೀಡುತ್ತದೆ ಎನ್ನುವುದನ್ನು ತೋರಿಸಿದೆ. ಇದನ್ನು ಸ್ತನ ಸಂರಕ್ಷಣಾ ಶಸ್ತ್ರಚಿಕಿತ್ಸೆ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್ ಅನ್ನು ಹೊರತೆಗೆಯಲಾಗುತ್ತದೆ. ಸ್ತನವನ್ನು ಹೇಗಿದೆಯೋ ಅದೇ ರೀತಿಯಲ್ಲಿ ಇರುವಂತೆ ಮಾಡಲಾಗುತ್ತದೆ ಹಾಗೂ ವಿಕಿರಣವು ಉಳಿದಿರುವ ಯಾವುದೇ ಸೂಕ್ಷ್ಮ ಕೋಶಗಳಿಗೆ ಚಿಕಿತ್ಸೆಯನ್ನು ನೀಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇದು ಇನ್ನಷ್ಟು ಸಾಧ್ಯವಾಗಿದೆ. ಆಂಕೊಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯು ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಪ್ಲಾಸ್ಟಿಕ್ ಸರ್ಜರಿಯ ತಂತ್ರಗಳೊಂದಿಗೆ ಸಂಯೋಜಿಸುತ್ತದೆ. ನಾವು ಗೆಡ್ಡೆಯನ್ನು ತೆಗೆದುಹಾಕಿದಾಗ, ಕೇವಲ ಒಂದು ಗುಳಿಯನ್ನು ಬಿಡುವುದಿಲ್ಲ. ಉಳಿದ ಅಂಗಾಂಶವನ್ನು ನಾವು ಶಿಲ್ಪಿಯಂತೆ ಮರುರೂಪಿಸುತ್ತೇವೆ. ಇದರಿಂದ ಸ್ತನವು ಅದರ ರೂಪವನ್ನು ಉಳಿಸಿಕೊಳ್ಳುತ್ತದೆ. ಕೆಲವೊಮ್ಮೆ ನಾವು ಪಕ್ಕದ ಸ್ತನವನ್ನು ಇದರ ಜೊತೆಗೆ ಹೊಂದಿಸಲು ಅದನ್ನು ಎತ್ತುತ್ತೇವೆ ಅಥವಾ ಕಡಿಮೆ ಮಾಡುತ್ತೇವೆ. ಇದು ದೊಡ್ಡ ಗೆಡ್ಡೆಗಳನ್ನು ಸುರಕ್ಷಿತವಾಗಿ ತೆಗೆದುಹಾಕಲು ನಮಗೆ ಅನುಮತಿಯನ್ನು ನೀಡುತ್ತದೆ. ಉತ್ತಮ ಕಾಸ್ಮೆಟಿಕ್ ಫಲಿತಾಂಶವನ್ನು ನೀಡುವ ಮೂಲಕ ಹಾಗೂ ಕ್ಯಾನ್ಸರ್ ನಿಯಂತ್ರಣವನ್ನು ರಾಜಿ ಮಾಡಿಕೊಳ್ಳದ ರೀತಿಯಲ್ಲಿ ಇದು ಸಾಧ್ಯವಾಗುತ್ತದೆ' ಎಂದು ಅವರು ವಿವರಿಸಿದ್ದಾರೆ.

'ಕೀಮೋಥೆರಪಿಯು ಕೂಡ ಚಿತ್ರಣವನ್ನು ಬದಲಾಯಿಸಿದೆ. ಕೆಲವು ಮಹಿಳೆಯರಲ್ಲಿ, ವಿಶೇಷವಾಗಿ ದೊಡ್ಡ ಗಡ್ಡೆಗಳನ್ನು ಹೊಂದಿರುವವರಿಗೆ, ನಾವು ಶಸ್ತ್ರಚಿಕಿತ್ಸೆಗೆ ಮುನ್ನ ಔಷಧಿಗಳನ್ನು ನೀಡುತ್ತೇವೆ. ಇದರಿಂದಾಗಿ ಗೆಡ್ಡೆಯು ಆಗಾಗ್ಗೆ ಕುಗ್ಗುತ್ತದೆ. ಕೆಲವೊಮ್ಮೆ ಅತಿ ಶೀಘ್ರದಲ್ಲಿ, ಮತ್ತು ಒಮ್ಮೆ ಸ್ತನಛೇದನದ ಅಗತ್ಯವಿದ್ದ ಮಹಿಳೆಗೆ ಇದು ನಂತರದಲ್ಲಿ ಕೇವಲ ಸಣ್ಣ ಶಸ್ತ್ರಚಿಕಿತ್ಸೆಯನ್ನು ಮಾಡುವ ಮಟ್ಟಕ್ಕೆ ತಲುಪಿಸುತ್ತದೆ. ಅದೇ ವಿಧಾನವು ಕೊಂಕಳಿನ ಗ್ರಂಥಿಗಳಿಗೆ ಹೆಚ್ಚು ಮೃದುವಾಗಿ ಚಿಕಿತ್ಸೆಯನ್ನೂ ನೀಡಲು ನಮಗೆ ಸಹಾಯ ಮಾಡುತ್ತದೆ ಹಾಗೂ ಒಮ್ಮೆ ನೋವಿನಿಂದ ಕೂಡಿದ, ಶಾಶ್ವತವಾದ ತೋಳಿನ ಊತವನ್ನು ಹೊಂದಿರುವ ಅನೇಕ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ದುಗ್ಧರಸ ಗ್ರಂಥಿಗಳನ್ನು ವ್ಯಾಪಕವಾಗಿ ತೆಗೆದುಹಾಕುವ ಅಗತ್ಯವಿಲ್ಲ' ಎಂದಿದ್ದಾರೆ.

'ನಾನು ಇನ್ನೊಂದು ವಿಷಯದ ಬಗ್ಗೆ ಅಷ್ಟೇ ಪ್ರಾಮಾಣಿಕವಾಗಿರಬೇಕು. ಪ್ರತಿ ಮಹಿಳೆಯೂ ತನ್ನ ಸ್ತನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸ್ತನದ ದೊಡ್ಡ ಪ್ರದೇಶದಲ್ಲಿ ಕ್ಯಾನ್ಸರ್ ಹರಡಿದ್ದರೆ, ವಿವಿಧ ಪ್ರದೇಶಗಳಲ್ಲಿ ಹಲವಾರು ಗೆಡ್ಡೆಗಳು ಇದ್ದರೆ, ವಿಕಿರಣವನ್ನು ನೀಡಲಾಗದಿದ್ದರೆ ಅಥವಾ ಆನುವಂಶಿಕ ರೂಪಾಂತರವು ಮಹಿಳೆಯನ್ನು ಹೊಸ ಕ್ಯಾನ್ಸರ್​ನ ಅಪಾಯಕ್ಕೆ ಒಳಪಡಿಸಿದರೆ, ಸ್ತನಛೇದನವು ಸುರಕ್ಷಿತ ಆಯ್ಕೆಯಾಗಿರುತ್ತದೆ. ಈ ನಿರ್ಧಾರದಲ್ಲಿ ಯಾವ ರೀತಿಯ ಸಂದೇಹವೂ ಇಲ್ಲ. ಸುರಕ್ಷತೆ ಯಾವಾಗಲೂ ಮೊದಲ ಆದ್ಯತೆಯಾಗಿರುತ್ತದೆ. ಹೀಗಿದ್ದರೂ ಸಹ, ಸ್ತನವನ್ನು ಕಳೆದುಕೊಳ್ಳುವುದು ಎಂದರೆ ಅದಿಲ್ಲದೇ ಬದುಕುವುದು ಎಂದರ್ಥವಲ್ಲ. ಪುನರ್​ ನಿರ್ಮಾಣ, ಇಂಪ್ಲಾಂಟ್ ಅಥವಾ ಮಹಿಳೆಯ ಸ್ವಂತ ಅಂಗಾಂಶವನ್ನು ಬಳಸಿ, ಅದೇ ಕಾರ್ಯಾಚರಣೆಯಲ್ಲಿ ಅಥವಾ ನಂತರದ ಹಂತದಲ್ಲಿ ಮಾಡಬಹುದು. ಅವರು ಕನ್ನಡಿಯಲ್ಲಿ ನೋಡಿಕೊಂಡು ತಾನು ತಾನೇ ಎಂದು ಭಾವಿಸಿದ ದಿನ ಅವರು ನಿಜವಾಗಿಯೂ ಚೇತರಿಸಿಕೊಳ್ಳಲು ಪ್ರಾರಂಭಿಸಿದ ದಿನ ಎಂದು ಅನೇಕ ಮಹಿಳೆಯರು ನನಗೆ ಹೇಳುತ್ತಾರೆ. ಪ್ರತಿಯೊಬ್ಬ ಮಹಿಳೆಯು ಹಾಗೂ ಪ್ರತಿ ಕುಟುಂಬವು ಇದನ್ನು ನೆನಪಿಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಸರಿಯಾದ ಶಸ್ತ್ರಚಿಕಿತ್ಸೆಯು ಆಕೆಯ ನಿರ್ದಿಷ್ಟ ಕ್ಯಾನ್ಸರ್, ಆಕೆಯ ದೇಹ ಮತ್ತು ಆಕೆಯ ಜೀವನಕ್ಕೆ ಸರಿಹೊಂದುವ ರೀತಿಯಲ್ಲಿ ಇರುತ್ತದೆ. ಮೂವತ್ತರ ಹರೆಯದ ಮಹಿಳೆ, ಹಳ್ಳಿಯೊಂದರಲ್ಲಿ ಒಬ್ಬ ರೈತನ ಹೆಂಡತಿ, ನಗರದಲ್ಲಿ ಒಬ್ಬ ನಿವೃತ್ತ ಶಿಕ್ಷಕಿ. ಪ್ರತಿಯೊಬ್ಬರೂ ಆಕೆಗಾಗಿ ಮಾಡಿದ ಯೋಜನೆಗೆ ಅರ್ಹರಾಗಿರುತ್ತಾರೆ. ಅಭ್ಯಾಸ ಅಥವಾ ಭಯದಿಂದ ಮಾಡಿದ ನಿರ್ಧಾರದ ಮೇಲಲ್ಲ. ಹಾಗಾಗಿ ಪ್ರಶ್ನೆಗಳನ್ನು ಕೇಳಿ. ಸ್ತನ ಉಳಿಸುವಿಕೆಯು ಸಾಧ್ಯವೇ ಎಂದು ನಿಮ್ಮ ಶಸ್ತ್ರಚಿಕಿತ್ಸಕರನ್ನು ಕೇಳಿ. ಪುನರ್ನಿರ್ಮಾಣ ಆಯ್ಕೆಗಳು ಯಾವುವು ಎಂದು ಕೇಳಿ. ನಿಮಗೆ ಖಚಿತವಾಗದಿದ್ದಲ್ಲಿ, ಎರಡನೇ ಅಭಿಪ್ರಾಯವನ್ನು ಪಡೆಯಿರಿ. ಒಳ್ಳೆಯ ವೈದ್ಯರು ಎಂದಿಗೂ ಇದಕ್ಕೆ ವಿರುದ್ಧವಾಗಿರುವುದಿಲ್ಲ. ನೀವು ನಂಬುವ ವ್ಯಕ್ತಿಯನ್ನು ಅಪಾಯಿಂಟ್‌ಮೆಂಟ್‌ ಸಮಯದಲ್ಲಿ ಕರೆತನ್ನಿ, ಏಕೆಂದರೆ ಆ ಆತಂಕದ ಸಮಯದಲ್ಲಿ ನೀವು ಕೇಳಿಸಿಕೊಳ್ಳುವ ಎಲ್ಲವನ್ನೂ ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಿರುತ್ತದೆ' ಎಂದು ಡಾ. ಮಂಜುಳಾ ರಾವ್ ವಿವರಿಸಿದ್ದಾರೆ.

'ದಯವಿಟ್ಟು ಸಮಯ ವ್ಯರ್ಥ ಮಾಡಬೇಡಿ. ಅದು ಕಂಡ ಮುಂಚಿನ ದಿನಗಳಲ್ಲಿಯೇ ಪರೀಕ್ಷಿಸಿದ ಗೆಡ್ಡೆಗೆ ಚಿಕ್ಕದಾದ ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚು ಇರುತ್ತದೆ. ನಿಮ್ಮ ಸ್ತನದಲ್ಲಿ ಗೆಡ್ಡೆ, ಚರ್ಮದ ಬದಲಾವಣೆ ಅಥವಾ ಮೊಲೆತೊಟ್ಟುಗಳಿಂದ ವಿಸರ್ಜನೆಯಂತಹ ಬದಲಾವಣೆಯನ್ನು ನೀವು ಅನುಭವಿಸಿದಲ್ಲಿ, ಅದನ್ನು ಮರೆಮಾಚಬೇಡಿ ಅಥವಾ ಅದು ಹಾಗೆಯೇ ಕರಗಿ ಹೋಗುತ್ತದೆ ಎಂದು ಭಾವಿಸಬೇಡಿ. ಅದನ್ನು ಪರೀಕ್ಷಿಸಿಕೊಳ್ಳಿ. ಪ್ರಸ್ತುತ ಸಮಯದಲ್ಲಿ ಸ್ತನ ಕ್ಯಾನ್ಸರ್ ಎನ್ನುವುದು ಇಂದು ನಾವು ಗೌರವದಿಂದ ಚಿಕಿತ್ಸೆ ನೀಡಬಹುದಾದ ಹಾಗೂ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬಹುದಾದ ಕಾಯಿಲೆಯಾಗಿದೆ. ನಿಮ್ಮ ಸ್ತನವು ನಿಮ್ಮ ಭಾಗವಾಗಿದೆ ಹಾಗೂ ಅನೇಕ ಸಂದರ್ಭಗಳಲ್ಲಿ ನಾವು ಅದನ್ನು ಉಳಿಸಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಬೇಗನೆ ಬರಬೇಕು ಹಾಗೂ ನೀವು ಭಯವಿಲ್ಲದೆ ಬರಬೇಕು ಎಂದು ಅವರು ಹೇಳಿದ್ದಾರೆ.

ಗಮನಿಸಿ: ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.