

ನಮ್ಮ ದಿನಚರಿಯ ನಾಯಕ ಈ ದಿವಾಕರ. ಸಕಲರ ಹುಟ್ಟು-ಸಾವು ಸರ್ವವೂ ಉದಯಾಸ್ತಗಳ ಮೇಲೆಯೇ ನಿಂತಿದೆ. ಮಾನವನ ಎಲ್ಲ ವಿಧವಾದ ಬಾಳಬದುಕು ಸೂರ್ಯದೇವನ ಮೇಲೆಯೇ ಅವಲಂಬಿತವಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ‘ತೇನ ವಿನಾ ತೃಣಮಪಿ ನ ಚಲತಿ’ - ನಿನ್ನ ಅನುಜ್ಞೆ ಹೊರತು ಹುಲ್ಲುಕಡ್ಡಿಯೂ ಅಲುಗಾಡದು. ಸೂರ್ಯನ ಶಾಖದಿಂದಲೇ ನೀರು ಕಾದು ಆವಿಯಾಗಿ ಮೋಡವಾಗಿ ಮಳೆ ಸುರಿಯುವುದು ಹಾಗೂ ಸೂರ್ಯನ ಕಿರಣದಿಂದಲೇ ಹಸಿರು ಉತ್ಪತ್ತಿಯಾಗುವುದು. ಕೆರೆ-ತೊರೆ ತುಂಬಿ ಹರಿಯುವುದು. ಈ ನೀರಿನಿಂದ ಬೆಳೆ, ಬೆಳೆಯಿಂದ ಆಹಾರ, ಅದರಿಂದ ಬದುಕು. ಪ್ರಾಣಿಗಳ ಪ್ರಾಣದಾತ ಸೂರ್ಯನಾರಾಯಣ. ಅವನಿಲ್ಲದೆ ಪ್ರಪಂಚವೇ ಶೂನ್ಯ. ಸರ್ವವೂ ಅಂಧಕಾರಮಯ.
ಭಾರತೀಯರಲ್ಲಿ ದಿವಾಕರನೇ ಪ್ರತ್ಯಕ್ಷ ದೇವರೆಂಬ ನಂಬಿಕೆಯಿದೆ. ಬೆಳಗಾದೊಡನೆ ಎದ್ದು ಮಾಡುವ ಮೊದಲ ನಮಸ್ಕಾರವೇ ಆ ದೇವನಿಗೆ. ಸೂರ್ಯ ಕೃಷಿಕರ ಬಂಧು, ವಿಜ್ಞಾನಿಗಳ ಮಿತ್ರ, ವೈದಿಕರು-ಜ್ಯೋತಿಷಿಗಳ ದೇವ.
ಈತನೇ ವೇದ-ಪುರಾಣ-ಇತಿಹಾಸಗಳಲ್ಲಿ ವರ್ಣಿಸಲ್ಪಟ್ಟ ಭಾಸ್ಕರ, ಪ್ರತ್ಯಕ್ಷ ದೇವತೆ.
ಸೂರ್ಯಾದ್ಭವಂತಿ ಭೂತಾನಿ ಸೂರ್ಯೇತಾ ಪಾಲಿತಾನಿ ತು |
ಸೂರ್ಯೇ ಲಯ ಪ್ರಾಪ್ನುವಂತಿ ಯಃ ಸೂರ್ಯಃ ಸೋಹಮೇವ ಚ ||
ಸೂರ್ಯೋಪನಿಷತ್ತಿನಲ್ಲಿ ಈತ ಸೃಷ್ಟಿಕರ್ತ, ಪಾಲನಕರ್ತ ಮತ್ತು ಲಯಕರ್ತರಾದ ತ್ರಿಮೂರ್ತಿಗಳ ಸ್ವರೂಪಿ ಎಂದಿದೆ.
ರಥಸಪ್ತಮಿ: ಸೂರ್ಯದೇವನು ಹುಟ್ಟಿದ ದಿನ ಇದು. ವೈವಸ್ವತ ಮನ್ವಂತರದ ಆರಂಭದ ದಿನ ಸೂರ್ಯನು ಉತ್ತರಮಾರ್ಗದಲ್ಲಿ ಹೊರಟ ದಿನ. ಭಾರತೀಯರಿಗೆ ಹಬ್ಬದ ದಿನ. ಮನೆಯ ಮುಂದೆ ಅಥವಾ ತುಳಸಿಕಟ್ಟೆಯ ಮುಂದೆ ರಂಗವಲ್ಲಿಯಿಂದ ರಥದ ಚಿತ್ರಣ. ಅದರಲ್ಲಿ ಸೂರ್ಯನ ಚಿತ್ರ. ಅದಕ್ಕೆ ಗಂಧ-ಪುಷ್ಪ-ಧೂಪ-ದೀಪಗಳಿಂದ ಪೂಜೆ.
ನಮಸ್ತೇ ರುದ್ರರೂಪಾಯ ರಸಾನಾಂ ಪತಯೇ ನಮಃ |
ಅರುಣಾಕ ನಮಸ್ತೇಸ್ತು ಹರಿರಶ್ಚ ನಮೋಸ್ತುತೇ ||
ಇದು ಪ್ರಾರ್ಥನೆ. ಅನಂತರ ನೈವೇದ್ಯಪಾತ್ರೆಯಲ್ಲಿ ಹಾಲು ತಂದು ಸೂರ್ಯನ ಕಿರಣಗಳಿಂದಲೇ ಕಾಯಿಸುವುದು. ಅಸಾಧ್ಯವಾದಲ್ಲಿ ಬೆರಣಿಯ ಬೆಂಕಿಯಿಂದ ಹಾಲು ಕಾಯಿಸಿದರೂ ಸಾಕು. ಸೂರ್ಯದೇವನಿಗೆ ನೈವೇದ್ಯ ಆಯಿತೆಂಬ ನಂಬಿಕೆ.
ಚಳಿ-ಮಳೆ ಹಿಂದಾಗಿ ತರುಲತೆಗಳು ಚಿಗುರೊಡೆಯುವುದರೊಂದಿಗೆ ಮನುಷ್ಯನ ಆಸೆ-ಆಕಾಂಕ್ಷೆಗಳು ಚಿಗುರೊಡೆಯುವುದರಿಂದ ಮಾನವ ತನ್ನ ಕೃತಜ್ಞತೆಯನ್ನು ರಥಸಪ್ತಮಿಯ ಆಚರಣೆಯಿಂದ ಸಲ್ಲಿಸುತ್ತಾನೆ. ಹೀಗೆಯೇ ಸೂರ್ಯನನ್ನು ಪೂಜಿಸುವ ಇನ್ನೊಂದು ಹಬ್ಬ ಸಂಕ್ರಾಂತಿ.
ಸೂರ್ಯನ ವರ್ಣನೆ: ಸೂರ್ಯ ಹೇಗಿದ್ದಾನೆ? ಮುತ್ತುಗದ ಬಣ್ಣ; ಶ್ವೇತ ವಸ್ತ್ರಧಾರಿ; ದ್ವಿಭುಜ ಅಥವಾ ದ್ವಾದಶ ಭುಜಗಳು; ಪದ್ಮಹಸ್ತ; ಸಮುದ್ರಧ್ವನಿ; ಪಾದಗಳು ಎರಡು ಅಥವಾ ನಾಲ್ಕು; ರಥಕ್ಕೆ ಕುದುರೆಗಳು ಏಳು; ಸಾರಥಿ ಅರುಣ. ಕೆಲವೆಡೆ ಸಾರಥಿಯ ಹೆಸರು ಕನಕಮಾಲ ಮತ್ತು ಬಲಿಜಿತ್ ಎಂದೂ ಹೇಳಿದೆ. ತಂದೆ ಕಶ್ಯಪ, ತಾಯಿ ಅದಿತಿ. ರೇಣುಕಾ ಮತ್ತು ಸುವರ್ಚಲಾ - ಹೀಗೆ ಇಬ್ಬರು ಪತ್ನಿಯರು. ಹೀಗೆ ಮರೀಚಿ ಮತ್ತು ಭೃಗುಮುನಿಗಳು ಸೂರ್ಯನ ಬಗ್ಗೆ ಮಾಹಿತಿ ನೀಡಿದ್ದಾರೆ.
ಊರ್ಧ್ವ ನಮನಾಸನ: ಊರ್ಧ್ವ ಎಂದರೆ ಮೇಲ್ಮುಖವಾಗಿ ನಮಸ್ಕರಿಸುವ ಆಸನ. ಶ್ವಾಸ ತೆಗೆದುಕೊಳ್ಳುತ್ತ ನಿಧಾನವಾಗಿ ಎರಡೂ ಕೈಗಳನ್ನು ಮೇಲೆತ್ತಿ ಹಿಂದಕ್ಕೆ ಒಯ್ಯುತ್ತ ಮೇಲ್ಮುಖವಾಗಿ ನಮಸ್ಕರಿಸುತ್ತೇವೆ. ಸೊಂಟದಿಂದ ಮೇಲ್ಭಾಗಕ್ಕೆ ಮಾತ್ರ ಚಲನೆ.
ಲಾಭಗಳು: ಅಸ್ತಮಾ ಹಾಗೂ ಬೆನ್ನುನೋವು ಇರುವವರಿಗೆ ಸಹಾಯಕ. ಎದೆಯ ಭಾಗದ ಸ್ನಾಯು ಬಿಗಿತ, ಒತ್ತಡ ನಿವಾರಣೆಗೆ ಪೂರಕ. ಎತ್ತರದ ಗುರಿ ಸಾಧಿಸಲು ಧೈರ್ಯ ನೀಡುವ ಆಸನ.