

ಬಹುತೇಕ ಜನರಿಗೆ ಪ್ರತಿನಿತ್ಯ ಸೇವಿಸುವ ಆಹಾರದ ಜತೆಗೆ ಎಷ್ಟು ಪ್ರಮಾಣದಲ್ಲಿ ಪ್ರೋಟಿನ್‍ಗಳನ್ನು ಸೇವಿಸಬೇಕು ಎಂಬುದು ಪ್ರಶ್ನೆ ಅಥವಾ ಗೊಂದಲವಾಗಿಯೇ ಉಳಿದುಬಿಟ್ಟಿದೆ. ಇದರ ತಿಳಿವಳಿಕೆಯಿಲ್ಲದೆ ಸುಖಾ ಸುಮ್ಮನೆ ಆಹಾರ ಸೇವಿಸಿ ನಾವು ಆರೋಗ್ಯವಾಗಿದ್ದೇವೆ ಎಂಬುದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆಯೇ ಸರಿ. ಹಾಗಾಗಿ ನಾವಿಂದು ತಮ್ಮ ದೈನಂದಿನ ಪ್ರೋಟಿನ್ ಅಗತ್ಯವನ್ನು ಪೂರೈಸಲು ಆಹಾರದಲ್ಲಿ ಯಾವ ರೀತಿಯ ಪದಾರ್ಥಗಳನ್ನು ಸೇರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಪ್ರಾಣಿ ಆಧಾರಿತ ಪ್ರೋಟಿನ್‍ಗಳಿಗೆ ಹೋಲಿಸಿದರೆ, ಸಸ್ಯ ಆಧಾರಿತ ಪ್ರೋಟಿನ್‍ಗಳು ಜೀರ್ಣಿಸಿಕೊಳ್ಳಲು ಸುಲಭ ಮತ್ತು ಒಳ್ಳೆಯ ಕೊಬ್ಬು ಕೂಡ ಹೌದು. ಇದು ದೇಹಕ್ಕೆ ತುಂಬ ಒಳ್ಳೆಯದು. ಈ ಪ್ರೋಟಿನ್‍ಗಳನ್ನು ಆಹಾರ ಪದ್ಧತಿಯಲ್ಲಿ ಏಕೆ ಸೇರಿಸಿಕೊಳ್ಳಬೇಕು ಎಂಬ ಪ್ರಶ್ನೆ ಕಾಡಬಹುದು. ಇವು ನಮ್ಮ ದೇಹದಲ್ಲಿನ ಕೋಶಗಳನ್ನು ನಿರ್ಮಿಸಲು ಮತ್ತು ಬೆಂಬಲಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ಹಾರ್ಮೋನ್ ಅನ್ನು ಸಮತೋಲಿತ ಸ್ಥಿತಿಯಲ್ಲಿಡಲು ನೆರವಾಗುತ್ತದೆ. ಸೇವಿಸಿದ ಬಳಿಕ ಈ ಪ್ರೋಟಿನ್‍ಗಳು ಅಮೈನೋ ಆಮ್ಲಗಳಾಗಿ ವಿಭಜನೆಯಾಗುತ್ತವೆ. ಈ ಮೂಲಕ ದೇಹದ ಚಯಾಪಚಯ ಕ್ರಿಯೆಗೆ ಇನ್ನಷ್ಟು ಚುರುಕು ನೀಡುತ್ತದೆ.
ಪ್ರೋಟಿನ್‍ಗಳು ಉತ್ತಮ ಆರೋಗ್ಯ ಉತ್ತೇಜಿಸುವ ಜತೆಗೆ ಸ್ನಾಯುಗಳನ್ನು ಬಲಪಡಿಸಲು ಮತ್ತು ಉತ್ತಮ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತವೆ. ಬಾದಾಮಿ, ಮಾಂಸ, ಹಾಲು, ಮೀನು, ಸೋಯಾ, ಮೊಟ್ಟೆ, ಬೀನ್ಸ್ ಹಾಗೂ ದ್ವಿದಳ ಧಾನ್ಯದಲ್ಲಿ ಪ್ರೋಟಿನ್ ಹೆಚ್ಚಾಗಿ ಇರುತ್ತೆ. ಆದರೆ ಬಹಳಷ್ಟು ಜನರಿಗೆ ಇದರ ಅರಿವೇ ಇಲ್ಲ ಎನುತ್ತಾರೆ ವೈದ್ಯರು. ಪ್ರೋಟಿನ್‍ಗಳು ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣಕ್ಕೆ ಧನಾತ್ಮಕ ಪರಿಣಾಮ ಬೀರುತ್ತವೆ ಎನ್ನುತ್ತದೆ ಸಂಶೋಧನೆಗಳು.
ಪ್ರೋಟಿನ್‍ಗಳ ನಾಲ್ಕು ಆರೋಗ್ಯಕರ ಸಸ್ಯ-ಆಧಾರಿತ ಪದಾರ್ಥಗಳೆಂದರೆ...
1. ಬಾದಾಮಿ: ಬಾದಾಮಿ ಪ್ರೋಟಿನ್‍ನ ಸಮೃದ್ಧ ಮೂಲವಾಗಿದ್ದು, ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಪೌಷ್ಟಿದಾಯಕವೂ ಹೌದು. ಬಾದಾಮಿಯು ಫೈಬರ್, ಖನಿಜ, ವಿಟಮಿನ್ ಇ ಮತ್ತು ಮೆಗ್ನಿಷಿಯಂಗಳನ್ನು ಒಳಗೊಂಡಿದೆ. ಹೃದ್ರೋಗದ ಅಪಾಯವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಬಾದಾಮಿಯನ್ನು ನೆನೆಸಿಯಾದರು ಅಥವಾ ಕಚ್ಚಾ ಮತ್ತು ಸಲಾಡ್‍ಗಳಿಗೆ ಸೇರಿಸಿ ಬಳಸಬಹುದು. ಪ್ರಯಾಣ ಮಾಡುವಾಗ ಪ್ರೋಟಿನ್ ಸೇವನೆಗೆ ಬಾದಾಮಿ ಸುಲಭ ಮತ್ತು ಸುರಕ್ಷಿತ ಆಯ್ಕೆ.
ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‍ನ ಜರ್ನಲ್‍ನಲ್ಲಿ ಪ್ರಕಟಗೊಂಡ ಒಂದು ಅಧ್ಯಯನದ ಪ್ರಕಾರ, ದೈನಂದಿನ ಆಹಾರ ಪಟ್ಟಿಯಲ್ಲಿ 42 ಗ್ರಾಂ ಬಾದಾಮಿಯನ್ನು ಸೇರಿಸಿ ಸೇವಿಸುವುದರಿಂದ ಹೃದಯ ಸಂಬಂಧಿ ಅಪಾಯಗಳಿಂದ ಪಾರಾಗಬಹುದು. ಅಲ್ಲದೆ 30 ಗ್ರಾಂ ಅಥವಾ 23 ಬಾದಾಮಿಗಳ ಸೇವನೆಯು ಟೈಪ್ 2 ಡಯಾಬಿಟಿಸ್ ಅನ್ನು ಸುಧಾರಿಸುತ್ತದೆ ಎನ್ನಲಾಗಿದೆ.
2. ಟೋಫು: ಇತರ ಸೋಯಾ ಆಧಾರಿತ ಆಹಾರಗಳಂತೆ, ಟೋಫು ಸಸ್ಯ ಈಸ್ಟ್ರೋಜೆನ್‍ಗಳನ್ನು ಹೊಂದಿರುತ್ತದೆ. ಇದು ಪರಿಧಮನಿಯ ಹೃದಯ ಕಾಯಿಲೆ ಅಂಶಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕಬ್ಬಿಣ, ಕ್ಯಾಲ್ಸಿಯಂ ಅಂಶ ಹೊಂದಿದ್ದು, 100 ಗ್ರಾಂ ಟೋಫು ಸೇವನೆಯು 12-20 ಗ್ರಾಂ ಪ್ರೋಟಿನ್ ಅನ್ನು ನೀಡುತ್ತದೆ. ಈ ಟೋಫು ತನ್ನದೇ ಆದ ರುಚಿ ಹೊಂದಿಲ್ಲದಿದ್ದರೂ, ಇದು ತಯಾರಿಸಿದ ಪದಾರ್ಥಗಳ ಪರಿಮಳವನ್ನು ಸುಲಭವಾಗಿ ಹೀರಿಕೊಳುತ್ತದೆ.
3. ಚಿಯಾ ಬೀಜಗಳು: ಚಿಯಾ ಬೀಜಗಳು ಅದರ ಆರೋಗ್ಯಕಾರಿ ಪ್ರಯೋಜನಗಳಿಂದಲೇ ಹೆಸರು ಪಡೆದಿದೆ. ಇದರಲ್ಲಿನ ಉತ್ಕರ್ಷಣ ನಿರೋಧಕಗಳು, ಖನಿಜಗಳು, ಫೈಬರ್, ಪ್ರೋಟಿನ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತವೆ. ಬಲವಾದ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಣೆ ಮಾಡುತ್ತದೆ. ಚಿಯಾ ಬೀಜಗಳ ಸೌಮ್ಯವಾದ ಅಡಿಕೆ ಸುವಾಸನೆಯು, ಖಾದ್ಯಗಳಿಗೆ ಮತ್ತು ಪಾನೀಯಗಳಿಗೆ ಸೇರಿಸಲು ಅನುಕೂಲಕರ. ಇವುಗಳನ್ನು ಹೆಚ್ಚಾಗಿ ಏಕದಳ, ಸಾಸ್, ತರಕಾರಿ ಮತ್ತು ಅನ್ನದಂತಹ ಭಕ್ಷ್ಯಗಳು ಮತ್ತು ಮೊಸರು ಅಥವಾ ಪಾನೀಯಗಳಲ್ಲಿ ಸೇರಿಸಲಾಗುತ್ತದೆ. ಇವುಗಳನ್ನು ನೀರಿನಲ್ಲಿ ಬೆರೆಸಿದಾಗ ಜೆಲ್‍ನಂತೆ ಮಾರ್ಪಾಡಾಗುತ್ತವೆ. ಈ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕ ಇಳಿಕೆಗೂ ನೆರವಾಗುತ್ತದೆ.
4. ಕ್ವಿನೋವಾ: ಕ್ವಿನೋವಾ ಧಾನ್ಯದ ಬೆಳೆಯಾಗಿದ್ದು, ಬಹಳಷ್ಟು ಪೋಷಕಾಂಶಗಳಿಂದ ಶ್ರೀಮಂತವಾಗಿದೆ. ಇದು ಪೋಲೇಟ್, ಮೆಗ್ನಿಷಿಯಂ, ಸತು ಮತ್ತು ಕಬ್ಬಿಣ ಸೇರಿಂದತೆ ಹಲವು ಪೋಷಕಾಂಶಗಳ ಉತ್ತಮ ಮೂಲ. ಫೈಬರ್ ಮತ್ತು ಪ್ರೋಟಿನ್‍ಗಳಿಂದ ಸಮೃದ್ಧವಾಗಿರುವುದರಿಂದ ಆರೋಗ್ಯದ ಮೇಲೆ ಆಲ್‍ರೌಂಡರ್ ಆಗಿ ಪರಿಣಾಮ ಬೀರುತ್ತದೆ. ಆಹಾರದಲ್ಲಿ ಕ್ವಿನೋವಾ ಬಳಸುವುದರಿಂದ ದೇಹದ ತೂಕ ನಿಯಂತ್ರಣದ ಜತೆಗೆ ಆರೋಗ್ಯ ವೃದ್ಧಿಗೆ ಸಹಕಾರಿ. ಅಷ್ಟೇ ಅಲ್ಲ, ಕೆಲವು ರೋಗಗಳಿಂದ ರಕ್ಷಿಸಿಕೊಳ್ಳಲು, ಮರಣ ಪ್ರಮಾಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮಸೂರ, ಗ್ರಾನೋಲಾ, ಕಾಟೇಜ್ ಚೀಸ್, ಗಜ್ಜರಿ, ಪೀನಟ್ ಬಟರ್, ಬೀಫ್ ಇತರ ಮೂಲಗಳಿಂದಲೂ ಪ್ರೋಟಿನ್ ಪಡೆಯಬಹುದು. ಆದರೆ ಡಯಟ್‍ನ ವೇಳೆ ಕ್ಯಾಲರಿ ಸೇವನೆಯ ಬಗ್ಗೆ ಜಾಗ್ರತೆ ಇದ್ದು, ಸರಿಯಾದ ಪ್ರಮಾಣದಲ್ಲಿ ಪ್ರೋಟಿನ್ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು.