

ಮನುಷ್ಯನನ್ನು ತೀವ್ರವಾಗಿ ಯಮಯಾತನೆ ನೀಡಿ ಕಾಡುವ ಅಷ್ಟ ಮಹಾಗದ ಅರ್ಥಾತ್ ಎಂಟು ಮಹಾರೋಗಗಳಲ್ಲಿ ಒಂದಾದ ಮೂತ್ರದ ಕಲ್ಲು ಸಮಸ್ಯೆ ಅನೇಕ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಹೊಕ್ಕುಳಭಾಗ, ಕೆಳಹೊಟ್ಟೆ, ಮೂತ್ರನಾಳ, ಮೂತ್ರಾಶಯ, ಮೂತ್ರಪಿಂಡಗಳಲ್ಲಿ ತಡೆಯಲು ಅಸಾಧ್ಯವೆನಿಸುವ ನೋವು, ನೋವಿನೊಂದಿಗೆ ಮೂತ್ರ ವಿಸರ್ಜನೆ, ಕೆಲವೊಮ್ಮೆ ವಿಭಜಿತ ಮೂತ್ರಧಾರೆ, ಹನಿಹನಿಯಾಗಿ ಮೂತ್ರ ಪ್ರವಹಿಸುವುದು, ಆಗಾಗ ಮೂತ್ರ ವಿಸರ್ಜಿಸಬೇಕಾಗುವುದು, ರಕ್ತದಿಂದ ಕೂಡಿದ ಮೂತ್ರ ಪ್ರವೃತ್ತಿ, ಓಡುವುದು, ಹಾರುವುದು, ಈಜುವುದು, ಕುದುರೆ ಸವಾರಿ, ಆನೆ ಸವಾರಿ, ಬಿಸಿಲಿನಲ್ಲಿ ಸಂಚರಿಸುವುದು,
ನಡಿಗೆಯಲ್ಲಿ ಅತಿದೂರ ಕ್ರಮಿಸುವುದು, ವಾಹನದಲ್ಲಿ ದೂರ ಪ್ರಯಾಣ ಇಂತಹ ಎಲ್ಲ ಚಟುವಟಿಕೆಗಳಿಂದ ನೋವು ಹೆಚ್ಚಾಗುವುದು, ಕದಂಬ ಹೂವಿನಾಕೃತಿಯ ಕಲ್ಲುಗಳು ಮೂತ್ರದಲ್ಲಿ ಹೊರಹೋಗುವುದು, ಮೂತ್ರದ ಹರಳುಗಳು ಹಾದುಹೋಗುವಾಗ ವಿಪರೀತವಾದ ನೋವು, ಸೋಂಕು ಇದ್ದರೆ ಚಳಿ ನಡುಕದೊಂದಿಗೆ ಜ್ವರ- ಹೀಗೆ ಮೂತ್ರಕಲ್ಲು ಅನೇಕ ಲಕ್ಷಣಗಳೊಂದಿಗೆ ಸಾಮಾನ್ಯವಾಗಿ ಬಾಧಿಸುತ್ತದೆ. ನಾಲ್ಕು ವಿಧವಾದ ಮೂತ್ರಕಲ್ಲುಗಳಿಗೆ ಪ್ರತ್ಯೇಕವಾದ ಲಕ್ಷಣಗಳನ್ನು ಆಯುರ್ವೆದ ಹೇಳಿದೆ. ವಾತಜ ಅಶ್ಮರೀ: ನೋವು ತೀವ್ರವಾಗಿರುತ್ತದೆ. ಹಲ್ಲು ಕಚ್ಚುವಂತೆ, ನಡುಕವನ್ನು ಉಂಟುಮಾಡಿ, ಶಿಶ್ನ, ಮೂತ್ರಾಂಗ, ಹೊಕ್ಕುಳು, ಕೆಳಹೊಟ್ಟೆಯನ್ನು ಅಮುಕಿ ಹಿಡಿಯುವಂತೆ ಮಾಡುತ್ತದೆ.
ಗಾಳಿಯೊಂದಿಗೆ ಮಲ ಪ್ರವೃತ್ತಿ, ಹನಿಹನಿಯಾಗಿ ಆಗಾಗ ಮೂತ್ರಕಲ್ಲು ಮುಳ್ಳುಗಳಂತಹ ಮೊನಚು ರೂಪದೊಂದಿಗೆ ಕೂಡಿದ್ದು ಕಪ್ಪು, ಕೆಂಪು ಬಣ್ಣ ಮಿಶ್ರಿತವಾಗಿರುತ್ತದೆ. ಪಿತ್ತಜ ಅಶ್ಮರೀ: ಮೂತ್ರಾಶಯದಲ್ಲಿ ಉರಿ, ಮೂತ್ರಮಾಡುವಾಗ ಉರಿ ಉಂಟಾಗುವುದು, ಸಾಮಾನ್ಯವಾಗಿ ಸೋಂಕಿನಿಂದ ಕೂಡಿದ್ದು ಜ್ವರ, ಚಳಿ, ನಡುಕ ಕಾಣಿಸಿಕೊಳ್ಳುವುದು. ಭಲ್ಲಾತಕ/ಕೇರು ಬೀಜದಂತೆ ಗಟ್ಟಿಯಾಗಿರುವ ಕಲ್ಲು, ಹಳದಿ, ರಕ್ತ ಅಥವಾ ಕಪ್ಪು ಬಣ್ಣಗಳಿಂದ ಕೂಡಿರುತ್ತವೆ. ಕಫಜ ಅಶ್ಮರೀ: ಮೂತ್ರಾಶಯದಲ್ಲಿ ನೋವು, ಶೀತಲ ಮೂತ್ರ ವಿಸರ್ಜನೆ, ದೇಹವು ಭಾರವಾದಂತಹ ಅನುಭವ ನೀಡುವುದು. ಮೂತ್ರದಕಲ್ಲು ಗಾತ್ರದಲ್ಲಿ ದೊಡ್ಡದಾಗಿದ್ದು ಜೇನುತುಪ್ಪದಂತೆ ಅಥವಾ ಬಿಳಿ ಬಣ್ಣದಿಂದ ಕೂಡಿರುತ್ತದೆ.
ಗಟ್ಟಿಯಾಗಿದ್ದು ನುಣುಪಾದ ಹೊರಮೈ ಹೊಂದಿರುತ್ತದೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವುದಿದ್ದು ಚಿಕಿತ್ಸೆಯಿಂದ ಸುಲಭವಾಗಿ ಹೊರತೆಗೆಯಬಹುದು. ಶರ್ಕರಾ ಅಶ್ಮರೀ: ದೊಡ್ಡದಾಗಿರುವ ಮೂತ್ರದಕಲ್ಲು ತುಂಡಾಗಿ ಸಣ್ಣ ಹರಳುಗಳ ರೂಪ ಪಡೆದರೆ ಅದನ್ನು ಶರ್ಕರಾ ಅಶ್ಮರೀ ಎನ್ನಲಾಗುತ್ತದೆ. ವಾತದ ಅನುಲೋಮ ಗತಿಯ ಪ್ರಕ್ರಿಯೆಯಿಂದ ಹರಳು ಕಲ್ಲುಗಳು ಮೂತ್ರದ ಮೂಲಕ ಹೊರ ಹೋಗುತ್ತವೆ. ವಿಭಿನ್ನ ಕಾರಣಗಳಿಂದಾಗಿ ವಾತವು ಪ್ರತಿಲೋಮ ಗತಿಯನ್ನು ಪಡೆದುಕೊಂಡರೆ ಆಗ ಮೂತ್ರನಾಳದಲ್ಲಿ ತಡೆ ಉಂಟಾಗುತ್ತದೆ. ಸುಸ್ತು, ಶರೀರ ದೌರ್ಬಲ್ಯ, ಮೈಕೈನೋವು, ಹೊಟ್ಟೆನೋವು, ಬಾಯಿರುಚಿ ಇಲ್ಲದಿರುವುದು, ರಕ್ತ ಹೀನತೆ, ಮೂತ್ರನಾಳ ಸೋಂಕು, ಅತಿಬಾಯಾರಿಕೆ, ಎದೆನೋವು, ವಾಂತಿ ಎಲ್ಲವೂ ಕಾಣಿಸಿಕೊಳ್ಳುತ್ತದೆ.
ಶುಕ್ರಾಶ್ಮರೀ: ಪುರುಷರಲ್ಲಿ ವೀರ್ಯವು ಹೊರಹೋಗುವ ವೇಗವಿದ್ದಾಗ ಅದನ್ನು ವ್ಯಕ್ತಿಯು ಬಲವಂತವಾಗಿ ತಡೆಹಿಡಿದರೆ ಅಥವಾ ಕುಪಿತ ವಾತದ ಕಾರಣದಿಂದಾಗಿ ವೀರ್ಯದ ಚಲನೆಗೆ ತಡೆಯುಂಟಾದರೆ ಆಗ ವೀರ್ಯನಾಳದಲ್ಲಿ ಶುಕ್ರವು ಘನೀಕರಿಸಿ ಅಶ್ಮರೀ ಉಂಟಾಗುತ್ತದೆ. ಮೂತ್ರಾಶಯದಲ್ಲಿ ನೋವು, ಕಷ್ಟಕರವಾಗಿ ವೇದನೆಯೊಂದಿಗೆ ಮೂತ್ರ ವಿಸರ್ಜನೆ, ವೃಷಣಗಳಲ್ಲಿ ಊತ, ಶಿಶ್ನ ಹಾಗೂ ವೃಷಣಗಳಲ್ಲಿ ನೋವು, ವೀರ್ಯದಿಂದ ಕೂಡಿದ ಮೂತ್ರ ಪ್ರವೃತ್ತಿ, ಶಿಶ್ನದ ಸೆಟೆಯುವಿಕೆ, ನೋವಿದ್ದಾಗ ಒತ್ತಿದರೆ ಗಾಯವಾಗಿ ರಕ್ತದಿಂದ ಕೂಡಿದ ಮೂತ್ರ ಪ್ರವಾಹ ಉಂಟಾಗುತ್ತದೆ. ಹೊರಗಿನಿಂದ ಒತ್ತಿದಾಗಲೂ ಈ ಶುಕ್ರಾಶ್ಮರೀ ಕರಗಿ ಹೋಗುವ ಸಾಧ್ಯತೆಯಿರುತ್ತದೆ.
ಮೂತ್ರಪಿಂಡ ಕಲ್ಲುಗಳ ನಿರ್ವಹಣೆಗೆ ಅನೇಕ ಪಥ್ಯಾಹಾರಗಳು ಅನುಕೂಲ ಮಾಡುತ್ತವೆ. ಹುರುಳಿ, ಹೆಸರುಕಾಳು, ಬೇಳೆ, ಹಳೆಯ ಅಕ್ಕಿ, ಗೋಧಿ, ಜವೆಗೋಧಿ, ಬಾರ್ಲಿ, ಮುಳ್ಳು ಹರಿವೆಸೊಪ್ಪು, ಚೆನ್ನಾಗಿ ಬಲಿತಿರುವ ಹಳೆಯ ಬೂದಕುಂಬಳಕಾಯಿ, ಸುಟ್ಟಬಾರ್ಲಿ, ಕಲ್ಲಂಗಡಿಹಣ್ಣು, ಬಾಳೆಹಣ್ಣು, ನಿಂಬೆಹಣ್ಣು, ಕ್ಯಾರೆಟ್, ಅನಾನಸು, ಎಳೆನೀರು, ಹಳೆಯಬೆಲ್ಲ, ಕಬ್ಬಿನ ಹಾಲು, ಶುಂಠಿ, ಯಥೇಚ್ಛ ನೀರು ಸೇವನೆ ಅನುಕೂಲಕಾರಿ. ಹೊಟ್ಟೆಯಲ್ಲಿ ಉರಿ ಉಂಟುಮಾಡುವ ಆಹಾರ ವಸ್ತುಗಳು, ಹುಳಿ, ಒಗರು ರುಚಿಯ ಆಹಾರ ಪದಾರ್ಥಗಳು, ಜೀರ್ಣಕ್ಕೆ ಕಷ್ಟಕರವಾದ ಗುರು ಆಹಾರ ವ್ಯಂಜನಗಳು, ಒಣಗುಣ ಪಡೆದುಕೊಂಡ ಜಂಕ್ ಆಹಾರ, ಟೊಮ್ಯಾಟೋ, ಬದನೆಕಾಯಿ, ಹೂಕೋಸು, ಬೀನ್ಸ್, ಗೋಡಂಬಿ, ದ್ರಾಕ್ಷಿ, ಹಾಲು, ಹಾಲಿನ ಉತ್ಪನ್ನಗಳು, ಆಯುರ್ವೆದ ವಿವರಿಸಿದ ಹದಿನೆಂಟು ವಿಧವಾದ ವಿರುದ್ಧಾಹಾರಗಳು, ಮೂತ್ರಪ್ರವಾಹವನ್ನು ಕಡಿಮೆಗೊಳಿಸುವ ಜಂಬುನೇರಳೆ, ಬೇಲದಹಣ್ಣು, ಖರ್ಜೂರ, ಕಮಲದ ದಂಟು, ಕಮಲದ ಬೇರು, ಪಿಷ್ಟಾನ್ನ, ಪಾಲಕ್, ಹಸಿರು ಸೊಪ್ಪಿನ ತರಕಾರಿಗಳು, ಸೋಯಾಬೀನ್, ಕರಿಮೆಣಸು, ಎಳ್ಳು, ಬೀಟ್ರೂಟ್, ಬೆಂಡೆಕಾಯಿ, ಸಿಹಿಗೆಣಸು, ಚಹಾ ಸೇವನೆ, ಚಾಕೊಲೇಟ್, ಮೀನು, ಮಾಂಸಾಹಾರ, ತರಕಾರಿಯ ಬೀಜಗಳು, ಉಪ್ಪು, ಸಕ್ಕರೆ, ವಿಟಮಿನ್ ಸಿ, ವಿಟಮಿನ್ ಡಿ, ಕ್ಯಾಲ್ಸಿಯಂ, ಪ್ರೊಟೀನ್ ಅಂಶಗಳುಳ್ಳ ಪೂರಕ ಆಹಾರಗಳು- ಇವುಗಳನ್ನೆಲ್ಲಾ ಕಡಿಮೆ ಸೇವಿಸಿದಷ್ಟು ಮೂತ್ರಕಲ್ಲುಗಳಿಗೆ ಬೇಗನೆ ವಿದಾಯ ಹೇಳಬಹುದು. ಆಯುರ್ವೆದದಲ್ಲಿ ಮೂತ್ರಕಲ್ಲಿನಿಂದ ಶಾಶ್ವತ ಮುಕ್ತಿಗೆ ಹೇಳಿರುವ ಚಿಕಿತ್ಸೆಗಳು ಕುತೂಹಲಕಾರಿಯಾಗಿದ್ದು ತಿಳಿದುಕೊಳ್ಳಬೇಕಿದೆ.