

ಮನುಷ್ಯನ ಮೂಳೆಗಳು ಗಟ್ಟಿಮುಟ್ಟಾಗಿರಬೇಕೆಂದರೆ, ಅದಕ್ಕೆ ಅತ್ಯಗತ್ಯವಾಗಿರುವ ಕ್ಯಾಲ್ಸಿಯಂ ಅಂಶ ಕೂಡ ದೇಹದಲ್ಲಿ ಅವಶ್ಯಕ ಮಟ್ಟದಲ್ಲಿರಲೇಬೇಕು. ಎಳೆಗೂಸಿನಿಂದ ಹಿಡಿದು ವೃದ್ಧರವರೆಗೂ ಇಂತಿಷ್ಟು ಕ್ಯಾಲ್ಸಿಯಂ ಬೇಕೇಬೇಕು. ಇದರಲ್ಲಿ ಸ್ವಲ್ಪ ಕೊರತೆ ಉಂಟಾದರೂ ಹಲವು ದೈಹಿಕ ಸಮಸ್ಯೆಗಳಿಗೆ ಜಾಗ ಮಾಡಿಕೊಟ್ಟಂತೆ.
ಅದರಲ್ಲೂ ಮಹಿಳೆಯರಿಗೆ ಮಧ್ಯ ವಯಸ್ಸು ದಾಟುತ್ತಿದ್ದಂತೆ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವುದೇ ಕ್ಯಾಲ್ಸಿಯಂ ಕೊರತೆಯಿಂದ. ಮೆನೊಪಾಸ್ ಸಂದರ್ಭದಲ್ಲಿ ಉಂಟಾಗುವ ಕ್ಯಾಲ್ಸಿಯಂ ಕೊರತೆ ಎಂಥ ತೊಂದರೆಗಳಿಗೆ ದಾರಿಯಾಗಬಲ್ಲದು… ಇಂಥ ಸಂದರ್ಭದಲ್ಲಿ ವೈದ್ಯರು ಕ್ಯಾಲ್ಸಿಯಂ ಪೂರಕ ಮಾತ್ರೆಗಳನ್ನು, ಅರ್ಥಾತ್ ಕ್ಯಾಲ್ಸಿಯಂ ಸಪ್ಲಿಮೆಂಟ್‌ಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಆದರೆ ಇದಕ್ಕೂ ಮುನ್ನ, ಆಹಾರದಲ್ಲಿಯೇ ನೈಸರ್ಗಿಕವಾಗಿ ಲಭ್ಯವಿರುವ ಕ್ಯಾಲ್ಸಿಯಂ ಸೇವನೆ ಕುರಿತು ತಿಳಿದುಕೊಂಡರೆ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವುದು ಸಾಧ್ಯವಿದೆ.
ಇದಕ್ಕೆ ಹೆಚ್ಚೇನೂ ಮಾಡಬೇಕಿಲ್ಲ. ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಒಳಗೊಂಡರೆ ಸಾಕು. ದಿನನಿತ್ಯದ ಆಹಾರ ಕ್ರಮದಲ್ಲಿ ಕೆಲವೇ ಮಾರ್ಪಾಡು ಮಾಡಿಕೊಂಡರೆ, ಕೆಲವು ಆಹಾರ ಪದಾರ್ಥಗಳನ್ನು ಆದ್ಯತೆಯಾಗಿರಿಸಿಕೊಂಡರೆ ಪ್ರತಿದಿನದ ಕ್ಯಾಲ್ಸಿಯಂ ಅಗತ್ಯವನ್ನು ಆರಾಮಾಗಿ ನೀಗಿಸಿಕೊಳ್ಳಬಹುದು.
ಇದಕ್ಕೂ ಮುನ್ನ, ಮತ್ತೊಂದು ಅಂಶ ನಿಮ್ಮ ಗಮನದಲ್ಲಿರಲಿ. ಕ್ಯಾಲ್ಸಿಯಂ ಮೂಳೆಗೆ ಸಂಬಂಧಿಸಿದ್ದಷ್ಟೇ ಅಲ್ಲದೇ ಸ್ನಾಯು ಸೆಳೆತ, ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾಲ್ಸಿಯಂ ಸ್ನಾಯು ಸೆಳೆತವನ್ನು ತಗ್ಗಿಸಬಲ್ಲದು. ರಕ್ತನಾಳಗಳಗಳನ್ನು ವಿಶ್ರಾಂತಗೊಳಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಬಲ್ಲದು. ಹೀಗಾಗಿ ನಿಮ್ಮ ಹೃದಯ ಆರೋಗ್ಯಕರವಾಗಿರಬೇಕೆಂದರೆ ಕ್ಯಾಲ್ಸಿಯಂ ಕಡೆಗೂ ಗಮನ ನೀಡಲೇಬೇಕು.
ಕ್ಯಾಲ್ಸಿಯಂ ನೀಡಬಲ್ಲ ಸರಳ ಆಹಾರಗಳು:
ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುತ್ತದೆ. ಹಾಲು, ಯೋಗರ್ಟ್, ಹಣ್ಣಿನ ರಸಗಳ ಸೇವನೆ ತಪ್ಪಿಸಬೇಡಿ. ಒಂದು ಕಪ್ ಹಾಲಿನಲ್ಲಿ 325 ಮಿ.ಗ್ರಾಂ. ಕ್ಯಾಲ್ಸಿಯಂ ಇರುತ್ತದೆ. ಹೀಗಾಗಿ ಹಾಲಿನ ಸೇವನೆ ಅವಶ್ಯಕ. ಇದರೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.
ಬೇಯಿಸಿದ ಪಾಲಕ್: ಪಾಲಕ್ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿರುತ್ತದೆ. ಪಾಲಕ್ ಸೊಪ್ಪನ್ನು ಬೇಯಿಸಿ ತಿಂದರೆ ಮೂಳೆ ಗಟ್ಟಿಯಾಗುವುದರೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನೂ ದೂರವಿಡಬಹುದು. ಒಂದು ಕಪ್ ಬೇಯಿಸಿದ ಪಾಲಕ್ ಸೊಪ್ಪಿನಲ್ಲಿ 245 ಮಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಅಂಶ ಇರುತ್ತದೆ. ಹೀಗಾಗಿ ಬೇಯಿಸಿದ ಪಾಲಕ್ ಸೊಪ್ಪು ನಿಮ್ಮ ಆಹಾರದ ಮೆನುವಿನಲ್ಲಿರುವಂತೆ ನೋಡಿಕೊಳ್ಳಿ.
ಬಾದಾಮಿ: ಬಾದಾಮಿಯಲ್ಲಿ ಅಧಿಕ ಮಟ್ಟದಲ್ಲಿ ಕ್ಯಾಲ್ಸಿಯಂ ಇರುತ್ತದೆ. ಕೇವಲ ಅರ್ಧ ಕಪ್ ಬಾದಾಮಿಯಲ್ಲಿ ಕನಿಷ್ಠ 190 ಮಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಇರುತ್ತದೆ. ಹೀಗಾಗಿ ಬೆಳಿಗ್ಗೆ ಹಾಲು ಕುಡಿಯುವಾಗಲೇ ಹತ್ತು ಹದಿನೈದು ಬಾದಾಮಿಯನ್ನು ಜಗಿದರೆ ಅಲ್ಲಿಗೆ ದಿನಕ್ಕೆ ಅಗತ್ಯವಾದ ಕ್ಯಾಲ್ಸಿಯಂ ನಿಮ್ಮ ದೇಹಕ್ಕೆ ಒದಗಿದಂತೆ.
ಸೋಯಾ ಹಾಲು/ ಬೀನ್ಸ್: ಮೌಲ್ಯವರ್ಧಿತ ಸೋಯಾ ಹಾಲಿನಲ್ಲಿ ದೇಹಕ್ಕೆ ಅವಶ್ಯಕ ಕ್ಯಾಲ್ಸಿಯಂ ಒದಗಿಸುವ ತಾಕತ್ತಿದೆ. ಎಂಟು ಔನ್ಸ್ ಸೋಯಾ ಹಾಲಿನಲ್ಲಿ ಸುಮಾರು 299 ಮಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಇರುತ್ತದೆ. ಸೋಯಾ ಹಾಲು ಸಿಗಲಿಲ್ಲ ಎಂದರೆ ಸೋಯಾ ಬೀನ್ ಸಹ ಸೇವನೆ ಮಾಡಬಹುದು. ಒಂದು ಕಪ್ ಸೋಯಾ ಬೀನ್ ಕಾಳಿನಲ್ಲಿ 98 ಮಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಅಂಶ ಇರುತ್ತದೆ. ಇತರೆ ಬೀನ್‌ಗಳಲ್ಲಿಯೂ ಕ್ಯಾಲ್ಸಿಯಂ ಇದ್ದು, ಇವುಗಳ ಸೇವನೆ ತುಂಬಾ ಮುಖ್ಯ.
ಬ್ರೊಕೋಲಿ: ಮುಂಚೆ ಅಪರೂಪಕ್ಕೆ ಸಿಗುತ್ತಿದ್ದ ಬ್ರೊಕೋಲಿ ಈಗ ಎಲ್ಲೆಡೆಯೂ ಸುಲಭಕ್ಕೆ ಸಿಗುತ್ತಿದೆ. ಹೀಗಾಗಿ ಬ್ರೊಕೋಲಿ ಕೂಡ ನಿಮ್ಮ ಮೆನುವಿನಲ್ಲಿರಲಿ. ಬೇಯಿಸಿದ ಬ್ರೊಕೋಲಿಯನ್ನು ತಿಂದರೆ ಒಳಿತು. ಒಂದು ಕಪ್ ಬ್ರೊಕೋಲಿಯಲ್ಲಿ 62 ಮಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಇರುತ್ತದೆ.
ಅಂಜೂರ: ಒಣ ಹಣ್ಣುಗಳ ಪೈಕಿ ಅಂಜೂರದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿರುತ್ತದೆ. ಹತ್ತು ಒಣ ಅಂಜೂರದಲ್ಲಿ 269 ಮಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಲಭ್ಯವಿದ್ದು, ದಿನಕ್ಕೆ ಅಗತ್ಯವಿರುವ ಕ್ಯಾಲ್ಸಿಯಂನಲ್ಲಿ 20%ನಷ್ಟು ಕ್ಯಾಲ್ಸಿಯಂ ಅನ್ನು ಅಂಜೂರ ಒಂದರಿಂದಲೇ ಪಡೆದುಕೊಳ್ಳಬಹುದು. ದಿನದಲ್ಲಿ ಬಿಡುವಾದಾಗ ಅಂಜೂರವನ್ನು ತಿಂದರೆ, ಕ್ಯಾಲ್ಸಿಯಂ ಕೊರತೆ ಮಾತೇ ಬರದು.
ಯಾರಿಗೆ ಎಷ್ಟು ಕ್ಯಾಲ್ಸಿಯಂ ಅವಶ್ಯಕ?
ಕ್ಯಾಲ್ಸಿಯಂ ಸೇವನೆಗೂ ಮುನ್ನ, ಯಾರಿಗೆ ಎಷ್ಟು ಕ್ಯಾಲ್ಸಿಯಂ ಅವಶ್ಯಕತೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. 'ಆಫೀಸ್ ಆಫ್ ಡಯೆಟರಿ ಸಪ್ಲಿಮೆಂಟ್ಸ್' ಪ್ರಕಾರ ದಿನದಲ್ಲಿ, ಒಂದೊಂದು ವಯೋಮಾನದವರಿಗೆ ಒಂದೊಂದು ರೀತಿಯ ಕ್ಯಾಲ್ಸಿಯಂ ಅಗತ್ಯವಿರುತ್ತದೆ.
ಅತಿಯಾದರೆ ಅಮೃತವೂ ವಿಷ, ಮರೆಯಬೇಡಿ:
ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಯಾವುದೇ ಅಂಶ ದೇಹದಲ್ಲಿ ಹೆಚ್ಚಾದರೂ ಅಪಾಯಕಾರಿಯೇ. ಕ್ಯಾಲ್ಸಿಯಂ ಕೊರತೆ ಎಂದು ಅತಿಯಾಗಿ ಕ್ಯಾಲ್ಸಿಯಂ ಸೇವನೆ ಮಾಡಿದರೂ ಇತರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕ್ಯಾಲ್ಸಿಯಂ ಹೆಚ್ಚಾದರೆ ಮಲಬದ್ಧತೆ ಕಾಣಿಸಿಕೊಳ್ಳಬಹುದು. ಗ್ಯಾಸ್ಟ್ರಿಕ್ ಸಮಸ್ಯೆಯ ಜೊತೆಗೆ ಕಿಡ್ನಿಯಲ್ಲಿ ಕಲ್ಲಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ನಿಮ್ಮ ವಯೋಮಾನಕ್ಕೆ ಹಾಗೂ ದೇಹದ ಸ್ಥಿತಿಗತಿಗೆ ತಕ್ಕಂತೆ ಕ್ಯಾಲ್ಸಿಯಂ ಅಂಶವನ್ನು ಪಡೆದುಕೊಳ್ಳಿ.