ರಾಂಚಿ ರಸ್ತೆಯಲ್ಲಿ ಧೋನಿ ದರ್ಶನ: ಬ್ಯಾಟಿಂಗ್‌ಗಿಂತ ಚಿಕನ್ ಪಾರ್ಸೆಲ್ ಸುದ್ದಿಯೇ ಈಗ ಹಾಟ್ ಟಾಪಿಕ್! MS Dhoni

ಮಹೇಂದ್ರ ಸಿಂಗ್​ ಧೋನಿ (ಚಿತ್ರ X)
ಮಹೇಂದ್ರ ಸಿಂಗ್​ ಧೋನಿ (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಚುರುಕಿನ ವಿಕೆಟ್​ ಕೀಪಿಂಗ್​ ಮತ್ತು ಚಾಣಾಕ್ಷ ನಾಯಕತ್ವಕ್ಕೆ ಹೆಸರಾದ ಮಹೇಂದ್ರ ಸಿಂಗ್​ ಧೋನಿ
  • ಅಪಾರ ಸಂಪತ್ತು ಮತ್ತು ಜಾಗತಿಕ ಖ್ಯಾತಿ ಇದ್ದರೂ, ಧೋನಿ ಇಂದಿಗೂ ತಮ್ಮ ಹಳೆಯ ದಿನಗಳನ್ನು ಮರೆತಿಲ್ಲ
  • ಇತ್ತೀಚಿಗೆ ಧೋನಿ ರಾಂಚಿಯ ಜನಪ್ರಿಯ ರೆಸ್ಟೋರೆಂಟ್‌ನಿಂದ 'ದೇಹತಿ ಚಿಕನ್' ಪಾರ್ಸೆಲ್ ತೆಗೆದುಕೊಳ್ಳುತ್ತಿರುವ ವಿಡಿಯೋ ವೈರಲ್​
MS Dhoni: ಮೈದಾನದಲ್ಲಿ ಅಬ್ಬರಿಸುವ ಬ್ಯಾಟಿಂಗ್, ಚುರುಕಿನ ವಿಕೆಟ್​ ಕೀಪಿಂಗ್​ ಮತ್ತು ಚಾಣಾಕ್ಷ ನಾಯಕತ್ವಕ್ಕೆ ಹೆಸರಾದ ಮಹೇಂದ್ರ ಸಿಂಗ್​ ಧೋನಿ, ಮೈದಾನದ ಹೊರಗೂ ಅಷ್ಟೇ ಸರಳ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಕೋಟ್ಯಂತರ ಅಭಿಮಾನಿಗಳು, ಅಪಾರ ಸಂಪತ್ತು ಮತ್ತು ಜಾಗತಿಕ ಖ್ಯಾತಿ ಇದ್ದರೂ, ಧೋನಿ ಇಂದಿಗೂ ತಮ್ಮ ಹಳೆಯ ದಿನಗಳನ್ನು ಮರೆತಿಲ್ಲ ಎಂಬುದಕ್ಕೆ ಅವರ ಜೀವನಶೈಲಿಯೇ ಸಾಕ್ಷಿ. ಇತ್ತೀಚಿಗೆ ಧೋನಿ ರಾಂಚಿಯ ಜನಪ್ರಿಯ ರೆಸ್ಟೋರೆಂಟ್‌ನಿಂದ 'ದೇಹತಿ ಚಿಕನ್' ಪಾರ್ಸೆಲ್ ತೆಗೆದುಕೊಳ್ಳುತ್ತಿರುವ ವಿಡಿಯೋವೊಂದು ಆನ್​ಲೈನ್​ನಲ್ಲಿ ವೈರಲ್​ ಆದ ನಂತರ ಅಭಿಮಾನಿಗಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
X ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ ಧೋನಿ ರೆಸ್ಟೋರೆಂಟ್​ನ ಹೊರ ಭಾಗದಲ್ಲಿ ತಮ್ಮ ಕಾರಿನಲ್ಲಿ ಕುಳಿತು 'ದೇಹತಿ ಚಿಕನ್' ಪಾರ್ಸೆಲ್‌ಗಾಗಿ ಕಾಯುತ್ತಿರುವ ದೃಶ್ಯವನ್ನು ತೋರಿಸಲಾಗಿದೆ. ಯಾವುದೇ ಆಡಂಬರವಿಲ್ಲದೆ, ಸಾಮಾನ್ಯ ಗ್ರಾಹಕರಂತೆ ತಮಗೆ ಇಷ್ಟವಾದ ಆಹಾರವನ್ನು ಪಡೆಯಲು ಅವರು ಬಂದಿರುವುದು ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.
ಧೋನಿ ತಾವು ಸೇವಿಸುವ ಆಹಾರ ಮತ್ತು ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಅವರು ಸ್ಥಳೀಯ ಖಾದ್ಯವೊಂದನ್ನು ಇಷ್ಟ ಪಟ್ಟು ಸ್ವತಃ ಅವರೇ ಬಂದು ಖರೀದಿಸಿರುವುದನ್ನು ನೋಡಿದ ಅಭಿಮಾನಿಗಳು ನಮ್ಮ ಧೋನಿ ಎಂದಿಗೂ ಬದಲಾಗದ ವ್ಯಕ್ತಿತ್ವ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಒಬ್ಬ ಬಳಕೆದಾರರು ಧೋನಿ ಐಪಿಎಲ್​ ಆಡುತ್ತಾರೆ, ವರ್ಷಪೂರ್ತಿ ಕಣ್ಮರೆಯಾಗುತ್ತಾರೆ. ಯಾವುದೇ ಕ್ರಿಕೆಟ್​ ಕಾರ್ಯಕ್ರಮದಲ್ಲೂ ಅವರನ್ನು ನೋಡಲು ಸಾಧ್ಯವಿಲ್ಲ. ಹೆಚ್ಚು ಗದ್ದಲವಿಲ್ಲದೆ, ಸರಳ ಜೀವನ ನಡೆಸಿ ಸಂತೋಷ ಪಡುತ್ತಾರೆ ಎಂದು ಕಾಮೆಂಟ್​ ಮಾಡಿದ್ದಾರೆ.

ದೇಹತಿ ಚಿಕನ್ ಎಂದರೇನು?

'ದೇಹತಿ ಚಿಕನ್' ಎಂಬುದು ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಸಾಂಪ್ರದಾಯಿಕ ಮಾಂಸಾಹಾರಿ ಖಾದ್ಯ. 'ದೇಹತಿ' ಎಂದರೆ ಹಿಂದಿಯಲ್ಲಿ 'ಹಳ್ಳಿ' ಅಥವಾ 'ಗ್ರಾಮೀಣ' ಎಂದರ್ಥ. ಅಂದರೆ ಹಳ್ಳಿ ಶೈಲಿಯಲ್ಲಿ ತಯಾರಿಸುವ ಚಿಕನ್ ಎಂದೇ ಇದರ ತಾತ್ಪರ್ಯ. ಈ ಖಾದ್ಯದಲ್ಲಿ ಸಾಸಿವೆ ಎಣ್ಣೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಅನ್ನ ಮತ್ತು ತಂಪಾದ ರೈತಾದೊಂದಿಗೆ ಸೇವಿಸಲಾಗುತ್ತದೆ.

ದೇಹತಿ ಕೋಳಿ ಮಾಂಸವನ್ನು ಹೇಗೆ ತಯಾರಿಸಲಾಗುತ್ತದೆ?

ದೇಹತಿ ಚಿಕನ್ ಸರಳ ಪದಾರ್ಥಗಳು ಮತ್ತು ಕ್ಲಾಸಿಕ್ ಅಡುಗೆ ತಂತ್ರಗಳನ್ನು ಅವಲಂಬಿಸಿದೆ. ಮೊದಲು ಚಿಕನ್​ ಅನ್ನು ಉಪ್ಪು, ಅರಿಶಿನ, ಮೆಣಸಿನ ಪುಡಿ, ಸಾಸಿವೆ ಎಣ್ಣೆ, ಶುಂಠಿ-ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಪೇಸ್ಟ್‌ನಿಂದ ಮ್ಯಾರಿನೇಟ್ ಮಾಡಿ. ನಂತರ 30 ನಿಮಿಷಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಟ್ಟು, ಸಾಸಿವೆ ಎಣ್ಣೆಯಲ್ಲಿ ಅರ್ಧ ಬೇಯುವವರೆಗೆ ಆಳವಾಗಿ ಹುರಿದು ನಂತರ ಪಕ್ಕಕ್ಕಿಟ್ಟುಕೊಳ್ಳಿ.
ನಂತರ ಕತ್ತರಿಸಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಪೇಸ್ಟ್, ಉಪ್ಪು ಮತ್ತು ಮಸಾಲೆಗಳನ್ನು ಸೇರಿಸಿ ದಪ್ಪ ಪೇಸ್ಟ್ ಆಗುವವರೆಗೆ ಬೇಯಿಸಿಕೊಳ್ಳಿ. ಇದಾದ ಬಳಿಕ ಟೊಮೆಟೊ ಪ್ಯೂರಿ ಮತ್ತು ಗರಂ ಮಸಾಲವನ್ನು ಮಿಶ್ರಣ ಮಾಡಿ ಎಣ್ಣೆ ಬೇರ್ಪಡುವವರೆಗೆ ಹುರಿದು ಚಿಕನ್​ ಸೇರಿಸಿ 15-20 ನಿಮಿಷಗಳ ಕಾಲ ಹುರಿಯಿರಿ. ಈಗ ನೀರನ್ನು ಸೇರಿಸಿ ಚೆನ್ನಾಗಿ ಬೇಯಿಸಿಕೊಂಡು ಸ್ವಲ್ಪ ತಣ್ಣಗಾದ ನಂತರ ಅನ್ನದೊಂದಿಗೆ ಸೇವಿಸಿರಿ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net