ಉದರದ ಸಮಾಗ್ನಿ ಸಂರಕ್ಷಣೆಯಿಂದ ಶರೀರ ಸ್ವಾಸ್ಥ್ಯ

Stomach Ache
Published on
ಧನ್ವಂತರಿ
ಹಸಿವು ಮಾನವನ ಜೀವನಾಧಾರ. ಆಹಾರ ಸೇವನೆ ಪ್ರಾಕೃತಿಕವಾಗಿ ನಡೆಯುತ್ತಿದ್ದರೆ ಮಾತ್ರವೇ ದೇಹದ ಪೋಷಣೆ, ಕ್ರಿಯಾಚಟುವಟಿಕೆ, ಬದುಕು ಎಲ್ಲವೂ ಸುಗಮ. ಹಸಿವಿಲ್ಲದೆ ಆಹಾರ ಸೇವಿಸುವುದು ಹಿತವೂ ಅಲ್ಲ, ಸಮಂಜಸವೂ ಅಲ್ಲ. ನಾವು ಸಮಯವನ್ನು ನೋಡಿಕೊಂಡು ಆಹಾರ ಸೇವಿಸುವುದನ್ನು ರೂಢಿ ಮಾಡಿಕೊಂಡಿದ್ದೇವೆ. ಆದರೆ ಆಹಾರ ಸೇವನೆ ಮಾಡಬೇಕಾದರೆ ಈ ಮೊದಲು ತಿಂದ ಆಹಾರವು ಜೀರ್ಣವಾಗಿ ಹೊಟ್ಟೆಯ ಹಸಿವು ಪ್ರಾರಂಭವಾಗಬೇಕು. ಆಗಲೇ ಮತ್ತೆ ಆಹಾರ ಸೇವಿಸಬೇಕು ಎಂಬುದು ನಿಯಮ. ನಮ್ಮ ಸುತ್ತಮುತ್ತಲಿರುವ ಪ್ರಾಣಿಗಳೆಲ್ಲಾ ಈ ನಿಯಮವನ್ನೇ ಚಾಚೂ ತಪ್ಪದೆ ಅನುಸರಿಸುತ್ತಿವೆ. ಹೊಟ್ಟೆಕಿಚ್ಚಿಗೆ ಎರಡರ್ಥವಿದೆ. ಅಸೂಯೆ ಪಡುವುದಕ್ಕೆ ಬಳಸುವುದು ಒಂದಾದರೆ ಜೀರ್ಣಶಕ್ತಿಗೆ ಬೇಕಾಗುವ ಉದರದ ಅಗ್ನಿಯೂ ಹೊಟ್ಟೆಕಿಚ್ಚೇ. ಈ ಅಗ್ನಿಶಕ್ತಿಯು ಬಲಹೀನವಾದರೆ ಅದನ್ನು ಅಗ್ನಿಮಾಂದ್ಯ ಎನ್ನಲಾಗುತ್ತದೆ. ಪ್ರಬಲ ಅಗ್ನಿಯು ಚೆನ್ನಾಗಿ ಹಸಿವೆಯನ್ನು ಉತ್ಪತ್ತಿ ಮಾಡಿದರೆ ದುರ್ಬಲ ಅಗ್ನಿಯು ಅಜೀರ್ಣಕ್ಕೆ ಮೂಲವಾಗಿ ನಾನಾ ರೋಗಗಳಿಗೆ ಎಡೆಮಾಡಿಕೊಡುತ್ತದೆ. ಸುಲಭವಾಗಿ ಜೀರ್ಣವಾಗದ ಗುರು ಆಹಾರ, ಅತಿಯಾಗಿ ಜಿಡ್ಡಿನಿಂದ ಕೂಡಿದ ಆಹಾರ, ಹಗಲು ಹೊತ್ತಿನ ನಿದ್ರೆ, ರಾತ್ರಿ ಸಮಯದಲ್ಲಿ ಜಾಗರಣೆ, ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುವ ಚಿಂತೆ, ಬೇಸರ, ಭಯ, ಕೋಪ, ಬೇಸಿಗೆಯಂತಹ ಕಾಲದ ಗುಣಗಳಿಂದಾಗಿ ಹೊಟ್ಟೆಯ ಅಗ್ನಿ ದುರ್ಬಲವಾಗುತ್ತದೆ. ಜೊತೆಗೆ ವಾತದೋಷ ಹೆಚ್ಚಿಸುವ ಆಹಾರದಿಂದಾಗಿ ವಿಷಮಾಗ್ನಿ, ಪಿತ್ತದೋಷ ವರ್ಧಕ ಆಹಾರ ಪದಾರ್ಥಗಳಿಂದ ತೀಕ್ಷ್ಣಾಗ್ನಿ, ಕಫ ವರ್ಧಿಸುವ ಆಹಾರಗಳ ಅತಿ ಸೇವನೆಯಿಂದ ಮಂದಾಗ್ನಿ ಉಂಟಾಗುತ್ತದೆ.

ಒಮ್ಮೆ ಅತಿಯಾದ ಹಸಿವು, ಮತ್ತೊಮ್ಮೆ ಹಸಿವೇ ಆಗದಿರುವುದು ವಿಷಮಾಗ್ನಿಯ ಲಕ್ಷಣ. ಇದು ವಾತದ ರೋಗಗಳಿಗೆ ಕಾರಣವಾಗುತ್ತದೆ. ಆಹಾರದಲ್ಲಿ ತೈಲ, ಉಪ್ಪು, ಹುಳಿ ಅಂಶಗಳನ್ನು ಯೋಜಿಸುವುದು ಇದನ್ನು ಸರಿಗೊಳಿಸಲು ನೆರವಾಗುತ್ತದೆ. ಹಿಂಗು, ಬೆಳ್ಳುಳ್ಳಿ, ದ್ರಾಕ್ಷಿ, ಜೀರಿಗೆ, ಲಿಂಬೆಹಣ್ಣು, ಸೈಂಧವ ಲವಣಗಳ ಬಳಕೆ ಹಿತಕರ. ಕೆಲವೊಮ್ಮೆ ತುಸು ಹೆಚ್ಚು ಆಹಾರ ತಿಂದರೂ ಆಗಾಗ ಸೇವಿಸಿದರೂ ಮತ್ತೆ ತಿನ್ನಬೇಕೆಂಬ ಇಚ್ಛೆ ಹಾಗೂ ಅದಕ್ಕೆ ಸರಿಯಾಗಿ ಅತಿಯಾದ ಹಸಿವೆ ಉಂಟಾಗುವುದಿದೆ. ಇದು ತೀಕ್ಷ್ಣಾಗ್ನಿಯ ಪರಿಣಾಮವಾಗಿದ್ದು ಪಿತ್ತ ಸಂಬಂಧೀ ರೋಗಗಳಿಗೆ ಕಾರಣವಾಗುತ್ತದೆ. ಎಷ್ಟು ತಿಂದರೂ ತೃಪ್ತಿಯೇ ನೀಡದ, ತಿಂದದ್ದೆಲ್ಲವನ್ನೂ ಕ್ಷಣಮಾತ್ರದಲ್ಲಿ ಅರಗಿಸಿಬಿಡುವ ಭಸ್ಮಕ ರೋಗವೂ ತೀಕ್ಷ್ಣಾಗ್ನಿಯಿಂದಲೇ ಉಂಟಾಗುತ್ತದೆ. ಪಿತ್ತ ಕಡಿಮೆ ಮಾಡುವ ಆಹಾರ ವಿಹಾರಗಳನ್ನು ಯೋಜಿಸದಿದ್ದರೆ ಅಗ್ನಿಯು ಹೊಟ್ಟೆಯೊಳಗಿನ ಧಾತುಗಳನ್ನೇ ಜೀರ್ಣಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ಹೊಟ್ಟೆ ಉರಿ, ಬಾಯಾರಿಕೆ, ಕೆಮ್ಮು, ಎಚ್ಚರ ತಪ್ಪುವುದು ಮೊದಲಾದ ಸಂದರ್ಭಗಳೂ ಬರಬಹುದು. ನಿಧಾನವಾಗಿ ಜೀರ್ಣಗೊಳ್ಳುವ ಗುರು ಆಹಾರ, ತುಪ್ಪ, ಜಿಡ್ಡುಯುಕ್ತ ಆಹಾರ, ಶೀತಲ ಗುಣದ ದ್ರವ್ಯ, ಆಹಾರದ ಬಳಿಕ ಕುಳಿತು ತೂಕಡಿಕೆಯ ವಿಶ್ರಾಂತಿ, ಮೊಸರು, ಹಾಲು, ಪಾಯಸ, ಶುಂಠಿ, ಜೀರಿಗೆ, ಮಾದಲಹಣ್ಣುಗಳ ಸೇವನೆಯು ತೀಕ್ಷ್ಣಾಗ್ನಿಯನ್ನು ಶಮನಗೊಳಿಸಲು ಅನುಕೂಲ ಮಾಡುತ್ತದೆ. ಆಹಾರವನ್ನು ಅಲ್ಪಪ್ರಮಾಣದಲ್ಲಿ ಸೇವಿಸಿದರೂ, ಸುಲಭವಾಗಿ ಜೀರ್ಣಗೊಳ್ಳುವಂತಹ ಆಹಾರವನ್ನೇ ಸೇವಿಸಿದರೂ ಪಚನವಾಗದಿದ್ದರೆ, ಹಸಿವೆಯೇ ಬಹಳ ಕಡಿಮೆಯಿದ್ದರೆ ಅದು ಮಂದಾಗ್ನಿಯ ಸಂಕೇತ. ಅದು ಕಫಜ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಕಫ ದೋಷವನ್ನು ನಿವಾರಿಸುವ ಪ್ರಯತ್ನವಿಲ್ಲಿ ಫಲನೀಡುತ್ತದೆ. ಖಾರ, ಕಹಿ, ಒಗರು ರುಚಿಯ ಆಹಾರ ಸೇವಿಸಿದರೆ ಉತ್ತಮ. ಭೋಜನದ ಆರಂಭದಲ್ಲಿ ಸೈಂಧವ ಲವಣ ಹಾಗೂ ಶುಂಠಿಯನ್ನು ತಿನ್ನಬೇಕೆಂಬ ಸಲಹೆಯಿದೆ. ಇದು ಮಂದಾಗ್ನಿ ಇದ್ದಾಗ ಅತಿಹೆಚ್ಚು ಉಪಯುಕ್ತ. ಹಿಪ್ಪಲಿ, ಕಾಳುಮೆಣಸು, ಶುಂಠಿ ಇವು ಮೂರರ ಸಂಯೋಜನೆಗೆ ತ್ರಿಕಟು ಎಂದು ಹೆಸರು. ತ್ರಿಕಟು, ಸೈಂಧವ ಲವಣ, ಚಿತ್ರಕ ಹಾಗೂ ಪಚನಶಕ್ತಿ ಹೆಚ್ಚಿಸುವ ಆಹಾರ ದ್ರವ್ಯಗಳೆಲ್ಲಾ ಮಂದಾಗ್ನಿಯನ್ನು ಸರಿಪಡಿಸಲು ಸಹಾಯಕ.

ಸೇವಿಸಿದ ಆಹಾರವು ಪೂರ್ತಿಯಾಗಿ ಜೀರ್ಣಗೊಂಡು ದೇಹಧಾತು ಪೋಷಣೆಯಲ್ಲಿ ನಿರತವಾದರೆ ಅದು ಶ್ರೇಷ್ಠವಾದ ಸಮಾಗ್ನಿ ಎನಿಸಿಕೊಳ್ಳುತ್ತದೆ. ಇದು ಶರೀರಕ್ಕೆ ಬಲವನ್ನು ನೀಡುವುದರಿಂದ ಕೇವಲ ರೋಗರಹಿತ ಜೀವನವನ್ನು ಮಾತ್ರವಲ್ಲ, ಸ್ವಾಸ್ಥ್ಯವನ್ನು ಕರುಣಿಸುತ್ತದೆ. ಸ್ವಸ್ಥ ವ್ಯಕ್ತಿಯ ನಿರುಕ್ತಿಯನ್ನು ಹೇಳುವಾಗಲೂ ಆಯುರ್ವೆದವು ಸಮಾಗ್ನಿಯನ್ನು ಪ್ರಧಾನ ಅಂಶವನ್ನಾಗಿ ಪರಿಗಣಿಸಿರುವುದು ಗಮನಾರ್ಹ. ಭೋಜನವನ್ನು ಮಾಡದೆ ಇರುವುದರಿಂದಲೂ, ಅತಿಯಾಗಿ ಭೋಜನ ಮಾಡುವುದರಿಂದಲೂ ಜಠರಾಗ್ನಿಗೆ ಅನುಕೂಲವಾಗುವುದಿಲ್ಲ. ಹೇಗೆ ಇಂಧನ ಇಲ್ಲದಿದ್ದರೆ ಬೆಂಕಿ ನಂದುತ್ತದೆಯೋ, ಅತಿಯಾಗಿ ಇಂಧನದಿಂದ ಆವರಿಸಲ್ಪಟ್ಟರೂ ಬೆಂಕಿಯು ಆರಿ ಹೋಗುತ್ತದೆಯೋ ಅದೇ ರೀತಿಯಲ್ಲಿ ಶರೀರದ ಕಾಯಾಗ್ನಿಯೂ ಕಾರ್ಯವೆಸಗುತ್ತದೆ. ಇದನ್ನು ಅರ್ಥೈಸಿಕೊಂಡು ನಮ್ಮ ಶರೀರದಲ್ಲಿರುವ ಅಗ್ನಿಯನ್ನು ಸಂರಕ್ಷಿಸಿಕೊಳ್ಳಬೇಕು ಎಂಬ ಚರಕ ಸಂಹಿತೆಯ ಮಾತಿನಲ್ಲಿ ಎಲ್ಲದಕ್ಕೂ ಉತ್ತರವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net