ಹೊಟ್ಟೆ, ಸೊಂಟದ ಬೊಜ್ಜು ಕರಗಿಸಬೇಕೆ? ಈ ಆಸನ ಮಾಡಿ!

1220451
Published on

ಏಕ ಎಂದರೆ ಒಂದು, ಪಾದ ಎಂದರೆ ಕಾಲು, ಊರ್ಧ್ವ ಎಂದರೆ ಮೇಲ್ಮುಖವಾಗಿ, ಧನು ಎಂದರೆ ಬಿಲ್ಲು ಆಗಿದೆ. ಇಲ್ಲಿ ತೋಳುಗಳು ಮತ್ತು ಒಂದು ಕಾಲಿನ ಆಧಾರದಲ್ಲಿ ದೇಹವನ್ನು ಬಿಲ್ಲಿನಂತೆ ಬಾಗಿಸುವ ಭಂಗಿಯಾಗಿದೆ. ಇಲ್ಲಿ ಒಂದು ಕಾಲನ್ನು ಆಕಾಶದತ್ತ ಮುಖ ಮಾಡಿ ನಿಲ್ಲಿಸಬೇಕು. ಹಾಗೂ ದೇಹವನ್ನು ಸಮತೋಲನದಲ್ಲಿ ಇರಿಸಬೇಕು.

ಅಭ್ಯಾಸ ಕ್ರಮ: ಮೊದಲು ಅಂಗಾತವಾಗಿ ಮಲಗಬೇಕು. ಆ ಮೇಲೆ ಕಾಲುಗಳೆರಡನ್ನೂ ಮಡಿಸಬೇಕು. ಕಾಲುಗಳ ಮಧ್ಯೆ ಸ್ವಲ್ಪ ಅಂತರವಿರಬೇಕು. ಬಳಿಕ ಎರಡು ಕೈಗಳನ್ನು ಮೇಲಕ್ಕೆ ಮಡಚಿ ಭುಜಗಳ ಪಕ್ಕದಲ್ಲಿ ಇರಿಸಬೇಕು. ಆ ನಂತರ ಉಸಿರನ್ನು ಬಿಡುತ್ತಾ ಕೈಗಳನ್ನು ಮತ್ತು ಪಾದಗಳನ್ನು ಊರಿ ಶರೀರವನ್ನು ಸಾಧ್ಯವಿರುವಷ್ಟು ಮೇಲಕ್ಕೆತ್ತಬೇಕು. ಈ ಭಂಗಿಯಲ್ಲಿ ಸಮ ಉಸಿರಾಟ ನಡೆಸುತ್ತಾ ಸುಮಾರು ಅರ್ಧ ನಿಮಿಷದಿಂದ 1 ನಿಮಿಷದವರೆಗೆ ಇರಬೇಕು. ಆನಂತರ ಇಲ್ಲಿ ನಿಧಾನವಾಗಿ ಉಸಿರನ್ನು ಬಿಡುತ್ತಾ ಒಂದು ಕಾಲನ್ನು ಆಕಾಶದತ್ತ ಮುಖ ಮಾಡಿದಂತೆ ಮೇಲಕ್ಕೆತ್ತಬೇಕು. ಇಲ್ಲಿ ಸ್ವಲ್ಪ ಹೊತ್ತು ಸಾಮಾನ್ಯ ಉಸಿರಾಟ ನಡೆಸಿ ವಿಶ್ರಮಿಸಬೇಕು. ಹಾಗೆ ಇನ್ನೊಂದು ಕಾಲಿನಲ್ಲಿಯೂ ಅಭ್ಯಾಸ ನಡೆಸಬೇಕು.

ಉಪಯೋಗಗಳು: ಏಕ ಪಾದ ಊರ್ಧ್ವ ಧನುರಾಸನದಿಂದ ಬೆನ್ನೆಲುಬು ಬಲಗೊಳ್ಳುತ್ತದೆ. ಹೃದಯದ ಮಾಂಸ ಖಂಡಗಳು ಮತ್ತು ಶ್ವಾಸಕೋಶಗಳು ಹೆಚ್ಚು ಬಲಗೊಂಡ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಹೊಟ್ಟೆಯ ಮತ್ತು ಸೊಂಟದ ಕೊಬ್ಬು ಕರಗುತ್ತದೆ. ಜೀರ್ಣಶಕ್ತಿ ಹೆಚ್ಚುವುದು. ಮನಸ್ಸು ಲವಲವಿಕೆ ಹೊಂದುವುದು.

ಈ ಆಸನದಿಂದ ಕೈ ಮಣಿ ಕಟ್ಟುಗಳಿಗೆ, ಕಾಲುಗಳಿಗೆ ಪೃಷ್ಠದ ಭಾಗಗಳಿಗೆ ಹಾಗೂ ಬೆನ್ನು ಮೂಳೆಯು ಬಲಗೊಳ್ಳುತ್ತದೆ. ಥೈರಾಯ್ಡ್ ಗ್ರಂಥಿಯ ಆರೋಗ್ಯ ವರ್ಧನೆ ಪಿಟ್ಯುಟರಿ ಗ್ರಂಥಿಯನ್ನು ಪ್ರಚೋದಿಸುತ್ತದೆ. ಅಸ್ತಮ, ಬೆನ್ನುನೋವು ನಿಯಂತ್ರಣವಾಗುತ್ತದೆ. ಆಸ್ಟಿಯೊಪೊರೋಸಿಸ್ ಸಮಸ್ಯೆಯ ನಿಯಂತ್ರಣಗೊಳ್ಳುತ್ತದೆ. ಬಂಜೆತನ ನಿವಾರಣೆಯಾಗಲು ಸಹಾಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net