

ನವದೆಹಲಿ: ಕರೊನಾ ಪರೀಕ್ಷೆಗಾಗಿ ‘ಫೆಲುಡಾ ಪೇಪರ್ ಸ್ಟ್ರಿಪ್’ ಪರೀಕ್ಷೆಯನ್ನು ಮುಂದಿನ ಕೆಲವು ವಾರಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ಫೆಲುಡಾ ಪೇಪರ್ ಸ್ಟ್ರಿಪ್ ಪರೀಕ್ಷೆಯು ಶೇಕಡ 98 ನಿಖರತೆಯನ್ನು ತೋರಿಸಿದೆ. ವಿವಿಧ ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸಿದ ಫೆಲುಡಾ ಪರೀಕ್ಷೆಯಲ್ಲಿ ಸುಮಾರು 2 ಸಾವಿರ ಮಂದಿ ಭಾಗಿಯಾಗಿದ್ದು, ಶೇ. 98 ಫಲಿತಾಂಶ ನಿಖರವಾಗಿದೆ. ಇದು ಅತ್ಯಂತ ವೇಗ ಹಾಗೂ ಕಡಿಮೆ ಬೆಲೆಯ ಪರೀಕ್ಷೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ. ಸಿಎಸ್ಐಆರ್- ಐಜಿಐಬಿ ಅಭಿವೃದ್ಧಿಪಡಿಸಿದ್ದು, ವಾಣಿಜ್ಯ ಬಳಕೆಗೆ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮೋದನೆ ನೀಡಿದೆ.
ದಸರಾ, ದೀಪಾವಳಿ ಸೇರಿ ಸಾಲು ಸಾಲು ಹಬ್ಬಗಳು ಮುಂದಿರುವುದರಿಂದ ಹಬ್ಬದ ಆಚರಣೆ ಜತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ಹರ್ಷವರ್ಧನ್ ಸಲಹೆ ನೀಡಿದ್ದಾರೆ.
ಮರಣ ಇಳಿಕೆ: ಕರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆ ಕೊಂಚ ಇಳಿಕೆಯಾಗಿದ್ದು, ಸತತ 8ನೇ ದಿನ 1 ಸಾವಿರಕ್ಕಿಂತ ಕಡಿಮೆ ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 1.08 ಲಕ್ಷಕ್ಕೇರಿದೆ. ಇನ್ನೂ 8.66 ಲಕ್ಷ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರ 2 ಲಕ್ಷ ಮತ್ತು ಕರ್ನಾಟಕ 1 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿವೆ.
ಈಶಾನ್ಯ ದೆಹಲಿಯಲ್ಲಿ ಕಳೆದ ಆರು ತಿಂಗಳಿನಿಂದ ಕರೊನಾ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ಹಾಗೂ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸುವ ಕೆಲಸ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕರೊಬ್ಬರು ಕರೊನಾ ವೈರಸ್ನಿಂದಲೇ ಸಾವನ್ನಪ್ಪಿದ್ದಾರೆ. 48 ವರ್ಷದ ಆರಿಫ್ ಖಾನ್ ಉಚಿತ ತುರ್ತು ಸೇವೆಗಳನ್ನು ಒದಗಿಸುವ ಶಹೀದ್ ಭಗತ್ ಸಿಂಗ್ ಸೇವಾ ದಳದಲ್ಲಿ ಕೆಲಸ ಮಾಡುತ್ತಿದ್ದರು. ದೆಹಲಿಯ ಸೀಲಾಂಪುರದ ತನ್ನ ಮನೆಯಿಂದ 28 ಕಿ.ಮೀ ದೂರವಿರುವ ಆಂಬ್ಯುಲೆನ್ಸ್ ರ್ಪಾಂಗ್ ಸ್ಥಳದಲ್ಲೇ ವಾಸಿಸುತ್ತಾ, ಹೆಂಡತಿ, ಮಕ್ಕಳೊಂದಿಗೆ ಕೇವಲ ಫೋನ್ ಮೂಲಕ ಸಂಪರ್ಕ ಹೊಂದಿದ್ದರು. ಕರೊನಾದಿಂದ ಮೃತಪಟ್ಟ ಸುಮಾರು 200 ಮಂದಿಯ ಶವಗಳನ್ನು ಅವರೇ ಅಂತ್ಯಸಂಸ್ಕಾರ ಮಾಡಿದ್ದರು.