ಸ್ವಾಸ್ಥ್ಯವನ್ನು ವೃದ್ಧಿಸುವ ಗ್ರಹಗಳ ರಾಜ ಸೂರ್ಯನ ಉಪಾಸನೆ

sudina 2
Published on

ಸೂರ್ಯದೇವನು ಸಂಪೂರ್ಣ ಗ್ರಹಗಳ ರಾಜನಾಗಿದ್ದಾನೆ. ಸೂರ್ಯನು ಸಹಸ್ರಕಿರಣನೆಂದೂ ಪ್ರಸಿದ್ಧನಾಗಿದ್ದಾನೆ. ತನ್ನ ಅಸಂಖ್ಯ ರಶ್ಮಿಗಳಿಂದ ಸೂರ್ಯನು ಜಗತ್ತಿನ ಊರ್ಧ್ವ ಹಾಗೂ ಅಧೋಭಾಗಗಳನ್ನು ಬೆಳಗುತ್ತಿದ್ದಾನೆ. ಪುರಾಣಾದಿಗಳಲ್ಲಿ ವರ್ಣಿತವಾಗಿರುವಂತೆ - ಸೂರ್ಯನ ಮುನ್ನೂರು ಕಿರಣಗಳು ಭೂಮಿಯ ಮೇಲೆಯೂ, ನಾಲ್ಕುನೂರು ಕಿರಣಗಳು ಚಂದ್ರಮಸ ಲೋಕ ಅಂದರೆ ಪಿತೃಲೋಕದ ಮೇಲೆಯೂ, ಮುನ್ನೂರು ಕಿರಣಗಳು ದೇವಲೋಕದ ಮೇಲೆಯೂ ಪಸರಿಸಿ ಬೆಳಗುತ್ತಿವೆ. ಸೂರ್ಯರಶ್ಮಿಯ ಜತೆಗೆ ಸೂರ್ಯನ ಪ್ರಕಾಶ ಮತ್ತು ಉಷ್ಣತೆ ಒಟ್ಟಿಗೆ ಸೇರಿ ಹಗಲು ಉಂಟಾಗುತ್ತದೆ. ಸೂರ್ಯನ ತೇಜಸ್ಸು ಉಷ್ಣತೆಯ ಜತೆ ಸೇರಿದಾಗ ರಾತ್ರಿ ಉಂಟಾಗುತ್ತದೆ. ಸೂರ್ಯರಶ್ಮಿಗಳ ಪ್ರಭಾವದಿಂದಲೇ ಹಗಲು-ರಾತ್ರಿ, ಬೇಸಿಗೆ-ಮಳೆ-ಚಳಿ ಇತ್ಯಾದಿ ಪರಿವರ್ತನೆಗಳು ಉಂಟಾಗುತ್ತವೆ. ಚಂದ್ರ, ಅಂಗಾರಕ, ಬುಧ, ಗುರು, ಶುಕ್ರ, ಶನಿ - ಈ ಗ್ರಹಗಳು ಹಾಗೂ ನಕ್ಷತ್ರಮಂಡಲವು ಸೂರ್ಯರಶ್ಮಿಗಳ ಪ್ರಭಾವದಿಂದಲೇ ತಮ್ಮ ವ್ಯಾಪಾರವನ್ನು ನಡೆಸುತ್ತ ಸೂರ್ಯಮಂಡಲದ ಅಧೀನದಲ್ಲೇ ಪ್ರತಿಷ್ಠಿತವಾಗಿವೆ. ಮೂರು ಸಂಧ್ಯೆಗಳೂ ಸೂರ್ಯನನ್ನೇ ಅವಲಂಬಿಸಿವೆ. ಕಾಲಚಕ್ರದ ಅಧಿಪತಿಯು ಸೂರ್ಯನೇ ಆಗಿದ್ದಾನೆ. ಅವನು ಸ್ವಯಂ ವೇದಾತ್ಮನಾಗಿದ್ದಾನೆ.

ಪ್ರತ್ಯಕ್ಷದೇವತೆಯಾದ ಸೂರ್ಯನ ಉಪಾಸನೆಯನ್ನು ತ್ರಿಕಾಲಗಳಲ್ಲೂ ಮಾಡಬೇಕು. ಸೂರ್ಯನ ಉಪಾಸನೆಯು ಸಾಕ್ಷಾತ್ ಪರಮಾತ್ಮನ ಉಪಾಸನೆಯೇ ಆಗಿದೆ. ವೇದ, ಪುರಾಣ ಹಾಗೂ ಆಗಮ ಗ್ರಂಥಗಳಲ್ಲಿಯೂ ಸೂರ್ಯೋಪಾಸನೆಗೆ ಸಂಬಂಧಪಟ್ಟಂತೆ ನಾನಾ ಪ್ರಕಾರವಾದ ಮಂತ್ರಗಳು ಹೇಳಲ್ಪಟ್ಟಿವೆ. ದ್ವಿಜರು ಪ್ರತಿದಿನವೂ ಮಾಡುವ ಸಂಧ್ಯೋಪಾಸನೆಯಲ್ಲಿ ಸೂರ್ಯನನ್ನು ಉದ್ದೇಶಿಸಿ ಅಘರ್Âಪ್ರದಾನ ಮಾಡುವುದು ಪ್ರಸಿದ್ಧವಾಗಿದೆ.

ಪ್ರತಿದಿನವೂ ಪ್ರಾತಃಕಾಲದಲ್ಲಿ ಸೂರ್ಯನಿಗೆ ಅಘರ್Âಪ್ರದಾನ ಮಾಡಬೇಕೆಂದು ಶಿವಪುರಾಣದಲ್ಲಿ ಉಕ್ತವಾಗಿದೆ. ಉಪಾಸನೆಯಿಂದ ಪ್ರಸನ್ನನಾದ ಸೂರ್ಯದೇವನು ಉಪಾಸಕರ ಸಕಲ ಇಷ್ಟಾರ್ಥಗಳನ್ನೂ ನೆರವೇರಿಸುತ್ತಾನೆ. ಸೂರ್ಯೋಪಾಸನೆಗೆ ಸಂಬಂಧಪಟ್ಟಂತೆ ಮಂತ್ರ, ಧ್ಯಾನ, ಕವಚ, ಹೃದಯ, ಪಟಲ, ಸೂಕ್ತ, ಸ್ತೋತ್ರ, ಶತನಾಮ, ಸಹಸ್ರನಾಮ ಮುಂತಾದ ವಾಙ್ಮಯವೂ ವಿಪುಲವಾಗಿದೆ.

ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನಿಂದ ಅನುಷ್ಠಾನಗೊಂಡ ‘ಆದಿತ್ಯಹೃದಯ ಸ್ತೋತ್ರ’ವು ಅತ್ಯಂತ ಪ್ರಸಿದ್ಧವಾಗಿದೆ. ಈ ಸ್ತೋತ್ರವನ್ನು ಇಂದಿಗೂ ಪ್ರತಿದಿನವೂ ಅಸಂಖ್ಯ ಜನರು ಪಾರಾಯಣ ಮಾಡುತ್ತಾರೆ. ಭವಿಷ್ಯಪುರಾಣದಲ್ಲಿಯೂ ಅತ್ಯಂತ ಶ್ರೇಷ್ಠವಾದ ವಿಷ್ಣು ಆದಿತ್ಯಹೃದಯ ಸ್ತೋತ್ರವಿದೆ. ಈ ಸ್ತೋತ್ರದ ಪಾರಾಯಣದಿಂದ ಮನುಷ್ಯನು ದುಃಖ, ದಾರಿದ್ರ್ಯ ಕುಷ್ಠ ಮುಂತಾದ ಅಸಾಧ್ಯ ರೋಗಗಳಿಂದ ಮುಕ್ತನಾಗಿ ಸಿದ್ಧಿಯನ್ನು ಪಡೆಯುತ್ತಾನೆಂದು ಹೇಳಲಾಗಿದೆ.

ಧ್ಯೇಯಃ ಸದಾ ಸವಿತೃಮಂಡಲ ಮಧ್ಯವರ್ತೀ ನಾರಾಯಣ ಸರಸಿಜಾಸನ ಸಂನಿವಿಷ್ಟಃ | ಕೇಯೂರವಾನ್ ಮಕರ ಕುಂಡಲವಾನ್ ಕಿರೀಟೀ ಹಾರೀ ಹಿರಣ್ಮಯವಪುಃ ಧೃತಶಂಖಚಕ್ರಃ || (ಜಗತ್ಸ ೃ್ಟರ್ತನಾದ, ಸರ್ವರಿಂದಲೂ ಭಜನೀಯನೂ, ತೇಜೋಮಯನೂ, ಜಗತ್ತಿಗೆ ಪ್ರಕಾಶಪ್ರದನಾಗಿ, ಬಾಹ್ಯ ತಮಸ್ಸು ಅಂತರ ತಮಸ್ಸೆನಿಸಿದ ಅಜ್ಞಾನವೆಂಬ ಕತ್ತಲನ್ನು ಪರಿಹರಿಸುವವನೂ, ರಮಣೀಯರೂಪನೂ, ರಕ್ಷಕನೂ, ಸರ್ವಪ್ರಾಣಿಗಳ ಉದರಂಭರಣ ಕಾರಣಕರ್ತನೂ, ಕ್ರೀಡಾದಿ ಗುಣವಿಶಿಷ್ಟನೂ, ಪ್ರಕಾಶರೂಪಿಯೂ ಆದ ಭಗವತ್ಸ್ವರೂಪವನ್ನು ಚಿಂತಿಸೋಣ - ಧ್ಯಾನ ಮಾಡೋಣ.) ಎಂಬ ಪ್ರಸಿದ್ಧವಾದ ಸೂರ್ಯನ ಧ್ಯಾನಶ್ಲೋಕವು ಈ ‘ಆದಿತ್ಯಹೃದಯ ಸ್ತೋತ್ರ’ದಲ್ಲೇ ಇದೆ. ಇದು ಸೂರ್ಯಧ್ಯಾನದ ಮೂಲಕವಾಗಿ ಸಾಕ್ಷಾತ್ ಪರಬ್ರಹ್ಮನ ಧ್ಯಾನೋಪಾಸನೆಯೇ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net