

ಬೆಂಗಳೂರು: ಹಸಿರು ತರಕಾರಿಗಳು, ಸೊಪ್ಪು ಚಳಿಗಾಲದಲ್ಲಿ ಹೇರಳವಾಗಿ ಲಭ್ಯವಿದೆ. ಇದರಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಇವು ರುಚಿಕರ ಹಾಗೂ ಪೋಷಕಾಂಶಗಳಿಂದ ಕೂಡಿರುತ್ತವೆ. ಇಂತಹ ತರಕಾರಿಗಳು, ಸೊಪ್ಪಿನ ಪೈಕಿ ಪಾಲಕ್ ಕೂಡ ಸೇರಿದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಬಳಸಿ ಸೂಪ್, ದಾಲ್, ಪರಾಠ, ಪೂರಿ, ಕರಿ ಹೀಗೆ ಹಲವು ಖಾದ್ಯಗಳನ್ನು ತಯಾರಿಸುತ್ತಾರೆ.
ಪಾಲಕ್ ಅನ್ನು ಸೂಪರ್ ಫುಡ್ ಎಂದೂ ಕರೆಯಲಾಗುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಮತ್ತು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ನಿಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಹಾಗಾದರೆ ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದನ್ನು ವಿವರವಾಗಿ ತಿಳಿಯೋಣ.
ಜೀರ್ಣಕ್ರಿಯೆಯ ಆರೋಗ್ಯ ಉತ್ತೇಜಿಸುತ್ತದೆ
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪಾಲಕ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಬಹುದು. ಪಾಲಕ್ ಸೊಪ್ಪಿನಲ್ಲಿ ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ, ಇದು ನಿಮ್ಮನ್ನು ರೋಗಗಳಿಂದ ರಕ್ಷಿಸುತ್ತದೆ. ಇದಲ್ಲದೆ ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ, ಮಧುಮೇಹ ಮತ್ತು ಸ್ಥೂಲಕಾಯದಂತಹ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.
ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ
ವಯಸ್ಸು ಹೆಚ್ಚಾದಂತೆ ಜ್ಞಾಪಕ ಶಕ್ತಿ ಕುಂದುವ ಸಮಸ್ಯೆ ಇದೆ, ಆದರೆ ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದ ಚಿಕ್ಕವಯಸ್ಸಿನಲ್ಲೇ ಮೆದುಳು ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆಹಾರದ ಬಗ್ಗೆ ನೀವು ವಿಶೇಷ ಕಾಳಜಿವಹಿಸಬೇಕು. ಪಾಲಕ್ ಸೊಪ್ಪನ್ನು ನಿಯಮಿತವಾಗಿ ತಿನ್ನುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
ಉತ್ತಮ ದೃಷ್ಟಿಗಾಗಿ
ದೃಷ್ಟಿ ಸುಧಾರಿಸಲು, ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ತರಕಾರಿಗಳನ್ನು, ಸೊಪ್ಪನ್ನು ತಿನ್ನುವುದು ಮುಖ್ಯ. ಇದಕ್ಕಾಗಿ ನೀವು ನಿಮ್ಮ ಆಹಾರದಲ್ಲಿ ಪಾಲಕ್ ಬಳಸಬೇಕು.
ಅಧಿಕ ಬಿಪಿ ನಿಯಂತ್ರಣಕ್ಕೆ ಸಹಕಾರಿ
ಪಾಲಕ್ ನೈಟ್ರೇಟ್‌ನ ಸಮೃದ್ಧ ಮೂಲವಾಗಿದೆ, ಇದು ಅಧಿಕ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ನೈಟ್ರೇಟ್ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೀವು ಅಧಿಕ ಬಿಪಿಯಿಂದ ತೊಂದರೆಗೀಡಾಗಿದ್ದರೆ, ಪ್ರತಿದಿನ ಪಾಲಕ್ ರಸವನ್ನು ಕುಡಿಯಬಹುದು, ಇದು ಅಧಿಕ ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ
ಪಾಲಕ್ ಸೊಪ್ಪನ್ನು ತಿನ್ನುವುದು ಕಾಲಜನ್ ಅನ್ನು ಹೆಚ್ಚಿಸುತ್ತದೆ, ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಸುಕ್ಕುಗಳು ಕಡಿಮೆ ಆಗುತ್ತವೆ. ನಿಮ್ಮ ಚರ್ಮವನ್ನು ಆರೋಗ್ಯವಾಗಿಡಲು, ನೀವು ಪ್ರತಿದಿನ ಒಂದು ಲೋಟ ಪಾಲಕ್ ರಸವನ್ನು ಕುಡಿಯಬಹುದು.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ನಿಮ್ಮ ಸಾಮಾನ್ಯ ಮಾಹಿತಿಗಾಗಿ ಮಾತ್ರ. ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಕಾಳಜಿ ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.