ಕೂಲ್​ ಡ್ರಿಂಕ್ಸ್​, ಐಸ್​ ಕ್ಯೂಬ್ಸ್​ ಬೇಡ! ಬೆವರಿಳಿಸುವ ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ 5 ಆಹಾರಗಳೇ ಬೆಸ್ಟ್​

ಬೇಸಿಗೆಗೆ ಹೇಳಿಮಾಡಿಸಿದ ನೈಸರ್ಗಿಕ ಆಹಾರಗಳಿವು
ಬೇಸಿಗೆಗೆ ಹೇಳಿಮಾಡಿಸಿದ ನೈಸರ್ಗಿಕ ಆಹಾರಗಳಿವು
Published on

ಪ್ರಮುಖ ಮುಖ್ಯಾಂಶಗಳು

  • ನೆತ್ತಿ ಸುಡುವ ಬಿಸಿಲಿಗೆ ಈ ಐದು ನೈಸರ್ಗಿಕ ಆಹಾರಗಳೇ ಉತ್ತಮ
  • ಬಿರು ಬೇಸಿಗೆಯಲ್ಲಿ ಬೆವರುವ ದೇಹಕ್ಕೆ ಇವು ಬಹಳ ಅವಶ್ಯ
Body Cool: ಈಗ ಬಿರು ಬೇಸಿಗೆಗಾಲ. ಮನೆಯಿಂದ ಹೊರಗೆ ಕಾಲಿಡುವ ಮುನ್ನ ಹತ್ತು ಬಾರಿ ಯೋಚಿಸುವಂತ ಪರಿಸ್ಥಿತಿ. ಅಷ್ಟರ ಮಟ್ಟಿಗೆ ತಾಪಮಾನ ಜೋರಾಗಿದೆ. ಸುಡುವ ಬಿಸಿಲಿನಲ್ಲಿ ರಸ್ತೆಯಲ್ಲಿ ಓಡಾಡುವುದು, ಒಂದು ಸೂರಿನಡಿ ಕೂರುವುದು ಕಷ್ಟಸಾಧ್ಯ ಎನ್ನುವಂತಾಗಿದೆ. ಬೇಸಿಗೆ ಬೇಗೆಗೆ ದೇಹದ ಉಷ್ಣಾಂಶ ಕೂಡ ಹೆಚ್ಚಾಗಿ, ಮೈಯಿಂದ ಬೆವರು ಮಳೆ ಹನಿಯಂತೆ ಕೆಳಗಿಳಿಯುತ್ತದೆ. ಇಂತಹ ಸಮಯದಲ್ಲಿ ಒಂದೇ ಕಡೆ ಹೆಚ್ಚು ಸಮಯ ಕುಳಿತುಕೊಳ್ಳುವುದು ಅಥವಾ ವಾಹನ ಓಡಿಸುವುದು ಮಾಡಿದರೆ, ಮೂಲವ್ಯಾಧಿಯಂತಹ ಸಮಸ್ಯೆಗಳು ಕಾಡಲಾರಂಭಿಸುತ್ತವೆ. 
ನೆತ್ತಿ ಸುಡುವ ಬಿಸಿಲಿನ ಬೇಗೆಯಲ್ಲಿ ಫ್ಯಾನ್​, ಎಸಿಗಳು ವಿಪರೀತ ಕೆಲಸ ಮಾಡುತ್ತವೆ. ಜನರು ತಾಜಾ ಹಣ್ಣಿನ, ರೆಡಿಮೇಡ್​ ಸಾಫ್ಟ್​ ಡ್ರಿಂಕ್ಸ್​ ಸೇರಿದಂತೆ ಇನ್ನಿತರ ಪಾನೀಯಗಳನ್ನು ಸೇವಿಸುತ್ತಾರೆ. ಕೆಲವರಂತು ಸೆಕೆ ತಡೆಯಲಾಗದೆ, ಕೋಲ್ಡ್​ ನೀರನ್ನು ಹೆಚ್ಚಾಗಿ ಕುಡಿಯುತ್ತಾರೆ. ಅಸಲಿಗೆ, ಇವೆಲ್ಲವೂ ನಾಲಿಗೆ ಮತ್ತು ಗಂಟಲನ್ನು ತಂಪಾಗಿರಿಸುವುದೇ ವಿನಃ ದೇಹದ ಒಳಗಲ್ಲ. ಉಷ್ಣಾಂಶತೆಯನ್ನು ಕಡಿಮೆ ಮಾಡಲು ನೈಸರ್ಗಿಕವಾದ ಈ ಐದು ಆಹಾರಗಳನ್ನು ಸೇವಿಸಿದರೆ, ದೇಹ ಕೂಲ್​ ಆಗಿರುವುದಂತು ಖಚಿತ. ಅಷ್ಟಕ್ಕೂ, ಯಾವುದು ಆ 5 ಆಹಾರಗಳು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಮಜ್ಜಿಗೆ

ಜನರ ಕೈಗೆಟುಕುವ ದರದಲ್ಲಿ ಲಭ್ಯವಿರುವ ನೈಸರ್ಗಿಕ ಕೂಲ್ ಡ್ರಿಂಕ್ ಎಂದರೆ ಅದು ಮಜ್ಜಿಗೆ. ಇದು ಬೇಸಿಗೆಯಲ್ಲಿ ಉತ್ತಮ ಹಾಗೂ ಅತ್ಯಂತ ಪರಿಣಾಮಕಾರಿ. ರಿಫ್ರೆಶ್ ಮಾತ್ರವಲ್ಲದೆ ಜೀರ್ಣಕ್ರಿಯೆಗೂ ಉತ್ತಮವಾಗಿದೆ. ಪ್ರೋಬಯಾಟಿಕ್‌ಗಳಲ್ಲಿ ಹೇರಳವಾಗಿರುವ ಮಜ್ಜಿಗೆ, ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ. ಹುರಿದ ಜೀರಿಗೆ, ಬ್ಲ್ಯಾಕ್​ ಸಾಲ್ಟ್​ ಒಂದು ಚಿಟಿಕೆ ಹಾಕಿದರೆ, ರುಚಿ ಮತ್ತು ತಂಪಾಗಿಸುವ ಗುಣಗಳು ಇನ್ನಷ್ಟು ಹೆಚ್ಚುತ್ತದೆ. ದಿನಕ್ಕೊಂದು ಗ್ಲಾಸ್ ನಿಮ್ಮ ದೇಹವನ್ನು ಕೂಲ್​ ಆಗಿಡುತ್ತದೆ.    

ಸೌತೆಕಾಯಿ

ಜೀರೋ ಫ್ಯಾಟ್​ ಎನ್ನಲಾದ ಸೌತೆಕಾಯಿ ತೂಕ ಇಳಿಕೆಗೆ ಮಾತ್ರವಲ್ಲ, ಬೇಸಿಗೆಯಲ್ಲಿ ದೇಹಕ್ಕೆ ಬೆಸ್ಟ್​ ಆಹಾರ. ಸಂಪೂರ್ಣ ನೀರಿನ ಅಂಶದಿಂದಲೇ ಕೂಡಿರುವ ಸೌತೆಕಾಯಿ, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇವುಗಳ ನೈಸರ್ಗಿಕ ತಂಪಾಗಿಸುವ ಪರಿಣಾಮವು ದೇಹದ ಉಷ್ಣತೆಯನ್ನು ಹತೋಟಿಗೆ ತರುತ್ತದೆ. ಇದರಲ್ಲಿನ ನಾರಿನಾಂಶವು ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ. ವೆಜಿಟೇಬಲ್​ ಸಲಾಡ್‌, ಸ್ಯಾಂಡ್‌ವಿಚ್‌ಗಳಿಗೆ ಸೇರಿಸಿ ಅಥವಾ ಹಾಗೆಯೇ ತಿನ್ನಬಹುದು.

ಕಲ್ಲಂಗಡಿ

ಬೇಸಿಗೆಗಾಲದಲ್ಲಿ ರಸ್ತೆಯ ಪಕ್ಕದಲ್ಲಿ ಸೌತೆಕಾಯಿ ಕಂಡೆರೆ, ಮತ್ತೊಂದು ಕಡೆ ಹೆಚ್ಚಾಗಿ ಕಾಣಿಸುವುದೇ ಕೆಂಪು ಕೋಟೆಯ ಕಲ್ಲಂಗಡಿ ಹಣ್ಣು. 20 ರೂ. ಕಲ್ಲಂಗಡಿ ಪೀಸ್ ಆರೋಗ್ಯಕ್ಕೆ ಎಷ್ಟೋ ಪ್ರಯೋಜನಗಳನ್ನು ಒದಗಿಸುತ್ತದೆ. ಹೆಚ್ಚಿನ ನೀರಿನ ಅಂಶವಿರುವುದರಿಂದ, ಕಳೆದುಹೋದ ದ್ರವಗಳನ್ನು ಪುನಃ ಶೇಖರಣೆ ಮಾಡುತ್ತದೆ. ಮತ್ತು ನಿರ್ಜಲೀಕರಣವನ್ನು ದೂರವಿಡಲು ಸಹಕಾರಿ. ನೆತ್ತಿ ಸುಡುವ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಉತ್ತಮ ಆಹಾರ ಎಂಬುದರಲ್ಲಿ ಅನುಮಾನವೇ ಬೇಡ.

ಪುದೀನ

ಮಸಾಲೆಗೆ ಅಥವಾ ಕೇವಲ ಅಲಂಕಾರಕ್ಕೆ ಮಾತ್ರವಲ್ಲ ಪುದೀನ. ಇದು ನಮ್ಮ ದೇಹಕ್ಕೆ ಅತ್ಯಂತ ಶಕ್ತಿ ಒದಗಿಸುವ ತಂಪಾಗಿಸುವ ಪದಾರ್ಥ. ರಿಫ್ರೆಶಿಂಗ್​ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿರುವ ಪುದೀನ, ದೇಹವನ್ನು ತಂಪಾಗಿಸುವಲ್ಲಿ ಮುಂಚೂಣಿ. ಚಟ್ನಿ ರೂಪದಲ್ಲಿ ಅಥವಾ ನಿಂಬೆ ಜ್ಯೂಸ್​, ಇತರೆ ಪಾನೀಯಗಳೊಂದಿಗೆ ಇದನ್ನು ಸೇವಿಸಬಹುದು.

ಎಳನೀರು

ಸಕ್ಕರೆ ಸೋಡಾ, ಕೆಮಿಕಲ್​ನಿಂದ ಮಾಡಲ್ಪಟ್ಟ ಕೂಲ್​ ಡ್ರಿಂಕ್ಸ್​ ಬಿಟ್ಟು ನೈಸರ್ಗಿಕ ಎಳನೀರನ್ನು ಕುಡಿಯಿರಿ. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್​ನಂತಹ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುವ ಎಳನೀರು, ವಿಪರೀತ ಬೆವರುವ ದೇಹಗಳಿಗೆ ಭಾರೀ ಉತ್ತಮ. ಇದು ಬಾಯಾರಿಕೆಯನ್ನು ನೀಗಿಸುವುದಲ್ಲದೆ, ಆಯಾಸ ಮತ್ತು ಸ್ನಾಯು ಸೆಳೆತವನ್ನು ತಡೆಯಲು ಸಹಕಾರಿ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net