

ಬೇಸಿಗೆಯ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ದೊರೆಯುವ ಹಣ್ಣು ಕರಬೂಜ. ಕಲ್ಲಂಗಡಿ, ಸೌತೆಕಾಯಿ, ಕುಂಬಳಕಾಯಿ ಪ್ರಭೇದಕ್ಕೆ ಸೇರಿದ ಈ ಹಣ್ಣನ್ನು ಅನೇಕ ದೇಶಗಳಲ್ಲಿ ತರಕಾರಿಯ ಪಟ್ಟಿಗೆ ಸೇರಿಸುತ್ತಾರೆ. ಪರ್ಷಿಯಾ ಮೂಲದ ಈ ಹಣ್ಣು ನಂತರ ಬ್ರೆಜಿಲ್, ಅಮೆರಿಕಗಳನ್ನೂ ತಲುಪಿತು. ಈಗ ಭಾರತದ ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ಈ ಹಣ್ಣುಗಳನ್ನು ಬೆಳೆಯಲಾಗುತ್ತದೆ.
ದೇಹಕ್ಕೆ ತಂಪನ್ನು ನೀಡುವುದರೊಂದಿಗೆ ಹಲವಾರು ಆರೋಗ್ಯಕರ ಗುಣಗಳನ್ನೂ ಕರಬೂಜ ಹಣ್ಣು ಒಳಗೊಂಡಿದೆ. ಈ ಹಣ್ಣಿನಲ್ಲಿ ಬೀಟಾ ಕ್ಯಾರೋಟಿನ್, ಫೋಲಿಕ್ ಆಸಿಡ್, ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳು ಸಾಕಷ್ಟು ಪ್ರಮಾಣದಲ್ಲಿವೆ. ದೇಹದ ಆರೋಗ್ಯವೃದ್ಧಿಗೆ, ಚರ್ಮದ ಹೊಳಪು ಹೆಚ್ಚಿಸಲು, ಕಣ್ಣಿನ ಆರೋಗ್ಯ ವೃದ್ಧಿಸಲು, ಮೂಳೆಗಳು ಬಲಶಾಲಿಯಾಗಲು ಬೇಕಾದ ಆಂಟಿ ಆಕ್ಸಿಡೆಂಟ್ಸ್ ಇದರಲ್ಲಿವೆ.
ಕರಬೂಜ ಹಣ್ಣಿನ ಕ್ರಮಬದ್ಧ ಸೇವನೆಯಿಂದ ಕರುಳು, ಶ್ವಾಸಕೋಶ, ಪ್ಯಾಂಕ್ರಿಯಾಸ್, ಪ್ರೊಸ್ಟೇಟ್, ಸ್ತನ ಕ್ಯಾನ್ಸರ್ ಮುಂತಾದ ಸಮಸ್ಯೆಗಳಿಂದ ದೂರವಿರಬಹುದು. ಅಜೀರ್ಣದಿಂದ ಬಳಲುವವರಿಗೆ ಕರಬೂಜ ಔಷಧದಂತೆ ಕೆಲಸ ಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾದ ಅಸಿಡಿಟಿಯನ್ನು ದೂರ ಮಾಡಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ನಾರಿನ ಅಂಶದ ಕೊರತೆಯಾದಾಗ ಮಲಬದ್ಧತೆ ಕಾಡುತ್ತದೆ. ಆದರೆ ಕರಬೂಜದಲ್ಲಿರುವ ನಾರಿನ ಅಂಶಗಳು ನೈಸರ್ಗಿಕ ವಿರೇಚಕಗಳಾಗಿ ಕೆಲಸ ಮಾಡಿ ಮಲಬದ್ಧತೆಯನ್ನು ದೂರ ಮಾಡುತ್ತವೆ.
ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆಹುಣ್ಣು, ಮೂತ್ರನಾಳದ ಸೋಂಕು, ಕಿಡ್ನಿ ಕಲ್ಲುಗಳು ರೂಪುಗೊಳ್ಳುವುದನ್ನು ಕರಬೂಜ ಆರಂಭದಲ್ಲಿಯೇ ತಡೆಗಟ್ಟುತ್ತದೆ. ಬೊಜ್ಜು ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಹೇಳಿ ಮಾಡಿಸಿದಂಥ ಆಹಾರ ಕರಬೂಜ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಇದು, ದೇಹವನ್ನು ನಿರ್ಜಲೀಕರಣವಾಗದಂತೆಯೂ ನೋಡಿಕೊಳ್ಳುತ್ತದೆ. ಮೂತ್ರವರ್ಧಕವಾಗಿ ಕೆಲಸ ಮಾಡುವ ಇದು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
ಪೊಟ್ಯಾಶಿಯಂ ಖನಿಜಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಕರಬೂಜವು ದೇಹದಲ್ಲಿ ರಕ್ತಸಂಚಾರ ಸುಗಮವಾಗಿ ನಡೆಯುವಂತೆ ಮಾಡಿ ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ. ಅಸಮರ್ಪಕ ರಕ್ತಸಂಚಾರದಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಪಾರ್ಶ್ವವಾಯು, ಹೃದಯಸಂಬಂಧಿ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುತ್ತದೆ.