

ಒಂದೆಡೆ ಕರೊನಾ ಕಾಡುತ್ತಿದ್ದರೆ ಮತ್ತೊಂದೆಡೆ ಮಳೆಗಾಲದೊಂದಿಗೆ ಬರುವ ರೋಗಗಳು ಸಾಲುಸಾಲು ನಿಂತಿವೆ. ಈಗ ಸಾಧ್ಯವಾದಷ್ಟು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.
ಆದರೆ ನಮ್ಮಲ್ಲಿ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವುದು ಹೇಗೆ? ಯಾವ ಆಹಾರಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಉತ್ತೇಜನವಾಗಬಹುದು ಎಂಬ ಗೊಂದಲ ಇದ್ದರೆ..ಇಲ್ಲಿದೆ ನೋಡಿ ಲಿಸ್ಟ್.
ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಒಂದಷ್ಟು ತರಕಾರಿ, ಹಣ್ಣುಗಳನ್ನು ಶಿಫಾರಸು ಮಾಡಿದೆ. ಇಮ್ಯೂನಿಟಿ ಪವರ್ ಹೆಚ್ಚಿಸಿಕೊಳ್ಳಲು, ಚರ್ಮ ಆರೋಗ್ಯಯುತವಾಗಿರಲು ಸಿ ವಿಟಮಿನ್ ಪ್ರಮಾಣ ಅಧಿಕವಾಗಿರುವ ತರಕಾರಿ, ಹಣ್ಣುಗಳನ್ನು ಇಂದಿನಿಂದಲೇ ನಿಮ್ಮ ಊಟ, ಡಯಟ್ಗಳಲ್ಲಿ ಬಳಸಿ ಎಂದು ಹೇಳಿದೆ.
ಇಲ್ಲಿದೆ ನೋಡಿ ಎಫ್ಎಸ್ಎಸ್ಎಐ ಶಿಫಾರಸ್ಸು ಮಾಡಿರುವ ಹಣ್ಣು, ತರಕಾರಿಗಳು...
ನೆಲ್ಲಿಕಾಯಿ: ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಹಾಗೇ ದೇಹದೊಳಗೆ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ. ನೆಲ್ಲಿಕಾಯಿಯ ಚಿತ್ರಾನ್ನ ಸೇರಿ ಸುಲಭದ ತಿಂಡಿಗಳನ್ನು ತಯಾರಿಸಿ ತಿನ್ನಬಹುದು.
ಕಿತ್ತಳೆ ಹಣ್ಣುಗಳು: ಈ ಹಣ್ಣುಗಳು ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುತ್ತವೆ. ಫೈಬರ್, ವಿಟಮಿನ್ಸ್, ಮಿನರಲ್ಸ್ಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಅಷ್ಟೇ ಅಲ್ಲ, ಕಿತ್ತಳೆಹಣ್ಣುಗಳಲ್ಲಿ ವಿಟಮಿನ್ ಸಿ ಯಥೇಚ್ಛವಾಗಿ ಇದ್ದು, ಇಮ್ಯೂನಿಟಿ ಜಾಸ್ತಿ ಮಾಡುತ್ತದೆ.
ಪಪ್ಪಾಯ: ಈ ಹಣ್ಣಿನಲ್ಲೂ ಫೈಬರ್ ಪ್ರಮಾಣ ಜಾಸ್ತಿ ಇರುತ್ತದೆ. ಹಾಗೇ ಕಡಿಮೆ ಕ್ಯಾಲರಿಯನ್ನು ಹೊಂದಿರುವ ಹಣ್ಣು ಇದು. ಪಪ್ಪಾಯ ಹಣ್ಣು ಚಯಾಪಚಯ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಅಜೀರ್ಣತೆಯ ಸಮಸ್ಯೆಗಳಿಂದ ಪಾರು ಮಾಡುತ್ತದೆ.
ಕ್ಯಾಪ್ಸಿಕಂ: ಈ ತರಕಾರಿಯಲ್ಲಿ ವಿಟಮಿನ್ ಸಿ, ಎ ಮತ್ತು ಇ ಹೇರಳವಾಗಿ ಇರುತ್ತವೆ. ಫೋಲೇಟ್, ಪೊಟ್ಯಾಸಿಯಮ್ ಮತ್ತು ಫೈಬರ್ಗಳನ್ನೂ ಹೊಂದಿರುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳಿಂದ ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ. ಕ್ಯಾಪ್ಸಿಕಂ ಬಳಸುವುದರಿಂದ ಅನಿಮೀಯಾ ಕೂಡ ದೂರವಾಗುತ್ತದೆ. ಪನೀರ್ನೊಂದಿಗೆ ಯಾವುದೇ ರಿಸಿಪಿ ಮಾಡಿಕೊಂಡು ತಿಂದರೆ ರುಚಿಯೂ ಇರುತ್ತದೆ.
ಪೇರಲೆ ಹಣ್ಣು: ಪೇರಲೆ ಹಣ್ಣುಗಳು ಫೈಬರ್ ಮತ್ತು ಪೋಟ್ಯಾಷಿಯಂನ್ನು ಹೇರಳವಾಗಿ ಹೊಂದಿರುತ್ತವೆ. ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನ ಮಾಡುವುದರೊಂದಿಗೆ ಹೃದಯವನ್ನೂ ಆರೋಗ್ಯಯುತವಾಗಿ ಇಡುತ್ತವೆ. ಅಷ್ಟೇ ಅಲ್ಲ, ಮಹಿಳೆಯರ ಮುಟ್ಟಿನ ಸಮಸ್ಯೆ, ಆ ಸಮಯದಲ್ಲಿ ಕಾಣಿಸಿಕೊಳ್ಳುವ ನೋವಿಗೆ ರಾಮಬಾಣ.
ಲಿಂಬು: ತೂಕ ಕಡಿಮೆ ಮಾಡಿಕೊಳ್ಳಲು ತುಂಬ ಸಹಕಾರಿ. ಹೃದಯದ ಆರೋಗ್ಯ ಮತ್ತು ಜೀರ್ಣಕ್ರಿಯೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇದರಲ್ಲಿರುವ ಸಿಟ್ರಿಕ್ ಆ್ಯಸಿಡ್ಗಳು ಮೂತ್ರಕೋಶದಲ್ಲಿ ಕಲ್ಲುಗಳು ಆಗುವುದುನ್ನು ತಪ್ಪಿಸುತ್ತವೆ. (ಏಜೆನ್ಸೀಸ್)
(ಇವೆಲ್ಲ ಆರೋಗ್ಯ ತಜ್ಞರ ಅಧ್ಯಯನದಿಂದ ಸಾಬೀತಾಗಿವೆ)