20ನೇ ವಾರದ ಸ್ಕ್ಯಾನಿಂಗ್‌ನಲ್ಲಿ ಮಗುವಿನ ಬೆಳವಣಿಗೆ ತೀವ್ರವಾಗಿ ಕುಂಠಿತವಾಗಿರುವುದು ಹಾಗೂ ಹೃದಯದ ದೋಷವಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ದಂಪತಿ ಎರಡನೇ ಅಭಿಪ್ರಾಯಪಡೆದಾಗ ಗರ್ಭಪಾತಕ್ಕೂ ಸಲಹೆ ನೀಡಲಾಗಿತ್ತು. ಆದರೆ, ಮಿಲನ್ ಆಸ್ಪತ್ರೆಯ ವೈದ್ಯಕೀಯ ತಂಡವು ಕೂಲಂಕಷವಾಗಿ ಪರೀಕ್ಷಿಸಿ, ಹೃದಯ ದೋಷವಿಲ್ಲ ಎಂಬುದನ್ನು ದೃಢಪಡಿಸಿ ಗರ್ಭಧಾರಣೆಯನ್ನು ಮುಂದುವರಿಸಲು ನಿರ್ಧರಿಸಿತು. ವೈಯಕ್ತಿಕ ವೈದ್ಯಕೀಯ ನಿರ್ವಹಣೆ ಮತ್ತು ನಿರಂತರ ಭ್ರೂಣದ ಕಣ್ಗಾವಲಿನಲ್ಲಿ ಈ ಗರ್ಭಧಾರಣೆಯನ್ನು ಮುನ್ನಡೆಸಲಾಯಿತು. 36ನೇ ವಾರ ಹಾಗೂ ಐದು ದಿನಗಳಾಗಿದ್ದಾಗ ಭ್ರೂಣದ ರಕ್ತಸಂಚಾರದಲ್ಲಿ ಏರುಪೇರಾದ ಕಾರಣ, ತುರ್ತು ಸಿ-ಸೆಕ್ಷನ್ ಮಾಡಿ 1.88 ಕೆ.ಜಿ ತೂಕದ ಹೆಣ್ಣು ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು. ಪ್ರಸ್ತುತ ಒಂದು ವರ್ಷ ವಯಸ್ಸಿನ ಈ ಮಗು ಕೂಡ ಸಂಪೂರ್ಣ ಆರೋಗ್ಯವಾಗಿದ್ದು, ಸಹಜ ಬೆಳವಣಿಗೆಯ ಹಂತಗಳನ್ನು ತಲುಪುತ್ತಿದೆ.