

ಮಲಬದ್ಧತೆ ತುಂಬ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಅದನ್ನು ಎಷ್ಟೋ ಜನ ಉದಾಸೀನ ಮಾಡುತ್ತಾರೆ. ಆದರೆ ಅದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮೈಗ್ರೇನ್ನಿಂದ ಮಾನಸಿಕ ಸಮಸ್ಯೆಗಳವರೆಗೆ ಇದು ತೊಂದರೆಗಳನ್ನು ತಂದೊಡ್ಡಬಹುದು. ಆದರೆ ಇದನ್ನು ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಬೇಕೆಂಬ ಧಾವಂತದಲ್ಲಿ ಔಷಧಗಳನ್ನು ತೆಗೆದುಕೊಳ್ಳುವುದಲ್ಲ. ಏಕೆ ಮಲಬದ್ಧತೆಯಾಗುತ್ತಿದೆ ಎಂಬುದನ್ನು ಪರೀಕ್ಷಿಸಿ ಅದನ್ನು ಸರಿಪಡಿಸಿಕೊಳ್ಳಬೇಕು.
ರಾತ್ರಿ ತಡವಾಗಿ ಮಲಗುವುದು, ಬೆಳಗ್ಗೆ ಸೂರ್ಯೋದಯದ ಮೊದಲೇ ಏಳದಿರುವುದು, ನಾರಿನಂಶದ ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸದೆ ಇರುವುದು, ಸಾಕಷ್ಟು ಪ್ರಮಾಣದಲ್ಲಿ ದೈಹಿಕ ವ್ಯಾಯಾಮ ಮಾಡದೆ ಇರುವುದು, ರ್ಪಾನ್ಸನ್, ಪ್ಯಾರಾಲಿಸಿಸ್ನಂಥ ನರಕ್ಕೆ ಸಂಬಂಧಿಸಿದ ಕಾಯಿಲೆಗಳಿರುವುದು, ದೊಡ್ಡ ಕರುಳಿನ ಕ್ಯಾನ್ಸರ್ನಂತಹ ತೊಂದರೆಗಳಿರುವುದು, ಕರುಳಿನಲ್ಲಿ ಅಡೆತಡೆ ಇರುವುದು - ಹೀಗೆ ವಿವಿಧ ಕಾರಣಗಳಿಂದಾಗಿ ಮಲಬದ್ಧತೆ ಉಂಟಾಗಬಹುದು. ತುಂಬ ಒಣ ಮತ್ತು ಲಘು ಗುಣಗಳುಳ್ಳ, ಸ್ವಲ್ಪವೂ ಕೊಬ್ಬಿಲ್ಲದ ಆಹಾರವನ್ನೇ ಹೆಚ್ಚಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ ಎಂದು ಆಯುರ್ವೆದ ಹೇಳುತ್ತದೆ. ಮಲಬದ್ಧತೆಯಿರುವಾಗ ಒತ್ತಾಯಪೂರ್ವಕವಾಗಿ ಮಲವಿಸರ್ಜನೆಗೆ ಪ್ರಯತ್ನಿಸುವುದು ಸರಿಯಲ್ಲ. ಅದರಿಂದಾಗಿ ಮೂಲವ್ಯಾಧಿ, ಫಿಶರ್ನಂಥ ಸಮಸ್ಯೆಗಳಾಗಬಹುದು. ಮಲಬದ್ಧತೆಗೆ ಔಷಧ ತೆಗೆದುಕೊಳ್ಳುವ ರೂಢಿಯಿಂದ ಮೂಲ ಸಮಸ್ಯೆ ಇನ್ನೂ ಹೆಚ್ಚಾಗಬಹುದು. ಹಾಗಾಗಿ ಜೀವನಶೈಲಿಯಲ್ಲಿಯೇ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು.
ಹಣ್ಣುಗಳು, ತರಕಾರಿಗಳು, ಮೆಂತ್ಯ, ಒಣದ್ರಾಕ್ಷಿ, ಸೊಪ್ಪುಗಳು, ವಿಶೇಷವಾಗಿ ಬಸಳೆಸೊಪ್ಪು, ಗೋಳಿಸೊಪ್ಪು, ಹೊನಗೊನ್ನೆ ಸೊಪ್ಪು, ಬೀನ್ಸ್, ಅಂಜೂರ, ಅಗಸೆಬೀಜ ಇಂತಹ ಆಹಾರಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಊಟದ ಕೊನೆಯಲ್ಲಿ ಸ್ವಲ್ಪ ಮೊಸರು ಅಥವಾ ಮಜ್ಜಿಗೆಯನ್ನು ಸೇವಿಸುವುದರಿಂದ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಬೆಳೆಯಲು ಸಹಾಯವಾಗಿ ಮಲಬದ್ಧತೆಯ ನಿವಾರಣೆಗೆ ಅನುಕೂಲವಾಗುತ್ತದೆ. ಕಾಫಿ/ಟೀಯ ಅತಿ ಸೇವನೆ ಬಿಡಬೇಕು.
ಕೆಲಸಗಳ ಮಧ್ಯೆ ಮಲ, ಮೂತ್ರ, ಅಪಾನ ವಾಯುಗಳ ನೈಸರ್ಗಿಕ ಕರೆಯನ್ನು ಬಹಳಷ್ಟು ಜನ ತಡೆಯುತ್ತಾರೆ. ಈ ಕಾರಣಗಳಿಂದ ಹಲವಾರು ರೋಗಗಳು ಬರುತ್ತವೆ ಎನ್ನುತ್ತದೆ ಆಯುರ್ವೆದ. ಅಂಥ ರೂಢಿಯಿದ್ದರೆ ಬಿಡಬೇಕು. ಇಡೀ ದಿನ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಈ ಸಮಸ್ಯೆಯಲ್ಲಿ ಹಿತಕಾರಿ. ಸೂರ್ಯೋದಯದ ಮೊದಲು ಮುಕ್ಕಾಲು ಲೀಟರ್ ನೀರನ್ನು ಸೇವಿಸುವುದು ರಸಾಯನ ಅಂದರೆ ಶಕ್ತಿದಾಯಕ ಮತ್ತು ರೋಗನಿರೋಧಕ ಎಂದು ಭೈಷಜ್ಯ ರತ್ನಾವಳಿ ಗ್ರಂಥದಲ್ಲಿ ಹೇಳಿದ್ದಾರೆ. ಈ ರೀತಿ ಮಾಡುವುದರಿಂದ ದೊಡ್ಡ ಕರುಳಿನಲ್ಲಿ ಚಲನಶೀಲತೆ ಹೆಚ್ಚಾಗಿ ಸುಲಭವಾಗಿ ಮಲವಿಸರ್ಜನೆಯಾಗುತ್ತದೆ. ದೈಹಿಕ ವ್ಯಾಯಾಮಗಳು ವಿಶೇಷವಾಗಿ ಯೋಗಾಸನಗಳು ತುಂಬ ಪ್ರಯೋಜನಕಾರಿ. ದಿನಕ್ಕೆ ಹತ್ತರಿಂದ ಇಪ್ಪತ್ತು ನಿಮಿಷ ಅಪಾನಮುದ್ರೆಯನ್ನು ಮಾಡಬೇಕು.
10-15 ಒಣದ್ರಾಕ್ಷಿ, ನಾಲ್ಕು ಖರ್ಜೂರ ಮತ್ತು ನಾಲ್ಕು ಅಂಜೂರಗಳನ್ನು ಬೆಳಗ್ಗೆ ನೆನೆಸಿ ರಾತ್ರಿ ಮಲಗುವಾಗ ತಿಂದು ಬಿಸಿನೀರು ಕುಡಿದರೆ ಅನುಕೂಲವಾಗುತ್ತದೆ. ಬೊಜ್ಜು, ಮಧುಮೇಹದ ಸಮಸ್ಯೆಗಳಿರುವವರು ರಾತ್ರಿ ಮಲಗುವಾಗ ಬಿಸಿನೀರಿನಲ್ಲಿ ಅರ್ಧ ಚಮಚ ತ್ರಿಫಲಾ ಚೂರ್ಣ ಸೇವಿಸಬಹುದು. ಒಣ ಅಥವಾ ತೆಳ್ಳಗಿನ ದೇಹವನ್ನು ಹೊಂದಿರುವವರು ಸೂರ್ಯೋದಯದ ಮೊದಲು ಒಂದು ಕಪ್ ಬಿಸಿನೀರಿಗೆ ಒಂದು ಚಮಚ ತುಪ್ಪ, ನಾಲ್ಕು ಚಿಟಿಕೆ ಜ್ಯೇಷ್ಠಮಧುವಿನ ಪುಡಿ ಹಾಕಿ ತೆಗೆದುಕೊಳ್ಳಬೇಕು. ಒಂದು ತಾಸಿನ ನಂತರ ಲಘು ಭೋಜನ ಮಾಡಬೇಕು. ಅತ್ಯಂತ ಗಟ್ಟಿಯಾದ ಮಲವಿಸರ್ಜನೆಯಾಗುತ್ತಿದ್ದರೆ ಸಂಜೆ ಒಂದು ಲೋಟ ಹಾಲಿಗೆ ಒಂದು ಚಮಚ ಗುಲ್ಕಂದ್ ಹಾಕಿ ಸೇವಿಸಬೇಕು. ನಿಯಮಿತವಾಗಿ ಸ್ವಲ್ಪ ಪ್ರಮಾಣದಲ್ಲಿ ಲೋಳೆಸರ (ಅಲೋವೆರಾ) ಸೇವಿಸುವುದೂ ಹಿತಕಾರಿ. ಗರ್ಭಿಣಿಯರಿಗೆ ಮಲಬದ್ಧತೆಯಿದ್ದರೆ ಹಾಲು, ತುಪ್ಪ, ಬೆಣ್ಣೆ, ಬಸಳೆಸೊಪ್ಪು, ಬೂದುಗುಂಬಳಕಾಯಿಗಳನ್ನು ಹೆಚ್ಚಾಗಿ ಸೇವಿಸಬಹುದು. ಇದರ ಹೊರತಾಗಿ ಬೇರೆ ಯಾವುದನ್ನು ಸೇವಿಸುವುದಿದ್ದರೂ ವೈದ್ಯರ ಸಲಹೆ ಪಡೆಯಬೇಕು.