ಮನೋಲ್ಲಾಸ: ಸದೃಢ ದೇಹ, ಮನಸು ನಮ್ಮದಾಗಲಿ

edit 3
Published on

| ರೇಖಾ ಗಜಾನನ ಭಟ್

ರಾಜನ ಆಸ್ಥಾನಕ್ಕೆ ಯುವ ಭಿಕ್ಷುಕನೊಬ್ಬ ಬಂದು- ‘ನಾನೊಬ್ಬ ನಿರ್ಗತಿಕ. ದೇವರು ನನಗೆ ಏನನ್ನೂ ಕೊಟ್ಟಿಲ್ಲ. ತಾವು ದಯಮಾಡಿ ನನ್ನ ಮೇಲೆ ಕರುಣೆ ತೋರಿ...’ ಎಂದು ಬೇಡಿಕೊಂಡ. ಆತನ ಮಾತು ಕೇಳಿದ ರಾಜ, ‘ನಿನಗೆ ಎರಡು ಚಿನ್ನದ ನಾಣ್ಯ ನೀಡುತ್ತೇನೆ. ಬದಲಾಗಿ ನಿನ್ನ ಎರಡು ಕಾಲುಗಳನ್ನು ನನಗೆ ನೀಡು’ ಎಂದ. ‘ಎರಡು ಕಾಲುಗಳನ್ನು ನಿಮಗೆ ನೀಡಿದರೆ, ನಾನು ಹೇಗೆ ನಡೆಯಲಿ?’ ಎಂದು ಕೇಳಿದ. ರಾಜನು, ‘ಹಾಗಿದ್ದರೆ ಕಾಲುಗಳು ಬೇಡ. ಐದು ಚಿನ್ನದ ನಾಣ್ಯ ನೀಡುತ್ತೇನೆ. ಎರಡು ಕೈಗಳನ್ನು ನೀಡುವೆಯಾ? ಎಂದ. ಭಿಕ್ಷುಕ ಒಪ್ಪಲಿಲ್ಲ. ರಾಜ ಮುಂದುವರಿದು, ‘ಸಾವಿರ ಚಿನ್ನದ ನಾಣ್ಯಗಳನ್ನು ನೀಡುವೆ. ಕಣ್ಣುಗಳನ್ನು ನೀಡುವೆಯಾ?’ ಎಂದು ಕೇಳಿದ. ಕೋಪಗೊಂಡ ಭಿಕ್ಷುಕ, ‘ಇಡೀ ರಾಜ್ಯದ ಸಂಪತ್ತನ್ನೇ ಕೊಟ್ಟರೂ ನನ್ನ ದೇಹದ ಯಾವುದೇ ಭಾಗವನ್ನು ನಿಮಗೆ ನೀಡಲಾರೆ’ ಎಂದು ಜೋರಾಗಿ ಕೂಗಿದ.

ಆಗ ರಾಜನು ನಗುತ್ತ- ‘ನೋಡು, ಬೆಲೆ ಕಟ್ಟಲಾರದ ಅಪೂರ್ವ, ಸದೃಢ ದೇಹವನ್ನು ದೇವರು ನಿನಗೆ ಕೊಟ್ಟಿರುವಾಗ, ನೀನು ಹೇಗೆ ಬಡವನಾಗಲು ಸಾಧ್ಯ? ದೇವರು ಕೊಟ್ಟ ದೇಹವನ್ನು ದುಡಿಸಿಕೊಂಡು, ಉತ್ತಮ ಕೆಲಸ ಮಾಡಿ ಹಣ ಸಂಪಾದಿಸು’ ಎಂದು ಹೇಳಿದ. ಜೊತೆಗೆ ಅವನಿಗೆ ಒಂದು ಕೆಲಸ ನೀಡಲು ಮಂತ್ರಿಗಳಿಗೆ ಸೂಚಿಸಿದ. ಆ ಯುವಕ ಅಂದಿನಿಂದ ದುಡಿದು ಉಣ್ಣಲಾರಂಭಿಸಿದ.

ರಾಜ ಹೇಳಿದ ಮಾತು ನಿಜ ಅಲ್ಲವೇ? ನಮ್ಮ ದೇಹ ದೇವರು ನಮಗೆ ನೀಡಿದ ಅತ್ಯಮೂಲ್ಯ ಕೊಡುಗೆ. ಆರೋಗ್ಯಪೂರ್ಣ ದೇಹಕ್ಕಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ. ಅಲ್ಲದೆ ಕೊನೆತನಕ ಜೊತೆಯಾಗಿ ಬರುವುದು ನಮ್ಮ ದೇಹ ಮಾತ್ರ. ನಮ್ಮ ಎಲ್ಲ ಸಂಬಂಧಗಳು ದೇಹದ ಜೊತೆಗೆ ಇರುವಂಥವು. ಮತ್ತು ದೇಹದ ಜೊತೆಗೆ ಹೊರಟು ಹೋಗುವಂತವು. ನಿಜವಾದ ಅರ್ಥದಲ್ಲಿ ಜೀವನಸಂಗಾತಿ ಎಂದರೆ ಅದು ನಮ್ಮ ದೇಹ ಮಾತ್ರ. ದೇಹವೇ ಅಮೂಲ್ಯ ಆಸ್ತಿ. ಸದೃಢ ದೇಹ ಹಾಗೂ ಮನಸ್ಸನ್ನು ಹೊಂದಿರುವವರಿಗೆ ಏನು ಬೇಕಾದರೂ ಸಾಧಿಸುವ ಛಲವಿರುತ್ತದೆ. ಆಗ ಯಶಸ್ಸು ಅವರ ಜೊತೆಗಾರನಾಗಿರುತ್ತದೆ. ಆದ್ದರಿಂದ ಆರೋಗ್ಯ ಭಾಗ್ಯವೊಂದಿದ್ದರೆ ನಾವು ಅತ್ಯಂತ ಶ್ರೀಮಂತರು ಎಂಬುದನ್ನು ನೆನಪಿಡೋಣ. ರೋಗರುಜಿನ, ಅಪಘಾತಗಳಿಗೀಡಾಗದಂತೆ ದೇಹವನ್ನು ರಕ್ಷಿಸಿಕೊಂಡು, ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಂಡು ಸ್ವಸ್ಥ ಜೀವನ ನಡೆಸೋಣ. ಆರೋಗ್ಯವನ್ನು ನಿರ್ಲಕ್ಷಿಸಿ ಹಣ ಗಳಿಕೆಯ ಹಿಂದೆ ಓಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅಲ್ಲದೆ, ಆರೋಗ್ಯ ತೀರಾ ಹದಗೆಟ್ಟರೆ ಮರಳಿ ಪಡೆಯಲು ಸಾಧ್ಯವಿಲ್ಲ. ಸ್ವಸ್ಥ ಶರೀರ ಸ್ವಸ್ಥ ಮನಸ್ಸಿಗೂ ಕಾರಣವಾಗುತ್ತದೆ. ಅದರಿಂದ ವ್ಯಕ್ತಿತ್ವವು ಅರಳುತ್ತದೆ ಎಂಬುದನ್ನು ಅರಿಯೋಣ.

ಸ್ವಸ್ಥ ಕಾಯದಲ್ಲಿ ಸ್ವಸ್ಥ ಮನವಿರಲು

ಇದಕಿಂತ ಹಿರಿದೇನು ಬೇಕು ನಮಗೆ?

ಎಲ್ಲ ಸಿರಿಗಳಿಗಿಂತ ದೇಹದೈಸಿರಿ ಮಿಗಿಲು

ಆರೋಗ್ಯ ಮೊದಲಿರಲಿ ಉಳಿದದ್ದು ಕಡೆಗೆ.

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net