

ಆರೋಗ್ಯ ರಕ್ಷಣೆಯಲ್ಲಿ ಹಣ್ಣುಗಳ ಪಾತ್ರ ಹಿರಿದು. ಎಲ್ಲರಿಗೂ ಎಲ್ಲ ಕಾಲದಲ್ಲಿಯೂ ಎಟುಕುವಂತಹದ್ದು ನಿಂಬೆಹಣ್ಣು. ಅಡುಗೆಯಿಂದ ವಾಮಾಚಾರದ ತನಕ ಬಳಕೆಯಾಗುವ ನಿಂಬೆಹಣ್ಣು ನಮ್ಮ ದೇಹಕ್ಕೆ ಅಗತ್ಯವಾಗಿರುವ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ಹಲವಾರು ಪ್ರಯೋಜನಗಳಿವೆ.
ಪ್ರತಿನಿತ್ಯ ಬೆಳಗ್ಗೆ ನಿಂಬೆರಸ ಸೇರಿಸಿದ ನೀರನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡವು ಕ್ರಮೇಣ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಬೆಳಗ್ಗೆ ಒಂದು ಲೋಟ ಬಿಸಿನೀರಿಗೆ ಒಂದು ಚಮಚ ನಿಂಬೆರಸ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತ ಬಂದರೆ ಶರೀರದ ತೂಕ ಕಡಿಮೆಯಾಗುತ್ತದೆ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಅಸಿಡ್ ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಕೆಲವು ದಿನಗಳ ಕಾಲ ಸ್ನಾನಕ್ಕಿಂತ ಅರ್ಧಗಂಟೆ ಮೊದಲು ತೆಂಗಿನೆಎಣ್ಣೆಗೆ ನಿಂಬೆರಸ ಬೆರೆಸಿ ದೇಹಕ್ಕೆ ಹಚ್ಚಿಕೊಳ್ಳುವುದರಿಂದ ದೇಹದ ದುರ್ಗಂದವನ್ನು ನಿವಾರಿಸಬಹುದು. ಆಹಾರದಲ್ಲಿ ನಿಂಬೆಹಣ್ಣಿನ ರಸವನ್ನು ಪ್ರತಿನಿತ್ಯ ಬಳಸುವುದರಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಚಮಚ ನಿಂಬೆರಸಕ್ಕೆ ಒಂದು ಚಮಚ ಬೆಟ್ಟದ ನಿಲ್ಲಿಕಾಯಿರಸ ಸೇರಿಸಿ ರಾತ್ರಿ ಮಲಗುವ ಮುನ್ನ ತಲೆಯ ಬುಡಕ್ಕೆ ತಿಕ್ಕಿದರೆ ಕೂದಲು ಉದುರುವುದು, ಬೆಳ್ಳಗಾಗುವುದು ನಿಲ್ಲುತ್ತದೆ. ಕೂದಲಿಗೆ ಹೊಳಪುಂಟಾಗುತ್ತದೆ. ನಿಂಬೆಹಣ್ಣಿನ ಸಿಪ್ಪೆಯನ್ನು ಹಣೆಗೆ ತಿಕ್ಕುತ್ತಿದ್ದರೆ ತಲೆನೋವು ಕಡಿಮೆಯಾಗುತ್ತದೆ.
ದೂರಪ್ರಯಾಣದ ಸಂದರ್ಭದಲ್ಲಿ ನಿಂಬೆಹಣ್ಣನ್ನು ಮೂಸುತ್ತಿದ್ದರೆ ವಾಕರಿಕೆ ಮತ್ತು ತಲೆಸುತ್ತು ಸಮಸ್ಯೆಯನ್ನು ತಡೆಯಬಹುದು. ನಿಂಬೆರಸ ಬೆರೆಸಿದ ನೀರನ್ನು ಮಕ್ಕಳಿಗೆ ಕುಡಿಸುವುದರಿಂದ ಪದೇಪದೆ ಬಾಧಿಸುವ ಭೇದಿ ಹಾಗೂ ಇತರ ಉದರಸಂಬಂಧಿ ತೊಂದರೆಗಳನ್ನು ನಿವಾರಿಸಬಹುದು. ಇದು ಸಣ್ಣಕರುಳಿನಲ್ಲಿರುವ ಜಂತುಹುಳುಗಳನ್ನು ಹೋಗಲಾಡಿಸುತ್ತದೆ. ಪ್ರತಿದಿನ ನಿಂಬೆರಸಕ್ಕೆ ತುಳಸಿ ಎಲೆಯ ರಸ ಬೆರಸಿ ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ತೊಳೆಯುತ್ತಿದ್ದರೆ ಮೊಡವೆ, ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು. ನಿಂಬೆ ಪಾನಕವವನ್ನು ಸೇವಿಸಿದರೆ ಜ್ವರದಿಂದ ಉಂಟಾದ ಬಳಲಿಕೆ ಕಡಿಮೆಯಾಗುತ್ತದೆ.