ಶಿವಪೂಜೆಗೆ ಅತ್ಯಂತ ಯೋಗ್ಯ ಆರೋಗ್ಯದಾಯಕ ಬಿಲ್ವ

BILWA
Published on

ಭಾರತೀಯ ಸಂಸ್ಕೃತಿಯಲ್ಲಿ ಬಿಲ್ವಕ್ಕೆ ಬಹಳ ವಿಶೇಷ ಸ್ಥಾನವಿದೆ. ಈ ಮರದ ಎಲೆ ಶಿವಪೂಜೆಗೆ ಅತ್ಯಂತ ಯೋಗ್ಯ ಎಂಬ ಉಲ್ಲೇಖ ಪುರಾಣಗ್ರಂಥಗಳಲ್ಲಿದೆ. ಸಾಮಾನ್ಯವಾಗಿ ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ಬೆಳೆಯುವ ಬಿಲ್ವವೃಕ್ಷಗಳ ವೈಜ್ಞಾನಿಕ ನಾಮಧೇಯ Aegle marmelos. ಮುಳ್ಳುಗಳಿರುವ ಕೊಂಬೆಗಳ ಬಿಲ್ವವೃಕ್ಷದ ಹೂಗಳು ಸಣ್ಣ ಗೊಂಚಲಾಗಿ ಬೆಳೆಯುತ್ತವೆ. ಇದರ ಬೇರು, ತೊಗಟೆ, ಪತ್ರೆ, ಹೂವು, ಕಾಯಿ ಎಲ್ಲ ಔಷಧೀಯ ಗುಣಗಳನ್ನು ಹೊಂದಿವೆ.

  • ಬಿಲ್ವದ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ.
  • ಬಿಲ್ವದ ಎಲೆಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರಿನಿಂದ ಕಣ್ಣನ್ನು ತೊಳೆದರೆ ಕಣ್ಣಿನ ಉರಿ, ತುರಿಕೆಗಳು ಶಮನವಾಗುತ್ತವೆ.
  • ಬಿಲ್ವದ ಹಣ್ಣಿನಲ್ಲಿ ಕೊಲೆಸ್ಟರಾಲ್ ಕಡಿಮೆ ಮಾಡುವ ಗುಣವಿದೆ. ಪ್ರತಿದಿನ ಅದರ ಸಿಹಿಪಾನಕವನ್ನು ಕುಡಿಯುವುದರಿಂದ ದೇಹದ ತೂಕ ಕ್ರಮೇಣ ಕಡಿಮೆಯಾಗುತ್ತದೆ.
  • ಬಿಲ್ವಪತ್ರೆಯನ್ನು ಅರೆದು ತಲೆಗೂದಲಿನ ಬುಡದಲ್ಲಿ ಹಚ್ಚಿಕೊಂಡು, ಅರ್ಧ ಗಂಟೆಯ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲಿನ ಆರೋಗ್ಯ ಉತ್ತಮಗೊಳ್ಳುತ್ತದೆ.
  • ಬಿಲ್ವವೃಕ್ಷದ ಬೇರನ್ನು ಒಣಗಿಸಿ ತೇಯ್ದು ಹಣೆಗೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಮತ್ತು ನಿದ್ರಾಹೀನತೆಯನ್ನು ಅನುಭವಿಸುತ್ತಿರುವವರು ಹೀಗೆ ಮಾಡುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.
  • ಬಿಲ್ವವೃಕ್ಷದ ಚಕ್ಕೆ ಹಾಗೂ ಬೇವಿನಮರದ ಚಕ್ಕೆ ಎರಡನ್ನೂ ಸಮಪ್ರಮಾಣದಲ್ಲಿ ಜಜ್ಜಿ, ಕಷಾಯ ಮಾಡಿ, ಹಾಲಿನೊಂದಿಗೆ ಸೇವಿಸಿದರೆ ಹುಳಿತೇಗು, ಪಿತ್ತ, ಹೊಟ್ಟೆನೋವು, ಹೊಟ್ಟೆಯುಬ್ಬರ ಸಮಸ್ಯೆಗಳು ಕಡಿಮೆಯಾಗುತ್ತವೆ.
  • ಪ್ರತಿದಿನ ಬಿಲ್ವದ ಎಲೆಯ ರಸವನ್ನು ಮೈಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ದೇಹದ ದುರ್ಗಂಧವನ್ನು ತಡೆಯಬಹುದು. ಬಿಸಿನೀರಿಗೆ ಬಿಲ್ವದ ಎಲೆಗಳನ್ನು ಹಾಕಿ ಸ್ನಾನ ಮಾಡುವುದರಿಂದ ಕಜ್ಜಿ, ತುರಿಕೆ ಮುಂತಾದ ಚರ್ಮಸಂಬಂಧಿತ ತೊಂದರೆಗಳನ್ನು ದೂರ ಮಾಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net