ನಿತ್ಯವೂ ಜೀರಿಗೆ ಸೇವನೆ ಉತ್ತಮ ಆರೋಗ್ಯಕ್ಕೆ ಪೂರಕ

Cumin
Published on

ಆಗ ತಾನೇ ಹುಟ್ಟಿದ ಮಗುವಿನಿಂದ ಹಿಡಿದು ವೃದ್ಧರವರೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮೊದಲು ಅಡುಗೆಮನೆಯಲ್ಲಿ ಔಷಧವಾಗಿ ಸಿಗುವ ಸಾಂಬಾರ ಪದಾರ್ಥವೆಂದರೆ ಅದು ಜೀರಿಗೆ. ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಮತ್ತು ಮನೆಮದ್ದುಗಳನ್ನು ಇಷ್ಟಪಡುವವರಲ್ಲಿ ಜೀರಿಗೆ ಅತಿಹೆಚ್ಚು ಪ್ರಮಾಣದಲ್ಲಿ ಔಷಧವಾಗಿ ಬಳಕೆಯಾಗುತ್ತಿದೆ. ಇದಕ್ಕೆ ಕಾರಣ ಅದಕ್ಕಿರುವ ಅದ್ಭುತ ಔಷಧೀಯ ಗುಣಗಳು.

ಜೀರಿಗೆಯನ್ನು ಜಗಿದರೆ ಹೊಟ್ಟೆಯಲ್ಲಿ ತುಂಬಿದ ಗ್ಯಾಸ್ ನಿಂದ ಬಿಡುಗಡೆ ಹೊಂದಬಹುದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಜೀರಿಗೆ ಕೇವಲ ಅಷ್ಟಕ್ಕೇ ಸೀಮಿತವಾದ ಪದಾರ್ಥವಲ್ಲ.

ಜೀರ್ಣಕಾರಿಯಾದ ಈ ಜೀರಿಗೆ ಜಠರಾಗ್ನಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ. ವಿಶೇಷವಾಗಿ ಆಮಶಂಕೆ ಅಥವಾ ಭೇದಿ ಪ್ರಧಾನವಾದ ಐಬಿಎಸ್ ಸಮಸ್ಯೆ ಅನುಭವಿಸುತ್ತಿರುವವರಿಗೆ ಜೀರಿಗೆ ಅತ್ಯಂತ ಸಹಾಯಕ. ಏಕೆಂದರೆ ಇದು ಮಲದಲ್ಲಿರುವ ನೀರಿನ ಅಂಶವನ್ನು ದೇಹ ಹೀರಿಕೊಂಡು ಸರಿಯಾದ ರೀತಿಯಲ್ಲಿ ಮಲ ರೂಪುಗೊಳ್ಳುವಂತೆ ಮಾಡುತ್ತದೆ. ಆಯುರ್ವೆದದ ಭಾವ ಪ್ರಕಾಶ ನಿಘಂಟುವಿನಲ್ಲಿ ಇದನ್ನು ಮೇಧ್ಯ ಎಂದು ಕರೆದಿದ್ದಾರೆ. ಅಂದರೆ ಇದು ಬುದ್ಧಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವಂಥದ್ದು ಎಂದರ್ಥ. ಗರ್ಭಿಣಿಯರಿಗೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡು ಸಮಸ್ಯೆಯಾಗುವುದು ಅತ್ಯಂತ ಸಹಜ. ಆ ಸಂದರ್ಭದಲ್ಲಿ ಸ್ವಲ್ಪ ಜೀರಿಗೆ ಮತ್ತು ಶುಂಠಿಯನ್ನು ಸೇವಿಸಿದರೆ ಗ್ಯಾಸ್​ನ ತೊಂದರೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣವಾಗುತ್ತದೆ. ಆದರೆ ಇದರ ಅತಿಯಾದ ಬಳಕೆ ಗರ್ಭಿಣಿಯರಿಗೆ ಸರಿಯಲ್ಲ. ಏಕೆಂದರೆ ಇದಕ್ಕೆ ಗರ್ಭಾಶಯವನ್ನು ಶುದ್ಧ ಮಾಡುವ ಗುಣವಿದೆ. ಹಾಗಾಗಿಯೇ ಬಾಣಂತಿಯರಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ ಪದ್ಧತಿ ಭಾರತೀಯರಲ್ಲಿದೆ. ಪಿಸಿಓಡಿ ಅಥವಾ ಇನ್ನಿತರ ಸಮಸ್ಯೆಗಳ ಕಾರಣದಿಂದ ಕಾಲಕಾಲಕ್ಕೆ ಋತುಸ್ರಾವ ಆಗದ ಮಹಿಳೆಯರಿಗೆ ಜೀರಿಗೆಯ ಸೇವನೆ ಅನುಕೂಲಕರ.

ಜೀರಿಗೆಗೆ ಸ್ವಲ್ಪ ಪ್ರಮಾಣದಲ್ಲಿ ಜ್ವರವನ್ನು ನಿವಾರಿಸುವ ಗುಣವೂ ಇದೆ. ಹಾಗಾಗಿ ಜ್ವರವಿದ್ದಾಗ ಜೀರಿಗೆಯ ಕಷಾಯವನ್ನು ಸೇವಿಸುತ್ತಿದ್ದರೆ ಜ್ವರ ಬೇಗ ಗುಣವಾಗುವುದರ ಜೊತೆಗೆ ಆಹಾರ ಸುಲಭವಾಗಿ ಪಚನವಾಗಿ ಬಾಯಿಯ ರುಚಿಯೂ ಹೆಚ್ಚುತ್ತದೆ. ಜೀರಿಗೆ ವೃಷ್ಯವೂ, ಬಲ್ಯವೂ ಆಗಿದೆ ಎಂದು ಆಯುರ್ವೆದ ಹೇಳುತ್ತದೆ. ಅಂದರೆ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುವ ಮತ್ತು ದೇಹದ ಬಲವನ್ನು ಹೆಚ್ಚಿಸುವ ಶಕ್ತಿ ಜೀರಿಗೆಗೆ ಇದೆ ಎಂದರ್ಥ. ಜೀರಿಗೆಗೆ ವಾತದ ಜೊತೆ ಕಫವನ್ನು ನಿಯಂತ್ರಿಸುವ ಗುಣ ಇದೆ. ಹಾಗಾಗಿ ದೇಹದ ಯಾವುದೇ ಭಾಗದಲ್ಲಿ ನೋವು, ಬಿಗಿತ, ನರಸಂಬಂಧಿ ಸಮಸ್ಯೆಗಳು, ಕಫದ ತೊಂದರೆಗಳು ಇರುವಾಗ ಜೀರಿಗೆಯ ಸೇವನೆ ತುಂಬಾ ಸಹಕಾರಿ. ಇದು ಜೀರ್ಣಕಾರಿಯಾದ ಕಾರಣದಿಂದ ಪದೇಪದೇ ವಾಂತಿ ಅಥವಾ ಭೇದಿ ಆಗುವವರು ಇದನ್ನು ನಿತ್ಯವೂ ಸೇವಿಸಬೇಕು.

ಜೀರಿಗೆಯ ಜತೆಗೆ ಸ್ವಲ್ಪ ಶುಂಠಿ ಮತ್ತು ಕೊತ್ತಂಬರಿ ಕಾಳನ್ನು ಸೇರಿಸಿ ಕಷಾಯಮಾಡಿ ನಿತ್ಯವೂ ಸೇವಿಸಿದರೆ ಹೆಚ್ಚು ಅನುಕೂಲಕರ. ಇದು ಮೂತ್ರಾಂಗ ವ್ಯೂಹದ ಮೇಲೆ ಕೂಡ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಮೂತ್ರದ ಕಲ್ಲು, ಮೂತ್ರ ತಡೆ, ಮೂತ್ರಕೋಶದ ಉರಿಯೂತ ಇರುವಾಗ ಔಷಧಗಳ ಜೊತೆಗೆ ಜೀರಿಗೆ ಕಷಾಯವನ್ನು ಕುಡಿಯುತ್ತಿದ್ದರೆ ಸಮಸ್ಯೆ ಬೇಗ ವಾಸಿಯಾಗುತ್ತದೆ. ಚಿಕ್ಕ ಮಕ್ಕಳು ಸರಿಯಾಗಿ ಊಟ ಮಾಡದೆ ಇದ್ದಾಗ ಜೀರಿಗೆ ಕಷಾಯವನ್ನು ಕೊಡುವುದರಿಂದ ಬಾಯಿರುಚಿ ಹೆಚ್ಚಾಗಿ ಚೆನ್ನಾಗಿ ಊಟ ಮಾಡುತ್ತಾರೆ. ಬಾಣಂತಿಯರಿಗೆ ಜೀರಿಗೆ ಕಷಾಯವನ್ನು ಕುಡಿಸುವುದರಿಂದ ಎದೆಹಾಲು ಹೆಚ್ಚುತ್ತದೆ.

ಬಿಕ್ಕಳಿಕೆ ನಿಲ್ಲದಿದ್ದರೆ ಜೀರಿಗೆಯನ್ನು ತುಪ್ಪದಲ್ಲಿ ಕಲಸಿ ಅದನ್ನು ಬೆಂಕಿಗೆ ಹಿಡಿದು ಅಥವಾ ಕೆಂಡದ ಮೇಲೆ ಹಾಕಿ ಬರುವ ಉಗಿಯನ್ನು ಮೂಗಿನ ಮೂಲಕ ಸೇವಿಸುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ. ತುಂಬಾ ಮಾತನಾಡುವ ವೃತ್ತಿಯಲ್ಲಿರುವವರು ಅಥವಾ ಹಾಡುಗಾರರಿಗೆ ಧ್ವನಿಯ ಸಮಸ್ಯೆಯಾಗುವುದು ಸಹಜ. ಅಂಥವರು ಸ್ವಲ್ಪ ಜೀರಿಗೆ ಮತ್ತು ಜೇಷ್ಠಮಧುವಿನ ಮಿಶ್ರಣವನ್ನು ಬಾಯಲ್ಲಿಟ್ಟು ಜಗಿಯುತ್ತಿದ್ದರೆ ಧ್ವನಿ ಸುಧಾರಿಸುತ್ತದೆ ಮತ್ತು ಧ್ವನಿಗೆ ಸಂಬಂಧಿಸಿದ ಸಮಸ್ಯೆ ಬರದಂತೆ ಇದು ತಡೆಯುತ್ತದೆ. ಒಟ್ಟಿನಲ್ಲಿ ನಿತ್ಯವೂ ಜೀರಿಗೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net