ಜೀವನದಲ್ಲಿ ಸಂಸ್ಕಾರಕ್ಕೆ ಇರಲಿ ಆದ್ಯತೆ

Manollasa Image 26 Feb 20
Published on

ವೃದ್ಧ ಅಂಧ ತಂದೆ-ತಾಯಿಯರನ್ನು ಹೆಗಲ ಮೇಲೆ ಹೊತ್ತು ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ ಶ್ರವಣ ಕುಮಾರನಂಥ ಶ್ರೇಷ್ಠ ಪರಂಪರೆಯ ಆದರ್ಶದ ಮೇಲ್ಪಂಕ್ತಿಯ ಪರಂಪರೆ-ಸಂಸ್ಕೃತಿ ನಮ್ಮದು. ಈ ಹಿನ್ನೆಲೆ ಯಲ್ಲಿ ಆಧುನಿಕ ಜಗತ್ತಿನಲ್ಲೂ ತಂದೆ- ತಾಯಿಯನ್ನು ಪೂಜ್ಯ ಭಾವನೆಯಿಂದ ಕಂಡು ಗೌರವಿಸಿದ ಆದರ್ಶ ಮಕ್ಕಳ ಬಗೆಗೆ ಹಿರಿಯರೊಬ್ಬರು ಹೇಳಿದ ಪ್ರಸಂಗ ನೆನಪಿಸಿಕೊಳ್ಳುವುದಾದರೆ

ಆಂಧ್ರದಲ್ಲಿನ ಚಿಕ್ಕ ಪಟ್ಟಣದಲ್ಲಿ ಅಂಚೆಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ತಂದೆ ನಿವೃತ್ತಿ ಕಾಲದಲ್ಲಿ ವಿದೇಶದಲ್ಲಿ ಉದ್ಯೋಗದಲ್ಲಿದ್ದ ತನ್ನಿಬ್ಬರು ಗಂಡು ಮಕ್ಕಳಿಗೆ ಕರೆಮಾಡಿ-‘ನಿಮ್ಮೊಂದಿಗೆ ಮುಖ್ಯ ವಿಷಯ ಮಾತಾಡುವುದಿದೆ. ಒಂದು ತಿಂಗಳ ಮಟ್ಟಿಗೆ ರಜೆ ಹಾಕಿ ಭಾರತಕ್ಕೆ ಬರಬಹುದೇ’ ಎಂದು ಕೇಳಿದಾಗ ಗಂಡುಮಕ್ಕಳಿಬ್ಬರೂ ಎರಡು ತಿಂಗಳೇ ರಜಾ ಹಾಕಿ ಬಂದಿದ್ದರು. ತಂದೆ ಮಕ್ಕಳಿಗೆ ‘ನಾನು ನಿವೃತ್ತಿಯಾಗಿದ್ದು ಉಳಿಸಿದ ಪಿಎಫ್ ಹಣ ಬಂದಿದ್ದು, ಆ ಮೊತ್ತವನ್ನು ನಿಮ್ಮಿಬ್ಬರಿಗೆ ಕೊಡಬೇಕೆಂದು ಕೊಂಡಿದ್ದೇನೆ. ನಿವೃತ್ತಿವೇತನದಿಂದ ನಾನು, ನಿಮ್ಮ ಅಮ್ಮ ಪುಟ್ಟ ಮನೆಯಲ್ಲಿ ಉಳಿದು ಶೇಷಜೀವನ ಕಳೆಯಲು ಬಯಸಿದ್ದೇವೆ. ಇದನ್ನೇ ನಿಮಗೆ ಹೇಳಲು ಕರೆಸಿದೆ. ಹೇಗೂ ಬಂದಿದ್ದೀರಿ ನಾಲ್ಕು ದಿನ ಒಟ್ಟಾಗಿ ಎಲ್ಲಾದರೂ ಪ್ರವಾಸ ಹೋಗಿ ಬರೋಣ’ ಎಂದಾಗ ಮಕ್ಕಳು ಆಯ್ಕೆ ಮಾಡಿದ್ದು ಮೂವತ್ತು ವರ್ಷಗಳ ಹಿಂದೆ ತಂದೆ ಮೊದಲು ಉದ್ಯೋಗಕ್ಕೆ ಸೇರಿದ ಉಡುಪಿಯ ಚಿಕ್ಕ ಊರನ್ನು. ಅಪ್ಪನಿಗೂ ಖುಷಿಯಾಗಿತ್ತು!

ಮೂವತ್ತು ವರ್ಷಗಳ ನಂತರ ಬಂದ ಆ ಊರಿನಲ್ಲಿ ಎಲ್ಲವೂ ಬದಲಾದ ಸನ್ನಿವೇಶವೇ! ಅವರ ಕಾರು ಹಸಿರಿನಿಂದ ಕಂಗೊಳಿಸುತ್ತ ಸುಂದರ ಕೈತೋಟದ ಪರಿಸರವಿರುವ ಮನೆಯ ಬಳಿ ನಿಂತಾಗ ಆ ಮನೆಯ ಆಳು, ಗೇಟು ತೆಗೆದು ಮನೆಯ ಕೀಲಿ ಕೈಗೆ ಕೊಟ್ಟಾಗ ತಂದೆಗೆ ಆಶ್ಚರ್ಯ! ಬಾಗಿಲ ಬಳಿ ಸೊಂಪಾಗಿ ಬೆಳೆದ ತುಳಸಿಗಿಡ ಅವರನ್ನು ಸ್ವಾಗತಿಸಿತ್ತು! ಒಳಗೆ ಹೋದೊಡನೆ ಹಿರಿಯ ಮಗ, ‘ಅಪ್ಪಾ ಇದು ನೀವು ಉದ್ಯೋಗಕ್ಕೆ ಸೇರಿದಾಗ ಬಾಡಿಗೆಗೆ ವಾಸವಿದ್ದ ಹೆಂಚಿನ ಮನೆ. ನೀವು ಇನ್ನೆರಡು ವರ್ಷಗಳ ನಂತರ ನಿವೃತ್ತಿಯಾಗುವುದನ್ನು ತಿಳಿದು ನಾವಿಬ್ಬರೂ ಈ ಸ್ಥಳವನ್ನು ನಿಮಗೆ ತಿಳಿಯದಂತೆ ಕೊಂಡುಕೊಂಡೆವು. ಇಲ್ಲಿ ಎಲ್ಲ ಅನುಕೂಲ ಇರುವಂತೆ ಮನೆ ಕಟ್ಟಿಸಿದೆವು. ನೀವು ಎಲ್ಲಿಯೂ ಹೋಗಬೇಕಿಲ್ಲ. ನಾವು ವರ್ಷಕ್ಕೊಮ್ಮೆ ಬಂದು ಹೋಗುತ್ತೇವೆ. ಪಿಎಫ್ ಹಣ ನಿಮ್ಮ ಖಾತೆಯಲ್ಲೇ ಇರಲಿ. ನಮ್ಮನ್ನು ಕಷ್ಟಪಟ್ಟು ಓದಿಸಿದ್ದಿರ. ನಿಮ್ಮ ತ್ಯಾಗದಿಂದ ನಾವಿಷ್ಟು ಎತ್ತರಕ್ಕೇರಲು ಸಾಧ್ಯವಾಯಿತು. ಇದು ನಿಮ್ಮ ಪರಿಶ್ರಮದ ಫಲ. ಅದಕ್ಕಿಂಥ ಹೆಚ್ಚಾಗಿ ಬಾಲ್ಯದಲ್ಲಿ ಕಲಿಸಿದ ಸಂಸ್ಕಾರದಿಂದ ನಾವೀಗಿರುವ ದೇಶದಲ್ಲಿ ನಮಗೆ ಗೌರವ, ಹಣ, ಕೀರ್ತಿ ಎಲ್ಲವೂ ಸಿಗಲು ಕಾರಣವಾಯಿತು. ನಮ್ಮದೊಂದು ಆಸೆ. ನಮ್ಮಿಬ್ಬರ ಮಕ್ಕಳನ್ನೂ ನಿಮ್ಮ ಬಳಿಯೇ ಬಿಟ್ಟು ಹೋಗುತ್ತೇವೆ. ಅವರನ್ನು ಚೆನ್ನಾಗಿ ಓದಿಸಿ, ನಮಗೆ ಕೊಟ್ಟ ಸಂಸ್ಕಾರ ಮೊಮ್ಮಕ್ಕಳಿಗೂ ಹೇಳಿ ಕೊಡಿ.

ಅವರೂ ನಮ್ಮ ದೇಶದ ಸಭ್ಯತೆ, ಸಂಸ್ಕೃತಿ, ಸಂಪ್ರದಾಯಗಳನ್ನು ಕಲಿಯಲಿ’ ಎಂದಾಗ ತಂದೆ-ತಾಯಿಗಳಿಬ್ಬರ ಕಣ್ಣಾಲಿಗಳಲ್ಲಿ ನೀರು ತೊಟ್ಟಿಕ್ಕಿದ್ದವು! ನಿಜ, ಬಿತ್ತಿದಂತೆ ಬೆಳೆ. ಉತ್ತಮ ಸಂಸ್ಕಾರ ಮಕ್ಕಳಿಗೆ ಕೊಟ್ಟಾಗ ಅವರು ಬೆಳೆದಂತೆಲ್ಲ ಅವರೊಳಗಿನ ಸಂಸ್ಕಾರಜ್ಯೋತಿ ದೇದೀಪ್ಯಮಾನವಾಗಿ ಪ್ರಜ್ವಲಿಸುತ್ತದೆ! ಚೆನ್ನಾಗಿ ಓದಿಸಿ ಬೆಳೆಸಲು ಖರ್ಚಾದ ಹಣವನ್ನು ಸಂಪಾದಿಸಲಷ್ಟೇ ತಂದೆ-ತಾಯಿಗಳು ಪ್ರಚೋದಿಸಿದರೆ ಬೆಳೆದ ಮೇಲೆ ಸಂಪತ್ತಿನ ಮುಂದೆ ಹೆತ್ತವರನ್ನು ನೇಪಥ್ಯಕ್ಕೆ ಸರಿಸಿದರೆ ಸಂಕಟ ಪಡುವ ಸರದಿ ಮತ್ತೆ ಹೆತ್ತವರದಾಗುತ್ತದೆ. ಹಾಗಾಗಿ ಸಂಸ್ಕಾರಕ್ಕೆ ಆದ್ಯತೆ ನೀಡೋಣ.

| ಡ್ಯಾನಿ ಪಿರೇರಾ

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net