

ಬಸಳೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವಂಥ ಸೊಪ್ಪು. ಇದು ಬಳ್ಳಿ ಜಾತಿಯ ಸಸ್ಯವಾಗಿದೆ. ಇದರ ಸಸ್ಯಶಾಸ್ತ್ರೀಯ ನಾಮಧೇಯ ಆಚಠಛ್ಝಿ್ಝ ಅಚಿಚ. ಹಳ್ಳಿಗಳಲ್ಲಿ ಚಪ್ಪರಗಳನ್ನು ಮಾಡಿ ಇದನ್ನು ಬೆಳೆಸುತ್ತಾರೆ. ಇದನ್ನು ಹೆಚ್ಚಾಗಿ ನೀರು ಹರಿಯುವ ಜಾಗದಲ್ಲಿ ಬೆಳೆಸಲಾಗುತ್ತದೆ. ಬಸಳೆಯು ಬೇಸಿಗೆ ಕಾಲಕ್ಕೆ ಉತ್ತಮ ಸೊಪ್ಪಾಗಿದ್ದರೂ ಎಲ್ಲ ಕಾಲದಲ್ಲೂ ಬೆಳೆಯುತ್ತದೆ. ಇದರ ಎಲೆಗಳು ದಪ್ಪವಾಗಿದ್ದು, ಹೂಗಳು ಚಿಕ್ಕದಾಗಿ ಬಿಳಿಯ ಬಣ್ಣದಾಗಿರುತ್ತವೆ. ಇದರ ಬೀಜಗಳಿಂದ ಹಾಗೂ ಕಾಂಡಗಳಿಂದಲೂ ಗಿಡವನ್ನು ಬೆಳೆಸಬಹುದು.
ಬಸಳೆಸೊಪ್ಪಿನಲ್ಲಿ ಹಸಿರು, ಕೆಂಪು, ನೆಲಬಸಳೆ ಇತ್ಯಾದಿ ಹಲವು ವಿಧಗಳಿವೆ. ಅಡುಗೆಯಲ್ಲಿ ಬಸಳೆಯನ್ನು ಉಪಯೋಗಿಸಿ ಪಲ್ಯ, ಸಾಂಬಾರ್, ತಂಬುಳಿ, ಭಜಿ, ಸೂಪ್ ಥರದ ನಾನಾ ಬಗೆಯ ಆಹಾರಪದಾರ್ಥಗಳನ್ನು ತಯಾರಿಸಬಹುದು. ಇದು ಅಡುಗೆಯ ಜತೆಗೆ ಆರೋಗ್ಯಕ್ಕೂ ತುಂಬ ಒಳ್ಳೆಯದು. ವಿಟಮಿನ್ ಎ, ಬಿ, ಕಬ್ಬಿಣಾಂಶ ಮತ್ತು ಪೊಟ್ಯಾಷಿಯಂ ಪೋಷಕಾಂಶಗಳನ್ನು ಹೊಂದಿರುವ ಇದು ನಮ್ಮ ದೇಹಕ್ಕೆ ಬೇಕಾದ ಕಬ್ಬಿಣದ ಅಂಶವನ್ನು ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಗರ್ಭಿಣಿಯರಿಗೆ ಇದು ಪ್ರಯೋಜನಕಾರಿ. ಲೋಳೆಯ ಅಂಶವನ್ನು ಹೊಂದಿರುವ ಬಸಳೆಯು ದೇಹಕ್ಕೆ ಹೆಚ್ಚು ತಂಪನ್ನು ನೀಡುತ್ತದೆ.