

| ಸುಮಾವೀಣಾ
ಸಮಷ್ಟಿಪ್ರಜ್ಞೆ ಇರಿಸಿಕೊಂಡವರು ವ್ಯಷ್ಟಿಪ್ರಜ್ಞೆಯಿಂದ ಹೊರತಾಗಿರುತ್ತಾರೆ ಎಂಬುದು ತಿಳಿದಿರುವ ಸಂಗತಿ. ಉತ್ತರದಾಯಿತ್ವ ಹೊಂದಿರುವ ತುಂಬುಭಾವನೆಯ, ಸಮಾಜದೇಳಿಗೆಯ ತುಂಬುಸಂಕಲ್ಪದ ಗುರು ಎಂದಿಗೂ ಸರಳತೆಯ ಸಾಕಾರಮೂರ್ತಿ ಆಗಿರುತ್ತಾನೆ. ಮಗಧದಂಥ ಶ್ರೇಷ್ಠ ಸಾಮ್ರಾಜ್ಯ ಕಟ್ಟಿದ ಚಾಣಾಕ್ಷ ಚಾಣಾಕ್ಯರು ಇದೇ ಗುಂಪಿಗೆ ಸೇರುವರು. ಅಂಥ ಭವ್ಯಸಾಮ್ರಾಜ್ಯ ನಿರ್ಮಾಣ ಮಾಡಿದ ಚಾಣಾಕ್ಯರು ವಾಸಿಸುತ್ತಿದ್ದುದು ಭವ್ಯ ಮಹಲಿನಲ್ಲಿ ಅಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಂತೆ ಹುಲ್ಲುಗುಡುಸಿಲಿನಲ್ಲಿ. ಬದುಕನ್ನು ತಪಸ್ಸಿನಂತೆ ಸ್ವೀಕರಿಸಿದ ಮಹಾತ್ಮ. ಇಂಥ ಗುರುವಿನ ಮಹತಿ ವಿಶ್ವದೆಲ್ಲೆಡೆ ಬಹುಬೇಗ ಪಸರಿಸಿತು. ಇದರಿಂದ ಪ್ರಭಾವಿತನಾದ ಯುರೋಪ್ ದೇಶದ ಪ್ರವಾಸಿಗನೊಬ್ಬ ಚಾಣಾಕ್ಯರನ್ನು ಭೇಟಿಯಾಗಲು ಭಾರತಕ್ಕೆ ಬಂದ. ಅಲ್ಲೇ ಹತ್ತಿರದಲ್ಲಿ ಹರಿಯುತ್ತಿದ್ದ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಚಾಣಾಕ್ಯರನ್ನೇ ವಿದೇಶಿ ಪ್ರವಾಸಿಗ, ‘ಚಾಣಾಕ್ಯರ ಕುರಿತು ವಿವರ ಒದಗಿಸಬಹುದೆ?’ ಎಂಬ ಕೋರಿಕೆಯನ್ನು ಇಟ್ಟ. ಅದಕ್ಕೆ ಉತ್ತರವಾಗಿ ಚಾಣಕ್ಯರು, ‘ಅದೋ ದೂರದಲ್ಲಿ ಒಂದು ಚಿಕ್ಕ ಗುಡಿಸಲು ಕಾಣಿಸುತ್ತಿದೆಯಲ್ಲ ಅಲ್ಲಿ ಇರುತ್ತಾರೆ, ಅಲ್ಲಿ ಭೇಟಿಯಾಗಿರಿ’ ಎಂದು ಕಳುಹಿಸಿದರು.
ವಿದೇಶೀ ಪ್ರವಾಸಿಗ ಗುಡಿಸಿಲಿನ ಬಳಿ ಹೋಗಿ ನೋಡಲಾಗಿ ಅಲ್ಲಿ ಚಾಪೆ, ಒಂದು ಮಣ್ಣಿನ ಗಡಿಗೆ, ಒಂದೆರಡು ಬಟ್ಟೆ, ಒಂದಷ್ಟು ಹಸ್ತಪ್ರತಿಗಳನ್ನು ಹೊರತುಪಡಿಸಿ ಇನ್ನೇನೂ ಇರಲಿಲ್ಲ. ‘ನಾನು ಅಂದುಕೊಂಡ ಚಾಣಾಕ್ಯರು ಇವರಲ್ಲ. ಇದು ಬೇರೆ ಯಾರೋ ಇರಬೇಕು. ಅಷ್ಟು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ ಚಾಣಾಕ್ಯರು ಹೀಗಿರಲು ಸಾಧ್ಯವೇ?’ ಎಂಬ ತೀರ್ವನಕ್ಕೆ ಬಂದ. ಹಾಗೆ ನೋಡುತ್ತಿರುವಷ್ಟರಲ್ಲೇ ಸ್ನಾನ ಮುಗಿಸಿ ಚಾಣಾಕ್ಯರೇ ಬಂದುಬಿಟ್ಟರು. ಅವರ ವರ್ಚಸ್ವಿಚಹರೆಯನ್ನು ವಿದೇಶಿಗ ತದೇಕಚಿತ್ತದಿಂದ ನೋಡಿದ.
ಹೇಗೂ ಇರಲಿ ಎಂದುಕೊಳ್ಳುತ್ತ, ‘ಮಗಧ ಸಾಮ್ರಾಜ್ಯದ ನಿರ್ವತೃ ಗುರುಚಾಣಕ್ಯರು ತಾವೆಯೋ?’ ಎಂದು ಕೇಳಿದ. ‘ಹೌದು, ನಾನೇ ಏನಾಗಬೇಕು?’ ಎಂದು ಆತ್ಮವಿಶ್ವಾಸ ತುಂಬಿದ ಕಂಚಿನ ಕಂಠದಲ್ಲಿ ವಿದೇಶಿಗನನ್ನು ಚಾಣಾಕ್ಯರು ಮರುಪ್ರಶ್ನಿಸಿದರು. ವಿದೇಶಿಗ ಮತ್ತೂ ದಿಗ್ಭ›ಮೆಯಿಂದ ತನ್ನನ್ನು ತಾನೆ ಸಂಭಾಳಿಸಿಕೊಂಡು, ‘ಮಗಧದಂಥ ಶ್ರೇಷ್ಠ ಸಾಮ್ರಾಜ್ಯ ನಿರ್ವತೃಗಳಾದ ತಾವು ಇಷ್ಟು ಸರಳಜೀವನದಲ್ಲಿ... ನನಗೆ ನಂಬಲಾಗುತ್ತಿಲ್ಲ!’ ಎಂದ. ಪ್ರತಿಯಾಗಿ ಚಾಣಾಕ್ಯರು, ‘ವ್ಯಕ್ತಿಯ ಶ್ರೇಷ್ಠತೆಗೆ ಸಿಂಹಾಸನವಾಗಲಿ, ಸಿರಿವಂತಿಕೆಗಳು ಅಳತೆಗೋಲಲ್ಲ. ಅನನ್ಯ ವಿಚಾರಧಾರೆ, ದೂರದರ್ಶಿತ್ವ, ತ್ಯಾಗ ಹಾಗೂ ವಿಶಾಲಹೃದ್ಭಾವಗಳು ಶ್ರೇಷ್ಠತೆಯ ಸನ್ನೆಗೋಲುಗಳಲ್ವೆ?’ ಎಂದರು.
ಇದನ್ನು ಆಲಿಸಿದ ವಿದೇಶಿಗ ಸರಳ ಜೀವನದ ಚಾಣಾಕ್ಯರ ಶ್ರೇಷ್ಠತೆಯ ಮರ್ಮವನ್ನು ಅರಿತು ಸಂಪೂರ್ಣವಾಗಿ ಅವರ ತತ್ವಗಳಿಗೆ ಶರಣಾದ. ಸರಳತೆಯೇ ಶ್ರೇಷ್ಠತೆ ಎಂಬ ತೀರ್ವನಕ್ಕೆ ಬಂದ. ನಿಜ, ಸರಳತೆ ಎಂಬುದು ದೊಡ್ಡಮೌಲ್ಯವೂ ಹೌದು, ಜೀವನದ ಶ್ರೇಷ್ಠತೆಯೂ ಹೌದು. ಸರಳ ಜೀವನ, ಉನ್ನತ ಚಿಂತನೆಯಿಂದ ಸಾರ್ಥಕತೆಯತ್ತ ಸಾಗಬಹುದು. ಆದರೆ, ಇಂದಿನ ದಿನಗಳಲ್ಲಿ ಸರಳತೆ ವಿರಳವಾಗುತ್ತಿದ್ದು, ಮತ್ತೆ ಆ ಮಹಾತ್ಮರ ಚಿಂತನೆಗಳನ್ನು ಸ್ಮರಿಸಿಕೊಂಡು, ಅಳವಡಿಸಿಕೊಳ್ಳಲು ಸಕಾಲ.
(ಲೇಖಕರು ಉಪನ್ಯಾಸಕರು)