ಪ್ರತಿ ಹೆಜ್ಜೆಗೂ ಅರಿವು ಧ್ಯಾನದಿಂದ ಶಾಂತಿಯೆಡೆಗೆ ಯೋಗನಡಿಗೆ

photo (1)
Published on
‘ಯೋಗ ನಡಿಗೆ ಧ್ಯಾನ’ ಎಂಬುದು ಒಂದು ಪ್ರಾಚೀನ ಅಭ್ಯಾಸವಾಗಿದ್ದು, ಬೌದ್ಧಭಿಕ್ಕುಗಳು ಅನುಸರಿಸುತ್ತಾರೆ. ಇದು ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸಲು ನೆರವಾಗುತ್ತದೆ. ಈ ಧ್ಯಾನವು ನಿಧಾನವಾಗಿ ನಡೆಯುವುದರ ಮೂಲಕ, ಪ್ರತಿಯೊಂದು ಹೆಜ್ಜೆಯನ್ನೂ ಜಾಗರೂಕತೆಯಿಂದ ಗಮನಿಸುವುದನ್ನು ಒಳಗೊಂಡಿರುತ್ತದೆ. ಇದು ಕೇವಲ ದೈಹಿಕ ವ್ಯಾಯಾಮವಲ್ಲ, ಮನಸ್ಸಿನ ಶಾಂತಿಗೆ ದಾರಿದೀಪ ಕೂಡ.

ದೈಹಿಕ ಆರೋಗ್ಯಕ್ಕೆ ನಡಿಗೆ ಅತ್ಯುತ್ತಮ ವ್ಯಾಯಾಮ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಆದರೆ, ಸಾಮಾನ್ಯ ನಡಿಗೆಯಲ್ಲಿ ನಮ್ಮ ಮನಸ್ಸು ಹಲವು ಆಲೋಚನೆಗಳಲ್ಲಿ ನಿರತವಾಗಿರುತ್ತದೆ. ಇನ್ನು ಧ್ಯಾನ ಎಂಬುದು ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಆಂತರಿಕ ಶಾಂತಿಯನ್ನು ಸಾಧಿಸಲು ಸಹಾಯ ಮಾಡುವ ಒಂದು ಪ್ರಾಚೀನ ಅಭ್ಯಾಸ. ಇದು ಏಕಾಗ್ರತೆ ಮತ್ತು ಅರಿವನ್ನು ಹೆಚ್ಚಿಸುವ ಮೂಲಕ ಮಾನಸಿಕವಾಗಿ ಸ್ಪಷ್ಟ ಮತ್ತು ಭಾವನಾತ್ಮಕವಾಗಿ ಶಾಂತಿ ಸ್ಥಿತಿಯನ್ನು ತಲುಪಲು ಬಳಸುವ ಒಂದು ತಂತ್ರವಾಗಿದೆ. ಧ್ಯಾನದ ಮುಖ್ಯ ಉದ್ದೇಶಗಳು ಒತ್ತಡ ಮತ್ತು ಆತಂಕ-ಉದ್ವೇಗ ಕಡಿತ, ಏಕಾಗ್ರತೆ ಸುಧಾರಣೆ, ಸ್ವಯಂ ಅರಿವು ಮತ್ತು ಆಂತರಿಕ ಸಮಾಧಾನವನ್ನು ಸಾಧಿಸುವುದು. ಕುಳಿತು ಮಾಡುವ ಧ್ಯಾನ, ಭಾವಾತೀತ ಧ್ಯಾನ, ವಿಪಸ್ಸನಾ, ಪ್ರಣವ ಧ್ಯಾನ ಹೀಗೆ ಹಲವು ಧ್ಯಾನಗಳಿವೆ.

ನಡಿಗೆ ಧ್ಯಾನ: ನಡಿಗೆ ಧ್ಯಾನ (ವಾಕಿಂಗ್ ಮೆಡಿಟೇಶನ್) ಧ್ಯಾನದ ಒಂದು ವಿಶಿಷ್ಟ ರೂಪವಾಗಿದೆ. ಇಲ್ಲಿ ನಡೆಯುವ ಕ್ರಿಯೆಯನ್ನೇ ಧ್ಯಾನದ ವಸ್ತುವಾಗಿ ಬಳಸಲಾಗುತ್ತದೆ. ಇದು ಕುಳಿತು ಮಾಡುವ ಧ್ಯಾನದಷ್ಟೇ ಪರಿಣಾಮಕಾರಿ. ದೇಹವು ಚಲಿಸುತ್ತಿರುವಾಗಲೂ ಮನಸ್ಸನ್ನು ಜಾಗರೂಕವಾಗಿ ಮತ್ತು ಶಾಂತವಾಗಿ ಇಡಲು ಇದು ನಮಗೆ ಕಲಿಸುತ್ತದೆ.

ಯೋಗನಡಿಗೆ ಧ್ಯಾನದ ಪ್ರಮುಖ ಅಂಶಗಳು: ಜಾಗರೂಕ ಮನಸ್ಸು ನಡಿಗೆ (ಮೈಂಡ್ ಫುಲ್​ನೆಸ್) ಕೇವಲ ನಡೆಯುವುದಲ್ಲ. ಬದಲಿಗೆ ಪ್ರತಿ ಹೆಜ್ಜೆಯನ್ನೂ, ಪ್ರತಿ ಚಲನೆಯನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಪಾದವು ನೆಲವನ್ನು ಸ್ಪರ್ಶಿಸುವಿಕೆ, ದೇಹದ ಭಾರ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬದಲಾಗುವಿಕೆ. ಉಸಿರಾಟ-ಇವೆಲ್ಲವನ್ನೂ ಪ್ರಜ್ಞಾ ಪೂರ್ವಕವಾಗಿ ಅನುಭವಿಸುವುದು ಇದರ ಮುಖ್ಯಭಾಗ. ವೇಗವಾಗಿ ನಡೆಯುವ ಬದಲು, ನಿಧಾನವಾಗಿ ಮತ್ತು ಉದ್ದೇಶಪೂರ್ವಕವಾಗಿ ಹೆಜ್ಜೆ ಹಾಕುವುದು ಇದರ ಪ್ರಮುಖ ಭಾಗ. ಯಾವುದೇ ನಿರ್ದಿಷ್ಟ ಗಮ್ಯಸ್ಥಾನಕ್ಕೆ ತಲುಪುವ ಧಾವಂತ ಉದ್ದೇಶ ಇಲ್ಲಿ ಇರುವುದಿಲ್ಲ. ಪ್ರತಿಯೊಂದು ಹೆಜ್ಜೆಯೂ ಒಂದು ಧ್ಯಾನದ ಕ್ಷಣವಾಗಿರುತ್ತದೆ.

ಸಮತೋಲನ: ನಡಿಗೆ ಧ್ಯಾನವು ದೇಹ ಮತ್ತು ಮನಸ್ಸಿನ ನಡುವೆ ಅದ್ಭುತ ಸಮತೋಲನವನ್ನು ಸೃಷ್ಟಿಸುತ್ತದೆ, ಏಕಾಗ್ರತೆ ಮತ್ತು ಆಂತರಿಕ ಶಾಂತಿಯನ್ನು ಹೆಚ್ಚಿಸುತ್ತದೆ.

ಯೋಗ ನಡಿಗೆ ಧ್ಯಾನ: ಸಂವೇದನೆಗಳ ಅರಿವು: ಪಾದಗಳ ನೆಲವನ್ನು ರ್ಸ³ಸುವಾಗ ಉಂಟಾಗುವ ಸಂವೇದನೆಗಳಾದ ಉಷ್ಣತೆ, ಶೀತ, ಒತ್ತಡ, ದೇಹದ ಸಮತೋಲನ- ಇವೆಲ್ಲವನ್ನೂ ಸಂಪೂರ್ಣವಾಗಿ ಅರಿತುಕೊಳ್ಳುವುದು. ನಡೆಯುವಾಗ ಮನಸ್ಸಿನಲ್ಲಿ ಮೂಡುವ ಆಲೋಚನೆ, ಭಾವನೆ, ಶಬ್ಧ- ಇವುಗಳನ್ನು ಗಮನಿಸುವುದು. ಆದರೆ ಅವುಗಳಿಗೆ ಅಂಟಿಕೊಳ್ಳದೆ, ಅವುಗಳನ್ನು ನಿರ್ಣಯಿಸದೆ ಹಾದು ಹೋಗಲು ಬಿಡುವುದು.

ಪ್ರದಕ್ಷಿಣೆ: ಕೆಲವೊಮ್ಮೆ ದೇವಸ್ಥಾನ, ಪವಿತ್ರ ಸ್ಥಳಗಳು, ದೇವಗರ್ಭಗುಡಿ ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಯೋಗನಡಿಗೆ ಧ್ಯಾನವನ್ನು ಮಾಡಬಹುದು. ಹೇಗೆ ಅಭ್ಯಾಸ ಮಾಡುವುದು? ಶಾಂತಿಯುತವಾದ, ಅಡ್ಡಿ ಇಲ್ಲದ ಸ್ಥಳವನ್ನು ಆರಿಸಿ, ಇದು ಮನೆಯೊಳಗೆ, ಉದ್ಯಾನದಲ್ಲಿ, ಸಣ್ಣ ಹಾದಿಯಲ್ಲಿ ಆಗಿರಬಹುದು. ನೀವು ಮುಂದೆ -ಹಿಂದೆ ನಡೆಯಲು ಸಣ್ಣ ಜಾಗವೂ ಸಾಕು.

ಶುರು ಮಾಡಿ: ನೇರವಾಗಿ ನಿಂತುಕೊಳ್ಳಿ, ದೇಹದ ಭಾರವನ್ನು ಸಮತೋಲನಗೊಳಿಸಿ, ಉಸಿರಾಟವನ್ನು ನಿಧಾನವಾಗಿ ಗಮನಿಸಿ. ನಿಮ್ಮ ಒಂದು ಪಾದವನ್ನು ನಿಧಾನವಾಗಿ ಎತ್ತಿ ಅದನ್ನು ಮುಂದೆ ಇಡಿ. ಪಾದವು ನೆಲವನ್ನು ಸ್ಪರ್ಶಿಸುವ ಪ್ರತಿಯೊಂದು ಹಂತವನ್ನೂ ಸೂಕ್ಷ್ಮವಾಗಿ ಅನುಭವಿಸಿ. ನಂತರ ಇನ್ನೊಂದು ಪಾದದೊಂದಿಗೆ ಇದೇ ರೀತಿ ಮಾಡಿ.

ಅವಧಿ: ಆರಂಭದಲ್ಲಿ 10-15 ನಿಮಿಷಗಳಿಂದ ಶುರುಮಾಡಿ, ಕ್ರಮೇಣ ಅವಧಿಯನ್ನು ಹೆಚ್ಚಿಸಬಹುದು.

ಪ್ರಯೋಜನಗಳು: ದೇಹ ಮತ್ತು ಮನಸ್ಸಿನ ಸಮೃದ್ಧಿ, ಒತ್ತಡ ಕಡಿತ, ಏಕಾಗ್ರತೆ ಹೆಚ್ಚಳ, ಶಾಂತಿ ನೆಮ್ಮದಿ, ಮನಸ್ಸಿನ ಸ್ಥಿರತೆ ಲಭಿಸುತ್ತದೆ. ಸಾಮಾನ್ಯ ನಡಿಗೆಯು ದೈಹಿಕ ಚಲನೆಯಾದರೆ, ಧ್ಯಾನವು ಮಾನಸಿಕ ಅಭ್ಯಾಸ, ಯೋಗ ನಡಿಗೆ ಧ್ಯಾನವು ನಡಿಗೆಯನ್ನು ಧ್ಯಾನದ ವಸ್ತುವಾಗಿ ಬಳಸುವ ಶಾಂತಿಯೆಡೆಗೆ ತೆರಳುವ ಒಂದು ಪರಿಣಾಮಕಾರಿ ವಿಧಾನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net