

ಸಾಮಾನ್ಯವಾಗಿ ಒಗ್ಗರಣೆ ಎಂದಮೇಲೆ ಕರಿಬೇವು ಇರಲೇಬೇಕು. ಕಡುಹಸಿರು ಬಣ್ಣದ ಕರಿಬೇವಿನ ಎಲೆಗಳು ತುಂಬ ಸುವಾಸನೆಯಿಂದ ಕೂಡಿರುತ್ತವೆ. ಕರಿಬೇವಿನಲ್ಲಿ ವಿಟಮಿನ್ ಸಿ, ಬಿ, ಎ ಪೋಷಕಾಂಶಗಳು, ಕಾಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ ಇವೆ. ಕರಿಬೇವು ಅಡುಗೆಗೆ ಮಾತ್ರವೇ ಸೀಮಿತವಲ್ಲ, ಸೌಂದರ್ಯವರ್ಧಕವಾಗಿಯೂ ಉಪಯೋಗಿಸಲ್ಪಡುತ್ತದೆ.
ಔಷಧೀಯ ಗುಣಗಳನ್ನು ಹೊಂದಿರುವ ಕರಿಬೇವನ್ನು ಆಹಾರದಲ್ಲಿ ಹೆಚ್ಚು ಹೆಚ್ಚು ಬಳಸುವುದು ತುಂಬ ಸಹಕಾರಿ. ಕರಿಬೇವಿನ ಎಳೆಯ ಎಲೆಯನ್ನು ಜೇನುತುಪ್ಪದೊಂದಿಗೆ ತಿನ್ನುವುದು, ಅಥವಾ ಕರಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಸ್ವಲ್ಪ ಶುಂಠಿ ಸೇರಿಸಿ ಮಜ್ಜಿಗೆಯೊಂದಿಗೆ ಕುಡಿಯುವುದರಿಂದ ಆಮಶಂಕೆಯನ್ನು ನಿವಾರಿಸಬಹುದು.
ಒಣಗಿಸಿದ ಕರಿಬೇವಿನ ಮರದ ತೊಗಟೆಯ ಒಂದು ಚಮಚ ಪುಡಿಯನ್ನು ನೀರಿನಲ್ಲಿ ಬೆರೆಸಿ ಸೇವಿಸಿದರೆ ಅಸಿಡಿಟಿ ಕಡಿಮೆಯಾಗುತ್ತದೆ. ಒಂದೆರಡು ಚಮಚ ಕರಿಬೇವಿನ ಎಲೆಯ ರಸಕ್ಕೆ, ಒಂದು ಚಮಚ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ಸೇವಿಸುವುದರಿಂದ ಅಜೀರ್ಣವನ್ನು ಹೋಗಲಾಡಿಸಬಹುದು. ಪ್ರತಿದಿನ ಆಹಾರದಲ್ಲಿ ಕರಿಬೇವನ್ನು ಉಪಯೋಗಿಸುವುದರಿಂದಲೂ ಅಜೀರ್ಣದ ತೊಂದರೆ ಎದುರಾಗದು. ಅರ್ಧ ಚಮಚ ಕರಿಬೇವಿನ ಎಲೆಯ ಪುಡಿಗೆ ಸಮಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ ಸೇವಿಸುವುದರಿಂದ ರಕ್ತಹೀನತೆಯನ್ನು ತಡೆಯಬಹುದು. ನೀರಿನಲ್ಲಿ ಚೆನ್ನಾಗಿ ತೊಳೆದ 10-12 ಕರಿಬೇವಿನ ಎಲೆಗಳನ್ನು ಅರೆದು, ಸುಮಾರು 100 ಮೀ.ಲೀ. ಎಳನೀರಿನೊಂದಿಗೆ ಆ ಮಿಶ್ರಣವನ್ನು ಸೇರಿಸಿ ಕುಡಿಯುವುದರಿಂದ ಕಾಮಾಲೆ ಕಾಯಿಲೆಯನ್ನು ನಿಯಂತ್ರಿಸಬಹುದು.
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 8-10 ತಾಜಾ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ದೇಹದ ತೂಕ ಕಡಿಮೆ ಮಾಡಬಹುದು. ಕರಿಬೇವಿನ ಎಲೆಯ ಪೇಸ್ಟ್ ಅಥವಾ ಎಣ್ಣೆಯೊಂದಿಗೆ ನಿಂಬೆಹಣ್ಣಿನ ರಸ ಸೇರಿಸಿ ತಲೆಗೂದಲಿನ ಬುಡದಲ್ಲಿ ಹಚ್ಚುವುದರಿಂದ ತಲೆಯಲ್ಲಿ ಹೊಟ್ಟಿನ ಪ್ರಮಾಣ ಕಡಿಮೆಯಾಗುತ್ತದೆ. ಕರಿಬೇವಿನ ಎಲೆಯ ಪೇಸ್ಟ್ಗೆ ಮೊಸರು ಸೇರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಇದರಿಂದ ಕೂದಲು ಕೂಡ ಸೊಂಪಾಗಿ ಬೆಳೆಯುತ್ತದೆ. ಒಣಗಿಸಿದ ಕರಿಬೇವಿನ ಎಲೆಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಹಸಿರು ಬಣ್ಣಕ್ಕೆ ಬರುವವರೆಗೂ ಕುದಿಸಬೇಕು. ನಂತರ ತಣಿಸಿ ವಾರಕೊಮ್ಮೆ ಕೂದಲಿಗೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು.