

ಆಹಾರದ ಆರು ರಸಗಳ ಪೈಕಿ ಸಿಹಿಯೆಂದರೆ ಹಲವರಿಗೆ ಬಹಳ ಪ್ರಿಯವಾಗಿರುತ್ತದೆ. ಹುಳಿಯನ್ನು, ಖಾರವನ್ನೂ ಇಷ್ಟಪಡುವವರು ಸಾಕಷ್ಟು ಜನರಿರುತ್ತಾರೆ. ಕಹಿ ಹಾಗೂ ಒಗರು ರಸವೆಂದರೆ ಹೆಚ್ಚಿನವರಿಗೂ ಅಷ್ಟಕ್ಕಷ್ಟೇ. ಈ ಎಲ್ಲಾ ರಸಗಳನ್ನೂ ಇನ್ನಷ್ಟು ರುಚಿಕರವಾಗಿಸುವ ಶಕ್ತಿ ಉಪ್ಪಿಗಿದೆ. ಆಹಾರ ವ್ಯಂಜನ ಅದ್ಯಾವುದೇ ಇರಲಿ, ರುಚಿಭರಿತ ಆಗಬೇಕಿದ್ದರೆ ಉಪ್ಪು ಬೇಕೇಬೇಕು. ಉಪ್ಪಿನ ಗುಣಮಹಿಮೆಯನ್ನು ಸುಲಭದಲ್ಲಿ ತಿಳಿದುಕೊಳ್ಳಬಹುದು. ಉಪ್ಪನ್ನು ಸ್ವಲ್ಪವೂ ಬಳಸದೆ ಸಿಹಿಯಾದ ಪಾಯಸ ಮಾಡಿದೆಯೆಂದಿಟ್ಟುಕೊಳ್ಳಿ. ಅದರ ರುಚಿಯನ್ನೊಮ್ಮೆ ನೋಡಿ. ಬಳಿಕ ಅಲ್ಪಪ್ರಮಾಣದಲ್ಲಿ ಉಪ್ಪು ಸೇರಿಸಿ ರುಚಿಯನ್ನು ಮತ್ತೊಮ್ಮೆ ನೋಡಿದರೆ ಅಚ್ಚರಿ ಕಾದಿರುತ್ತದೆ.
ಆಹಾರದ ರುಚಿಯನ್ನು ಹೆಚ್ಚಿಸುವುದು, ಹಸಿವೆ ಹೆಚ್ಚಿಸುವುದು, ಕಣ್ಣುಗಳಿಗೆ ಹಿತಕಾರಿ, ಎದೆ ಹಾಗೂ ಹೊಟ್ಟೆಯಲ್ಲಿ ಉರಿ ಉಂಟು ಮಾಡುವುದಿಲ್ಲ. ಶೀತಲವಾಗಿದ್ದು ವೀರ್ಯಾಣು ವರ್ಧಕವಾಗಿದೆ. ವಾತ, ಪಿತ್ತ, ಕಫ ಮೂರೂ ದೋಷಗಳನ್ನು ಕಡಿಮೆಮಾಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೃದಯಕ್ಕೆ ಹಿತಕರವಾಗಿದ್ದು ಗಾಯ ಗುಣಪಡಿಸಲು ಸಹಾಯಕ ವಾಗಿದೆ. ಮಲಬದ್ಧತೆಯನ್ನು ಸರಿಗೊಳಿಸುವ ಗುಣಗಳನ್ನು ಹೊಂದಿದೆ. ಇದರಲ್ಲಿ ಕೆಂಪು ಹಾಗೂ ಬಿಳಿ ಎಂಬೆರಡು ಪ್ರಭೇದಗಳಿವೆ. ಸೌವರ್ಚಲ ಲವಣವು ಸುಲಭವಾಗಿ ಜೀರ್ಣಗೊಳ್ಳುವುದಲ್ಲದೆ ಖಾರ ರಸವನ್ನೂ ಜಿಡ್ಡು, ಸೂಕ್ಷ್ಮ, ಉಷ್ಣಗುಣವನ್ನೂ ಹೊಂದಿದೆ. ಬಾಯಿರುಚಿ ಉಂಟುಮಾಡುವುದು, ಹಸಿವು ಹೆಚ್ಚಿಸುವುದು, ನೋವು, ಮಲಬದ್ಧತೆ ಕಡಿಮೆಮಾಡುವುದು. ಹೊಟ್ಟೆ ಉಬ್ಬರ ನಿವಾರಿಸಿ ತೇಗು ಶುದ್ಧಗೊಳಿಸುವುದಲ್ಲದೆ ಹೃದಯಕ್ಕೆ ಹಿತಕರ ವಾಗಿದೆ. ವಾತ ಕಡಿಮೆಗೊಳಿಸುವುದು, ಇದನ್ನಿಂದು ಕಾಲಾ ನಮಕ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಸಗಂಧ, ನಿರ್ಗಂಧ ಎಂಬ 2 ವಿಧಗಳಿವೆ. ವಿಡ ಲವಣವು ಕೃತಕವಾಗಿದ್ದು ತೀಕ್ಷ್ಣ, ಉಷ್ಣ ಗುಣ ಹೊಂದಿದ್ದು ಹಸಿವನ್ನು ಹೆಚ್ಚಿಸಿ ಮಲಪ್ರವೃತ್ತಿ ಸುಲಭವಾಗಿಸುವುದು. ಕಫವನ್ನು ಶಮನಗೊಳಿಸಿ ವಾಯುವನ್ನು ಹೊರಹಾಕುತ್ತದೆ. ಹೊಟ್ಟೆನೋವು, ಹೃದ್ರೋಗಗಳಲ್ಲಿ ಉಪಯುಕ್ತವಾಗಿರುವುದು. ಸಾಮುದ್ರ ಲವಣ ಜೀರ್ಣದ ಕೊನೆಯಲ್ಲಿ ಸಿಹಿರುಚಿಯನ್ನು ಪಡೆಯುತ್ತದೆ. ಇದನ್ನಿಂದು ಹುಡಿಯುಪ್ಪು ಎನ್ನುತ್ತೇವೆ. ಹಸಿವನ್ನು ಅತೀವವಾಗಿ ಹೆಚ್ಚಿಸಿ ಅಜೀರ್ಣ ಸರಿಪಡಿಸುವುದು. ಹಾಗಿದ್ದರೂ ಪಚನಕ್ಕೆ ಜಡವಾಗಿರುವುದು. ದೇಹದಲ್ಲಿ ವಾತ ಶಮನಗೊಳಿಸಿ ಕಫವನ್ನು ಹೆಚ್ಚಿಸುವುದು, ಅತ್ಯುಷ್ಣ ಇಲ್ಲದಿರುವುದರಿಂದ ಪಿತ್ತವನ್ನು ಅತಿಯಾಗಿ ಹೆಚ್ಚಿಸುವುದಿಲ್ಲ. ಮಲಬದ್ಧತೆ ನಿವಾರಕವಾಗಿದೆ. ಔದ್ಭಿದ ಲವಣವು ನಿತ್ಯ ಸೇವನೆಗೆ ಹಿತಕರವಲ್ಲ ಎಂದಿದೆ ಆಯುರ್ವೆದ. ಜೀರ್ಣಕ್ಕೆ ಸುಲಭವಾಗಿದ್ದು ತೀಕ್ಷ್ಣ, ಸೂಕ್ಷ್ಮ, ಉಷ್ಣ ಗುಣ ಹೊಂದಿದೆ. ಪ್ರಸ್ತುತ ಸಾಂಬಾರ್ ನಮಕ್ ಎಂಬ ಹೆಸರಿರುವ ರೋಮಕ ಲವಣವನ್ನು ಔದ್ಭಿದ ಲವಣಕ್ಕೆ ಪರ್ಯಾಯವಾಗಿ ಸರಿಸುಮಾರು ಅದೇ ಗುಣವಿರುವುದರಿಂದ ಬಳಸುವುದಿದೆ.