ಪ್ರತಿ ದಿನ ಒಂದೇ ರೀತಿಯ ಆಹಾರ ಸೇವಿಸ್ತಿದ್ದೀರಾ?; ನಿಮ್ಮ ಕರುಳಿನ ಆರೋಗ್ಯಕ್ಕೆ ಇದು ಮಾರಕ..Gut Health

Gut Health
Gut Health
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿದಿನ ಒಂದೇ ಆಹಾರ ಸೇವಿಸುವುದು ಕರುಳಿನ ಸೂಕ್ಷ್ಮಜೀವಿಗಳ ವೈವಿಧ್ಯತೆಯನ್ನು ನಾಶಪಡಿಸುತ್ತದೆ.
  • ಉತ್ತಮ ಬ್ಯಾಕ್ಟೀರಿಯಾಗಳು ಆರೋಗ್ಯವಾಗಿರಲು ವಿಭಿನ್ನ ಪೋಷಕಾಂಶಗಳ ಅಗತ್ಯ
  • ಒಂದೇ ಆಹಾರ ಸೇವನೆಯಿಂದ ಮಲಬದ್ಧತೆ ಮತ್ತು ಚಯಾಪಚಯ ಸಮಸ್ಯೆಗಳು ಕಾಡಬಹುದು.
Gut Health: ಭಾರತೀಯರು ಇತ್ತೀಚೆಗೆ ಕೊಂಚ ಆರೋಗ್ಯದ ಬಗ್ಗೆ ಗಮನಹರಿಸುತ್ತಿದ್ದಾರೆ..ಈ ಮುಂಚೆ ಕಚೇರಿಗೆ ಸಮಯವಾಗುತ್ತದೆ ಎನ್ನುವ ನಿಟ್ಟಿನಲ್ಲಿ,  ಬೇಗ ತಯಾರಿ ಮಾಡಲು ಸಾಧ್ಯವಾಗುವ ಆಹಾರವಾದ ಚಿತ್ರನ್ನ, ಮೊಸರನ್ನ, ಉಪ್ಪಿಟ್ಟು, ಟೊಮ್ಯಾಟೋ ರೈಸ್, ಇಡ್ಲಿ ಅಥವಾ ಮಧ್ಯಾಹ್ನದ ಊಟಕ್ಕೆ ಅನ್ನ-ಸಾರು  ಹೀಗೆ ಒಂದೇ ರೀತಿಯ ಆಹಾರವನ್ನು ತಿಂದು ಜೈ ಎನ್ನುತ್ತಾರೆ.
ಆದರೆ, ಸದ್ಯ ಹೊರಬಿದ್ದಿರುವ ಗಂಭೀರ ವಿಚಾರವೆಂದರೆ, ನಿತ್ಯವೂ ಒಂದೇ ರೀತಿಯ ಆಹಾರವನ್ನು ಸೇವನೆ ಮಾಡುವುದರಿಂದ ಕರುಳಿನಲ್ಲಿ  ಸೂಕ್ಷ್ಮಜೀವಿಗಳ ಮೇಲೆ ಸಮಸ್ಯೆ ಉಂಟಾಗುತ್ತದೆ ಎನ್ನುವ ಅಘಾತಕಾರಿ ವಿಚಾರವನ್ನು ಪೌಷ್ಟಿಕ ಆಹಾರ ತಜ್ಞರೊಬ್ಬರು ಪ್ರಸ್ತಾಪಿಸಿದ್ದಾರೆ.

ನಿತ್ಯವೂ ವಿಭಿನ್ನ ಆಹಾರ ಬೇಕು

ಜೀರ್ಣಾಂಗವ್ಯೂಹದಲ್ಲಿನ ಕರುಳಿನಲ್ಲಿ ಕೋಟ್ಯಂತರ ಬ್ಯಾಕ್ಟೀರಿಯಾಗಳು ವಾಸ ಮಾಡುತ್ತಿರುತ್ತವೆ. ಇವು ಒಳ್ಳೆಯ ಜೀವಿಗಳು. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು  ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಆತ್ಮೀಯರು.  ಇವಕ್ಕೆ ನಿತ್ಯವೂ ವಿಭಿನ್ನ ರೀತಿಯ ಇಂಧನ ಬೇಕು. ಇವು ವೈವಿಧ್ಯತೆಯಿಂದ ಕೂಡಿದ ಆಹಾರವನ್ನೇ ಅವಲಂಬಿಸಿ ಬದುಕುತ್ತಿರುತ್ತವೆ. ಹೀಗಾಗಿ ನಿತ್ಯ ಸೇವನೆ ಮಾಡುವ ಆಹಾರದಲ್ಲಿ ಪುನರಾವರ್ತನೆಯಾದಾಗ ಕರುಳು ತನ್ನಲಿರುವ ಪೋಷಕಾಂಶವನ್ನು ಕಳೆದುಕೊಳ್ಳುತ್ತದೆ.
ನಾವು ವಿಭಿನ್ನ ರೀತಿಯ ಆಹಾರಗಳನ್ನು ಸೇವಿಸಿದಾಗ ಮಾತ್ರ ಈ ಬ್ಯಾಕ್ಟೀರಿಯಾಗಳಿಗೆ ವೈವಿಧ್ಯಮಯ ಪೋಷಕಾಂಶಗಳು ಸಿಗುತ್ತವೆ. ಪ್ರತಿದಿನ ಒಂದೇ ಆಹಾರ ತಿಂದರೆ, ಕೆಲವು ನಿರ್ದಿಷ್ಟ ಬ್ಯಾಕ್ಟೀರಿಯಾಗಳು ಮಾತ್ರ ಬೆಳೆಯುತ್ತವೆ ಮತ್ತು ಉಳಿದ ಪ್ರಮುಖ ಬ್ಯಾಕ್ಟೀರಿಯಾಗಳು ನಶಿಸಿಹೋಗುತ್ತವೆ. ಇದರಿಂದ ಕರುಳಿನ ಆರೋಗ್ಯದ ಸಮತೋಲನ ತಪ್ಪುತ್ತದೆ.

ಒಂದೇ ರೀತಿಯ ಆಹಾರ ಸೇವನೆಯಿಂದ ಏನಾಗುತ್ತದೆ?

ನಿತ್ಯವು ಮುಂಜಾನೆ, ರಾತ್ರಿ, ಮಧ್ಯಾಹ್ನ ಒಂದೇ ರೀತಿಯ ಆಹಾರ ಸೇವನೆ ಮಾಡೋದ್ರಿಂದ ಕರುಳಿನ ಸೂಕ್ಷ್ಮಜೀವಿಗಳ ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳಬೇಕಾಗುತ್ತದೆ.  ಚೇತರಿಸಿಕೊಳ್ಳುವ ಶಕ್ತಿಯು ನಿಧಾನವಾಗಿ ಕುಂದುತ್ತಾ ಹೋಗುತ್ತದೆ. ಕರಳು ನಿಮ್ಮ ಆಹಾರಕ್ಕೆ ಒಗ್ಗಿಕೊಂಡರು ಅದು ಒತ್ತಾಯ ಪೂರ್ವಕವಾಗಿರುತ್ತದೆ.
  • ಜೀರ್ಣಕ್ರಿಯೆ ನಿಧಾನವಾಗುತ್ತಿದೆ ಎಂಬಂತೆ ಭಾಸವಾಗುವುದು
  •  ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುವುದು
  •  ಮಲಬದ್ಧತೆ ಹಾಗೂ  ಅಸ್ತವ್ಯಸ್ತವಾದ ಕರುಳಿನ ಚಲನೆ 
  •  ಕೆಲವು ಆಹಾರಗಳನ್ನು ಅರಗಿಸಿಕೊಳ್ಳುವುದು ಕಷ್ಟವಾಗುವುದು.
ಒಂದು ವೇಳೆ ನೀವು ಸೇವಿಸುವ ಆಹಾರ ಅತ್ಯಂತ "ಶುದ್ಧವಿದ್ದರೂ ಸಹ ದೇಹಕ್ಕೆ ಅವನ್ನು ಪೋಷಣೆ ಮಾಡುವುದು ಕಷ್ಟವಾಗುತ್ತದೆ.  ನೇಚರ್ ಮೈಕ್ರೋಬಯಾಲಜಿ ಸಂಶೋಧನಾ ವರದಿಯ ಪ್ರಕಾರ, ಸಸ್ಯಜನ್ಯ ಆಹಾರಗಳಲ್ಲಿನ ಹೆಚ್ಚಿನ ವೈವಿಧ್ಯತೆಯು ಕರುಳಿನ ಉತ್ತಮ ಚಟುವಟಿಕೆ ಮತ್ತು ಸುಧಾರಿತ ಚಯಾಪಚಯ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ.

ಪೋಷಕಾಂಶಗಳ ಕೊರತೆ 

ಯಾವುದೇ ಒಂದು ಆಹಾರವು ದೇಹಕ್ಕೆ ಬೇಕಾದ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸಲು ಸಾಧ್ಯವಿಲ್ಲ. ಉದಾಹರಣೆಗೆ, ನೀವು ಪ್ರತಿದಿನ ಕೇವಲ ದಾಲ್ ಮತ್ತು ಅನ್ನವನ್ನೇ ಸೇವಿಸುತ್ತಿದ್ದರೆ, ನಿಮಗೆ ಪ್ರೋಟೀನ್ ಸಿಗಬಹುದು, ಆದರೆ ದೇಹಕ್ಕೆ ಅಗತ್ಯವಿರುವ ಇತರ ವಿಟಮಿನ್ ಸಿ ಅಥವಾ ಒಮೆಗಾ-3 ಕೊಬ್ಬಿನಾಮ್ಲಗಳ ಕೊರತೆ ಉಂಟಾಗಬಹುದು. ದೀರ್ಘಕಾಲದವರೆಗೆ ಒಂದೇ ಆಹಾರ ಸೇವಿಸುವುದರಿಂದ ದೇಹದಲ್ಲಿ 'ಹಿಡನ್ ಹಂಗರ್' ಅಥವಾ ಸೂಕ್ಷ್ಮ ಪೋಷಕಾಂಶಗಳ ಕೊರತೆ ಕಾಣಿಸಿಕೊಳ್ಳುತ್ತದೆ.

ಒಂದೇ ರೀತಿಯ ಆಹಾರ ಸೇವನೆಯಿಂದ ಸಿಗುವ ಪ್ರಯೋಜನ

ಒಂದೇ ರೀತಿಯ ಆಹಾರದ ಪುನರಾವರ್ತನೆ ಎನ್ನುವುದು ಸಂಪೂರ್ಣವಾಗಿ ಕೆಟ್ಟದ್ದಲ್ಲ. ವಾಸ್ತವವಾಗಿ, ಇದು ಕೆಲವೊಂದು ರೀರತತಿಯಲ್ಲಿ ಸಹಾಯ ಮಾಡುತ್ತದೆ. ಇದು ನೀವು ಸೇವಿಸುವ ಕ್ಯಾಲೋರಿಗಳ ಪ್ರಮಾಣವನ್ನು ಸುಲಭವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪ್ರತಿದಿನ ಏನು ತಿನ್ನಬೇಕು? ಎಂಬ ಗೊಂದಲ ಅಥವಾ ಮಾನಸಿಕ ಆಯಾಸವನ್ನು  ಕಡಿಮೆ ಮಾಡುತ್ತದೆ. ತೂಕ ಇಳಿಸುವ ಯೋಜನೆಗಳಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು ಇದು ಬೆಂಬಲ ನೀಡುತ್ತದೆ. ದೇಹಕ್ಕೆ ಒಗ್ಗದ ಆಹಾರಗಳನ್ನು ಸುಲಭವಾಗಿ ಗುರುತಿಸಲು ಇದು ನೆರವಾಗುತ್ತದೆ.

ನಿಮ್ಮ ತಟ್ಟೆಯಲ್ಲಿರಲಿ ವಿವಿಧ ಬಣ್ಣ

ಪೌಷ್ಟಿಕತಜ್ಞರ ಸಲಹೆಯಂತೆ ನಿತ್ಯ ನಿಮ್ಮ ಆಹಾರದ ತಟ್ಟೆಯಲ್ಲಿ ತರಕಾರಿಗಳು, ಹಣ್ಣುಗಳು, ಧಾನ್ಯ ಮತ್ತು ಬೀಜಗಳು ವಿವಿಧ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಿ. ವಾರಕ್ಕೆ ಒಮ್ಮೆಯಾದರು ನಿಮ್ಮ ಆಹಾರ ಪದ್ಧತಿ ಬದಲಾಗಲಿ ವಿಭಿನ್ನ ಫೈಬರ್ ಯುಕ್ತ ಆಹಾರಗಳನ್ನು ಸೇವಿಸುವುದರಿಂದ ಕರುಳಿನ ಬ್ಯಾಕ್ಟೀರಿಯಾಗಳು ಆರೋಗ್ಯವಾಗಿರುತ್ತವೆ.
ನಿಮ್ಮ ಆಹಾರದಲ್ಲಿ ಅಕ್ಕಿ,.ರಾಗಿ, ಕ್ವಿನೋವ, ಗೋಧಿ, ದ್ವಿದಳ ಧಾನ್ಯ, ಮೊಸರು ಮಜ್ಜಿಗೆ, ಬೇಯಿಸಿದ ಆಹಾರ, ಸೊಪ್ಪು  ಇವನ್ನು ತಿನ್ನುವುದರಿಂದ ನಿಮ್ಮ ಕರುಳಿನ ಬ್ಯಾಕ್ಟೀರಿಯಾ ಇದರಲ್ಲಿರುವ ನಾರಿನಾಂಶವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ, (ಏಜೆನ್ಸೀಸ್).
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net